January 18, 2025
AR-Bhandary-360x300
 ಗುರು ಎನ್ನುವುದರ ಹಿಂದೆ

|| ಗುರುಭ್ಯೋ ನಮಃ||

“ದಂಡಿಸುವ ಗುರುಜನರ ಕಂಡು ಕೋಪಿಸಬೇಡ ತಿಳಿ ನಿನ್ನ ಒಳಿತಿಗಿದು — ಕೇಳು ಜಾಣ”!

ಪ್ರತಿಯೊಬ್ಬರ ಜೀವನದಲ್ಲಿ ತಂದೆ ತಾಯಿಯರ ನಂತರದ ಸ್ಥಾನ ದೊರಕುವುದು ಗುರುವಿಗೆ. ಶಾಲೆಯೆಂಬ ದೇವಾಲಯದಲ್ಲಿ ಕಣ್ಣಿಗೆ ಕಾಣುವ ದೇವರೆಂದರೆ ಗುರುಗಳು. ವ್ಯಕ್ತಿಯೊಬ್ಬನ ಜೀವನವನ್ನು ರೂಪಿಸುವಲ್ಲಿ ಶಿಕ್ಷಕನಾದವನ ಪಾತ್ರ ಬಹಳ ಮುಖ್ಯ.ಗುರು ಎಂದರೆ ವ್ಯಕ್ತಿಯಲ್ಲ ಒಂದು ಶಕ್ತಿ. ಅಜ್ಞಾನದ ಕತ್ತಲೆಯ ಕಳೆದು ಸುಜ್ಞಾನದೆಡೆಗೆ ಕರೆದುಕೊಂಡು ಹೋಗುವ ಶಬ್ಧವೇ ಗುರು.

ಪ್ರಪಂಚದಲ್ಲಿರುವ ವೃತ್ತಿಗಳಲ್ಲಿ ಅತೀ ಶ್ರೇಷ್ಠವಾದ ವೃತ್ತಿಯೆಂದರೆ ಅದು ಶಿಕ್ಷಕ ವೃತ್ತಿ. ವಿದ್ಯಾರ್ಥಿಗಳ ಜೀವನಕ್ಕೆ ಮುನ್ನುಡಿ ಬರೆದು ತನ್ನ ನಿಸ್ವಾರ್ಥ ಸೇವೆಯಿಂದ ತನ್ನಲ್ಲಿರುವ ಜ್ಞಾನವನ್ನು ವಿದ್ಯಾರ್ಥಿಗಳಿಗೆ ಧಾರೆಯೆರೆದು ಅವರನ್ನು ಒಬ್ಬ ಪರಿಪೂರ್ಣ ಮಾನವನಾಗಿ ರೂಪಿಸುವಲ್ಲಿ ತನ್ನ ಯಶಸ್ಸನ್ನು ಕಾಣುತ್ತಾರೆ.

ಉತ್ತಮ ರಾಷ್ಟವನ್ನು ಮತ್ತು ಉತ್ತಮ ಪ್ರಜೆಗಳನ್ನು ನಿರ್ಮಿಸುವವರು ಶಿಕ್ಷಕರು. ನಿಷ್ಕಲ್ಮಶ ಮನದಲ್ಲಿ ಅಕ್ಷರ ಬೀಜವ ಬಿತ್ತಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಜ್ಞಾನವನ್ನು ಮಾತ್ರ ಅಲ್ಲದೇ ಜೀವನದ ಮೌಲ್ಯವನ್ನು, ಬದುಕುವ ಕಲೆಯನ್ನು ತಿಳಿಸಿ ಕೊಡುತ್ತಾರೆ. ಶಿಕ್ಷಕ ಕೇವಲ ಶಿಕ್ಷಕನಾಗಿ ಮಾತ್ರವಲ್ಲದೆ ಗೆಳೆಯನಾಗಿ, ಪೋಷಕನಾಗಿ ಪ್ರೀತಿ ಕಾಳಜಿಯಿಂದ ಮಕ್ಕಳ ಮನದಲ್ಲಿ ಅಚ್ಚಳಿಯದಂತೆ ಉಳಿದಿರುತ್ತಾರೆ.

ಮಣ್ಣಿನ ಮುದ್ದೆಯಂತಿರುವ ಮಗುವನ್ನು ತಿದ್ದಿ ತೀಡಿ ಸುಂದರ ಮೂರ್ತಿಯನ್ನಾಗಿಸುವ ಶಿಲ್ಪಿ ಶಿಕ್ಷಕ. ಸಮಾಜದಲ್ಲಿ ಗೌರವಾನ್ವಿತ ವ್ಯಕ್ತಿಯಾಗಿ, ಮಕ್ಕಳನ್ನು ಪ್ರೀತಿಯಿಂದ ಗೆದ್ದು ತಾನು ಕಲಿಸಿದ ವಿದ್ಯಾರ್ಥಿಗಳು ಸಾಧನೆಯ ಶಿಖರವನ್ನೇರಿದಾಗ ತನ್ನ ವೃತ್ತಿ ಬದುಕಿನ ಸಾರ್ಥಕತೆಯನ್ನು ಕಾಣುತ್ತಾನೆ.

ಎದೆಯ ಹಣತೆಯಲ್ಲಿ ಅಕ್ಷರದ ದೀಪ ಹೊತ್ತಿಸಿ ಅಗಣಿತ ಮಂದಿಯ ಬಾಳಿಗೆ ಭವ್ಯ ಬೆಳಕು ನೀಡಿದ ಪರಮ ಗುರುಗಳಿಗೆ , ಗುರುಸಮಾನರಿಗೆ ಶಿಕ್ಷಕರ ದಿನಾಚರಣೆಯ ಶುಭಾಶಯಗಳು.

✍️ ವೈಶಾಲಿ ಭಂಡಾರಿ 

Leave a Reply

Your email address will not be published. Required fields are marked *