November 22, 2024
Manada-Maatu

 

ವನಿತಾ ಅರುಣ್ ಭಂಡಾರಿ, ಬಜ್ಪೆ

4 ವರ್ಷಗಳನ್ನು ಪೂರ್ಣಗೊಳಿಸುತ್ತಿರುವ ನಮ್ಮ ಸಮಾಜದ ಅಂತರ್ಜಾಲ ಪತ್ರಿಕೆಯಾದ ಭಂಡಾರಿ ವಾರ್ತೆಯ ತಂಡಕ್ಕೆ ಈ ಸಂದರ್ಭದಲ್ಲಿ ಅಭಿನಂದನೆಗಳನ್ನು ಸಲ್ಲಿಸುತ್ತಿದ್ದೇನೆ.

ಭಂಡಾರಿ ವಾರ್ತೆ ಮುಂದಿನ ಹಂತದಲ್ಲಿ ಹೇಗೆ ಇರಬೇಕು ಎಂಬುದಾಗಿ ನನ್ನ ಅನಿಸಿಕೆ, ಅಭಿಪ್ರಾಯವನ್ನು ಕೇಳಿದ ನಿಮಗೆ ನಾನು ಆಭಾರಿಯಾಗಿದ್ದೇನೆ.
ನನ್ನ ಅನಿಸಿಕೆ ಅಭಿಪ್ರಾಯವನ್ನು ತಮಗೆ ನೀಡುವಷ್ಟರ ಮಟ್ಟಿಗೆ ನಾನು ಬೌದ್ಧಿಕವಾಗಿ ಬೆಳೆದಿಲ್ಲ.
ನಾನು ಇಲ್ಲಿ ತಿಳಿಸುತ್ತಿರುವ ಸಲಹೆಗಳು ನನ್ನ ವೈಯಕ್ತಿಕವಾಗಿವೆ. ಅದು ನಿಮಗೆ ಅಧಿಕಪ್ರಸಂಗಿತನ ಅಂತ ಅನಿಸಲೂ ಬಹುದು.
 
ಇಲ್ಲಿ ನಾನು ತಿಳಿಸಿರುವ ಯಾವುದೇ ಅನಿಸಿಕೆಗಳು ನಿಮಗೆ ತಪ್ಪಾಗಿ ಕಾಣಿಸಿದರೆ ದಯವಿಟ್ಟು ಮನ್ನಿಸಬೇಕಾಗಿ ಕೇಳಿಕೊಳ್ಳುತ್ತಾ ನನ್ನ ಕೆಲವು ಸಲಹೆಗಳನ್ನು ನೀಡುತ್ತಿದ್ದೇನೆ.
ಪ್ರಸ್ತುತ ಭಂಡಾರಿ ವಾರ್ತೆಯು ಬಹಳ ಚೆನ್ನಾಗಿ ಪ್ರಕಟವಾಗುತ್ತಿದೆ.ಸಮಾಜಕ್ಕಾಗಿ ತಂಡ ಇಷ್ಟೊಂದು ಕಾಳಜಿಯಿಂದ ಕೆಲಸ ಮಾಡುತ್ತಿರುವುದು ಅಭಿನಂದನಾರ್ಹ .
 
1. ಭಂಡಾರಿ ಸಮಾಜದ ಬಂಧುಗಳ ಅಭಿವೃದ್ಧಿಗೆ ಕನಿಷ್ಠ 3 ತಿಂಗಳಿಗೆ ಒಮ್ಮೆಯಾದರೂ ಸರಕಾರಿ/ ಅರೆ ಸರಕಾರಿ /ಖಾಸಗಿ ಉದ್ಯೋಗಗಳ ಮಾಹಿತಿಯನ್ನು ಪ್ರಕಟಿಸಿದರೆ ತುಂಬಾ ಉತ್ತಮ.
 
2. ನಮ್ಮ ಸಮಾಜದ ಅರ್ಹ ಬಂಧುಗಳಿಗಾಗಿ ಅವರ ವೈವಾಹಿಕ ಜೀವನದ ದೃಷ್ಟಿಯಿಂದ ಕನಿಷ್ಠ 6 ತಿಂಗಳಿಗೊಮ್ಮೆ ಭಂಡಾರಿ ವಿವಾಹ ವೇದಿಕೆಯ ಮೂಲಕ ವಧು – ವರ ರ ವಿವರ (ವಿದ್ಯಾಭ್ಯಾಸ , ಉದ್ಯೋಗ , ವಯಸ್ಸು , ಊರು )ವನ್ನು ಪ್ರಕಟಿಸಿದರೆ ಉತ್ತಮ.
 
3. ಭಂಡಾರಿ ವಾರ್ತೆಯಲ್ಲಿ ನಿಗದಿತ ಸಮಯಕ್ಕೆ ಒಮ್ಮೆ ಆರೋಗ್ಯದ ಮಾಹಿತಿಯನ್ನು ಅದರಲ್ಲೂ ಮಹಿಳೆಯರ / ಮಕ್ಕಳ ಸಾಮಾನ್ಯ ತೊಂದರೆ ಅದಕ್ಕೆ ಬೇಕಾಗುವ ಆಪ್ತ ಸಲಹೆಗಳು ಪ್ರಕಟವಾದರೆ ಹಲವರಿಗೆ ಪ್ರಯೋಜನವಾಗಬಹುದು.
 
4. ಮೌಲ್ಯಯುತ ಶಿಕ್ಷಣದ ಬಗ್ಗೆ ಲೇಖನಗಳು, ಬದಲಾಗುತ್ತಿರುವ ಶಿಕ್ಷಣದ ಬಗ್ಗೆ ಮಾಹಿತಿ, ಮಕ್ಕಳ ಪ್ರಸ್ತುತ ಹಕ್ಕುಗಳ ಬಗ್ಗೆ ಮಾಹಿತಿ ಈ ರೀತಿಯಲ್ಲಿ ವಿವಿಧ ಶಿಕ್ಷಣಗಳ ಬಗ್ಗೆ ಮಾಹಿತಿ ಪ್ರಕಟವಾದರೆ ಉತ್ತಮ.
 
