ಮಳೆಗಾಲದಲ್ಲಿ ತನ್ನಿಂದ ತಾನೇ ಬೆಳೆಯುವ ಕೆಲವು ಗಿಡಗಳಲ್ಲಿ ಕೆಸು ಒಂದು. ಇದರಲ್ಲಿ ಹಲವು ಪ್ರಭೇದಗಳಿವೆ.
ಮಳೆಗಾಲದಲ್ಲಿ ಹೇರಳವಾಗಿ ಸಿಗುವ ಕೆಸುವಿನೆಲೆ, ತೊಜಂಕ್(ಚಗಟೆ) ಹರಿವೆ ,ಹಲಸಿನ ಬೀಜ ,ಸೌತೆಕಾಯಿ ಮತ್ತಿತ್ತರ ಸೊಪ್ಪು ತರಕಾರಿಗಳಿಂದ ಮಾಡುವ ಖಾದ್ಯಗಳು ಖಾಯಂ. ಹಪ್ಪಳ, ಸಂಡಿಗೆ, ಉಪ್ಪಿನಕಾಯಿ ,ನೀರು ಉಪ್ಪಿನಕಾಯಿ, ಗೆಣಸಿನ ಹಪ್ಪಳ ,ಹಲಸಿನಕಾಯಿ ಹಪ್ಪಳ, ಗೆಣಸಿನ ಪೂಲ್, ಕೆಸುವಿನ ಎಲೆಯ ಸಿಹಿ ಖಾರ ಪತ್ರೋಡೆ, ತೇಟ್ಲ ,ಕೆಸುವಿನ ದಂಟಿನ ಸಾಂಬಾರು ,ಹಣ್ಣಿನ ರಸಾಯನ ಹೀಗೆ ಬಗೆಬಗೆಯ ತಿನಿಸುಗಳು ಮಳೆಗಾಲದಲ್ಲಿ ಎಲ್ಲೆಡೆ ಸಾಮಾನ್ಯ.
ಎಲ್ಲವೂ ಒಂದಲ್ಲ ಒಂದು ರೀತಿಯ ಮದ್ದಿನ ಗುಣವುಳ್ಳವು ಹಾಗೂ ಇದರಿಂದ ರುಚಿಕರವಾದ ಪಲ್ಯವನ್ನು ತಯಾರಿಸಬಹುದಾಗಿದ್ದು, ತುಳುನಾಡಿನಲ್ಲಿ ಆಟಿ ತಿಂಗಳಲ್ಲಿ ಕೆಸು, ಚಗಟೆ ಸೊಪ್ಪು, ನುಗ್ಗೆ ಸೊಪ್ಪು ತಿಂದರೆ ‘ಆರೋಗ್ಯವರ್ಧಕ’ ‘ಶಕ್ತಿವರ್ಧಕ’ ಎಂಬ ನಂಬಿಕೆ ಇದೆ. ಕೆಸುವನ್ನು ತುಳುವಿನಲ್ಲಿ ತೇವುದ ಇರೆ ಎನ್ನುತ್ತಾರೆ.
