January 18, 2025
tengu

ತೆಂಡೆಲ್
ತಾರೆದ ಕಾಯಿ ತಾರಾಯಿ. ಅಂದರೆ ತೆಂಗಿನಕಾಯಿ. ತುಲುನಾಡಲ್ಲಿ ತೆಂಗಿನ ಮರಕ್ಕೆ”ತಾರೆ”ಎಂಬ ಹೆಸರನ್ನು ಇಟ್ಟಿದ್ದಾರೆ. “ತರೆ ದೆರ್ತ್ ತೂಪುನ ಮರನೇ ತಾರೆ”(ತಲೆ ಯನ್ನು ಮೇಲೆ ಎತ್ತಿ ನೋಡುವ ಮರ)ಎಂದಿದ್ದಾರೆ. ಅಂದರೆ ಮರದಲ್ಲಿರುವ ತೆಂಗಿನಕಾಯಿ ನೋಡಲು ನಮ್ಮ ತಲೆಯನ್ನು ಎತ್ತಿಕೊಂಡು ಕೈಗಳನ್ನು ತಲೆ ಹಿಂದೆ ಹಿಡಿದು ನೋಡಬೇಕಾಗುತ್ತದೆ. ಏಕೆಂದರೆ ಕಾಯಿಗಳು ದಟ್ಟಣೆಯ ಸೋಗೆಗಳ ಮೇಲೆ ಮಲಗಿರುತ್ತದೆ.ಇದೇ ರೀತಿಯಲ್ಲಿ ತಾರಿ(ತಾಳೆ)ಮರಗಳು ಇರುವುದು. ಅಡಿಕೆ ಮರಗಳು ಇದೇ ರೀತಿ ಎತ್ತರಕ್ಕೆ ಬೆಳೆಯುತ್ತದೆ. ಆದರೆ ಅಡಿಕೆ ಗೊನೆಗಳನ್ನು ಸುಲಭವಾಗಿ ನೋಡಬಹುದು. ಹೇಗೆಂದರೆ ಗೊನೆಗಳು ಅವುಗಳ ಸೋಗೆಗಳ ಕೆಳಗೆ ಇರುತ್ತದೆ.”ತರೆ”ಗೆ ಕೆಲಸ ಕೊಡಬೇಕಾಗಿರುವುದರಿಂದ ತಾರೆ(ತೆಂಗು ಮರ)ಮತ್ತು ತಾರಿ(ತಾಳೆ ಮರ)ಎಂದು ನಾಮಕರಣವನ್ನು ತುಲುವ ಪೂರ್ವಜರು ಮಾಡಿದ್ದಾರೆ.

ತೆಂಗಿನಕಾಯಿ ಮಿಡಿಯನ್ನು ತುಲು ಭಾಷೆಯಲ್ಲಿ “ತೆಂಡೆಲ್”, “ಚೆಂಡೆಲ್” ಎಂದು ಕರೆಯುತ್ತಾರೆ. ತೆಂಡೆಲ್ ಎಂಬ ಪದದಲ್ಲಿ “ತಂಡ್” ಮತ್ತು “ಇಲ” ಎಂಬ ಎರಡು ಶಭ್ದಗಳು ಅಡಗಿವೆ. ತಂಡ್ ಎಂದರೆ ತಂಡಿ,ತಂಪು, ಶೀತ ಎಂಬ ಅರ್ಥಗಳು. ಇಲ|ಯಲ ಎಂದರೆ ನೀರು ಎಂಬುದಾಗಿ ತಿಳಿಯಬೇಕು.(ಮರಿಯಲ= ಮಳೆನೀರು, ಅಂಡೇಲ್ = ಆಳ.ಯಿಲ =ನೀರು ಇದೆ).ಲತ್ತ್ ತೆಂಡೆಲ್ ಎಂತಲೂ ಕರೆಯುತ್ತಾರೆ. ಎಂದರೆ ಎಳಸು ಮಿಡಿ ಎಂಬ ಅರ್ಥ.

(ತೆಂಗಿನಕಾಯಿಯ ನೆಲದಡಿಯ ಕಾಂಡ.ಮೂಲ ತೆಂಗಿನಕಾಯಿಯೇ ಕಾಂಡವಾಗಿ ಬೆಳೆಯುವುದು.ಇದು ಕಿಡ್ನಿಯಂತೆ ಬೇರುಗಳು ರವಾನಿಸುವ ನೀರನ್ನು ಶುದ್ಧೀಕರಣ ಮಾಡುವುದು.)