5. ಕನಿಷ್ಠ 3 ತಿಂಗಳಿಗೊಮ್ಮೆ ನಮ್ಮ ಸಮಾಜದ ಮುಖ್ಯ ಕಸುಬಾಗಿರುವ ಕ್ಷೌರಿಕ ವೃತ್ತಿಯಿಂದ ಅಭಿವೃದ್ಧಿ ಹೊಂದಿರುವ ಗ್ರಾಮೀಣ ಪ್ರದೇಶದ ಹಿರಿಯರನ್ನು ಹಾಗೂ ಕಿರಿಯರನ್ನು ಭಂಡಾರಿ ವಾರ್ತೆಯ ಮೂಲಕ ಪರಿಚಯಿಸಿದರೆ ಯುವ ಜನಾಂಗಕ್ಕೆ ಕ್ಷೌರಿಕ ವೃತ್ತಿಯ ಬಗ್ಗೆ ಭರವಸೆ ಮೂಡಲು ಸಾಧ್ಯವಾಗುತ್ತದೆ.
 
6. ವೃತ್ತಿಯಲ್ಲಿ ನುರಿತ ಬಂಧುಗಳಿಂದ ಆಧುನಿಕ ಕೇಶ ಕರ್ತನದ ಬಗ್ಗೆ ತರಭೇತಿ ಕೊಡುವ ಮೂಲಕ ಸಮಾಜದ ಇತರರಿಗೂ ಇತ್ತೀಚಿನ ಕೇಶ ಕರ್ತನದ ಶೈಲಿಯ ಬಗ್ಗೆ ತಿಳುವಳಿಕೆ ಬರುವ ಹಾಗೆ ಮಾಡಬಹುದು ಆ ಮೂಲಕ ಅವರ ಬದುಕನ್ನು ಇನ್ನಷ್ಟು ಉತ್ತಮಗೊಳಿಸುವಲ್ಲಿ ಭಂಡಾರಿ ವಾರ್ತೆ ಸಹಕಾರಿಯಾಗಬಹುದು.
 
7. ಹೆಣ್ಣುಮಕ್ಕಳ ಸಾಕ್ಷರತೆ, ಲಿಂಗ ತಾರತಮ್ಯ, ಸಾಮಾಜಿಕ ನಂಬಿಕೆಗಳು , ಹೆಣ್ಣು ಮಕ್ಕಳಿಗೆ ಆಗುವ ಸಾಮಾಜಿಕ ತೊಂದರೆಗಳು, ಇದಕ್ಕೆ ಕಾನೂನು ರೀತ್ಯ ಸಲಹೆ, ಮಾಹಿತಿಗಳು , ವೈಚಾರಿಕ ಲೇಖನ ಪ್ರಕಟಿಸಿದರೆ ನಮ್ಮ ಸಮಾಜದ ಯುವತಿಯರಿಗೆ ಮಾರ್ಗದರ್ಶಕವಾಗಬಹುದು.
 
8. ಭಂಡಾರಿ ವಾರ್ತೆಯಲ್ಲಿ ಈಗಾಗಲೇ ಪ್ರಕಟಗೊಳ್ಳುತ್ತಿರುವ ಹಬ್ಬ ಹರಿದಿನಗಳ ಬಗ್ಗೆ ಲೇಖನಗಳು , ವಿಶೇಷ ತಿಂಡಿ, ಅಡುಗೆಯ ಮಾಹಿತಿ ,ದಿನಾಚರಣೆಯ ಬಗ್ಗೆ ಲೇಖನಗಳನ್ನು ಇನ್ನೂ ಕೂಡ ಮುಂದುವರಿಸಬೇಕು.
 
9. ಭಂಡಾರಿ ವಾರ್ತೆಯು ಕೇವಲ ಹುಟ್ಟು ಹಬ್ಬ, ವಿವಾಹ ವಾರ್ಷಿಕೋತ್ಸವ, ಶ್ರದ್ಧಾಂಜಲಿ ಅರ್ಪಿಸುವುದಕ್ಕೆ ಮಾತ್ರ ಸೀಮಿತವಾಗಬಾರದು. ಒಂದು ವೇಳೆ ಸಮಾಜದ ಬಂಧುಗಳ ವಿನಂತಿ ಮೇರೆಗೆ ಪ್ರಕಟಿಸುವುದಾದರೆ ಅದಕ್ಕೆ ಕನಿಷ್ಠ ಶುಲ್ಕವನ್ನು ನಿಗದಿಪಡಿಸಬೇಕು. ಯಾಕೆಂದರೆ ಉಚಿತವಾಗಿ ಮಾಡುವ ಕೆಲಸಗಳಿಗೆ ಜನರಲ್ಲಿ ಬೆಲೆ, ಗೌರವ ಇರುವುದಿಲ್ಲ.
 
10. ಈಗಿನ ಕಾಲದಲ್ಲಿ ಉಚಿತವಾಗಿ ಯಾರೂ ಕೆಲಸ ಮಾಡಲು ತಯಾರಿರುವುದಿಲ್ಲ, ಮಾಡಿದರೂ ಅವರ ಆಸಕ್ತಿ ಕ್ರಮೇಣ ಕಡಿಮೆಯಾಗಬಹುದು.ಭಂಡಾರಿ ವಾರ್ತೆಯಂತಹ ನೂತನ ತಂತ್ರಜ್ನಾನದ ಪತ್ರಿಕೆಯನ್ನು ನಡೆಸಿಕೊಂಡು ಹೋಗಲು ಆರ್ಥಿಕ ಸಂಪನ್ಮೂಲದ ಅವಶ್ಯಕತೆ ಇದೆ. ನಮ್ಮ ಸಮಾಜದಲ್ಲಿ ಆರ್ಥಿಕವಾಗಿ ಪ್ರಬಲರಾಗಿರುವ ಭಂಡಾರಿ ವಾರ್ತೆಯ ಹಿತೈಷಿಗಳನ್ನು ಗುರುತಿಸಿಕೊಂಡು ಆರ್ಥಿಕ ಸಂಪನ್ಮೂಲದ ಕ್ರೂಡೀಕರಣಕ್ಕೆ ಪ್ರಯತ್ನಿಸಬೇಕು.
 
