January 18, 2025
logo-smile

ಶ್ರೀ ವೈ.ಶಂಭು ಭಂಡಾರಿಯವರ ಸೂರ್ಯ ಚೈತನ್ಯ ಗ್ಲೋಬಲ್ ಅಕಾಡೆಮಿ ಸ್ಕೂಲ್,  ಪರಶುರಾಮೇಶ್ವರ ಕ್ಷೇತ್ರ,ಕುತ್ಯಾರು-574116

E-mail :
suryachaitanyaga@gmail.com

Mobile:9686811946,
             9845454075

ಶ್ರೀ ಶಂಭು ಭಂಡಾರಿಯವರು  ನಮ್ಮ ಭಂಡಾರಿ ಸಮಾಜದ ಬಂಧುಗಳಿಗೆಲ್ಲಾ ವೈ.ಎಸ್.ಭಂಡಾರಿ ಎಂದೇ ಚಿರಪರಿಚಿತರು. ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನದ  ಜೀರ್ಣೋದ್ಧಾರ ಕಾರ್ಯ ಆರಂಭಗೊಂಡ ತೊಂಬತ್ತರ ದಶಕಾರಂಭದಲ್ಲಿ ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಉಪಾಧ್ಯಕ್ಷರಾಗಿ 1990 ರಿಂದ 1997 ರ ವರೆಗೆ ಸೇವೆ ಸಲ್ಲಿಸಿದ ಇವರು 1997 ರಿಂದ 2001 ರ ವರೆಗೆ ಅಧ್ಯಕ್ಷರಾಗಿ  ದೇವಸ್ಥಾನದ ಸರ್ವತೋಮುಖ ಬೆಳವಣಿಗೆಗೆ ತಮ್ಮ ಅಳಿಲುಸೇವೆ ಸಲ್ಲಿಸಿರುವರು. ಬೆಂಗಳೂರಿನಲ್ಲಿ ಉದ್ಯಮಿಯಾಗಿದ್ದ ಇವರು ದೇವಸ್ಥಾನದ ಅವಶ್ಯಕತೆಗಳಿಗನುಗುಣವಾಗಿ ಸಾಕಷ್ಟು ಧನಸಹಾಯ ನೀಡುತ್ತಾ, ಭಂಡಾರಿ ಬಂಧುಗಳ ಕಷ್ಟ ಸುಖಗಳಿಗೆ ಸ್ಪಂದಿಸುತ್ತ ಜನಾನುರಾಗಿಯಾಗಿದ್ದರು. ಭಂಡಾರಿ ಕುಟುಂಬದ ಮಕ್ಕಳ ಶೈಕ್ಷಣಿಕ ಬೆಳವಣಿಗೆಗಳಿಗೆ ಸ್ಪಂದಿಸಲು 1993ರಿಂದ ಪ್ರತಿವರ್ಷ ರೂ. ಐದು ಸಾವಿರ ಮೊತ್ತವನ್ನು ವಿದ್ಯಾರ್ಥಿ ವೇತನವಾಗಿ ನೀಡುತ್ತಾ 1999ರಲ್ಲಿ  ಸ್ವಇಚ್ಛೆಯಿಂದ ಕಚ್ಚೂರು ವಿದ್ಯಾನಿಧಿ  ಸ್ಥಾಪಿಸಿ  ರೂ. ಮೂರು ಲಕ್ಷ ಮೊತ್ತವನ್ನು  ದೇಣಿಗೆಯಾಗಿ ನೀಡಿದ್ದು ಅಲ್ಲದೆ ಕುತ್ಯಾರಿನ ಪರಶುರಾಮೇಶ್ವರ ಕ್ಷೇತ್ರದಲ್ಲಿ 2003ರಿಂದ 2006 ತನಕ ರೂ. ನಾಲ್ಕು ಲಕ್ಷ ಮೊತ್ತವನ್ನು ವಿದ್ಯಾರ್ಥಿ ವೇತನ ನೀಡಿ , ನಾಲ್ಕು ಸಾವಿರ ಮಹಿಳೆಯರಿಗೆ ಸೀರೆ ವಿತರಣೆ ಮಾಡಿ ಭೋಜನ ಬಡಿಸಿ ಅದರಲ್ಲಿಯೇ ಸಾರ್ಥಕತೆಯನ್ನು ಕಂಡುಕೊಂಡರು.
ಮದ್ರಾಸು ವಿಶ್ವವಿದ್ಯಾಲಯದಲ್ಲಿ ಬಿ.ಟೆಕ್ ಇಂಜಿನಿಯರ್ ಪದವಿ ಪಡೆದು ವಿದೇಶಗಳಲ್ಲಿ ಹಲವಾರು ವರ್ಷ ಇಂಜಿನಿಯರ್ ಉದ್ಯೋಗ ಮಾಡಿ, ಬೆಂಗಳೂರಲ್ಲಿ 32 ವರ್ಷ ಸ್ವಂತ ಉದ್ಯಮ ನಡೆಸಿ, ಜ್ಯೋತಿಷ್ ವಿಜ್ಞಾನದಲ್ಲಿ  ವಿದ್ವನ್ಮಣಿ ಪದವಿ ಪಡೆದು 2012 ರ ಶೈಕ್ಷಣಿಕ ವರ್ಷದಲ್ಲಿ ವಿದ್ವಾನ್ ಶ್ರೀ ಶಂಭುದಾಸ ಗುರೂಜಿ ನೇತೃತ್ವದಲ್ಲಿ  ಆರಂಭಿಸಿದ ಶಿಕ್ಷಣ ಸಂಸ್ಥೆ  ಸೂರ್ಯ ಚೈತನ್ಯ ಗ್ಲೋಬಲ್ ಅಕಾಡೆಮಿ ಸ್ಕೂಲ್. 

