ಪ್ರಸ್ತುತ ಶಿಕ್ಷಕ ದಿನಾಚರಣೆ
ಇಂದು ಶಿಕ್ಷಕರ ದಿನಾಚರಣೆ.. ನಮ್ಮ ಜೀವನದ ಮೇಲೆ ಅಗಾಧವಾದ ಪ್ರಭಾವವನ್ನು ಹೊಂದಿರುವ ಶಿಕ್ಷಕರನ್ನು ನಾವು ನೆನಪಿಸುವ ಹಾಗೂ ಪ್ರಶಂಸಿಸುವ ದಿನ ಎಂದರೆ ತಪ್ಪಾಗಲಾರದು.
ತಂದೆ ತಾಯಿ ಅಥವಾ ಪೋಷಕರ ನಂತರ ಮಗುವಿನ ಜೀವನದಲ್ಲಿ ಶಿಕ್ಷಕರನ್ನು ಎರಡನೇ ಪ್ರಮುಖ ವ್ಯಕ್ತಿ ಎಂದು ಪರಿಗಣಿಸಲಾಗುತ್ತದೆ. ಶಿಕ್ಷಕರಿಗೆ ಮತ್ತು ತಾಯಿಗೆ ಸಮಾನವಾದ ಸ್ಥಾನವನ್ನು ನೀಡಲಾಗುತ್ತದೆ, ಏಕೆಂದರೆ ಅವರು ತಮ್ಮ ಇಡೀ ಜೀವನವನ್ನು ವಿದ್ಯಾರ್ಥಿಗಳಿಗೆ ಶಿಕ್ಷಣವನ್ನು ಜ್ಞಾನದ ಅರಿವನ್ನು ನೀಡಲು ಶ್ರಮಿಸುತ್ತಾರೆ.
ಪ್ರತಿ ವರ್ಷ ಸೆಪ್ಟೆಂಬರ್ 5 ರಂದು ಭಾರತದಾದ್ಯಂತ ವಿವಿಧ ಶಾಲೆಗಳಲ್ಲಿ ಶಿಕ್ಷಕರ ದಿನವನ್ನು ಅಪಾರ ಉತ್ಸಾಹದಿಂದ ಆಚರಿಸಲಾಗುತ್ತದೆ . ಇದು ಶಿಕ್ಷಕರಿಗೆ ಗೌರವವನ್ನು ಸಲ್ಲಿಸುವ ದಿನವಾಗಿದೆ ಮತ್ತು ವಿದ್ಯಾರ್ಥಿಗಳನ್ನು ಪೋಷಿಸಲು ವರ್ಷವಿಡೀ ಅವರು ಪ್ರತಿದಿನ ಮಾಡುವ ಅವರ ಪ್ರಯತ್ನಗಳು ಮತ್ತು ಕಠಿಣ ಪರಿಶ್ರಮಕ್ಕೆ ಧನ್ಯವಾದಗಳನ್ನು ಅರ್ಪಿಸುವ ದಿನವಾಗಿದೆ.
ಹಿಂದೆ ಮಕ್ಕಳು ತಮ್ಮ ಶಿಕ್ಷಕರಿಗೆ ನೀಡುವ ಗೌರವದ ಹಾಗೆ ಪ್ರಸ್ತುತ ಸಂದರ್ಭದಲ್ಲಿ ಮಕ್ಕಳು ಶಿಕ್ಷಕರಿಗೆ ಗೌರವ ನೀಡುವುದಿಲ್ಲ ಎಂದು ಸಾಧಾರಣವಾಗಿ ಎಲ್ಲರೂ ಹೇಳುತ್ತಾರೆ….ಅದೇ ಸಮಯದಲ್ಲಿ ಮೊದಲಿನ ಶಿಕ್ಷಕರ ಹಾಗೆ ಈಗೀನ ಶಿಕ್ಷಕರಿಗೆ ತಮ್ಮ ಬೋಧನೆಯಲ್ಲಿ ಬದ್ಧತೆ ಇಲ್ಲ ಎಂದು ಪೋಷಕರು ಆಡಿಕೊಳ್ಳುವುದು ಕೇಳುತ್ತೇವೆ.