ಈ ಮಿಡಿ ತೆಂಗಿನ ಕಾಯಿಗೆ ಹೊರ ಪ್ರಪಂಚದ ಶೀತ, ತಂಪು, ಚಳಿ,ನೀರು ಇತ್ಯಾದಿ ಪ್ರವೇಶಿಸಬಾರದು.ಒಂದು ವೇಳೆ ಪ್ರವೇಶಿಸಿದರೆ ಮಿಡಿಗಳಿಗೆ ನಂಜು ಇನ್ಫೆಕ್ಷನ್ ಆಗುತ್ತದೆ. ಅದಕ್ಕಾಗಿ ಪ್ರಕೃತಿಯೇ ಅವುಗಳಿಗೆ ಒಂದು ಚಂದದ ವಿನ್ಯಾಸ ಕೊಟ್ಟಿದೆ. ಭದ್ರತೆ ಉಳ್ಳ ಸುರಕ್ಷಿತ ಮುಚ್ಚಳ(Safety cap)ವನ್ನು ನೀಡಿದೆ. ಈ ಮುಚ್ಚಳ ಭದ್ರವಾಗಿ ಉಳಿದರೆ ಈ ಮಿಡಿ ತೆಂಗಿನ ಕಾಯಿ ತಾನೆ ತನ್ನೊಳಗೆ ರಹಸ್ಯವಾಗಿ ತಂಪಾದ ನೀರನ್ನು ಉತ್ಪಾದನೆ ಮಾಡುತ್ತದೆ. ಗೆರಟೆಯನ್ನು ಗಟ್ಟಿಯಾಗಿಸಿ ಬೆಳೆಸಿ ಬೊಂಡ ಆಗಿ ತಾರಾಯಿ ಆಗುತ್ತದೆ. ಒಂದು ವೇಳೆ ಸುರಕ್ಷಿತ ಮುಚ್ಚಳ ಅಥವಾ ಕಾರ್ಕ್ ಸಡಿಲವಾಗಿ ಹೊರಗಿನ ತಂಪು ನೀರು ಪ್ರವೇಶಿಸಿದರೆ ನಂಜು ಆಗಿ ಕೊಳೆತು ಗೊನೆಯಿಂದ ಉದುರುವುದು.

 

(ತೆಂಗಿನಕಾಯಿ ಮರದ ನೆಲದಡಿಯ ಕಾಂಡದ ಮೂಲ ಸ್ವರೂಪ.)

 

“ಚೆಂಡೆಲ್”ಎಂಬ ಪದದಲ್ಲೂ “ಚೆಂಡ್” ಮತ್ತು “ಯೆಲ”ಎಂಬ ಪದಗಳು ಇವೆ.ಇಲ್ಲಿ ಇದರ ಚೆಂಡಿನಂತೆ ಇರುವ ವಿನ್ಯಾಸವನ್ನು ಕಂಡು ಚೆಂಡೆಲ್ ಎಂದಿದ್ದಾರೆ. ಚಳಿ,ತಂಪು, ನೀರು ಇತ್ಯಾದಿ ಒಳಗೆ ಪ್ರವೇಶ ಆಗದಂತೆ ಚೆಂಡುದ ಲೆಕೊ ಕುರುಂಟು ಕಟ್ಟುದು ಉರುಟಾಗಿ ಮುದುಡಿದೆ ಎಂದಿದ್ದಾರೆ. ಈ ಮಿಡಿಗಳು ಒಳಗಿನ ತಿಪ್ಪಿ ಗೆರಟೆಯು ಬಲಿಷ್ಠವಾಗುವವರೆಗೂ ಹೋರಾಟ ಮಾಡುವುದು. ಕೆಲವು ಬಾರಿ ಒಳಗೆ ಪ್ರವೇಶಿಸಿದ ನೀರನ್ನು ಹೊರಗೆ ಕಾರುತ್ತದೆ. ಒಮ್ಮೊಮ್ಮೆ ಉದುರಿ ಬೀಳುತ್ತದೆ. ಮಗದೊಮ್ಮೆ ಬಾರಿ ಅರ್ಧಂಬರ್ಧ ಬೆಳೆಯುತ್ತದೆ. ಇಲ್ಲಿ”ಬೂತ ಪೊಗ್ಗುದುಂಡು”ಎನ್ನುತ್ತಾರೆ. ಕೆಲವೊಮ್ಮೆ ಉದುರದೆ ಇದ್ದರೂ ಒಳಗೆ ಬೆಳೆಯದೆ ಇರುತ್ತದೆ. ಅದನ್ನು “ಪೊಟ್ಟು”ಎನ್ನುವುದು.ಒಟ್ಟಿನಲ್ಲಿ ಹೆಚ್ಚಿನ ಚಳಿ, ಮಳೆ,ತಂಪಾದ ಪ್ರದೇಶಗಳಲ್ಲಿ ತೆಂಗಿನಕಾಯಿ ಬೆಳೆಯುವುದಿಲ್ಲ.ಶ್ರೇಷ್ಠ ಅಸಾಮಾನ್ಯ ತುಲು ಭಾಷೆ.ತುಲು ಭಾಷೆಯಲ್ಲಿದೆ ಇತಿಹಾಸದ ವ್ಯಾಖ್ಯಾನ.ಪದಗಳು ಅರ್ಥದೊಡನೆ ಮಾಹಿತಿಯನ್ನೂ ಒದಗಿಸುತ್ತದೆ.

