January 18, 2025
bhandaryvarthe independence day

ಈ ಬಾರಿ ನಾವು 75 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸುತ್ತಿದ್ದೇವೆ.1947 ರ ಆಗಸ್ಟ್ 15 ರಂದು ನಮಗೆ ಸ್ವಾತಂತ್ರ್ಯ ಸಿಕ್ಕಿರುವುದು ಎಲ್ಲರಿಗೂ ತಿಳಿದಿರುವ ವಿಷಯ .


ನಮ್ಮ ಸ್ವಾತಂತ್ರ್ಯದ 75 ನೇ ವರ್ಷವನ್ನು ಆತ್ಮವಿಶ್ವಾಸ ಮತ್ತು ಸ್ವಾಭಿಮಾನದೊಂದಿಗೆ ಆಚರಿಸುತ್ತೇವೆ.ಅದೇ ಸಮಯದಲ್ಲಿ ನಮ್ಮ ಸಾಧನೆಗಳೇನು?, ದೌರ್ಬಲ್ಯಗಳೇನು? ಎಂದು ವಾಸ್ತವಿಕ ದೃಷ್ಟಿಯಿಂದ ಪರಿವೀಕ್ಷಿಸುವ ಸಂದರ್ಭವಾಗಿ ಬಳಕೆಯಾಗಬೇಕೆಂದು ನಾನು ಆಶಿಸುತ್ತೇನೆ.ಕೀಳರಿಮೆ ಸಲ್ಲದು ಹಾಗೆಯೇ ಉತ್ಪ್ರೇಕ್ಷೆಯೂ ಬೇಡ. ಅತೀ ರಂಜನೆಯಿಂದ ಭ್ರಮೆ ಹುಟ್ಟುತ್ತದೆ. ಬರೀ ಖಂಡನೆಯಿಂದ ಕಾರ್ಯ ಸಾಧನೆಯ ಶಕ್ತಿ ಕುಗ್ಗುತ್ತದೆ.ನಮಗೆ ಈ ಸಂದರ್ಭದಲ್ಲಿ ಬೇಕಿರುವುದು ಯಥಾರ್ಥ ಪರಿವೀಕ್ಷಣೆ ಮತ್ತು ಸ್ಪಷ್ಟ ಮುನ್ನೋಟ.ಕನ್ನಡದ ಕವಿ ಸಿದ್ದಲಿಂಗಯ್ಯನವರು ಹೊಮ್ಮಿಸಿದ್ದ ಹಾಗೂ ಸಾವಿರಾರು ಯುವ ಜನರ ಕಂಠಗಳಿಂದ ಪ್ರತಿಧ್ವನಿಸಿದ್ದ ” ಎಲ್ಲಿಗೆ ಬಂತು ಯಾರಿಗೆ ಬಂತು ನಲ್ವತ್ತೇಳರ ಸ್ವಾತಂತ್ರ್ಯ”? ಎಂಬ ಗೀತೆಯ ಸಾಲುಗಳು ನಮ್ಮ ಹೃದಯವನ್ನೀಗಲೂ ಕಲಕುತ್ತಿವೆ.

ಸ್ವಾತಂತ್ರ್ಯ ಹೋರಾಟದಲ್ಲಿ ನಮ್ಮ ದೇಶದ ಹಲವಾರು ಮಹಿಳೆಯರು ಮಹತ್ತಾದ ಪಾತ್ರ ನಿರ್ವಹಿಸಿದ್ದಾರೆ.ಸ್ವಾತಂತ್ರ್ಯ ನಂತರ ಏಳು ದಶಕಗಳಲ್ಲಿ ಎಲ್ಲಾ ಕ್ಷೇತ್ರಗಳಲ್ಲಿಯೂ ಮುಖ್ಯವಾಗಿ ರಾಜಕೀಯದಲ್ಲೂ ಮಹಿಳೆಯರು ಗಣ್ಯ ಪಾತ್ರ ನಿರ್ವಹಿಸಿದ್ದಾರೆ. ಸಮಯ ಬಂದಾಗ ಸಾರ್ವಜನಿಕ ಜವಾಬ್ದಾರಿಗಳನ್ನು ಹೊತ್ತುಕೊಂಡು ನಿಭಾಯಿಸಲು ಮಹಿಳೆಯರು ಮುಂದೆ ಬಂದಿದ್ದಾರೆ.ನಮ್ಮ ಸಂವಿಧಾನವು ಮಹಿಳೆಯರನ್ನು ಪುರುಷರಿಗೆ ಸಮಾನರೆಂದು ಪರಿಗಣಿಸಿದೆ.ಇಷ್ಟಾದರೂ ಮಹಿಳೆಯರಿಗೆ ರಾಜಕೀಯ ಅಧಿಕಾರದಲ್ಲಿ ಅರ್ಹವಾದ ಸ್ಥಾನ ನೀಡುವಂತಹ ಕಾನೂನು ಅಂಗೀಕರವಾಗದಿರುವುದು ಪ್ರಜಾಪ್ರಭುತ್ವದ ಬೆಳವಣಿಗೆಗೊಂದು ಆತಂಕವಾಗಿದೆ.