11. ನಮ್ಮ ಸಮಾಜದಲ್ಲಿ ಬರೆಯುವ ಆಸಕ್ತಿಯುಳ್ಳ ಲೇಖಕರನ್ನು ಸಂಪರ್ಕಿಸಿ ಅವರಿಗೆ ಸೂಕ್ತ ವಿಷಯಗಳನ್ನು ಕೊಟ್ಟು ಬರೆದು ತಲುಪಿಸುವ ಜವಾಬ್ದಾರಿಯನ್ನು ಎರಡು ತಿಂಗಳ ಮುಂಚೆಯೇ ನೀಡಿ , ನಿಗದಿತ ಸಮಯದಲ್ಲಿ ಸ್ಪಂದಿಸಿ ಸಹಕರಿಸಲು ಮನವಿ ಮಾಡಬೇಕು.
 
12. ಗ್ರಾಮೀಣ ಭಾಗದಲ್ಲಿ ನಮ್ಮ ಸಮಾಜದ ಬಂಧುಗಳು ಕೃಷಿ, ಹೈನುಗಾರಿಕೆ, ಸ್ವ ಉದ್ಯೋಗ, ಸಲೂನ್ ಮುಂತಾದ ಕೆಲಸವನ್ನು ಶ್ರಮಪಟ್ಟು ಮಾಡುವ ಮೂಲಕ ಸ್ವಾಭಿಮಾನದಿಂದ ಬದುಕು ಸಾಗಿಸುತ್ತಿದ್ದಾರೆ. ಅಂತಹವರನ್ನು ಗುರುತಿಸಿ , ಅವರ ಬಗ್ಗೆ ಭಂಡಾರಿ ವಾರ್ತೆಯಲ್ಲಿ ಪ್ರಕಟಿಸಿದರೆ ಇನ್ನಷ್ಟು ಸಮಾಜದ ಬಂಧುಗಳು ಮುಂಚೂಣಿಗೆ ಬಂದು ಇತರರಿಗೆ ಆದರ್ಶವಾಗುವ ಸಾಧ್ಯತೆ ಜಾಸ್ತಿ ಇರುತ್ತದೆ.
 
13. ಭಂಡಾರಿ ವಾರ್ತೆಯಲ್ಲಿ ಪ್ರಕಟವಾಗುವ ಲೇಖನಗಳ ಬಗ್ಗೆ ಓದುಗರಿಂದ ಅನಿಸಿಕೆ, ಅಭಿಪ್ರಾಯ, ವಿಮರ್ಶೆಗಳನ್ನುಸಂಗ್ರಹಿಸಿಕೊಂಡು ಲೇಖಕರಿಗೆ ತಲುಪಿಸುವ ಮೂಲಕ ಲೇಖಕರಿಗೆ ಇನ್ನಷ್ಟು ಹೆಚ್ಚು ಬರಹಗಳನ್ನು ಬರೆಯುವ ಹಂಬಲ, ಉತ್ಸಾಹ ಬರುತ್ತದೆ ಮತ್ತು ಟೀಕೆಗಳು ಕೂಡ ಲೇಖಕರನ್ನು ಇನ್ನಷ್ಟು ಚೆನ್ನಾಗಿ ಬರೆಯಲು ಸಹಕಾರಿಯಾಗುತ್ತದೆ.
 
14. ಭಂಡಾರಿ ವಾರ್ತೆಗೆ 4 ವರ್ಷ ಪೂರ್ಣಗೊಂಡ ಸಂದರ್ಭದಲ್ಲಿ ಕನಿಷ್ಠ ತಂಡದ ಸಕ್ರಿಯ ಸದಸ್ಯರು, ಲೇಖಕರು, ಹಿತೈಷಿಗಳನ್ನು ಸೇರಿಸಿಕೊಂಡು ಒಂದು ಔತಣ ಕೂಟ ಆಯೋಜಿಸಿದರೆ ಉತ್ತಮ . ಆ ಮೂಲಕ ಪರಸ್ಪರ ಪರಿಚಯ ಮಾಡಿಕೊಂಡು , ಮಾತನಾಡುವ ಮೂಲಕ ತಂಡದಲ್ಲಿ ಏನಾದರೂ ಚಿಕ್ಕ ಪುಟ್ಟ ಅಭಿಪ್ರಾಯ ಭೇದಗಳನ್ನು ಪರಿಹರಿಸಕೊಳ್ಳಲು ಸಾಧ್ಯವಿದೆ. ಯಾವುದೇ ಕಾರ್ಯಕ್ರಮ ಯಶಸ್ವಿಯಾಗಬೇಕಾದರೆ ಎಲ್ಲರೂ ಒಂದೇ ಕುಟುಂಬದಂತೆ ಒಟ್ಟಾಗಿ ಮಾತನಾಡಿಕೊಂಡು ಮುಂದುವರಿದಾಗ ಮುಂದೆ ಎಲ್ಲಾ ಚಟುವಟಿಕೆಗಳು ಬಹಳ ಸುಲಭವಾಗಿ ನಡೆಯಬಹುದೆಂದು ನನ್ನ ಅನಿಸಿಕೆ. ಇದರಿಂದ ಎಲ್ಲರಿಗೂ ಸ್ಫೂರ್ತಿ ಬರಬಹುದು.
 
ಈ ಎಲ್ಲಾ ಸಲಹೆಗಳನ್ನು ಒಂದೇ ಬಾರಿಗೆ ಜಾರಿಗೆ ತರುವುದು ಸುಲಭವಲ್ಲ. ಸಾಧಿಸಿದರೆ ಸಬಲ ನುಂಗಬಹುದು ಎಂಬ ಗಾದೆಯಂತೆ ಮೊದಲು ನಮ್ಮ ಸಮಾಜದಲ್ಲಿ ಬೇರೆ ಬೇರೆ ಕ್ಷೇತ್ರದಲ್ಲಿ ಇರುವ ತಜ್ಞರ ನ್ನು ಸಂಪರ್ಕ ಮಾಡಿಕೊಂಡು ಅವರ ಬಳಿ ಚರ್ಚಿಸಿ ಸಲಹೆ, ಮಾಹಿತಿಯನ್ನು ಪಡೆದುಕೊಳ್ಳಬಹುದು .
 