 

(ಮಿಡಿ ತೆಂಗಿನಕಾಯಿ.ತುಲು ಭಾಷೆಯಲ್ಲಿ ತೆಂಡೆಲ್ ಎನ್ನುತ್ತಾರೆ)

 

(ಸುರಕ್ಷಿತ ಮುಚ್ಚಳದ ಆರು ದಳಗಳು)

ಕರ್ಕ್:

 

(ತೆಂಗಿನಕಾಯಿ ಕರ್ಕ್ ಎಂದರೆ ಎಳಸು ಗೆರಟೆ.)

(ಗೆರಟೆ ಬೆಳೆಯುವ ಹಂತದಲ್ಲಿ ಬಾವೆ (ಗ್ಲೂಕೋಸ್ ಕ್ರೀಮ್)ಅದರಲ್ಲಿ ಹಿಡಿಯುವುದು.)

“ಕರ್ಕ್”ಎಂದರೆ ಎಳೆಯಾದ ತಿಪ್ಪಿ(ಗೆರಟೆ).ತೆಂಡೆಲ್ ಇರುವಾಗಲೇ ಇದರ ಒಳಗೆ ಕರ್ಕ್ ಇದರ ಬಿಂದು ಇರುತ್ತದೆ.ತೆಂಡೆಲ್ ಬೆಳೆದಂತೆ ಇದರ ಒಳಗಿನ ಕರ್ಕ್ ಬಿಂದು ವಿಸ್ತಾರವಾಗಿ ಬೆಳೆಯುತ್ತದೆ. ಇದು ಮೆದು ವಾಗಿ ಇರುತ್ತದೆ.ಒಳಗಿರುವ ಎಳೆ ಗೆರಟೆ ಅಥವಾ ತಿಪ್ಪಿ ಯನ್ನು ಮುರಿದಾಗ ಕರ್ಕ್ ಎಂಬ ಶಬ್ಧವು ಬರುತ್ತದೆ. ಎಳೆ ಕುಂಬಳಕಾಯಿಯ ಹೊರ ಕವಚವನ್ನು ತುಲುವ ಜನರು ಕರ್ಕ್ ಎಂದೇ ಕರೆಯುತ್ತಾರೆ. ಇಲ್ಲೂ ಅದನ್ನು ಮುರಿದಾಗ ಕರ್ಕ್ ಎಂಬ ಧ್ವನಿ ಬರುತ್ತದೆ‌.ಈ ಎಳೆ ತಿಪ್ಪಿ ಅಥವಾ ಕರ್ಕ್ ಇದನ್ನು ತಿನ್ನಲು ಬರುತ್ತದೆ. ತಿನ್ನುವಾಗ ಕರ್ಕುರು ಎಂಬ ಧ್ವನಿಯನ್ನು ಕೇಳಬಹುದು. ತೆಂಡೆಲ್ ಒಳಗಿರುವ ತಿಪ್ಪಿ ಬೆಳೆಯುತ್ತಾ ಹೋದಂತೆ ಅದರೊಳಗೆ ನೀರು ತುಂಬುತ್ತಾ ಹೋಗುತ್ತದೆ.ತಿಪ್ಪಿಯು ಅದರ ಗರಿಷ್ಠ ಗಾತ್ರದವರೆಗೆ ಬೊಂಡದ ನಾರುಗಳ ಕೋಶದೊಳಗೆ ಬೆಳೆದು ಗಟ್ಟಿಯಾಗುತ್ತದೆ.