

ವಿಕಾರಿ ನಾಮ ಸಂವತ್ಸರ ಮಾರ್ಗಶಿರ ಕೃ 30 ಗುರುವಾರ ತಾರೀಕು 26-12-2019 ಹಗಲು ಮೂಲ ನಕ್ಷತ್ರ ಧನುರಾಶಿಯಲ್ಲಿ ಸೂರ್ಯನಿಗೆ ಕೇತುಗ್ರಹಣವಾಗಲಿದೆ.
ಈ ಸೂರ್ಯ ಗ್ರಹಣದ ಸ್ಪರ್ಶ ಕಾಲ ಬೆಳಗ್ಗೆ 8 ಘಂಟೆ 6 ನಿಮಿಷ, ಮಧ್ಯ ಕಾಲ ಬೆಳಗ್ಗೆ 9 ಘಂಟೆ 26 ನಿಮಿಷ, ಮೋಕ್ಷ ಕಾಲ ಬೆಳಗ್ಗೆ 11 ಘಂಟೆ 04 ನಿಮಿಷಕ್ಕೆ ಆಗಲಿದೆ ಒಟ್ಟಾರೆಯಾಗಿ ಗ್ರಹಣದ ಆದ್ಯಂತ ಕಾಲ 2 ಘಂಟೆ 58 ನಿಮಿಷಗಳು.

ಕಂಕಣ ಸೂರ್ಯ ಗ್ರಹಣವು ಧನುರಾಶಿ ಸೇರಿದಂತೆ ಮಕರ ವೃಷಭ ಕರ್ಕಟಕ ರಾಶಿಯವರಿಗೆ ಅರಿಷ್ಟವನ್ನು ಉಂಟು ಮಾಡಲಿದೆ. ಈ ರಾಶಿಯವರು ಅರಿಷ್ಟ ಶಾಂತಿ ಮಾಡಿ ಕೊಂಡರೆ ಒಳ್ಳೆಯದು. ಉಳಿದ ರಾಶಿಯವರು ಈ ಗ್ರಹಣ ಕಾಲದಲ್ಲಿ ಗ್ರಹಣದ ಆಚರಣೆಯನ್ನು ಮಾಡಿದಲ್ಲಿ ಆರೋಗ್ಯಕ್ಕೆ ಒಳ್ಳೆಯದು.

ಹಿಂದಿನ ರಾತ್ರಿ 8 ಘಂಟೆಯ ನಂತರ ಭೋಜನ ನಿಷಿದ್ಧ. ಗ್ರಹಣ ಮೋಕ್ಷಾನಂತರವೇ ಸ್ನಾನ ಮಾಡಿ ಅಡುಗೆ ಮಾಡಿ ಆಹಾರ ಸೇವನೆ ಮಾಡಬೇಕು. ಗ್ರಹಣ ಮೋಕ್ಷಾನಂತರ ದೇವಸ್ಥಾನಕ್ಕೆ ಹೋಗಿ ಆರ್ಚನೆ ಸೇವೆ ಮಾಡಿಸಿದಲ್ಲಿ ಶುಭವಾಗಲಿದೆ.
ಈ ಗ್ರಹಣದಿಂದ ದೇಶದ ನಾಯಕರು ರೋಗಗ್ರಸ್ತರಾಗುವ ಸಂಭವವಿದೆ, ದೇಶದ ಖಜಾನೆಗೆ ಹಾನಿಯಾಗಲಿದೆ. ಈ ಗ್ರಹಣದ ಫಲಿತಾಂಶ ಗ್ರಹಣ ಸಮೀಪವಿರುವಾಗಲೇ ಗೋಚರಿಸಲು ಪ್ರಾರಂಭವಾಗಲಿದೆ. ಚೋರಭಯ ದೇಶದ ಜನರನ್ನು ಕಾಡಲಿದೆ. ಅಲ್ಲಲ್ಲಿ ಬರಗಾಲ ಹಾಗು ಕೆಲವೆಡೆ ಪಕೃತಿ ಮುನಿಸಿಕೊಳ್ಳಲಿದ್ದಾಳೆ.

ಈ ಹಿಂದೆ ಇಂತಹ ಕಂಕಣಗ್ರಹಣವು 1748 ರಲ್ಲಿ ಸಂಭವಿಸಿತ್ತು ಮುಂದೆ 2064 ರಲ್ಲಿ ಸಂಭವಿಸಲಿದೆ. ಚಂದ್ರ ಬಿಂಬವು ರವಿಬಿಂಬಕ್ಕಿಂತ ಕಡಿಮೆಯಿದ್ದು ಗ್ರಹಣಮಧ್ಯದಲ್ಲಿ ರವಿಬಿಂಬದ ಮಧ್ಯೆ ಚಂದ್ರಬಿಂಬ ಬಂದಾಗ ರವಿಬಿಂಬವು ಸಂಪೂರ್ಣವಾಗಿ ಮುಚ್ಚಲ್ಪಡದೆ ಚಂದ್ರ ಬಿಂಬದ ಸುತ್ತಲೂ ರವಿಬಿಂಬದ ಅಂಚು ಕಂಕಣಾಕೃತಿಯಲ್ಲಿ ಪ್ರಕಾಶಮಾನವಾಗಿ ಬಳೆಯಂತೆ ಗೋಚರಿಸುವುದು.
