ಕರ್ನಾಟಕ ಸಿವಿಲ್ ಕೋರ್ಟ್ ನ್ಯಾಯಾಧೀಶರಾಗಿ ಮೂಡಬಿದ್ರೆ ತಾಲೂಕಿನ ಶಿರ್ತಾಡಿಯ ವಾಲ್ಪಾಡಿ ದಿವಂಗತ ಮಾಧವ ಭಂಡಾರಿ ಮತ್ತು ಶ್ರೀಮತಿ ಯುಮುನ ದಂಪತಿಯ ಪುತ್ರಿ ಸುನೀತಾ ಭಂಡಾರಿಯವರು ನೇಮಕಗೊಂಡಿದ್ದಾರೆ.
ಅತ್ಯಂತ ಕಿರಿಯ ವಯಸ್ಸಿನಲ್ಲಿ ತಂದೆಯನ್ನು ಕಳೆದುಕೊಂಡು ಆರ್ಥಿಕ ಸಮಸ್ಯೆ ಮಧ್ಯೆಯೇ ವಿದ್ಯಾವಂತೆಯಾಗಿ ಏನಾದರೂ ಸಾಧನೆಯನ್ನು ಸಮಾಜದಲ್ಲಿ ಮಾಡಬೇಕು ಎಂಬ ಛಲದಿಂದ ಉನ್ನತ ವ್ಯಾಸಂಗ ಪಡೆಯಬೇಕೆಂಬ ಕನಸನ್ನು ಕಂಡ ಇವರು ಪೆರಿಬೆಟ್ಟು ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣವನ್ನು ಆರಂಬಿಸಿ ದರೆಗುಡ್ಡೆ ಸರಕಾರಿ ಪ್ರೌಢಶಾಲೆಯಲ್ಲಿ ಪ್ರೌಢ ಶಿಕ್ಷಣವನ್ನು ಮುಗಿಸಿ ಕಾರ್ಕಳ ಸರಕಾರಿ ಜೂನಿಯರ್ ಕಾಲೇಜಿನಲ್ಲಿ ಪಿ.ಯು. ಶಿಕ್ಷಣವನ್ನು ಪಡೆದು ಮಂಗಳೂರಿನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನಲ್ಲಿ ಕಾನೂನು ಪದವಿಯನ್ನು ಪಡೆದಿರುತ್ತಾರೆ .
ತನ್ನ ವಿದ್ಯಾಭ್ಯಾಸಕ್ಕೆ ಧರ್ಮಸ್ಥಳದ ಧರ್ಮಾಧಿಕಾರಿ ಶ್ರೀ ಡಿ. ವೀರೇಂದ್ರ ಹೆಗ್ಡೆಯವರು ಪ್ರೋತ್ಸಾಹ ಧನ ನೀಡಿದ್ದು ಮತ್ತು ಮೂಡಬಿದ್ರೆ ಭಂಡಾರಿ ಸಮಾಜ ಸಂಘದ ಸಹಕಾರ ಮಾತ್ರವಲ್ಲದೆ ಶೈಕ್ಷಣಿಕ ಸಾಲವನ್ನು ಪಡೆದು ತಾಯಿ ನೆರವಿನೊಂದಿಗೆ ಕಾನೂನು ಪದವಿಯನ್ನು 2016 ರಲ್ಲಿ ಮುಗಿಸಿದ್ದಾರೆ.
ತಾಯಿಯ ಜೊತೆಗೆ ಸುನೀತಾ ಭಂಡಾರಿ
ಮೂಡಬಿದ್ರೆ ಬಾರ್ ಕೌನ್ಸಿಲ್ ನ ಸದಸ್ಯರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ ಹಾಗೂ ಮೂಡಬಿದ್ರೆ ಭಂಡಾರಿ ಸಮಾಜ ಸಂಘದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.
ಶ್ರೀಮತಿ ಮಮತಾ ಚೇತನ್ ಭಂಡಾರಿ ಉಳ್ಳಾಲ ಹಾಗೂ ಶ್ರೀಮತಿ ಸವಿತಾ ವಾಲ್ಪಾಡಿ ಇಬ್ಬರು ಸಹೋದರಿಯರು.
ಮೂಡಬಿದ್ರೆ ಹಿರಿಯ ವಕೀಲ ಪ್ರವೀಣ್ ಎಸ್. ಲೋಬೊ ಅವರ ಬಳಿ ವಕೀಲ ವೃತ್ತಿಯ ಪ್ರಾಕ್ಟೀಸ್ ಮಾಡುತ್ತಿರುವುದಾಗಿ ಭಂಡಾರಿ ವಾರ್ತೆಯ ಜೊತೆಗೆ ಸಂತಸ ವ್ಯಕ್ತಪಡಿಸಿದರು.
ಭಂಡಾರಿ ಸಮಾಜದಿಂದ ಎರಡನೇ ಸರಕಾರಿ ನ್ಯಾಯಾಧೀಶರಾಗಿ ಸುನೀತಾ ನೇಮಕಗೊಂಡಿರುವುದು ಸಮಾಜಕ್ಕೆ ಸಂತಸವನ್ನುಂಟು ಮಾಡಿದೆ.
ರಾಜ್ಯದ ಜನತೆಗೆ ಸೂಕ್ತ ನ್ಯಾಯ ದೊರಕಿಸಿ ಮಾದರಿ ನ್ಯಾಯಾಧೀಶರು ಎಂಬ ಕೀರ್ತಿಗೆ ಪಾತ್ರರಾಗಿ ಅತ್ಯುನ್ನತ ಹುದ್ದೆಯನ್ನು ಅಲಂಕರಿಸಿ ಎಂಬುದಾಗಿ ಭಂಡಾರಿ ಕುಟುಂಬದ ಮನೆ ಮನದ ಮಾತು ಭಂಡಾರಿ ವಾರ್ತೆ ಶುಭ ಹಾರೈಸುತ್ತದೆ.
– ಭಂಡಾರಿ ವಾರ್ತೆ