September 20, 2024

ಭಾರತದ ಹೆಮ್ಮೆಯ ತತ್ವಜ್ಞಾನಿ ಮತ್ತು ಶಿಕ್ಷಕರಾದ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ರವರ ಜನುಮದಿನವಿಂದು. ಈ ದಿನವನ್ನು ಪ್ರತಿ ವರ್ಷ ಶಿಕ್ಷಕರ ದಿನವನ್ನಾಗಿ ಆಚರಿಸಲಾಗುತ್ತಿದೆ.
ಸುಂದರ ಅರೋಗ್ಯಕರ ಸಮಾಜದ ನಿರ್ಮಾತೃಗಳೇ ಪ್ರಜೆಗಳು ಎಂಬುದನ್ನು ನಾವು ಕೇಳಿದ್ದೇವೆ, ಮುಂದಿನ ಪ್ರಜೆಗಳಾಗುವ ಇಂದಿನ ಮಕ್ಕಳಿಗೆ ಅಕ್ಷರ ಜ್ಞಾನದೊಂದಿಗೆ ಶಿಸ್ತು, ಸಂಯಮ ಜೊತೆಗೆ ಬದುಕಿನ ಯಶಸ್ಸಿಗೆ ಸರಿಯಾದ ಮಾರ್ಗದರ್ಶನ ನೀಡುವ ದೇವರೂಪಿ ಮಾನವರೇ ನಮ್ಮ ಶಿಕ್ಷಕರು. ಇಂದು ಅವರ ದಿನ.ಬರೀ ವಿದ್ಯಾರ್ಥಿಗಳ ಏಳಿಗೆ ಮಾತ್ರವಲ್ಲ ಒಂದು ಶಾಲೆಯ/ಸಂಸ್ಥೆಯ ಏಳಿಗೆಯಲ್ಲೂ ಶಿಕ್ಷಕರ ಪಾತ್ರವಿರುತ್ತದೆ. ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಶಿಕ್ಷಕರಿಗಿಂದು ಸನ್ಮಾನ,ಗುರುವಂದನೆ, ಪ್ರಶಸ್ತಿಗಳನ್ನು ಕೊಟ್ಟು ಗೌರವಿಸಲಾಗುವುದು ಜೊತೆಗೆ ಮಕ್ಕಳೂ ಸಹ ತಮ್ಮ ಪ್ರೀತಿಯ ಶಿಕ್ಷಕರಿಗೆ ಉಡುಗೊರೆಗಳನ್ನು ಕೊಟ್ಟು ಸಂತೋಷಿಸುತ್ತಾರೆ.
ಕಾಲ ಬದಲಾದಂತೆ ಈಗ ಶಿಕ್ಷಣ ವ್ಯವಸ್ಥೆಯೂ ಬದಲಾಗಿದೆ. ಹಿಂದಿನ ಕಾಲದಲ್ಲಿ ವಿದ್ಯಾರ್ಥಿಗಳು ತಪ್ಪು ಮಾಡಿದಲ್ಲಿ ಅವರನ್ನು ಶಿಕ್ಷಿಸುವ ಹಕ್ಕು ಶಿಕ್ಷಕರಿಗಿತ್ತು. ಆದರೆ ಈಗ ಆ ಹಕ್ಕನ್ನು ಕೈ ಬಿಡಲಾಗಿದೆ. ಮಕ್ಕಳಿಗೆ ಗುರುಗಳ ಮೇಲೆ ಇರುವ ಭಯ ಭಕ್ತಿ ಕಡಿಮೆಯಾಗಿದೆ.
ಇಂದಿನ ಸ್ಪರ್ಧಾತ್ಮಕ ಕಾಲದಲ್ಲಿ ಶಿಕ್ಷಣಸಂಸ್ಥೆಗಳು ವ್ಯಾವಹಾರಿಕ ತಾಣವಾಗಿ ಬದಲಾಗಿದೆ.ಹೆತ್ತವರಿಗೆ ಮಕ್ಕಳು ಪರೀಕ್ಷೆಯಲ್ಲಿ ಗಳಿಸುವ ಅಂಕಗಳ ಚಿಂತೆ. ಅಂಕೆಗಳೇನೋ ಬರುವುದು ಆದರೆ ಕಲಿತ ವಿಷಯಗಳು ಎಷ್ಟರ ಮಟ್ಟಿಗೆ ಮಕ್ಕಳು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುತ್ತಾರೆ ಎಂಬುದೇ ಇಲ್ಲಿ ಮುಖ್ಯವಾಗಿದೆ.ಪರೀಕ್ಷೆ ಮುಗಿದ ಕೆಲವೇ ದಿನಗಳಲ್ಲಿ ಮಸ್ತಕದಲ್ಲಿನ ವಿಷಯಗಳು ಖಾಲಿಯಾಗಿ ಬರೀ ಪುಸ್ತಕಗಳಲ್ಲಿ ಉಳಿಯುವುದು.ಆದ್ದರಿಂದ ಮಕ್ಕಳನ್ನು ನಾಲ್ಕು ಗೋಡೆಗಳ ನಡುವೆ ಬರೀ ಅಂಕಿಗಾಗಿ ಕುಳ್ಳಿರಿಸಿ ಪುಸ್ತಕದ ಹುಳುವನ್ನಾಗಿಸದೆ ಅವರಿಗೆ ವಾಸ್ತವ ಬದುಕಿಗೆ ಬೇಕಾಗಿರುವ ಆತ್ಮಸ್ಥೈರ್ಯ,ಒಡನಾಟ,ಜೀವನ ಮೌಲ್ಯಗಳ ಕುರಿತೂ ಹೇಳಿಕೊಡಬೇಕಿದೆ.ಹೀಗಾದರೆ ಮಾತ್ರ ಒಂದು ಆರೋಗ್ಯಕರ ಸದೃಢ ಸಮಾಜದ ಸೃಷ್ಟಿಯಾಗಲು ಸಾಧ್ಯ.

✍️ಪೂರ್ಣಿಮಾ ಅನಿಲ್ ಭಂಡಾರಿ, ಮಣಿಪಾಲ

Leave a Reply

Your email address will not be published. Required fields are marked *