ಸುತ್ತುವರಿದ ಒರಟು ಒರಟು ನಾರಿನ ಒಳಗೆ ಹತ್ತಿಯಂತೆ ಹಗುರದ ಥರ್ಮ ಕೋಲ್ ಚೂರುಗಳಂತಿರುವ ಸುಪ್ಪತ್ತಿಗೆಯಲ್ಲಿ ಈ ತಿಪ್ಪಿಯು ನೋವು ಆಗದಂತೆ ಮಲಗಿ ಬೆಳೆಯುತ್ತೆ. ತೆಂಗಿನಕಾಯಿ ಜನನ ಮರಣವು ಬಲು ರಹಸ್ಯಮಯ. ಕೆಲವೊಮ್ಮೆ ತಾನೇ ಉತ್ಪತ್ತಿ ಮಾಡಿದ ನೀರು ಭರ್ತಿ ಆಗಿ ಸಡಿಲಗೊಂಡು ಮುಚ್ಚಳದ ಎಡೆಯಿಂದ ಸೋರಿ ದಾಗ ಕಾಯಿಯ ಸ್ಥಿತಿ ಮೇಲೆ ತಿಳಿಸಿದಂತೆ ಆಗುತ್ತದೆ. ತಿಪ್ಪಿಯನ್ನು ತಲೆ ಬುರುಡೆಗೆ ಹೋಲಿಸಿದ್ದಾರೆ.ಕಾಯಿ ಒಳಗೆ ತಿಪ್ಪಿ ಒಡೆದರೆ ನೀರು ನಿಲ್ಲದೆ ಸೋರಿ ಪೊಟ್ಟು ಆಗುತ್ತದೆ.

ತಾರಾಯಿ ಒಳಗೆ ನೀರು ಸೇರುವ ಪ್ರಕ್ರಿಯೆ
ತೆಂಗಿನಕಾಯಿ ಗಿಡಕ್ಕೆ ಮಣ್ಣಿನಲ್ಲಿ ತೆಂಗಿನಕಾಯಿ ಇಟ್ಟ ಬಳಿಕ ಕಾಯಿಯಲ್ಲಿ ಬೇರುಗಳು ಬರುತ್ತವೆ. ಮೊಳಕೆ ಬಂದು ಎಲೆಗಳು ಅಥವಾ ಒಲಿಗಳು ಹುಟ್ಟುತ್ತವೆ. ಎಲೆಯ ದಂಡುಗಳು ಬಲು ಚಿಕ್ಕದಾಗಿ ಬರುತ್ತದೆ. ಅವುಗಳು ನೆಲದಲ್ಲೇ ಇರುತ್ತದೆ.ಗಿಡ ಬೆಳೆದಂತೆ ಎಲೆಗಳು ವಿಸ್ತಾರವಾಗಿ ದೊಡ್ಡದಾಗುತ್ತದೆ. ನೆಲ ಬಿಟ್ಟು ಮೇಲೆ ಕಾಣಿಸುತ್ತದೆ. ಅಷ್ಟರಲ್ಲಿ ಸುತ್ತಲೂ ಎಲೆಗಳನ್ನು ಹೊದ್ದುಕೊಂಡಿದ್ದ ಗಿಡದ ಕಾಂಡ ಅಥವಾ ದಿಂಡು ಕಾಣುತ್ತದೆ. ನೆಲದ ಅಡಿಯಲ್ಲಿ ಬೇರುಗಳು ಒಂದೇ ಸಮನೆ ವಿಸ್ತಾರವಾಗಿ ಹರಡುತ್ತದೆ.ನೆಟ್ಟ ತೆಂಗಿನಕಾಯಿ ಯೇ ಕಾಂಡವಾಗಿ ಮೇಲೇರುತ್ರದೆ.ಬೇರುಗಳು ಚಿಗುರು ಬಿಡುತ್ತಾ ನೀರನ್ನು ಹುಡುಕುತ್ತಾ ಹೀರುತ್ತಾ ವಿಸ್ತಾರವಾಗಿ ಹರಡುತ್ತದೆ. ನೆಲದಡಿಯ ಕಾಂಡವು ಕಿಡ್ನಿಯಂತೆ ಬೇರುಗಳು ರವಾನಿಸಿದ ನೀರನ್ನು ಶುದ್ಧೀಕರಣ ಮಾಡಿ ಇಡುತ್ತದೆ.