ಕೆಸುವಿನ ಗಿಡ ಹೂ ಬಿಟ್ಟ ಬಳಿಕ ಮುದುಡಿ ಸಾಯುತ್ತದೆ. ಆದರೆ ಗಡ್ಡೆ ಮಣ್ಣಿನಲ್ಲಿದ್ದು ಮಳೆಬಿದ್ದ ತತ್ ಕ್ಷಣ ಚಿಗುರಿ ಗಿಡವಾಗುತ್ತದೆ. ಕಪ್ಪು ಬಣ್ಣದ ಕೆಸುವನ್ನು ಕರಿಕೆಸು ಎನ್ನುತ್ತಾರೆ. ಆದರೆ ಇದರ ಎಲೆ ,ದಂಟು ,ಗಡ್ಡೆ ವಿಪುಲ ಔಷಧೀಯ ಗುಣವುಳ್ಳದ್ದು . ಕೆಸುವಿನ ಎಲೆಯ ಪತ್ರೊಡೆ ಮತ್ತು ಸುರುಳಿ ಸುತ್ತಿದ ಪತ್ರೊಡೆ ತುಳುನಾಡಿನ ರುಚಿಕರವಾದ ಖಾದ್ಯ. ಕೆಸುವಿನ ತೇಟ್ಲೆ ಮಾಡಿ ಹಲಸಿನ ಬೀಜದೊಂದಿಗೆ ಮಾಡುವ ಪದಾರ್ಥವಂತೂ ಬಾಯಲ್ಲಿ ನೀರೂರಿಸುವಂತದ್ದು. ಕೆಸುವಿನ ಎಲೆಯನ್ನು ಸುರುಳಿ ಮಾಡಿ ಗಂಟು ಹಾಕಿ ಅದರ ಒಟ್ಟಿಗೆ ಬಿದಿರಿನ ಕಣಲೆಯ ತುಂಡು, ಅರೆಬೆಳೆದ ಅಂಬಟೆಕಾಯಿ, ಹಲಸಿನ ಬೀಜದ ತುಂಡುಗಳನ್ನು ಹಾಕಿ ‘ಗಾಂಟಿ ಸುಕ್ಕಿ’ ಎಂಬ ದಪ್ಪ ಮಸಾಲೆಯ ಪದಾರ್ಥ ಕೊಂಕಣಿಯರಿಗೆ ಅಚ್ಚುಮೆಚ್ಚು.ಇವಿಷ್ಟೇ ಅಲ್ಲದೇ ಎಲೆ ಮತ್ತು ಕೆಸುವಿನ ದಂಟಿನಿಂದ ‘ಆಳ್ವತಿ’ ಎನ್ನುವ ಇನ್ನೊಂದು ರುಚಿಕರವಾದ ಪದಾರ್ಥ ಮಾಡುತ್ತಾರೆ.
ಕೆ.ಆರ್ ಕೇಶವಮೂರ್ತಿ ಅವರು ಬರೆದ ಕರ್ನಾಟಕದ ಮುದ್ದಿನ ಸಸ್ಯಗಳು ಎಂಬ ಆಂಗ್ಲ ಆವೃತ್ತಿಯ ಪುಸ್ತಕದಲ್ಲಿ ಕೆಸುವಿನ ಎಲೆಯಲ್ಲಿ ಉಸಿರಾಟದ ತೊಂದರೆ ಮತ್ತು ಮೂಲವ್ಯಾಧಿ ಗಾಯಗಳನ್ನು ಶಮನ ಮಾಡುವ ಗುಣವಿದೆ ಎಂದಿದ್ದಾರೆ. ಆದುದರಿಂದಲೇ ಋತುಮಾನಕ್ಕೆ ಹೊಂದಿಕೊಂಡು ಪ್ರಕೃತಿದತ್ತ ಸಸ್ಯಗಳನ್ನು ಆಹಾರವಾಗಿ ಉಪಯೋಗಿಸುವ ಸಂಸ್ಕೃತಿ ನಮ್ಮ ತುಳುನಾಡಿನಲ್ಲಿದೆ.
ಸಂಸ್ಕೃತ ದಲ್ಲಿ ‘ಅಲೂಕಿ’ ಆಂಗ್ಲ ಭಾಷೆಯಲ್ಲಿ Eddo, Taru ತುಳುವಿನಲ್ಲಿ ತೇವು ಕೊಂಕಣಿಯಲ್ಲಿ ತೇರ್ ಪಾಸ್ ಕರೆಯಲ್ಪಡುವ ಈ ಕೆಸು Araceae ಕುಟುಂಬಕ್ಕೆ ಸೇರಿದೆ. ಸಸ್ಯಶಾಸ್ತ್ರದಲ್ಲಿ ಇದನ್ನು Colocasia esculenta ಎನ್ನುತ್ತಾರೆ.
-ಸುಪ್ರೀತ ಭಂಡಾರಿ ಸೂರಿಂಜೆ