ಸ್ವಾತಂತ್ರ್ಯ ಮತ್ತು ಮಹಿಳೆ ಎಂಬ ವಿಷಯ ಕೇಳಿದ ತಕ್ಷಣ ನಾವು ಫಟ್ ಅಂತ ಹೇಳಿಬಿಡುತ್ತೇವೆ. ಈಗ ಮಹಿಳೆಯರಿಗೆ ಪೂರ್ತಿ ಸ್ವಾತಂತ್ರ್ಯ ಸಿಕ್ಕಿದೆಯಲ್ಲ ಎಂದು. ಹೌದು ನಾವು ಸಿನಿಮಾ ತಾರೆಯರು, ರಾಜಕೀಯದಲ್ಲಿ ಸ್ಥಾನ ಮಾನ ಹೊಂದಿರುವ ಮಹಿಳೆಯರು, ಅತೀ ಶ್ರೀಮಂತ ಮಹಿಳೆಯರು, 100 ಮಂದಿ ಮಹಿಳೆಯರಲ್ಲಿ 2 ಮಹಿಳೆಯರನ್ನು ಕಂಡು ಎಲ್ಲಾ ಮಹಿಳೆಯರ ಸ್ಥಾನ ಮಾನ ಹೆಚ್ಚಿದೆ ಅವರಿಗೆ ಎಲ್ಲಾ ರೀತಿಯ ಸೌಲಭ್ಯ ದೊರಕಿದೆ ಎಂದು ಹೇಳುವುದು ಹಾಸ್ಯಾಸ್ಪದವಾಗುತ್ತದೆ.
ನಮ್ಮ ಮಹಿಳೆಯರ ಮಟ್ಟಿಗೆ ನಮ್ಮ ಸ್ವಾತಂತ್ರ್ಯ ಏನು ತಂದಿತು? ಏನು ತಂದಿಲ್ಲ? ಸ್ವಾತಂತ್ರ್ಯ ನಂತರ ನಾವು ಏನಾಗಿದ್ದೇವೆ? ಇನ್ನೂ ಏನಾಗಬೇಕು?………..

ಮಹಿಳೆಯರಿಗೆ ಸ್ವಾತಂತ್ರ್ಯ ಎಂಬುದು ಹೇಗೂ ಬರಲಿ , ಎಲ್ಲಿಂದಲೇ ಬರಲಿ ಇಂದು ಮಾತ್ರ ಮಹಿಳಾ ಜಗತ್ತು ಅವಕಾಶಗಳಿಗೆ ತೆರೆದುಕೊಳ್ಳುವುದು ಸಾಧ್ಯವಾಗಿದೆ .ಹೆಣ್ಣಿನ ಅಸ್ತಿತ್ವವನ್ನು ಗುರುತಿಸಿಕೊಳ್ಳುವ ಪ್ರಕ್ರಿಯೆ ಪ್ರಾರಂಭಗೊಂಡಾಗ ” ಜಾಗೃತ ಮಹಿಳೆ” ,ಹೊಸ ಮಹಿಳೆ, “ಎಚ್ಚರಗೊಂಡ ಹೆಣ್ಣು”ಆಧುನಿಕ ಸ್ತ್ರೀ” ಎಂಬೆಲ್ಲ ವಿಶೇಷಣೆಗಳು ಅವಳಿಗೆ ಸಿಕ್ಕಿವೆ. ಅದು ಹೊಸ್ತಿಲ ಒಳಗೆ ನಿಂತು ಆಲೋಚಿಸುವುದಕ್ಕಿಂತ ಭಿನ್ನವಾಗಿ ಹೊಸ್ತಿಲಿನಿಂದೀಚೆಗೆ ಬಂದು ನಿಂತು ಚಿಂತಿಸುವ ದೃಷ್ಟಿಯನ್ನು ಪಡೆದುಕೊಂಡಿದೆ.