ಉದಾಹರಣೆಗೆ,
1. ಕಾನೂನಿಗೆ ಸಂಬಂದಿಸಿದ ಯಾವುದೇ ಮಾಹಿತಿ ಬೇಕಿದ್ದಲ್ಲಿ ನಮ್ಮ ಸಮಾಜದಲ್ಲಿ ಇರುವ ವಕೀಲರನ್ನು ಸಂಪರ್ಕಿಸಿ ಅವರಿಂದ ಸಲಹೆ ಪಡೆದುಕೊಳ್ಳುವುದು .
2. ಹೆಣ್ಣು ಮಕ್ಕಳ ಬಗ್ಗೆ ಕೆಲಸ ಮಾಡುವವರು.
3. ಶೈಕ್ಷಣಿಕ ವಿಷಯದಲ್ಲಿ ಉತ್ತಮ ತಿಳುವಳಿಕೆಯುಳ್ಳವರು
4. ಸಾಮಾಜಿಕ ಕಳಕಳಿ ಇರುವವರು ಹೀಗೆ ಅಂತಹ ತಜ್ಞರ ಪಟ್ಟಿಯನ್ನು ತಯಾರಿಸಿ ಅವರ ಮೂಲಕ ಮಾಹಿತಿ ಪಡೆದು ಲೇಖನ ತಯಾರಿಸಿ ಪ್ರಕಟಿಸಬೇಕು .
ಯಾವುದೇ ಸಲಹೆ ಸೂಚನೆಗಳನ್ನು ನೀಡಲು ಸುಲಭ ಆದ್ರೆ ಅದನ್ನು ಕಾರ್ಯರೂಪಕ್ಕೆ ತರಲು ಕಷ್ಟ ಇದೆ ಎಂದು ನನಗೆ ತಿಳಿದಿದೆ.ಆದರೆ ಯಾವುದೇ ಕೆಲಸವು ಯಶಸ್ವಿಯಾಗಬೇಕಾದರೆ ಕೆಲವೊಂದು ಪೂರ್ವತಯಾರಿ ಮಾಡಿಕೊಳ್ಳಬೇಕು ಆ ಮೂಲಕ ಒಂದೊಂದೇ ಅಂಶವನ್ನು ಕಾರ್ಯಗತ ಮಾಡಿಕೊಳ್ಳುವುದರ ಮೂಲಕ ನಾವು ಅಂದುಕೊಂಡ ಯಶಸ್ಸು ಸಾಧಿಸಬಹುದು .
 
ನನ್ನಿಂದ ಕೇವಲ ಎರಡು ವಾಕ್ಯಗಳ ಅನಿಸಿಕೆಗಳನ್ನು ನಿರೀಕ್ಷಿಸಿದ ನಿಮಗೆ ದೀರ್ಘವಾದ ಅಭಿಪ್ರಾಯವನ್ನು ತಿಳಿಸುವ ಮೂಲಕ ಕಿರಿ ಕಿರಿ ಮಾಡಿದ್ದರೆ ದಯವಿಟ್ಟು ಕ್ಷಮಿಸಿ .
ಇತೀ ಭಂಡಾರಿ ಸಮಾಜದ ಅಭಿವೃದ್ಧಿಯ ಕನಸು ಕಾಣುತ್ತಿರುವ ,
ವನಿತಾ ಅರುಣ್ ಭಂಡಾರಿ, ಬಜ್ಪೆ


ಸುಪ್ರೀತಾ ಸೂರಿಂಜೆ.
 
ಭಂಡಾರಿ ವಾರ್ತೆಯ ಬಗ್ಗೆ ನನ್ನ ಅನಿಸಿಕೆ ಕೇಳಿ ಬಹಳ ದಿನಗಳಾಯಿತು,🤭 ವಿಳಂಬವಾಗಿ ನೀಡುತ್ತಿರುವ ಪ್ರತಿಕ್ರಿಯೆ ಗೆ ಕ್ಷಮೆ ಇರಲಿ.🙏😊
 
ಆಗಸ್ಟ್ 26ರಂದು ತನ್ನ ನಾಲ್ಕನೇ ವರ್ಷ (ಹುಟ್ಟು ಹಬ್ಬ) ವನ್ನು ಪೂರ್ಣಗೊಳಿಸುವ ಭಂಡಾರಿ ವಾರ್ತೆ ಗೆ ಅಭಿನಂದನೆಗಳು. ಆಗಸ್ಟ್ 26, 2017ರಂದು ಅನಾವರಣಗೊಂಡ ಭಂಡಾರಿ ವಾರ್ತೆ ಯ ಸಮಾರಂಭಕ್ಕೆ ನಾನು ಬೇರೆ ಕಾರ್ಯಕ್ರಮವಿದ್ದ ಕಾರಣ ತಡವಾಗಿಯಾದರೂ ಭಾಗಿಯಾಗಿದ್ದೆ ಅನ್ನುವ ಹೆಮ್ಮೆ ನನಗಿದೆ.
 
ಇನ್ನು ನನ್ನ ಬರಹವನ್ನು ಗುರುತಿಸಿ ಭಂಡಾರಿ ವಾರ್ತೆ ಯ ಬರಹಲೋಕಕ್ಕೆ ನನ್ನನ್ನು ಆಹ್ವಾನಿಸಿದ ಭಂಡಾರಿ ವಾರ್ತೆ ಯ ಮುಖ್ಯ ನಿರ್ವಾಹಕ ಪ್ರಕಾಶ್ ಕಟ್ಲ ಹಾಗೆಯೇ ನನ್ನ ಪ್ರತಿ ಬರಹಕ್ಕೆ ಪ್ರೋತ್ಸಾಹ ನೀಡುತ್ತಿದ್ದ ನನ್ನ ಪ್ರೀತಿಯ ಅಣ್ಣ ಶ್ರೀಪಾಲ್ ಭಂಡಾರಿ ನೆಲ್ಯಾಡಿ ಹಾಗೂ ಮೊದಲ ಲೇಖನ ಮದುವೆ ಇದನ್ನು ಬರೆಯಲು ಪ್ರೇರೆಪಿಸಿದ ಸಂದೇಶ್ ಬಂಗಾಡಿ ಯವರಿಗೂ ಧನ್ಯವಾದಗಳು.(ಆಗ ಪರಿಚಯವಿದ್ದಿದ್ದು ಇವರು ಮೂವರದು ಮಾತ್ರ) .
 