Activity

ಇವರ ಈ ಮಹತ್ವಾಕಾಂಕ್ಷೆಯ  ಯೋಜನೆಯಲ್ಲಿ  ಬೆನ್ನೆಲುಬಾಗಿ ನಿಂತವರು ಇವರ ಧರ್ಮಪತ್ನಿ ಶ್ರೀಮತಿ ಶಾರದ ಕುತ್ಯಾರು.
ಉಡುಪಿಯಿಂದ ಕೇವಲ ಹದಿನೈದು ಕಿಲೋಮೀಟರ್ ದೂರದಲ್ಲಿರುವ ಈ ಸಂಸ್ಥೆ  ಕುತ್ಯಾರು  ಪುಣ್ಯಭೂಮಿಯ ಹನ್ನೊಂದು ಎಕರೆಯಷ್ಟು ವಿಸ್ತಾರವಾದ ಹಸಿರು, ಸ್ವಚ್ಛ, ಪ್ರಶಾಂತವಾದ ಸ್ಥಳದಲ್ಲಿ  ತಲೆಯೆತ್ತಿ ನಿಂತಿದೆ. ಇಂಗ್ಲಿಷ್ ಮೀಡಿಯಂ CBSE ಶಿಕ್ಷಣ ಮತ್ತು ಗುರುಕುಲ ಮಾದರಿಯ ಶಿಕ್ಷಣ ಪದ್ದತಿ  ಈ  ವಿದ್ಯಾಸಂಸ್ಥೆಯ ವಿಶೇಷತೆ.  ಪ್ರೀ ಕೆ‌ ಜಿ ಯಿಂದ ಎಂಟನೆಯ ತರಗತಿವರೆಗೆ  ನಡೆಯುತ್ತಿದ್ದು ಇನ್ನೆರಡು ಶೈಕ್ಷಣಿಕ  ವರ್ಷಗಳಲ್ಲಿ ಹತ್ತನೆಯ ತರಗತಿ ಹಾಗೂ ಪಿ.ಯು.ಸಿ ತನಕ ವಿಸ್ತರಿಸಲು ಉದ್ದೇಶಿಸಲಾಗಿದೆ. ಉತ್ತಮ ಸಂಸ್ಕಾರ ನೀಡುವ ಉದ್ದೇಶದಿಂದ ಶಾಲಾ ಆವರಣದಲ್ಲಿ  ಗಣಪತಿ, ಪರಶುರಾಮೇಶ್ವರ, ಶಿವಪಾರ್ವತಿ, ಶಾರದಾಂಬೆಯವರ ಸಾನ್ನಿಧ್ಯದ ದೇವಾಲಯದಲ್ಲಿ  ನಿತ್ಯ ಪೂಜೆ ನೆರವೇರುತ್ತದೆ. ಇಲ್ಲಿ ಮಕ್ಕಳು ನಡೆದಾಡುವ ದೇವರಂತೆ ಪ್ರೀತಿಸಲ್ಪಡುತ್ತಾರೆ. ಐದನೇ ತರಗತಿಯ ಮೇಲ್ಪಟ್ಟ ವಿದ್ಯಾರ್ಥಿಗಳಿಗೆ ವಸತಿ ಶಿಕ್ಷಣದ ವ್ಯವಸ್ಥೆ ಇದ್ದು ಮಕ್ಕಳು  ಸಾತ್ವಿಕ ಪೌಷ್ಟಿಕ ಆಹಾರವನ್ನು ಮತ್ತೆ ಮತ್ತೆ ಬಡಿಸಿಕೊಂಡು ಸವಿಯಲು ಮುಕ್ತ ಅವಕಾಶವಿದೆ.  