 

 

(ಬೆಳೆದ ಬೊಂಡ.ಸುರಕ್ಷಿತ ಮುಚ್ಚಳದಲ್ಲಿ ಕಾಣುವ ಎರಡು ನಳಿಕೆಗಳು. ಎಡಭಾಗದಲ್ಲಿರುವ ನಳಿಕೆಯಲ್ಲಿ ಕಾಯಿ ಗೊಂಚಲಿನ ದಿಂಡಿನಿಂದ ಗ್ಲೂಕೋಸ್ ಭರಿತ ಸಿಹಿ ನೀರು ಹರಿಯವುದು. ಬಲ ಭಾಗದಲ್ಲಿ ಕಾಣುವ ನಳಿಕೆಯಲ್ಲಿ ಒಳಗೆ ಉತ್ಪತ್ತಿ ಆದ ಆಸಿಡ್ ಅನಿಲ
ಹೊರಗೆ ರಿಲೀಸ್ ಆಗುತ್ತದೆ. ಅದೇ ರೀತಿಯಲ್ಲಿ ನಳಿಕೆಯ ಹೊರ ಪದರಿನಿಂದ ಶುದ್ಧವಾದ ಗಾಳಿ ಕಾಯಿ ಒಳಗೆ ಪ್ರವೇಶ ಮಾಡಿ ಹಾಲು ಮಿಶ್ರಿತ ಕಾಯಿ ಬೆಳೆಯಲು ಸಹಕರಿಸುತ್ತದೆ.)