ಬಹುಶಃ ಇಂದಿಗೂ ಸಭೆ ಸಮಾರಂಭಗಳಲ್ಲಿ ನಮ್ಮ ಸಮಾಜದ ಬಂಧುಗಳು ನನ್ನನ್ನು ಇವರು ಸುಪ್ರೀತ ಸೂರಿಂಜೆ ಅಲ್ವಾ (ದೊಡ್ಡ ಲೇಖಕಿ ಅಲ್ಲ ತಕ್ಕ ಮಟ್ಟಿಗೆ ಬರೆಯುವವಳು ನಾನು😅) ಅಂತ ಗುರುತಿಸಿ ಮಾತನಾಡಿಸುತ್ತಾರೆ.
 
ಇದೆಲ್ಲ ಸಾಧ್ಯವಾಗಿದ್ದು ಈ ಭಂಡಾರಿ ವಾರ್ತೆ ಯಿಂದ. ಹಾಗಾಗಿ. ಭಂಡಾರಿ ವಾರ್ತೆ ಗೆ ಎಷ್ಟು ಕೃತಜ್ಞತೆ ಸಲ್ಲಿಸಿದರೂ ಸಾಲದು.🙏😍😊
 
ಇನ್ನು ಭಂಡಾರಿ ವಾರ್ತೆ ಯ ಬಗ್ಗೆ ವೈಯುಕ್ತಿಕ ಅಭಿಪ್ರಾಯ ಏನೆಂದರೆ, ಅಂದು 2017 ರಂದು ಅನಾವರಣಗೊಂಡ ಭಂಡಾರಿ ವಾರ್ತೆ ಹಾಗೂ ಅದರ ಸದಸ್ಯರು ಹೇಗೆ ಒಟ್ಟಾಗಿ ಸೇರಿ ಕಾರ್ಯನಿರ್ವಹಿಸುತ್ತಿದ್ದರೋ ಅದೇ ರೀತಿ ಒಗ್ಗಟ್ಟು, ಹೊಸ ಹುರುಪು-ಹುಮ್ಮಸ್ಸು ಅವರಲ್ಲಿ ಮತ್ತೊಮ್ಮೆ ಕಾಣಬೇಕು. ಅದು ಏಕಕಾಲಕ್ಕೆ ಮಾತ್ರ ಸೀಮಿತವಾಗಿರದೆ ನಿರಂತರವಾಗಿ ಮುಂದುವರೆಯಬೇಕು.
 
ವೆಬ್ಸೈಟ್ ನಲ್ಲಿ ಪುಕ್ಕಟೆಯಾಗಿ ಕೆಲಸ ಮಾಡುವುದು ಅಷ್ಟು ಸುಲಭದ ಮಾತಲ್ಲ ಅನ್ನೋದು ತಿಳಿದಿದೆ. ಅದಕ್ಕೆ ಏನಾದರೂ ಪರಿಹಾರ ಕಂಡುಕೊಳ್ಳುವುದು ಒಳಿತು. ಯಾರ ಸಮಸ್ಯೆ ಏನು ಎಂಬುದನ್ನು ತಿಳಿದುಕೊಳ್ಳಲು ಪ್ರಯತ್ನಿಸುವುದು ಉತ್ತಮ. ಮೊದಲಿನಂತೆ ಅಲ್ಲದಿದ್ದರೂ ಭಂಡಾರಿ ವಾರ್ತೆ ಗೆ ಇಂತಿಷ್ಟೇ ಸಮಯವನ್ನು ನಿಗದಿ ಮಾಡಿ ಎಲ್ಲರೂ ಒಟ್ಟಾಗಿ ಸೇರಿ ಕಾರ್ಯನಿರ್ವಹಿಸುವಂತೆ ಪ್ರೇರೆಪಿಸಬೇಕು.
 
ಮತ್ತೊಂದು ಸಲಹೆ ಬರಹಗಾರರಿಗೆ ಪ್ರೋತ್ಸಾಹ ಧನ ಅಥವಾ ಸ್ಪರ್ಧೆ ಏರ್ಪಡಿಸಿದರೆ ಇನ್ನಷ್ಟು ಕಥೆ, ಕವನ ಹಾಗೂ ಲೇಖನಗಳು ಬರಬಹುದು.
 
(ಅನಿಸಿಕೆಯಲ್ಲಿ ಬೇಸರದ ವಿಷಯ ವಿದ್ದರೆ ಕ್ಷಮೆ ಇರಲಿ)🙏
 
✍️ ಸುಪ್ರೀತಾ ಸೂರಿಂಜೆ.
 

ಇರ್ವತ್ತೂರು ಗೋವಿಂದ ಭಂಡಾರಿ
 
ಇದೇ ಬರುವ ಆಗಸ್ಟ್ 26 ರಂದು ನಮ್ಮ ಹೆಮ್ಮೆಯ “ಭಂಡಾರಿ ವಾರ್ತೆ”ಯ 5ನೇ ಹುಟ್ಟು ಹಬ್ಬ. ಅಭಿನಂದನೆಗಳು.
ಕಳೆದ ನಾಲ್ಕು ವರ್ಷಗಳಲ್ಲಿ “ಭಂಡಾರಿ ವಾರ್ತೆ”ಯ ಮೂಲಕ ನಮ್ಮ ಸಮಾಜದ ಎಲ್ಲರನ್ನು ಪರಿಚಯಿಕೊಂ ಡೆ.ಗುರುತಿಸಿಕೊಂಡೆ. “ಭಂಡಾರಿ ವಾರ್ತೆ” ಎಂಬುದು ನಮ್ಮ ಸಮಾಜದ ಟೀವಿ ಚಾನಲ್ ಎಂದೇ ಭಾವಿಸಿರುವೆನು. ಇದು ಎಲ್ಲಾ ಸುದ್ದಿ ಸಮಾಚಾರಗಳನ್ನು ಕ್ಷಣಾರ್ಧದಲ್ಲಿ ಬಿತ್ತರಿಸುತ್ತದೆ. ಮುಂದುವರಿದ ಇತರ ಸಮಾಜದಂತೆ ಭಂಡಾರಿ ಸಮಾಜವೂ ಮುನ್ನಡೆ ಸಾಧಿಸಿದೆ ಎಂದು ಹೊರ ಪ್ರಪಂಚಕ್ಕೆ ತೋರಿಸುವ ಕೆಲಸ ಮಾಡುತ್ತಿದೆ.
 