ಸಮಾಜವೊಂದರಲ್ಲಿ ಹೆಣ್ಣಿನ ಸ್ಥಾನಮಾನ ಹೇಗಿದೆ ಎಂಬ ಬಗ್ಗೆ ಬರೀ ಪರ ವಿರೋಧ ವಾಗ್ವಾದಗಳಿಂದ ಒಂದು ಖಚಿತ ನಿಲುವಿಗೆ ಬರಲಾಗುವುದಿಲ್ಲ.ಹಾಗೆ ಒಂದು ವೇಳೆ ಏನೇ ತೀರ್ಮಾನಕ್ಕೆ ಬಂದರೂ ಅವು ಅರ್ಧ ಸತ್ಯವಾಗುವ ಸಂಭವವೇ ಹೆಚ್ಚು. ಇಂತಹ ಸಂದರ್ಭದಲ್ಲಿ ಸಮೀಕ್ಷೆಯ ಮೂಲಕ ಪಡೆದ ಅಂಕಿ ಅಂಶಗಳು ಸತ್ಯದ ಇನ್ನೊಂದು ಮುಖವನ್ನು ತಿಳಿಯಲು ನೆರವಾಗುತ್ತದೆ. ಉದಾಹರಣೆಗೆ ದಕ್ಷಿಣ ಕನ್ನಡ ಜಿಲ್ಲೆ ಬುದ್ಧಿವಂತರ ಜಿಲ್ಲೆ ಎಂಬ ಹೆಸರಿದೆ. ಶೈಕ್ಷಣಿಕವಾಗಿ, ಆರ್ಥಿಕವಾಗಿ ಮುಂದೆ ಇರುವುದರಿಂದ ಇಲ್ಲಿ ಸಾಮಾಜಿಕ ನ್ಯಾಯ ಮೇಲ್ಮಟ್ಟದಲ್ಲಿ ಇದೆ.ಹೆಣ್ಣು ಮಕ್ಕಳಿಗೆ ಯಾವುದೇ ಭೇದ ಭಾವ ಇಲ್ಲ.ಹೆಣ್ಣು ಗಂಡು ಸಮಾನವಾಗಿ ನೋಡಲಾಗುತ್ತಿದೆ ಎಂಬ ಭಾವನೆ ಹೊರಗಿನವರಲ್ಲಿದೆ.ಆದರೆ ವಸ್ತು ಸ್ಥಿತಿ ಹಾಗಿದೆಯಾ ಎಂಬುದು ಮುಖ್ಯ. ಜನಗಣತಿ ಪ್ರಕಾರ 1000 ಪುರುಷರಿಗೆ 1022 ಮಹಿಳೆಯರಿದ್ದಾರೆ.ಆದರೆ 0-6 ರ ವಯಸ್ಸಿನ ಮಕ್ಕಳ ಸಂಖ್ಯೆ 1000 ಗಂಡು ಮಕ್ಕಳಿಗೆ ಕೇವಲ 952 ಹೆಣ್ಣು ಮಕ್ಕಳಿದ್ದಾರೆ. ಮಾತೃಪ್ರಧಾನ ಕುಟುಂಬ ವ್ಯವಸ್ಥೆಯ ದಕ್ಷಿಣ ಕನ್ನಡದಲ್ಲಿ ಹೆಂಗಸರ ಸಂಖ್ಯೆಯು ಜಾಸ್ತಿ ಇರುವಂತೆ ಹೆಣ್ಣು ಮಕ್ಕಳ ಸಂಖ್ಯೆಯೂ ಜಾಸ್ತಿ ಇರಬೇಕಿತ್ತಲ್ಲವೇ ?. ಹಾಗಾದರೆ ಈ ಮಕ್ಕಳು ಏನಾದರು?….