ಇಂಗ್ಲಿಷ್  ಮಾಧ್ಯಮದಲ್ಲಿ ಶಿಕ್ಷಣ ಕಲಿಯುವುದರೊಂದಿಗೆ ಕನ್ನಡ, ಸಂಸ್ಕೃತ, ವೇದಾಧ್ಯಯನ, ಭಗವದ್ಗೀತಾ, ಸಂಗೀತ, ಸೂರ್ಯ ನಮಸ್ಕಾರ, ಯೋಗಾಭ್ಯಾಸ, ಕರಾಟೆ ಮುಂತಾದ ಚಟುವಟಿಕೆಗಳು ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಪೂರಕವಾಗಿದೆ ಮತ್ತು ಉನ್ನತ ಮಟ್ಟದ ಶಿಕ್ಷಣ ಹೊಂದಿದ ನುರಿತ ಶಿಕ್ಷಕ ವೃಂದವೂ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವುದು ಈ ಶಾಲೆಯ ಹೆಗ್ಗಳಿಕೆಯಾಗಿದೆ.

ಈ ಪವಿತ್ರ ಜ್ಞಾನದೇಗುಲದ ಚೈತನ್ಯ ಸಭಾ ಭವನದಲ್ಲಿ ಹಲವಾರು ಶೈಕ್ಷಣಿಕ / ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿದ್ದು, 2018 ಫೆಬ್ರವರಿ 25 ರಂದು  ವಿದ್ವಾನ್  ಶಂಭುದಾಸ ಗುರೂಜಿಯವರ  ಅಧ್ಯಕ್ಷತೆಯಲ್ಲಿ  ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ  ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆ ಮಾಡಿದ ಮೂವರು ದಿಗ್ಗಜರನ್ನು ಸನ್ಮಾನಿಸಿ ಅವರಿಗೆ ಪರಶುರಾಮಾನುಗ್ರಹ ಪ್ರಶಸ್ತಿ  ನೀಡಿ ಗೌರವಿಸಲಾಯಿತು. ನಿಟ್ಟೆ ವಿಶ್ವವಿದ್ಯಾಲಯದ  ವೈಸ್ ಚಾನ್ಸಲರ್ ಡಾ||ಎಂ.ಎಸ್.ಮೂಡಿತ್ತಾಯ, ಬಂಟಕಲ್ SMVIT ಯ ಪ್ರಾಂಶುಪಾಲರಾದ  ಡಾ||ತಿರುಮಲೇಶ್ವರ ಭಟ್,ಬೆಳ್ಮಣ್ಣು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಡಾ||ಬಿ.ಜನಾರ್ದನ್ ಭಟ್ ಇವರುಗಳನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರಾದ ಧರ್ಮದರ್ಶಿ ಶ್ರೀ ಹರಿಕೃಷ್ಣ ಪುನರೂರುರವರು ಸನ್ಮಾನಿಸಿದರು. ಸನ್ಮಾನಿತರು ಸಭೆಯನ್ನುದ್ದೇಶಿಸಿ ಮಾತನಾಡಿದರು. ಉಪನ್ಯಾಸಕರಾದ ಡಾ||ಪ್ರಕಾಶ್ ಶೆಣೈ ಮತ್ತು  ಶ್ರೀ ಅನಂತ ಮೂಡಿತ್ತಾಯರವರು ಸನ್ಮಾನಿತರ ಕಿರುಪರಿಚಯ ಮಾಡಿ ಕಾರ್ಯಕ್ರಮದ ನಿರೂಪಣೆ ಮಾಡಿದರು. ವಿದ್ಯಾಸಂಸ್ಥೆಯ ಕಾರ್ಯದರ್ಶಿ ಶ್ರೀಮತಿ  ಶಾರದಾರವರು ವಂದನಾರ್ಪಣೆ ಸಲ್ಲಿಸಿದರು. 

Activity

ನಮ್ಮ ಭಂಡಾರಿ ಸಮಾಜದ ಹೆಮ್ಮೆಯ ಬಂಧುಗಳಾದ ವಿದ್ವಾನ್ ಶ್ರೀ ಶಂಭುದಾಸ ಗುರೂಜಿ ದಂಪತಿಗಳು ಕೈಗೊಂಡಿರುವ ಈ ಜ್ಞಾನಯಾಗ ಅದ್ಭುತ ಯಶಸ್ಸನ್ನು  ಕಾಣಲಿ  ಎಂದು ಭಂಡಾರಿ ಕುಟುಂಬದ ಮನೆಮನದ ಮಾತು ಭಂಡಾರಿವಾರ್ತೆ ಶುಭ  ಕೋರುತ್ತದೆ.
                                                                                                                       

ವರದಿ:ಭಾಸ್ಕರ್ ಭಂಡಾರಿ ಶಿರಾಳಕೊಪ್ಪ. 

1 thought on “ಸೂರ್ಯ ಚೈತನ್ಯ ಗ್ಲೋಬಲ್ ಅಕಾಡೆಮಿ ಸ್ಕೂಲ್, ಪರಶುರಾಮೇಶ್ವರ ಕ್ಷೇತ್ರ, ಕುತ್ಯಾರು

  1. ಶಂಭು ಭಂಡಾರಿ ಯವರ ಈ ನಿಸ್ವಾರ್ಥ ಸೇವೆಗೆ ನಾಗೇಶ್ವರನ ಧಯೆ ಹೀಗೆ ಇರಲಿ.

Leave a Reply

Your email address will not be published. Required fields are marked *