ಮೊದಲಿನ ಮಕ್ಕಳಿಗೆ ಯಾವುದೇ ರೀತಿಯ ಮಾಹಿತಿ ಮತ್ತು ತಂತ್ರಜ್ಞಾನದ ಅರಿವು ಇರಲಿಲ್ಲ. ಹೊರ ಪ್ರಪಂಚದ ಜ್ಞಾನ ಮನರಂಜನೆ ಇರದ ಸಮಯದಲ್ಲಿ ಶಿಕ್ಷಕರು ನೀಡುವ ಮಾಹಿತಿ ಭೋಧನೆಯೇ ಪರಮ ಸತ್ಯವಾಗಿತ್ತು.
ಈಗೀನ ಮಕ್ಕಳಿಗೆ ಹಾಗಲ್ಲ ಹೆಚ್ಚಿನ ಎಲ್ಲಾ ಮಾಹಿತಿ ತಂತ್ರಜ್ಞಾನ ತಿಳಿದೇ ಇರುವುದರಿಂದ ಶಿಕ್ಷಕರು ಮಕ್ಕಳಿಗಿಂತ ಹೆಚ್ಚು ಹೆಚ್ಚು ಕಲಿಯುವುದು ಅನಿವಾರ್ಯವಾಗಿದೆ.
ಪ್ರಸ್ತುತ ಶಿಕ್ಷಕರು ಮಕ್ಕಳಿಗಿಂತ ಹೆಚ್ಚು ಓದುವಿಕೆ ಹಾಗೂ ಇತಿಹಾಸದ ಅರಿವು ಇರುವುದು ಅಗತ್ಯವಾಗಿದೆ.
ಶಿಕ್ಷಕರಿಗೆ ಮನಮುಟ್ಟುವ ವ್ಯಕ್ತಿತ್ವವಿರಬೇಕು. ಇದು ಶಿಕ್ಷಕ ಹೊಂದಿರಬೇಕಾದ ಮೊದಲ ಲಕ್ಷಣವಾಗಿದೆ. ಇದು ವಿದ್ಯಾರ್ಥಿಗಳೊಂದಿಗೆ ಉತ್ತಮ ಬಾಂಧವ್ಯ ಹೊಂದಲು ಸಹಕಾರಿಯಾಗಿದೆ. ವಿದ್ಯಾರ್ಥಿಗಳು ಧನಾತ್ಮಕ ಮತ್ತು ಸಂತೋಷಕರ ವ್ಯಕ್ತಿತ್ವವನ್ನು ಹೊಂದಿರುವ ವ್ಯಕ್ತಿಯನ್ನು ನೋಡಲು ಒಲವು ತೋರುತ್ತಾರೆ.
ಶಿಕ್ಷಕರು ಕಾಲ ಕಾಲಕ್ಕೆ ತಮ್ಮ ಏಳಿಗೆಗೆ( upgrade) ಮುತುವರ್ಜಿ ವಹಿಸಿ ಅಭಿವೃದ್ಧಿ ಆಗಬೇಕು. ಶಿಕ್ಷಕರಿಗೆ ಓದುವ ಆಸಕ್ತಿ ಇದ್ದಾಗ ಮಾತ್ರ ವಿದ್ಯಾರ್ಥಿಗಳಲ್ಲಿ ಓದಿನ ಆಸಕ್ತಿ ಬೆಳೆಸಲು ಸಾಧ್ಯವಾಗುತ್ತದೆ.
ಶಿಕ್ಷಕ ಹೊಂದಿರಬೇಕಾದ ಮತ್ತೊಂದು ಗುಣವೆಂದರೆ. ಶಿಕ್ಷಕರಿಗೆ ವಿದ್ಯಾರ್ಥಿಗಳನ್ನು ಹೇಗೆ ಚೆನ್ನಾಗಿ ನಿಭಾಯಿಸಬೇಕೆಂದು ತಿಳಿದಿರಬೇಕು. ಅವರು ಕಟ್ಟುನಿಟ್ಟಾಗಿರಬೇಕು ಆದರೆ ಮಾನವೀಯತೆ ಹೊಂದಿರಬೇಕು. ಶಿಕ್ಷಕರು ತಾಳ್ಮೆಯಿಂದಿರಬೇಕು ಮತ್ತು ವಿದ್ಯಾರ್ಥಿಗಳು ಹೇಳುವುದನ್ನು ಕೇಳುವ ಕೌಶಲ್ಯವನ್ನು ಹೊಂದಿರಬೇಕು.
