ಪ್ರತಿಯೊಬ್ಬರ ಬಾಳಿನಲ್ಲಿ ಹೆಣ್ಣು ತಾಯಿಯಾಗಿ, ಅಕ್ಕತಂಗಿಯಾಗಿ, ಮಗಳಾಗಿ, ಸತಿಯಾಗಿ…. ಹೀಗೆ ಇನ್ನೂ ಮುಂತಾದ ಪಾತ್ರಗಳಲ್ಲಿ ಹೊಕ್ಕು ಜೊತೆಯಾಗಿ ಇರುತ್ತಾಳೆ. ಹೆಣ್ಣು ಇರದ ಬಾಳನ್ನು ಊಹಿಸುವುದು ಕಷ್ಟ. ಹೆಣ್ಣು ಇರದೇ ಯಾವ ದಿನವೂ ಇಲ್ಲವೆಂದಾದ ಮೇಲೆ ಪ್ರತಿದಿನವೂ ಮಹಿಳೆಯರ ದಿನವೇ, ಆದರೂ ವರ್ಷಕ್ಕೊಮ್ಮೆ ಮಹಿಳೆಯರ ಶೈಕ್ಷಣಿಕ, ಆರ್ಥಿಕ, ಸಾಮಾಜಿಕ, ರಾಜಕೀಯ ಹೀಗೆ ಇನ್ನೂ ಮುಂತಾದ ಕ್ಷೇತ್ರಗಳಲ್ಲಿ ಆಕೆಯ ಸಾಧನೆಗಳನ್ನು ನೆನೆಯಲು ಮಾರ್ಚ್ 8 ರಂದು “ವಿಶ್ವ ಮಹಿಳಾ ದಿನಾಚರಣೆ” ಯನ್ನು ಆಚರಿಸಲಾಗುತ್ತದೆ.
ಮೊದಮೊದಲು ಮಹಿಳೆಯರನ್ನು ಅಬಲೆ ಎಂಬಂತೆ ಕಾಣಲಾಗುತ್ತಿತ್ತು, ಹಾಗೆಯೇ ಬಿಂಬಿಸಲಾಗುತ್ತಿತ್ತು ಕೂಡಾ. ಕ್ರಮೇಣ ಹೆಣ್ಣು ಶೈಕ್ಷಣಿಕವಾಗಿ ಪ್ರಬುದ್ಧಳಾಗಿ,ಸಾಂಸ್ಕೃತಿಕವಾಗಿ ಪ್ರೌಡಳಾಗಿ,ಆರ್ಥಿಕವಾಗಿ ಸಬಲಳಾಗಿ, ಸಾಮಾಜಿಕವಾಗಿ ಸದೃಢವಾಗಿ ಬೆಳೆದು ಹಲವು ಕ್ಷೇತ್ರಗಳಲ್ಲಿ ಅಪರಿಮಿತ ಸಾಧನೆಯನ್ನು ಮಾಡಿ ಸಮಾಜದಲ್ಲಿ ತನ್ನ ಸ್ಥಾನ ಏನೆಂಬುದನ್ನು ನಿರೂಪಿಸಿದ್ದಾಳೆ. ಹೆಣ್ಣು ಮೊದಲಿನಂತೆ ಗಂಡ, ಮನೆ, ಮಕ್ಕಳು ಎಂದು ಸೀಮಿತವಾಗುಳಿಯದೇ ಶೈಕ್ಷಣಿಕವಾಗಿ ಬೆಳೆದು ಸ್ವ-ಉದ್ಯೋಗ ಮಾಡುತ್ತಾ, ಸ್ವಾವಲಂಬಿಯಾಗಿ ಬದುಕುತ್ತ ತನ್ನ ಬದುಕನ್ನು ರೂಪಿಸಿಕೊಂಡಿದ್ದಾಳೆ. ಬಾಲ್ಯದಲ್ಲಿ ತಂದೆಯ ಆಸರೆ, ಯೌವ್ವನದಲ್ಲಿ ಗಂಡನ ಆಸರೆ, ಮುಪ್ಪಿನಲ್ಲಿ ಮಕ್ಕಳ ಆಸರೆ ಎಂದು ಹೆಣ್ಣನ್ನು ಕಡೆಗಣಿಸುವ ಕಾಲ ಕೊನೆಗೊಂಡಿದೆ. ಹೆಣ್ಣು ಇಡೀ ಸಂಸಾರವನ್ನು ತಾನೊಬ್ಬಳೇ ಏಕಾಂಗಿಯಾಗಿ ಬಲಿಷ್ಠವಾಗಿ ಕಟ್ಟಬಲ್ಲಳು ಮತ್ತು ನಿರ್ವಹಿಸಬಲ್ಲಳು.
ಆದರೆ ಈಗಿನ ಈ ಸ್ವಾತಂತ್ರ್ಯ, ಸಬಲತೆ ಹೆಣ್ಣಿಗೆ ಸ್ವಲ್ಪ ಅತಿಯಾಯಿತು ಅನ್ನಿಸದೇ ಇರದು. ಹೆಣ್ಣು ಎಷ್ಟೇ ಸಬಲೆಯಾದರೂ, ಸುಶಿಕ್ಷಿತೆಯಾದರೂ ತನ್ನ ಇತಿಮಿತಿ, ಪರಿಮಿತಿಗಳನ್ನು ಅರಿತು ನಡೆಯಬೇಕು. ತನಗೆ ದೊರೆತ ಸ್ವಾತಂತ್ರ್ಯವನ್ನು ಸ್ವೇಚ್ಛಾಚಾರವೆಂದು ಭಾವಿಸಬಾರದು. ಹೆತ್ತವರು, ಒಡಹುಟ್ಟಿದವರು ಮುಜುಗರ ಪಡುವಂತೆ ವರ್ತಿಸಬಾರದು. ತಡ ರಾತ್ರಿಯ ಪಬ್ ಸಂಸ್ಕೃತಿಗೆ ಮರುಳಾಗಿ ದಾರಿತಪ್ಪಬಾರದು. ಉಡುಗೆ ತೊಡುಗೆಗಳಲ್ಲಿ ಸಭ್ಯತೆಯನ್ನು ಮೀರಬಾರದು. ಧೂಮಪಾನ ಮತ್ತು ಮದ್ಯಪಾನ ಅಭ್ಯಾಸದ ದುಷ್ಪರಿಣಾಮಗಳು ನಿಮ್ಮ ಕರುಳು ಬಳ್ಳಿಗಳ ಮೇಲೆ ನೇರ ಪರಿಣಾಮ ಬೀರುತ್ತದೆ ಎನ್ನುವ ಪರಿಜ್ಞಾನ ಇರಬೇಕು. ಈ ಎಲ್ಲಾ ನ್ಯೂನತೆಗಳನ್ನು ಮೀರಿ ನಿಂತಾಗ ಹೆಣ್ಣಿಗೆ ಬೆಲೆ, ಹೆಣ್ತನಕ್ಕೆ ಗೌರವ ಮತ್ತು ಈ ಮಹಿಳಾ ದಿನಾಚರಣೆ ಆಚರಣೆಗೆ ನಿಜವಾದ ಅರ್ಥ ಬರುವುದು. ಅಲ್ಲವೇ….?
“ನವ್ಯ ಭಾಸ್ಕರ್ ಭಂಡಾರಿ.”