ಭಾರತೀಯ ಸಮಾಜದಲ್ಲಿ ಹುಟ್ಟಿನಿಂದಲೇ ತಾರತಮ್ಯಗಳು ನಿರ್ಧರಿಸಲಾಗುತ್ತದೆ. ಹಲವಾರು ಶತಮಾನಗಳಿಂದ ಅಸ್ತಿತ್ವದಲ್ಲಿದ್ದವು. ಅದು ಯಾವಾಗ ಮೊದಲಾಯಿತೆಂದು ಅಂದಾಜಾಗುವುದಿಲ್ಲ. ಇತಿಹಾಸದಲ್ಲಿ ಹಿಂದಕ್ಕೆ ಹೋದಷ್ಟು ಅವುಗಳ ಕುರುಹುಗಳು ಕಾಣಿಸುತ್ತವೆ.
ಇಂತಹ ಕುರುಹುಗಳು ತಿನ್ನುವ ಆಹಾರಗಳಲ್ಲೂ ಕಾಣಬಹುದು. ನಿಮಗೆ ಗೊತ್ತಾ ಹೆಂಗಸರು ಅಗತ್ಯಕ್ಕಿಂತ 1000 ಕ್ಯಾಲೋರಿ ಕಡಿಮೆ ಆಹಾರ ಸೇವಿಸುತ್ತಾರೆ ಮತ್ತು ಶೇಕಡಾ 53 ರಷ್ಟು ಶಕ್ತಿ ವ್ಯಯಿಸುತ್ತಾರೆ. ಆದರೆ ಗಂಡಸರು 800 ಕ್ಯಾಲೋರಿ ಜಾಸ್ತಿ ತಿನ್ನುತ್ತಾರೆ. ಕೇವಲ 33% ಅವರ ಶಕ್ತಿ ವ್ಯಯವಾಗುತ್ತದೆ.ಎಂದು ಅಧ್ಯಯನಗಳು ಹೇಳುತ್ತವೆ.

ನಿಜವಾಗಿ ಹೇಳುವುದಾದರೆ ಹೆಣ್ಣು ಕುಟುಂಬದ ನಿರ್ದೇಶಕಿ.ಗಂಡನಿಗೆ ನಿರ್ದೇಶನ ನೀಡುತ್ತಲೇ ಮಕ್ಕಳಿಂದ ತೊಡಗಿ ಹಿರಿಯರವರೆಗೆ ಕುಟುಂಬದ ಎಲ್ಲಾ ಸದಸ್ಯರ ಯೋಗ ಕ್ಷೇಮ ಆರೈಕೆಯಂತಹ ವ್ಯವಸ್ಥೆಯ ಸಂಯೋಜನೆ, ನಿರ್ವಹಣೆಗಳಲ್ಲಿ ಆಕೆಯದ್ದೇ ದೊಡ್ಡ ಪಾಲು. ಕಾರಣ ಸಮಸ್ಯೆಗಳು ಆಕೆಯ ಕೈ ಕಾಲುಗಳ ಬುಡದಲ್ಲೇ ಪ್ರಾರಂಭವಾಗುತ್ತದೆ.ಹೀಗಿದ್ದರೂ ಪುರುಷರು ಇದನ್ನು ಒಪ್ಪಿಕೊಳ್ಳಲು ಸಿದ್ಧರಿರುವುದಿಲ್ಲ. ಬದುಕನ್ನು ಮತ್ತು ಜಗತ್ತನ್ನು ಹೆಣ್ಣಿನ ಕಣ್ಣಿನ ಮೂಲಕ ನೋಡುವ ಮನಸ್ಸು ಗಂಡಿಗಿಲ್ಲದಿರುವುದೇ ದೋಷ.

