January 18, 2025
teacher-day-education-after-12th-career
ಕ್ಷಿಣ ಭಾರತದ ತಮಿಳುನಾಡಿನ ತಿರುತ್ತಣಿ ಎಂಬ ಗ್ರಾಮದಲ್ಲಿ ಜಮೀನುದಾರರ ಮನೆಯಲ್ಲಿ ದಿನಗೂಲಿ ನೌಕರರಾಗಿ ಕಾರ್ಯನಿರ್ವಹಿಸುತ್ತಿದ್ದ ಬಡ ಬ್ರಾಹ್ಮಣ ಕುಟುಂಬದಲ್ಲಿ ಸೆಪ್ಟೆಂಬರ್ 5, 1888 ರಲ್ಲಿ ಜನಿಸಿದ ಸರ್ವಪಲ್ಲಿ ರಾಧಾಕೃಷ್ಣ ರವರ ಜನುಮದಿನವನ್ನು “ಶಿಕ್ಷಕರ ದಿನ” ವನ್ನಾಗಿ ಆಚರಿಸಲಾಗುತ್ತಿದೆ.

ಮಗನನ್ನು ಪುರೋಹಿತರನ್ನಾಗಿ ಮಾಡಬೇಕೆನ್ನುವ ತಂದೆ ತಾಯಿಯರ ಆಸೆಯನ್ನು ಮೀರಿ ಬುದ್ದಿವಂತರಾಗಿದ್ದ ರಾಧಾಕೃಷ್ಣರು ಮುಂದೆ ದೇಶದ ಅತ್ಯುತ್ತಮ ಶಿಕ್ಷಕರಾಗಿ, ಅಪ್ರತಿಮ ಆಡಳಿತಗಾರ, ಅಸಾಮಾನ್ಯ ಚಿಂತಕರಾಗಿದ್ದು ಅವರ ಕಠಿಣ ಪರಿಶ್ರಮಕ್ಕೆ ಹಿಡಿದ ಕೈಗನ್ನಡಿ.1909 ರಲ್ಲಿ ಮದ್ರಾಸ್ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಸಹಾಯಕ ಉಪನ್ಯಾಸಕರಾಗಿ ತಮ್ಮ ವೃತ್ತಿಜೀವನ ಪ್ರಾರಂಭಿಸಿದ ರಾಧಾಕೃಷ್ಣರು ಮುಂದೆ ತಮ್ಮ ಕಠಿನ ಪರಿಶ್ರಮದಿಂದ ಭಾರತದ ಸನಾತನ ಧರ್ಮ ಹಿಂದೂ ಧರ್ಮದ ಸಾರ, ವೇದ, ಉಪನಿಷತ್ತು, ಜೈನ ತತ್ವಜ್ಞಾನ, ಶಂಕರ, ರಾಮಾನುಜ, ಮದ್ವ, ಫ್ಲೇಟೋ, ಪ್ಲಾಟಿನಸ್, ಕಾಂತ್, ಬ್ರ್ಯಾಡ್ಲೆ ಮುಂತಾದ ಮಹನೀಯರ ತತ್ವಜ್ಞಾನವನ್ನು ಆಳವಾಗಿ ಅಧ್ಯಯನಮಾಡಿ ಹಂತಹಂತವಾಗಿ ಮೇಲೇರುತ್ತಾ ಮುನ್ನಡೆದರು.1918 ರಲ್ಲಿ ಮೈಸೂರು ವಿಶ್ವವಿದ್ಯಾಲಯದ ಮಹಾರಾಜ ಕಾಲೇಜಿನಲ್ಲಿ ತತ್ವಜ್ಞಾನ ವಿಭಾಗದ ಉಪನ್ಯಾಸಕರಾಗಿ ದೇಶ ವಿದೇಶಗಳ ಪತ್ರಿಕೆಗಳಿಗೆ ತಮ್ಮ ಹರಿತವಾದ ಮತ್ತು ಆಳವಾದ ಜ್ಞಾನವಿರುವ ಲೇಖನವನ್ನು ಬರೆದರು. ಇದರಿಂದ ಮುಂದೆ ಇವರ ಜ್ಞಾನಕ್ಕೆ ಮಾರುಹೋದ ಆಕ್ಸ್ ಫರ್ಡ್ ವಿಶ್ವವಿದ್ಯಾಲಯ ಅವರನ್ನು ಉಪನ್ಯಾಸ ನೀಡುವಂತೆ ಆಹ್ವಾನಿಸಿತು. ಸಪ್ತಸಾಗರಗಳಾಚೆ ಭಾರತದ ಕೀರ್ತಿಪತಾಕೆಯನ್ನು ಎತ್ತಿ ಹಿಡಿದರು. ಭಾರತೀಯ ಸನಾತನ ಧರ್ಮ, ತತ್ವಜ್ಞಾನ ಕುರಿತು ವಿದೇಶಿಯರಿಗೆ ಮನಮುಟ್ಟುವಂತೆ ಮನವರಿಕೆ ಮಾಡಿಕೊಟ್ಟು ಬಂದರು.   