ತೆಂಗಿನ ಮರದ ಎಲ್ಲಾ ಭಾಗವು ನಾರುಗಳಿಂದ ಆವೃತ ವಾಗಿದೆ. ಮಾಂಸದೊಡನೆ ಸೇರಿರುತ್ತದೆ. ನೆಲ ಬಿಟ್ಟ ಸೋಗೆ ಮಡಲು ದಂಡುಗಳು ವಾತಾವರಣದಿಂದ ನೀರನ್ನು ಆಕರ್ಷಿಸಿ ತನ್ನ ಶಿಖರದಲ್ಲಿ ಅಂದರೆ ತುದಿಯ ಲ್ಲೇ ಇರಿಸುವುದು.ಇದರಿಂದ ಅಲ್ಲಿ ತಿರುಳು ಬೆಳೆಯುತ್ತದೆ. ಸೋಗೆಗಳು ಒಂದರ ಮೇಲೆ ಒಂದು ಸೋಗೆಗಳು ಹುಟ್ಟುತ್ತದೆ.ಅದೇ ರೀತಿಯಲ್ಲಿ ಕಾಂಡದಿಂದ ಹೊರಟ ವಿಸ್ತಾರವಾಗಿ ಹರಡಿದ ಬೇರುಗಳಲ್ಲಿ ನೀರು ಸಂಗ್ರಹಿಸಲು ಈ ಮಡಲ್ ಆದೇಶ ಮಾಡುತ್ತದೆ. ಕೊಳವೆಯಂತಿರುವ ತೆಂಗಿನ ಬೇರುಗಳು ನೆಲದಿಂದ ನೀರನ್ನು ಹುಡುಕಿ ಕಾಂಡದ ಬುಡಕ್ಕೆ ಕಳಿಸಿ ಕೊಡುತ್ತದೆ. ಮೇಲಿನಿಂದಲೇ ಎಲೆಗಳ ಚಕ್ರವ್ಯೂಹವು ಬೇರುಗಳು ಕಾಂಡದ ಬುಡದಲ್ಲಿ ಶೇಖರಿಸಿದ ನೀರನ್ನು ಪಂಪ್ ಮಾಡಿ ಮೇಲೆ ತುಂಬಿಸುತ್ತದೆ.ನೆಲದಲ್ಲಿ ಇರುವ ಕಾಂಡ ವು ನೀರನ್ನು ಶುದ್ಧೀಕರಿಸಿ ಬುಡದಿಂದ ದಿಂಡಿನ ಮೇಲೆ ಚಕ್ರವ್ಯೂಹದ ಆದೇಶದಂತೆ ಕಳಿಸುತ್ತದೆ. ಮೇಲೆ ಏರಿದ ನೀರು ತುದಿಯಲ್ಲಿನ ತಿರುಳು ಉಳ್ಳ ಕಾಂಡದ ಸೋಗೆ ಗಳ ವ್ಯೂಹದೊಳಗೆ ಇರುತ್ತದೆ.ಈ ಮರವು ಯಾವ ಮಾತ್ರಕ್ಕೂ ಮೇಲೆ ಎಳೆದು ಕೊಂಡ ನೀರನ್ನು ವಾಪಸ್ ಕೆಳಗೆ ಹರಿಯಲು ಬಿಡುವುದಿಲ್ಲ.ಮಡಲುಗಳ ಚಕ್ರ ವ್ಯೂಹದೊಳಗೆ ಇರುವುದು ಮೆದುಳು ಮತ್ತು ಹೃದಯ. ಮಾನವನ ಮಿದುಳು ಕೆಲಸ ಮಾಡುವಂತೆ ಇದು ಕೆಲಸ ಮಾಡುವುದು. ಹೃದಯದಲ್ಲಿ ರಕ್ತ ಸಂಚರಿಸುವ ರೀತಿ ಭೂಮಿಯಿಂದ, ವಾತಾವರಣದಿಂದ ನೀರನ್ನು ಸಂಗ್ರಹಿಸಿ ಕಾಯಿ ಗೊಂಚಲಿನ ದಿಂಡು ನಳ್ಳಿಯಿಂದ ರವಾನಿಸಿ ನಳಿಕೆಗಳ ಮೂಲಕ ತೆಂಡೆಲ್ ತಿಪ್ಪಿ ಒಳಗೆ ಕಳುಹಿಸುತ್ತದೆ.ಅದು ಸಾಕು ಎಂದಾಗ ನಿಲ್ಲಿಸುವುದು. ಸೋಗೆ,ಕೊಂಬು ಬಂದಂತೆ ಹಾಲು ಬಣ್ಣದ ಗ್ಲೂಕೋಸ್ ನೀರನ್ನು ಏತದಿಂದ ಎಳೆದು ಕೊಡುವುದು.ಗ್ಲಾಸ್ ನಿಂದ ನಾವು ಶ್ವಾಸ ಮೇಲೆ ಎಳೆದು ಜ್ಯೂಸ್ ಕುಡಿದ ರೀತಿಯಲ್ಲಿ ಮಡಲು ಮತ್ತು ಅದನ್ನು ಸುತ್ತುವರಿದ ತೆಪ್ಪರಿಗೆಗಳು ಟೈಟ್ ಮಾಡಿ ಕಾಂಡದಡಿಯಿಂದ ನೀರನ್ನು ಎಳೆಯುವುದು.ನೀರಿನ ಒಡನೆ ಸಿಹಿಯ ಗ್ಲೂಕೋಸ್ ಪುಡಿಯು ದಿಂಡಿನೊಳಗಿಂದ ಮೇಲೆ ಬರುತ್ತದೆ.

 

 

(ಆಸಿಡ್ ನಳಿಕೆಯಲ್ಲಿ ಅನಿಲ ಸರಿಯಾಗಿ ರಿಲೀಸ್ ಆಗದೆ ಇದ್ದರೆ ಸುರಕ್ಷಿತ ಮುಚ್ಚಳದ ಎಡೆಯಲ್ಲಿ ಅನಿಲ ಸೋರಿ ಈ ರೀತಿಯಲ್ಲಿ ಕಪ್ಪು ಗುರುತುಗಳನ್ನು ಕಾಣಬಹುದು.)