ನಮ್ಮ ಸಮಾಜದ ಲ್ಲೂ ಬಗೆ ಬಗೆಯ ಪ್ರತಿಭೆ ಉಳ್ಳ ಸಾಧನೆ ಮಾಡಿದವ ರು ಇದ್ದಾರೆಂದು ಇತರ ಸಮಾಜಕ್ಕೆ ಗುರುತಿಸುತ್ತಿದೆ.
 
ಅದೇಕೋ “ಭಂಡಾರಿ ವಾರ್ತೆ“ಎಂಬ ಹೆಸರಲ್ಲೇ ಒಂದುರೀತಿಯ ಆಕರ್ಷಣೆ ಎದ್ದು ಕಾಣುತ್ತದೆ.
 
ವಯಕ್ತಿಕವಾಗಿ ನನಗೆ ಲೇಖನ ಬರೆಯಲು ಪ್ರೋತ್ಸಾಹಿಸಿದವರು “ಭಂಡಾರಿ ವಾರ್ತೆ”ಯ CEO ಕಟ್ಲಾ ಪ್ರಕಾಶ ಸಂಜೀವ ಭಂಡಾರಿಯವರು. ಅವರು ನಮ್ಮ ಕಚ್ಚೂರು ವಾಣಿಯ ಸಂಪಾದಕರಾಗಿದ್ದ ಕಾಲದಲ್ಲಿ ನನಗೆ ಫೋನಾಯಿಸಿ ಒತ್ತಾಯಿಸಿ “ನಿಮ್ಮ ಕತೆ ಲೇಖನ ಬರಲಿಲ್ಲ. ಕೂಡಲೇ ಕಳಿಸಿ”ಎಂದು ಹೇಳುವವರು. ನಾನು ಡ್ಯೂಟಿಯಲ್ಲಿ ಬಿಜಿಯಾಗಿದ್ದರೂ ಬರಹಗಳನ್ನು ಕಳಿಸುತಿದ್ದೆ.
ನಂತರದಲ್ಲಿ “ಪ್ರತಿಲಿಪಿ”ಎಂಬ APP ಕಳಿಸಿ ಕೊಟ್ಟರು.ಈ APP ನನಗೆ ತುಂಬಾ ಖುಷಿ ಕೊಟ್ಟಿತು. ಈಗ ಇದರಲ್ಲಿ ನನ್ನ ಇನ್ನೂರು ಕತೆ ಲೇಖನಗಳು ಇವೆ.ಎಲ್ಲಾಕತೆಗಳು ಪತ್ರಿಕೆಗಳಲ್ಲಿ ಪ್ರಕಟವಾಗಿದೆ.ಈಗಂತೂ ಕತೆ ಬರೆಯುವುದೇ ಒಂದು ಹವ್ಯಾಸ ಆಗಿ ಬಿಟ್ಟಿದೆ.
ನಿವೃತ್ತಬದುಕಿಗೆ “ಭಂಡಾರಿ ವಾರ್ತೆ”ಮತ್ತು ಇದರ CEO ರವರ ಕೃಪೆ ಎಂದೇ ಭಾವಿಸಿದ್ದೇನೆ. ನನ್ನ ಹೊಸ ಹೊಸ ಚಿಂತನೆ ಗೆ “ಭಂಡಾರಿ ವಾರ್ತೆ”ಯ ಪ್ರೋತ್ಸಾಹ ಎಂದು ಭಾವಿಸಿದ್ದೇನೆ.
ಕಟ್ಲರವರ ಆರೋಗ್ಯಕ್ಕೆ ದೇವರನ್ನು ಪ್ರಾರ್ಥಿಸುವೆ.ಅವರು ಸ್ಥಾಪಿಸಿದ “ಭಂಡಾರಿ ವಾರ್ತೆ” ಪ್ರಕಾಶಮಾನವಾಗಿ ಮಿಂಚ ಬೇಕು.ವಿಜೃಂಭಿಸಬೇಕು.Long LiveBhandary Varthe.
ಭಂಡಾರಿ ವಾರ್ತೆಯು ಎಲ್ಲಾ ಮಾಹಿತಿ ಒಡನೆ ಉದ್ಯೋಗದ ಮಾಹಿತಿ ಕೊಡುತ್ತಿದೆ.ಇದೊಂದು ಅದ್ಭುತ ಸೇವೆ ಆಗಿರುತ್ತದೆ. ಅಗತ್ಯ ಇದ್ದವರು ಪ್ರಯತ್ನಿಸ ಬೇಕು.
ಕಟ್ಲಾರವರ ಪರವಾಗಿ “ಭಂಡಾರಿ ವಾರ್ತಾ”ತಂಡದ ಕುಶಲ ಕುಮಾರರು ನನಗೆ ಹಲವು ಬಾರಿ ಫೋನಾಯಿ ಸಿ ಲೇಖನ ಬರೆಯಲು ಪ್ರೋತ್ಸಾಹಿಸುತ್ತಿದ್ದರು. ಅವರಿಗೂ ಮತ್ತು ತಂಡದ ಎಲ್ಲಾ ಸದಸ್ಯರಿಗೆ ವಂದಿಸುವೆನು.
 