ಶಿಕ್ಷಕರು ಹೊಂದಿರಬೇಕಾದ ಪ್ರಮುಖ ಗುಣವೆಂದರೆ ಅವರು ತನ್ನ ಭೋಧನೆಯ ವಿಷಯದ ಬಗ್ಗೆ ಸಂಪೂರ್ಣ ಜ್ಞಾನವನ್ನು ಹೊಂದಿರಬೇಕು.
ಪ್ರಸ್ತುತ ಶಿಕ್ಷಕರು ಜಾತಿ ಧರ್ಮ ಶ್ರೀಮಂತ ಬಡವ ಎಂಬ ಭೇದವಿಲ್ಲದೆ ಎಲ್ಲರಿಗೂ ಸಮಾನ ಗೌರವ ನೀಡುವುದು ಶಿಕ್ಷಕರ ಮೇಲಿನ ಪ್ರೀತಿ ಮಕ್ಕಳಲ್ಲಿ ಹೆಚ್ಚು ಮಾಡುವಲ್ಲಿ ಸಹಕಾರಿಯಾಗುವುದು.
ಹಲವಾರು ಕಾರ್ಯಗಳನ್ನು ಏಕಕಾಲದಲ್ಲಿ ನಿರ್ವಹಿಸುವ ಅಗತ್ಯವಿರುವುದರಿಂದ ಶಿಕ್ಷಕರು ಉತ್ತಮ ನಿರ್ವಹಣಾ ಕೌಶಲ್ಯಗಳನ್ನು ಹೊಂದಿರಬೇಕು.
ಡಾ.ರಾಧಾಕೃಷ್ಣರವರು ಎಲ್ಲರೂ ಪ್ರೀತಿಸುವ ಮಹಾನ್ ಶಿಕ್ಷಕರಾಗಿದ್ದರು. ಅವರು 5 ಸೆಪ್ಟೆಂಬರ್ 1888 ರಂದು ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದರು. ಕಲಿಸಿದರು. ಶಿಕ್ಷಣವು ಕೇವಲ ಪುಸ್ತಕಗಳಿಂದ ಬರುವುದಿಲ್ಲ ಎಂದು ಅವರು ನಂಬಿದ್ದರು.
ಡಾ ಸರ್ವಪಲ್ಲಿ ರಾಧಾಕೃಷ್ಣನ್ ಒಬ್ಬ ಶ್ರೇಷ್ಠ ಶಿಕ್ಷಕ, ತತ್ವಜ್ಞಾನಿ ಮತ್ತು ಭಾರತ ರತ್ನ ಪುರಸ್ಕೃತರು. ಅವರು ಸ್ವತಂತ್ರ ಭಾರತದ ಮೊದಲ ಉಪರಾಷ್ಟ್ರಪತಿ ಮತ್ತು ಎರಡನೇ ರಾಷ್ಟ್ರಪತಿಯಾಗಿದ್ದರು. 1962-67ರ ಅವಧಿಯಲ್ಲಿ, ಅವರು ಭಾರತದ ರಾಷ್ಟ್ರಪತಿಯಾಗಿ ದೇಶಕ್ಕೆ ಸೇವೆ ಸಲ್ಲಿಸುತ್ತಿದ್ದಾಗ, ಅವರ ವಿದ್ಯಾರ್ಥಿಗಳು ಮತ್ತು ಸ್ನೇಹಿತರು ಅವರ ಜನ್ಮದಿನವನ್ನು ಆಚರಿಸಲು ವಿನಂತಿಸಿದರು. ಅದಕ್ಕೆ ಉತ್ತರಿಸಿದ ಅವರು, “ ನನ್ನ ಜನ್ಮದಿನವನ್ನು ಆಚರಿಸುವ ಬದಲು, ಸೆಪ್ಟೆಂಬರ್ 5 ಅನ್ನು ಶಿಕ್ಷಕರ ದಿನವನ್ನಾಗಿ ಆಚರಿಸಿದರೆ ಅದು ನನ್ನ ಹೆಮ್ಮೆಯ ಸೌಭಾಗ್ಯ. ” ಅಂದಿನಿಂದ ಅವರ ಜನ್ಮದಿನವನ್ನು ಶಿಕ್ಷಕರ ದಿನವನ್ನಾಗಿ ಆಚರಿಸಲಾಗುತ್ತಿದೆ.