ಮಹಿಳೆ ಹೊರಗೆ ಶಿಕ್ಷಕಿ, ವಕೀಲೆ, ನ್ಯಾಯವಾದಿ,ವೈದ್ಯೆ, ರೈತೆ,ಶುಶ್ರೂಷಿ ಹೀಗೆ ವಿವಿಧ ಹುದ್ದೆಯ ಹೆಸರಿನಿಂದ ದುಡಿದು ಗೌರವ ಸಂಪಾದಿಸಿದರೂ ಮನೆಗೆ ಬಂದಾಗ ಗಂಡನಿಗೆ ಹೆಂಡತಿಯಾಗಿ, ಮಕ್ಕಳಿಗೆ ತಾಯಿಯಾಗಿ, ಅತ್ತೆ ಮಾವನಿಗೆ ಸೊಸೆಯಾಗಿ , ಅಪ್ಪ ಅಮ್ಮನಿಗೆ ಮಗಳಾಗಿ ಸೇವೆ ಮಾಡಲು ಸಿದ್ಧಳಾಗಿ ಇರಬೇಕಾಗುತ್ತದೆ. ಅವಳ ಮಾನಸಿಕ , ದೈಹಿಕ ಸುಸ್ತು ಯಾವುದನ್ನೂ ಲೆಕ್ಕಿಸದೆ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕಾಗುತ್ತದೆ. ಹೊರಗೆಯೂ ದುಡಿದು ಒಳಗೂ ವಿಶ್ರಾಂತಿ ಎಂಬುದಿಲ್ಲದೆ ದುಡಿಯಬೇಕಾಗುತ್ತದೆ.

ದುಡಿಯುವ ಮಹಿಳೆಯರ ಸ್ಥಿತಿ ಈ ರೀತಿ ಇದ್ದರೆ ಮನೆಯಲ್ಲಿಯೇ ಮನೆ ಕೆಲಸ ಮಕ್ಕಳ ಆರೈಕೆ ಮಾಡುವ ಮಹಿಳೆಯರು ಆರ್ಥಿಕವಾಗಿ ಎನೂ ಇಲ್ಲದೆ ಎಲ್ಲಾ ಸಣ್ಣ ಪುಟ್ಟ ವಸ್ತುವಿಗೂ ಗಂಡನಲ್ಲಿ ಅಥವಾ ಮನೆಯ ಹಿರಿಯರಲ್ಲಿ ಅಂಗಲಾಚಿ ಬೇಡುವ ಸ್ಥಿತಿ ಈ ಸಮಾಜದಲ್ಲಿ ಇದೆ.

ಪ್ರಸ್ತುತ ಕೊರೋನಾ ಎಂಬ ಮಹಾ ರೋಗದಿಂದ ಆಗಿರುವ ಆರೋಗ್ಯದ ಏರು ಪೇರು, ತತ್ತರಿಸಿರುವ ಆರ್ಥಿಕ ಸ್ಥಿತಿ, ವ್ಯಾಪಾರ , ದುಡಿಮೆ , ಸಂಬಳ ಇಲ್ಲದೆ ಇರುವುದು ಇದೆಲ್ಲದರ ಮೊದಲ ಹೊಡೆತ ತಿನ್ನುವವಳೇ ಮಹಿಳೆ. ಅವಳ ಅಡಿಗೆ ಮನೆಯ ತಿನ್ನುವ ಆಹಾರದ ಮೇಲೆಯೇ ಕತ್ತರಿ ಬೀಳುತ್ತದೆ . ಎಲ್ಲವನ್ನೂ ಸರಿದೂಗಿಸಿಕೊಂಡು ಸಮಾಜದಲ್ಲಿ ಎಲ್ಲರಂತೆ ನಾವು ಬದುಕಬೇಕು ಎಂದು ಪ್ರತಿಯೊಬ್ಬ ಮಹಿಳೆ ಕೂಡ ಹೆಣಗಾಡುತ್ತಿರುತ್ತಾಳೆ.

ಭಂಡಾರಿ ವಾರ್ತೆಯ ಸಮಸ್ತ ಓದುಗ ವರ್ಗಕ್ಕೆ, ಭಂಡಾರಿ ವಾರ್ತೆ ತಂಡಕ್ಕೆ 75 ನೇ ಸ್ವಾತಂತ್ರ್ಯೋತ್ಸವದ ಶುಭಾಶಯಗಳು.

 

 

 

 

 

 

-ವನಿತಾ ಅರುಣ್ ಭಂಡಾರಿ, ಬಜ್ಪೆ

Leave a Reply

Your email address will not be published. Required fields are marked *