ಭಾರತೀಯರ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಇವರು 1931 ರಲ್ಲಿ ಆಂದ್ರ ವಿಶ್ವವಿದ್ಯಾಲಯದ ಉಪಕುಲಪತಿಗಳಾಗಿ ಮತ್ತು 1939 ರಲ್ಲಿ ಬನಾರಸ್ ವಿಶ್ವವಿದ್ಯಾಲಯದ ಉಪಕುಲಪತಿಗಳಾಗಿ ಆಯ್ಕೆಯಾಗಿ ಅನೇಕ ಶೈಕ್ಷಣಿಕ ಸುಧಾರಣೆಗಳನ್ನು ತಂದರು. 1948 ರಲ್ಲಿ ವಿಶ್ವವಿದ್ಯಾಲಯ ಶಿಕ್ಷಣ ಆಯೋಗದ ಮುಖ್ಯಸ್ಥರಾದ ಇವರು 1949 ರಲ್ಲಿ ಸೋವಿಯತ್ ರಷ್ಯಾಕ್ಕೆ ಭಾರತದ ರಾಯಭಾರಿಯಾಗಿ ನೇಮಕ ಗೊಂಡು “ಸ್ಟಾಲಿನ್” ನಂತಹ ಮಹಾ ಮೇದಾವಿಗಳ ಜೊತೆ ನಿಂತು ಕಾರ್ಯನಿರ್ವಹಿಸುವ ಮಟ್ಟಕ್ಕೆ ಬೆಳೆದು ನಿಂತರು.

1952 ಭಾರತದ ಶಿಕ್ಷಕರೊಬ್ಬರು ದೇಶದ ಉಪರಾಷ್ಟ್ರಪತಿಯಾಗಿ ಆಯ್ಕೆಯಾದರು. ಅವರ ಈ ಎಲ್ಲಾ ಸೇವೆ ಮತ್ತು ಕಾರ್ಯಕ್ಷಮತೆಯನ್ನು ಕಂಡ ಭಾರತ ಸರ್ಕಾರ ಅವರಿಗೆ “ಭಾರತ ರತ್ನ” ಪುರಸ್ಕಾರ ನೀಡಿ ಗೌರವಿಸಿತು. 1962 ರಲ್ಲಿ ಡಾ|| ಬಾಬು ರಾಜೇಂದ್ರ ಪ್ರಸಾದ್ ನಂತರ ದೇಶದ ಎರಡನೇ ರಾಷ್ಟ್ರಪತಿಯಾಗಿ ಆಯ್ಕೆಯಾಗಿ ದೇಶದ ಎಲ್ಲಾ ಶಿಕ್ಷಕ ವರ್ಗಕ್ಕೆ ಒಂದು ಗೌರವ ತಂದುಕೊಟ್ಟರು.  ಭಾರತದ ಶಿಕ್ಷಣ ಕ್ಷೇತ್ರಕ್ಕೊಂದು ಅರ್ಥವತ್ತಾದ ಚೌಕಟ್ಟು ನೀಡಿ, ಶಿಕ್ಷಣ ಕ್ಷೇತ್ರ, ತತ್ವಜ್ಞಾನ ಮತ್ತು ದೇಶದ ಅಭಿವೃದ್ಧಿಗಾಗಿ ತಮ್ಮ ಜೀವನವನ್ನು ಮುಡುಪಾಗಿಟ್ಟ ಶಿಕ್ಷಣ ತಜ್ಞ ರಾಧಾಕೃಷ್ಣರ ಜನುಮದಿನ ಸೆಪ್ಟೆಂಬರ್ 5 ನ್ನು ಶಿಕ್ಷಕರ ದಿನವನ್ನಾಗಿ ಆಚರಿಸಲಾಗುತ್ತದೆ.