ವಿದ್ಯಾರ್ಥಿಗಳನ್ನು ಚೆನ್ನಾಗಿ ಬೆಳೆಸಲು ಶಿಕ್ಷಕರು ವರ್ಷವಿಡೀ ಶ್ರಮಿಸುತ್ತಾರೆ. ಶಿಕ್ಷಕರ ಜೀವನದಲ್ಲಿ ವಿದ್ಯಾರ್ಥಿಗಳು ಯಾವಾಗಲೂ ಮೊದಲ ಸ್ಥಾನದಲ್ಲಿರುತ್ತಾರೆ. ಶಿಕ್ಷಕರು ನಿರಂತರವಾಗಿ ವಿದ್ಯಾರ್ಥಿಗಳಿಗೆ ಉತ್ತಮ ಅಭ್ಯಾಸಗಳನ್ನು ಕಲಿಸುತ್ತಾರೆ.
ಶಿಕ್ಷಕರ ದಿನವು ವಿದ್ಯಾರ್ಥಿಗಳು ಮತ್ತು ಶಿಕ್ಷಕರ ನಡುವಿನ ಬಾಂಧವ್ಯವನ್ನು ಬಲಪಡಿಸುವ ದಿನವಾಗಿದೆ. ವಿದ್ಯಾರ್ಥಿಗಳು ತಮ್ಮ ಶಿಕ್ಷಕರನ್ನು ಮೆಚ್ಚುವ ದಿನವಾಗಿದೆ ಮತ್ತು ಇದು ವಿದ್ಯಾರ್ಥಿಗಳ ಬಾಂಧವ್ಯವನ್ನು ಬೆಳೆಯಲು ಸಹಾಯ ಮಾಡುತ್ತದೆ.
ಶಿಕ್ಷಕರ ಮಾರ್ಗದರ್ಶನವಿಲ್ಲದೆ ನಾವು ನಮ್ಮ ಭವಿಷ್ಯವನ್ನು ಊಹಿಸಲು ಸಾಧ್ಯವಿಲ್ಲ. ನಮ್ಮ ಭವಿಷ್ಯವನ್ನು ಉಜ್ವಲಗೊಳಿಸಲು ಅವರು ತಮ್ಮನ್ನು ತಾವೇ ಸವೆಸುತ್ತಾರೆ. ಈ ದಿನದಂದು ಜಗತ್ತಿನ ಎಲ್ಲ ಶ್ರೇಷ್ಠ ಗುರುಗಳನ್ನು ಸ್ಮರಿಸೋಣ . ಪ್ರತಿಯೊಬ್ಬ ವ್ಯಕ್ತಿಗೂ ತಾನು ಇಷ್ಟ ಪಡುವ, ಪ್ರೀತಿಸುವ ಶಿಕ್ಷಕ ಇದ್ದೆ ಇರುತ್ತಾರೆ. ವಿದ್ಯಾರ್ಥಿಯೊಂದಿಗೆ ತಾಳ್ಮೆಯಿಂದಿರುವ ಮತ್ತು ಪ್ರತಿ ವಿದ್ಯಾರ್ಥಿಯ ದೌರ್ಬಲ್ಯವನ್ನು ನಿಭಾಯಿಸಲು ಶಕ್ತರಾಗಿರುವ ಶಿಕ್ಷಕರಿಗೆ ನಾವು ನಮಿಸೋಣ..
ಸಮಾಜದಲ್ಲಿ ಉತ್ತಮ ವ್ಯಕ್ತಿತ್ವದ ವ್ಯಕ್ತಿಗಳನ್ನು ರೂಪಿಸುವ ಶಿಕ್ಷಕರ ಪಾತ್ರ ಬಹಳ ಹಿರಿದು ಹಾಗೂ ಮಹತ್ವದ ಕಾರ್ಯ.. ಅವರಿಗೆ ಶಿಕ್ಷಕರ ದಿನದಂದು ನಾವು ಎಲ್ಲರೂ ಧನ್ಯವಾದಗಳನ್ನು ಹೇಳಲೇಬೇಕು.
✍️ ವನಿತಾ ಅರುಣ್ ಭಂಡಾರಿ ಬಜ್ಪೆ.