 

(ಇನ್ನೂ ತಿರುಳು ಅಥವಾ ಬಾವೆ ಹರಡದ ಬರೇ ಕರ್ಕ ಇರುವ ಬೊಂಡದ ನೀರನ್ನು ಕುದಿಸಿದಾಗ ಬೆಲ್ಲದ ಅಂಶ ಕಂಡುಬರುತ್ತದೆ. ಏಕೆಂದರೆ ಗ್ಲೂಕೋಸ್ ಪುಡಿ ಅಂಶವು ಈ ನೀರಿನಲ್ಲಿ ಇರುತ್ತದೆ. ನಂತರದ ದಿನಗಳಲ್ಲಿ ತಿಪ್ಪಿಯಲ್ಲಿ ಬಾವೆ ಹರಡಿ ತಿರುಳು ದಪ್ಪಗೆ ಆಗುತ್ತದೆ.)

 

(ಒಣಗಿದ ತೆಂಗಿನಕಾಯಿ ನೀರು ಕುದಿಸಿದಾಗ ಬೆಲ್ಲದ ಅಂಶ ತೀರ ಕಡಿಮೆ ಆಗಿದ್ದು ಕಂಡುಬರುತ್ತದೆ. ಏಕೆಂದರೆ ಇಲ್ಲಿ ಗ್ಲೂಕೋಸ್ ಪುಡಿ ನೀರಿನಲ್ಲಿ ಇರುವುದಿಲ್ಲ. ಆಗಲೇ ಅದು ತಿಪ್ಪಿಯಲ್ಲಿ ತಿರುಳು ಆಗಿ ಪರಿವರ್ತನೆ ಆಗಿದೆ.)

ಸಾಮಾನ್ಯವಾಗಿ ಎಲ್ಲ ಮರಗಳಲ್ಲಿ ಹೂವು ಅರಳುವ ಪ್ರಕ್ರಿಯೆಯಂತೆ ತಾರೆಯಲ್ಲೂ ಇದರ ಮಡಲಿನ ಸಂದು ಗಳಿಂದ ಕೊಂಬು(ಕೋಡು)ರೂಪದಲ್ಲಿ ಹೂವಿನ ಗೊಂಚಲು ಹೊರಗೆ ಬರುತ್ತದೆ. ಈ ಕೊಂಬುವಿನ ಹೊರ ಕವಚವು ದೋಣಿಯ ವಿನ್ಯಾಸದ ರೀತಿಯಲ್ಲಿ ಇರುತ್ತದೆ.ಕೊಂಬುವಿನ ಒಳಗೆ ಇರುವ ಹೂ ಗೊಂಚಲಕಡ್ಡಿಗಳಲ್ಲಿ ತೆಂಗಿನಕಾಯಿ ಮಿಡಿಗಳು ಇರುತ್ತದೆ.ಅದನ್ನುತುಲುವರು ತೆಂಡೆಲ್ ಎನ್ನುತ್ತಾರೆ. ತೆಂಡೆಲ್ ಒಳಗೆ ತಿಪ್ಪಿ ಇರುತ್ತದೆ. ಅದು ಒಂದು ಬಿಂದುವಿನ ವಿನ್ಯಾಸದಲ್ಲಿ ಇರುತ್ತದೆ. ತೆಂಡೆಲ್ ದೊಡ್ಡದಾದಂತೆ ಒಳಗೆ ತಿಪ್ಪಿ ಕೂಡಾ ಬೆಳೆಯುತ್ತದೆ. ಕೊಂಬು ಅರಳಿದ ಬಳಿಕ ಅದರ ದಿಂಡುವಿನಲ್ಲಿ ತೆಂಗಿನಕಾಯಿ ಬೆಳೆಯುತ್ತದೆ. ಇದಕ್ಕೆ “ತಾರೆದ ಕೈಲ್”(ತಾರೆದ ಕಾಯಿಲು-ಬಾರೆದ ಕಾಯಿಲು) ಎಂದು ಕರೆಯುತ್ತಾರೆ. ಕೈಲ್ ಇದರಿಂದ ಕಾಯಿಗಳನ್ನು ಕಿತ್ತು ತೆಗೆದ ಬಳಿಕ ಅದನ್ನು “ಕೊದುಂಬು”ಎನ್ನುವುದು.