– ಇರ್ವತ್ತೂರು ಗೋವಿಂದ ಭಂಡಾರಿ
 

ವಿಜಯ್ ನಿಟ್ಟೂರು
 
ನನ್ನ ಮತ್ತು ಭಂಡಾರಿ ವಾರ್ತೆಯ ಪರಿಚಯವಾದದ್ದು ಮುಖಪುಸ್ತಕದ ಮುಖಾಂತರ. ಬರಹಕ್ಕಾಗಿ ಇದ್ದ ಪ್ರಕಟಣೆಯನ್ನು ಮುಖಪುಸ್ತಕದಲ್ಲಿ ಗಮನಿಸಿದ ನಾನು ಒಂದು ಬರಹವನ್ನು ಕಳುಹಿಸಿದ್ದೆ. ಗೋವಿನ ಬಗೆಗೆ ಸಂಬಂಧಿಸಿದ ‘ನಮಗ್ಯಾಕೆ ಗೋವು ಅದ್ಭುತ ಮತ್ತು ಪೂಜ್ಯನೀಯ ?’ ಎನ್ನುವ ಶೀರ್ಷಿಕೆ ಅಡಿಯಲ್ಲಿ ಭಂಡಾರಿ ವಾರ್ತೆಯಲ್ಲಿ ಪ್ರಕಟವಾದ ಮೊದಲ ಬರಹ. ನಂತರದಲ್ಲಿ ಒಂದಷ್ಟು ಬರಹ, ಲೇಖನ, ಕಥೆ, ಕವಿತೆಗಳು ಪ್ರಕಟವಾದವು. ಆಗಾಗ್ಗೆ ನಾನು ತಟಸ್ಥನಾದಾಗ ಕುಶಾಲಣ್ಣ, ಭಾಸ್ಕರಣ್ಣ ಶಿರಾಳಕೊಪ್ಪ, ಪ್ರಕಾಶ ಭಂಡಾರಿ ಕಟ್ಲಾರವರು ಯಾಕೆ ಬರಹಗಳು ಬರುತ್ತಿಲ್ಲ ಎನ್ನುವ ಪ್ರಶ್ನೆಯೊಂದಿಗೆ ಕರೆಯೊ, ಸಂದೇಶವೋ ಇರುತ್ತಿತ್ತು. ಇಷ್ಟೇ ನನ್ನ ಮತ್ತು ಭಂಡಾರಿ ವಾರ್ತೆಯೊಡಗಿನ ಸಂಪರ್ಕ. ಭಂಡಾರಿ ವಾರ್ತೆ ಏರ್ಪಡಿಸಿದ್ದ ಸ್ಪರ್ದೆಯಲ್ಲಿ ‘ದೇವರ ದೀಪ’ ಬರಹಕ್ಕೆ ತೃತೀಯ ಸ್ಥಾನವೂ ದೊರಕಿತು. ಭಂಡಾರಿವಾರ್ತೆ ನನ್ನ ಬಾಲ ಬರಹಗಳನ್ನು ಗುರುತಿಸಿ ಪ್ರಕಟಿಸಿದಕ್ಕೆ ಈ ಮೂಲಕ ಧನ್ಯವಾಗಳನ್ನು ತಿಳಿಸುತ್ತೇನೆ.
ಭಂಡಾರಿ ವಾರ್ತೆಗೆ ಇದೇ ಆಗಸ್ಟ್ 26 ಕ್ಕೆ ಐದನೇ ವಸಂತಕ್ಕೆ ಕಾಲಿಡುತ್ತಿದೆ ಅಭಿನಂದನೆಗಳು. ಭಂಡಾರಿ ವಾರ್ತೆ ಮುಂದಿನ ದಿನಗಳಲ್ಲಿ ಹೇಗಿರಬೇಕು ಎನ್ನುವ ಪ್ರಶ್ನೆಯನ್ನೂ ಮುಂದಿಟ್ಟಿದ್ದೀರಿ. ಸಲಹೆಗಳನ್ನು ನೀಡುವಷ್ಟು ಹಿರಿಯ ನಾನಲ್ಲ, ಇನ್ನೂ ಎಳೆಯ. ನನ್ನ ಒಂದಿಷ್ಟು ವಿಷಯಗಳನ್ನು ನಿಮ್ಮ ಮುಂದಿಡುವ ಪ್ರಯತ್ನ ಮಾಡ್ತೇನೆ.
ಭಂಡಾರಿ ವಾರ್ತೆ ಹುಟ್ಟುಹಬ್ಬ, ಶ್ರದ್ದಾಂಜಲಿ ಮತ್ತು ಕೆಲವು ಆಹ್ವಾನಿತ ಲೇಖನಗಳಿಗೆ ಅಷ್ಟೇ ಮೀಸಲಾಗದೆ ಉದ್ಯೋಗ, ಆರೋಗ್ಯ, ಧಾರ್ಮಿಕತೆ, ವೈಚಾರಿಕತೆ, ರಾಜಕೀಯ, ಕಲೆ, ಶಿಕ್ಷಣ, ಕಾನೂನು ಇತ್ಯಾದಿ ವಿಷಯಗಳ ಬಗೆಗಿನ ಬರಹಗಳಿಗೆ ಒತ್ತು ನೀಡಿ ಇನ್ನಷ್ಟು ಬರಹಗಾರರನ್ನು ಹುಡುಕಿ ಪ್ರಕಟಣೆಗೊಳಿಸುವುದು.
ಪ್ರಕಟವಾದ ಬರಹಗಳನ್ನು ಸಮಾಜದ ಹೆಚ್ಚು ಜನರಿಗೆ ತಲುಪಿಸಿ. ಬರಹಗಳ ಬಗೆಗಿನ ಅಭಿಪ್ರಾಯಗಳನ್ನು (ಮೆಚ್ಚುಗೆ – ಭಿನ್ನಾಭಿಪ್ರಾಯ) ಸಂಗ್ರಹಿಸಿ ಬರಹಗಾರರಿಗೆ ತಲುಪಿಸುವ ಪ್ರಯತ್ನವಾಗಬಹುದಾ ! ಹಿಂದೆ ಕನಿಷ್ಠಪಕ್ಷ ಭಂಡಾರಿ ವಾರ್ತೆ ಗುಂಪಿನಲ್ಲಾದರೂ ಬರಹಗಳೆಡೆಗಿನ ವಿಮರ್ಶೆ ನೆಡೆಯುತ್ತಿದ್ದವು. ಬರಹಗಾರನಿಗೆ ಆತನ ಬರಹಕ್ಕೆ ಕಟ್ಟುವ ಮೌಲ್ಯಕ್ಕಿಂತ ಅನಿಸಿಕೆ, ವಿಮರ್ಶೆಗಳೇ ಹೆಚ್ಚು ಸಂತೃಪ್ತಿ ನೀಡುವಂತಹದು.
