ರಂಭಾಪುರಿ ಪೀಠದ ಶ್ರೀ ರುದ್ರಮುನೀಶ್ವರ ವಸತಿ ಪ್ರೌಢ ಶಾಲೆಯಲ್ಲಿ ಕನ್ನಡ ಜಾನಪದ ಪರಿಷತ್ತು ಜನವರಿ 16 ರ ಮಂಗಳವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬಾಳೆಹೊನ್ನೂರು ಹೋಬಳಿಯ ನೂತನ ಅಧ್ಯಕ್ಷರಾಗಿ ಶ್ರೀ ಸುನಿಲ್ ರಾಜ್ ಭಂಡಾರಿ ಬಾಳೆಹೊನ್ನೂರು ಪದಗ್ರಹಣ ಮಾಡಿದರು.
ಪದಗ್ರಹಣದ ಬಳಿಕ ಮಾತನಾಡಿದ ನೂತನ ಅಧ್ಯಕ್ಷರಾದ ಶ್ರೀ ಸುನಿಲ್ ರಾಜ್, ಸಾಹಿತ್ಯ ಚಟುವಟಿಕೆಗಳು ಕೇವಲ ನಗರಕ್ಕೆ ಮಾತ್ರ ಸೀಮಿತವಾಗಿರಬಾರದು, ಮುಂದಿನ ದಿನಗಳಲ್ಲಿ ಗ್ರಾಮೀಣ ಭಾಗದಲ್ಲಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು, ಅದಲ್ಲದೆ ಮುಂದಿನ ಮಾರ್ಚ್ ತಿಂಗಳಿನಲ್ಲಿ ರಂಭಾಪುರಿ ಪೀಠದಲ್ಲಿ ನಡೆಯಲಿರುವ ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ಕ್ಷೇತ್ರ ಮಟ್ಟದ ಜಾನಪದ ಜಾತ್ರೆಯನ್ನು ಹಮ್ಮಿಕೊಳ್ಳುವ ಯೋಜನೆಯಿದೆ ಎಂದರು. ಈ ಸಂದರ್ಭದಲ್ಲಿ ಜಾನಪದ ಕೌಶಲ್ಯಕ್ಕೆ ಮತ್ತು ಕಲಾವಿದರಿಗೆ ಆದ್ಯತೆ ನೀಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಕನ್ನಡ ಜಾನಪದ ಪರಿಷತ್ ಜಿಲ್ಲಾಧ್ಯಕ್ಷರಾಗಿರುವ ಶ್ರೀ ಪೂರ್ಣೇಶ್ , ತಾಲೂಕು ಅಧ್ಯಕ್ಷರಾಗಿರುವ ಶ್ರೀ ಮಹೇಶ್ ಶೆಟ್ಟಿಕೊಪ್ಪ, ತಾಲೂಕು ಕ ಸಾ ಪ ಮಾಜೀ ಅಧ್ಯಕ್ಷ ಕೆ ಟಿ ವೆಂಕಟೇಶ್, ಕಾರ್ಯದರ್ಶಿಯಾಗಿರುವ ಶ್ರೀ ಹಾತೂರು ಪ್ರಭಾಕರ್ ಮುಂತಾದವರು ಉಪಸ್ಥಿತರಿದ್ದರು .
ದಿವಂಗತ ಸುಶೀಲ ಮತ್ತು ದಿವಗಂತ ದೇವರಾಜ್ ಭಂಡಾರಿಯವರ ಪುತ್ರರಾದ ಶ್ರೀ ಸುನಿಲ್ ರಾಜ್ ಪತ್ನಿ ಶ್ರೀಮತಿ ನಯನ ಹಾಗೂ ಮಕ್ಕಳಾದ ಸದ್ವಿನ್ ಸೂರ್ಯ ರಾಜ್ ಮತ್ತು ಶಾಂತನು ಶೌರ್ಯ ರಾಜ್ ರವರ ಜೊತೆ ಬಾಳೆಹೊನ್ನೂರಿನಲ್ಲಿ ನೆಲೆಸಿರುತ್ತಾರೆ ಹಾಗೂ ಭಂಡಾರಿ ಸಮಾಜ ಸಂಘ ಬಾಳೆಹೊನ್ನೂರು ಘಟಕದ ಅಧ್ಯಕ್ಷರಾಗಿರುತ್ತಾರೆ.
ಸುನಿಲ್ ರಾಜ್ ರ ಮೂಲಕ ಬಾಳೆಹೊನ್ನೂರು ಹೋಬಳಿಯಲ್ಲಿ ಮೂಲೆಗುಂಪಾಗಿರುವ ಕಲಾವಿದರು ಬೆಳಕಿಗೆ ಬರಲಿ, ಆ ಭಾಗದಲ್ಲಿರುವ ನಮ್ಮ ಸಮಾಜದಲ್ಲಿರುವ ಅನೇಕ ಸಾಹಿತಿಗಳು ,ಕಲಾವಿದರನ್ನುಗುರುತಿಸುವ ಕೆಲಸ ಇವರಿಂದ ನಡೆಯಲಿ ಎಂದು ಆಶಿಸುತ್ತಾ ಭಂಡಾರಿ ವಾರ್ತೆ ಈ ಸಂದರ್ಭದಲ್ಲಿ ಅಭಿನಂದಿಸಿ ಶುಭ ಹಾರೈಸುತ್ತದೆ.