ಈ ಮೂಲಕ ದೇಶ ನಿರ್ಮಿಸುವ ಕಾಯಕದಲ್ಲಿ ತೊಡಗಿರುವ ಶಿಕ್ಷಕರಿಗೆ ಗೌರವವನ್ನು ಅರ್ಪಿಸಲಾಗುತ್ತಿದೆ. ಒಂದು ಶಿಲೆಯ ರೂಪದಲ್ಲಿರುವ ಮಗುವನ್ನು ಒಂದು ಪರಿಪೂರ್ಣ ಮನುಷ್ಯನನ್ನಾಗಿ ಮಾಡುವ ಶಿಕ್ಷಕರು ಪೂಜಾರ್ಹರು.

ಇಂದಿನ ಈ ಶುಭದಿನದಲ್ಲಿ ನಾನು ನನ್ನ ಬಾಳಿಗೊಂದು ಅರ್ಥ ನೀಡಿದ  ನನ್ನ ಜೀವನದ ಪ್ರತಿ ಹಂತದಲ್ಲೂ ನನ್ನನ್ನು ತಿದ್ದಿ ತೀಡಿ ಮಾರ್ಗದರ್ಶನ ನೀಡಿದ ಎಲ್ಲರಿಗೂ ನಾನು ಹೃತ್ಪೂರ್ವಕ ನಮಸ್ಕಾರಗಳನ್ನು ಅರ್ಪಿಸಲು ಬಯಸುತ್ತೇನೆ.

ಒಂದಕ್ಷರವನ್ನ ಕಲಿಸಿದಾತಃ ಗುರು ಎಂಬ ನಾನ್ಣುಡಿಯಂತೆ ಶಾಲೆಯ ಒಳಗಲ್ಲದೆ ಜೀವನದ ಪ್ರತಿ ಒಂದು ಘಟ್ಟದಲ್ಲಿ ಮಾರ್ಗದರ್ಶನ ನೀಡಿದ ಎಲ್ಲರಿಗೂ ನನ್ನ ನಮನಗಳು.