ಭಂಡಾರಿವಾರ್ತೆಯ ಸದಸ್ಯರಾಗಿರುವ ಕಣಬ್ರಹ್ಮ ವೆಂಕಿಯಣ್ಣ, ಭಾಸ್ಕರಣ್ಣ ಶಿರಾಳಕೊಪ್ಪ, ಪ್ರಶಾಂತಣ್ಣ ಕಾರ್ಕಳ ನಿಮ್ಮಿಂದ ಅದ್ಭುತ ಬರಹಗಳ ನಿರೀಕ್ಷೆ ಇದೆ.
ವಿಶೇಷವಾಗಿ ಕ್ಷೌರಿಕ ವೃತ್ತಿಯಿಂದ ಸಾಧಿಸಿದ ಸಾಧಕರ ಪರಿಚಯ ಮತ್ತು ಕ್ಷೌರಿಕ ವರ್ಗದಿಂದ ಕೃಷಿ, ವಿಜ್ಞಾನ, ಶಿಕ್ಷಣ, ಕ್ರೀಡೆ, ಕಲೆ, ಸಾಮಾಜಿಕ, ರಾಜಕೀಯ, ಇತ್ಯಾದಿ ಕ್ಷೇತ್ರಗಳಲ್ಲಿ ಸಾಧಿಸಿದ ಸಾಧಕರ ಪರಿಚಯ. ಚಿಪ್ಪಿನೊಳಗಿನ ಭಂಡಾರಿ ಮುತ್ತು ಚೆನ್ನಾಗಿ ಮೂಡಿ ಬರುತ್ತಿದೆ ಇನ್ನಷ್ಟು ಮುತ್ತುಗಳನ್ನು ಹುಡುಕಿ ತಿಂಗಳಿಗೆ ಎರಡು ಮುತ್ತನ್ನಾದರೂ ಪರಿಚಯಿಸಿಕೊಡಬೇಕೆಂಬ ಅಪೇಕ್ಷೆ.
ಮುಖ್ಯವಾಗಿ ಕ್ಷೌರಿಕರ ಶ್ರೇಯೋಭಿವೃದ್ದಿಗಾಗಿ ನೆಡೆಯುವಂತಹ ಸಾಮಾಜಿಕ ಕಾರ್ಯಕ್ರಮಗಳು ಉದಾಹರಣೆಗೆ ಸೆಲೂನ್ ಸ್ವಚ್ಚಾತಾದಂತಹ ಅದ್ಭುತ ಕಾರ್ಯಕ್ರಮಗಳು ನಾಮದೇವ ನಾಗರಾಜ್ ರವರಿಂದ ನೆಡೆಯುತ್ತಿದೆ. ಇಂತಹ ಅನೇಕ ಕಾರ್ಯಕ್ರಮಗಳು ನೆಡೆಯುತ್ತಿದ್ದರೆ ಅವುಗಳನ್ನ ಗುರುತಿಸಿ ಸಾಥ್ ಕೊಡುವ ಪ್ರಯತ್ನ ಭಂಡಾರಿ ವಾರ್ತೆ ಮಾಡಬಹುದೇ ?
ವೃತ್ತಿಯಲ್ಲಿ ನುರಿತ ಬಂಧುಗಳಿಂದ ಆಧುನಿಕ ಕೇಶಕರ್ತನ ಇತ್ಯಾದಿ ವಿಷಯಗಳ ಬಗೆಗಿನ ತರಬೇತಿ ಒದಗಿಸುವುದು. ಮುಖ್ಯವಾಗಿ ಗ್ರಾಮೀಣ ಪ್ರದೇಶದ ವೃತ್ತಿನಿರತರು ಇವುಗಳಿಂದ ವಂಚಿತರಾಗಿರುತ್ತಾರೆ ಅವರಲ್ಲಿ ಭರವಸೆಯನ್ನು ಮೂಡಿಸಿ ತರಬೇತಿ ಒದಗಿಸುವ ಪ್ರಯತ್ನ ಸ್ವಲ್ಪ ಹೆಚ್ಚೇ ಕಷ್ಟವಾದರೂ ನೆಡೆಸಬಹುದೇ ?
ಭಂಡಾರಿ ಬಂಧುಗಳ ವಿವಾಹ ಸಂಬಂಧವಾಗಿ ಭಂಡಾರಿ ವಿವಾಹ ವೆಬ್ಸೈಟ್ ನ್ನು, ಬಂಧುಗಳ ಉದ್ಯೋಗಕ್ಕಾಗಿ ವಿಷನ್ ಜಾಬ್ಸ್ ನ್ನು ಹೊರಡಿಸಿದ್ದೀರಿ. ಇದು ಇನ್ನಷ್ಟು ಪ್ರಚಲಿತಕ್ಕೆ ತರಬಹುದಾ !
ಅಸಹಾಯಕ ಭಂಡಾರಿ ಬಂಧುಗಳ ಜೊತೆಗೆ ನಿಲ್ಲುವ ಪ್ರಯತ್ನವನ್ನೂ ಭಂಡಾರಿವಾರ್ತೆ ಮಾಡುತ್ತಿದೆ ಇದಕ್ಕಾಗಿ ಅನಂತ ವಂದನೆಗಳು. ಸಲಹೆ ಸೂಚನೆಗಳು ನೀಡುವುದು ಸುಲಭ, ಕಾರ್ಯರೂಪಕ್ಕೆ ತರುವುದು ಕಠಿಣ ಎಂಬ ಅರಿವಿನೊಂದಿಗೆ ಭಂಡಾರಿ ವಾರ್ತಾ ತಂಡದ ಮುಖ್ಯಸ್ಥರಾದ ಪ್ರಕಾಶ್ ಭಂಡಾರಿ ಕಟ್ಲಾರವರಿಗೂ ಸದಸ್ಯರಾದ ಶ್ರೀಪಾಲ್ ಭಂಡಾರಿ ನೆಲ್ಯಾಡಿ, ಕುಶಾಲ್ ಕುಮಾರ್, ಭಾಸ್ಕರ್ ಭಂಡಾರಿ ಶಿರಾಳಕೊಪ್ಪ, ವೆಂಕಟೇಶ ಭಂಡಾರಿ ಕುಂದಾಪುರ, ಸಂದೇಶ್ ಕೆ ಬಂಗಾಡಿ, ಪ್ರಶಾಂತ್ ಭಂಡಾರಿ ಕಾರ್ಕಳ ಮತ್ತಿತರಿಗೆ ಹೃತ್ಪೂರ್ವಕ ಧನ್ಯವಾದಗಳನ್ನು ತಿಳಿಸುತ್ತಾ, ಎಳೆಯನ ಸಲಹೆಗಳಲ್ಲಿ ದೋಷಗಳಿದ್ದರೆ ಕ್ಷಮೆಯನ್ನು ಕೇಳುತ್ತಿದ್ದೇನೆ.
 
 
ವಿಜಯ್ ನಿಟ್ಟೂರು

Leave a Reply

Your email address will not be published. Required fields are marked *