ಶಿಕ್ಷಣದ ಪ್ರಾರಂಭದಲ್ಲಿ ಜೀವನಕ್ಕೆ ಶಿಸ್ತು, ಜೀವನದ ಮೌಲ್ಯ, ಅಕ್ಷರ ಜ್ಞಾನ, ಶಿಕ್ಷಣದ ಮದ್ಯಂತರದಲ್ಲಿ ನಾಯಕತ್ವ ಗುಣ, ಮಾತುಗಾರಿಕೆ, ಪ್ರಯತ್ನ ಮಾಡು ನಿನಗೆ ಜಯ ಇದೆ ಎಂದು ಹೇಳಿಕೊಟ್ಟ, ನಂತರದ ದಿನಗಳಲ್ಲಿ ಕಲಿತದ್ದನ್ನು ಬೇರೆಯವರಿಗೂ ಹಂಚಿಕೊ ಎಂದು ಹೇಳಿಕೊಟ್ಟ ಶಿಕ್ಷಕರು. ಜೀವನದಲ್ಲಿ ಧೈರ್ಯ ಮುಖ್ಯ ಎಂದು ತಿಳಿಸಿಕೊಟ್ಟ ಸಮಾಜ, ನನ್ನನ್ನು ಆಗಾಗ ತಿದ್ದಿ ಹುರಿದುಂಭಿಸಿದ ಪೋಷಕರು ಮತ್ತು ಸಹೋದರರು, ನಿನ್ನಲ್ಲಿ ಜನರನ್ನು ಆಕರ್ಷಿಸುವ ಶಕ್ತಿ ಇದೆ ಎಂದು ಹೇಳಿಕೊಟ್ಟ ಸ್ನೇಹಿತರು, ನಿನಗೂ ಸಾದಿಸುವ ಛಲ ಇದೆ ಎಂದು ಹೇಳಿಕೊಟ್ಟ ನನ್ನ ವೃತ್ತಿ ಬಾಂಧವರು, ಜೀವನದಲ್ಲಿ ತಾಳ್ಮೆ ಮುಖ್ಯ ಎಂದು ಹೇಳಿಕೊಟ್ಟ ನನ್ನ ಹೆಂಡತಿ ಮತ್ತು ಮಕ್ಕಳು, ಇದೆಲ್ಲಾ ಅಲ್ಲದೆ ನನಗೆ “ಮಿಸ್ಟರ್ ಪೇಷನ್ಸ್” ಎಂದು ಕರೆದ ಕರ್ನಾಟಕದ ಅಪಾರ ಶಿಕ್ಷಕ ವೃಂದಕ್ಕೆ ಇಂದಿನ ಈ ಶುಭ ದಿನದಲ್ಲಿ ನನ್ನ ಶರಣು ಶರಣಾರ್ಥಿಗಳು.

ಎಲ್ಲರಿಗೂ ಶಿಕ್ಷಕ ದಿನಾಚರಣೆಯ ಹಾರ್ಧಿಕ ಶುಭಾಷಯಗಳು.

ಬರಹ : ಸುಧಾಕರ.ಆರ್.ಭಂಡಾರಿ. ಶಿರಾಳಕೊಪ್ಪ.
ಲೇಖಕರ ಬಗ್ಗೆ: ಸುಧಾಕರ ಭಂಡಾರಿಯವರು ಮೂಲತಃ ಶಿವಮೊಗ್ಗ ಜಿಲ್ಲೆಯ ಶಿರಾಳಕೊಪ್ಪದವರು. MA in Education ಪದವೀಧರರಾದ ಇವರು ಶಿರಾಳಕೊಪ್ಪದಲ್ಲಿ  MICE ಸಹಭಾಗಿತ್ವದಲ್ಲಿ  “ಪುಷ್ಪಕ್ ಕಂಪ್ಯೂಟರ್ಸ್” ಹೆಸರಿನ ಸಂಸ್ಥೆಯೊಂದನ್ನು ನಡೆಸುತ್ತಿದ್ದು ಪ್ರಸ್ತುತ ಬೆಂಗಳೂರಿನಲ್ಲಿ ಅಮೇರಿಕನ್ ಇಂಡಿಯಾ  ಫೌಂಡೇಷನ್ ನಲ್ಲಿ ರೀಜನಲ್ ಕೋಆರ್ಡಿನೇಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಶಿಕ್ಷಣ ಇಲಾಖೆಯ ಅನೇಕ ತರಬೇತಿಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದಾರೆ. ಇವರೊಬ್ಬ ಹವ್ಯಾಸಿ ಬರಹಗಾರರು.

1 thought on “ಬದುಕು ಕಟ್ಟಿಕೊಟ್ಟವರಿಗೊಂದು ನುಡಿನಮನ

Leave a Reply

Your email address will not be published. Required fields are marked *