(ತೆಂಗಿನಮರದ ಹೃದಯ ಭಾಗ. ಮಿದುಳಿನ ಭಾಗ.ನಿಯಂತ್ರಣದ ಭಾಗ.ಸಿಹಿ ಸಿಹಿ ಬಿಳಿ ಗ್ಲೂಕೋಸ್ ನೀರನ್ನು ತಯಾರಿಸಿ ತೆಂಗಿನಕಾಯಿಗೆ ಅದಕ್ಕೆಂದೇ ಸೃಷ್ಟಿಸಿದ ಜೋಡಿಸಿದ ನಳಿಕೆಯಿಂದ ರವಾನಿಸುತ್ತದೆ. ಅದೇ ರೀತಿಯಲ್ಲಿ ಇನ್ನೊಂದು ನಳಿಕೆಯಿಂದ ಆಸಿಡ್ ಅನಿಲವನ್ನು ಗೆರಟೆಯಿಂದ ಹೊರದಬ್ಬುತ್ತದೆ.ಮತ್ತು ಅದರ ಒಳಗೆ ಶುದ್ಧವಾದ ಗಾಳಿಯನ್ನು ಕಳುಹಿಸಿ ತೆಂಗಿನಕಾಯಿ ಬೆಳೆಯುವಂತೆ ಮಾಡುವುದು. ಕೆಳಭಾಗದ ಕಾಂಡವು ಶುದ್ಧೀಕರಿಸಿದ ನೀರನ್ನು ಏತದಲ್ಲಿ ಎಳೆಯುವಂತೆ ಮಾಡುವುದು. ಕೊಳವೆಯಂತಿರುವ ತೆಂಗಿನಕಾಯಿ ಕಾಂಡದಿಂದ ಎಳೆಯುತ್ತದೆ.ಸಾಕಾಗದಿದ್ದರೆ ವಾತಾವರಣದ ನೀರನ್ನು ಸಂಗ್ರಹಿಸುವುದು.)

ತೆಂಗು ಮರದ ದಿಂಡಿನಿಂದ ಸೋಗೆಗಳು ಬಿದ್ದ ಬಳಿಕ ದಿಂಡುಗಳ ಒಳಗೆ ಬಿಳಿ ಬಣ್ಣದ ಸಿಹಿಯಾದ ಗ್ಲೂಕೋಸ್ ಪುಡಿ ಸಂಗ್ರಹವಾಗುತ್ತಲೇ ಹೋಗುತ್ತದೆ. ಸೋಗೆಗಳು ಕಾಂಡದಿಂದ ನೀರನ್ನು ಮೇಲೆ ಎತ್ತುವಾಗ ಗ್ಲೂಕೋಸ್ ಪುಡಿಯೂ ನೀರಿನೊಡನೆ ಮೇಲೆ ರವಾನೆ ಆಗುತ್ತದೆ.ಮಡಲುಗಳ ವ್ಯೂಹವು ತಾನು ಬಚ್ಚಿಟ್ಟ ಗ್ಲೂಕೋಸ್ ಭರಿತ ನೀರನ್ನು ತೆಂಡೆಲ್ ಗೊಂಚಲು ಹೊತ್ತ ದಿಂಡುಗಳಿಗೆ ರವಾನಿಸುತ್ತದೆ. ಈ ದಿಂಡುಗಳು ತನ್ನ ಗೊಂಚಲಲ್ಲಿ ಇರುವ ತೆಂಡೆಲುಗಳಿಗೆ ಎಷ್ಟು ಬೇಕು ಅಷ್ಟನ್ನು ನೀಡುತ್ತದೆ. ತೆಂಡೆಲುಗಳಲ್ಲಿ ಇರುವ ಗೆರಟೆಯು ಬೆಳೆಯುತ್ತಾ ಒಂದು ನಿರ್ದಿಷ್ಟ ಗಾತ್ರದಲ್ಲಿ ಬೆಳೆದು ತನ್ನ ಬೆಳವಣಿಗೆಯನ್ನು ನಿಲ್ಲಿಸುತ್ತದೆ.ತೆಂಡೆಲ್ ದಿಂಡಿನಿಂದ ಹೊರಟ ನಳಿಕೆಯು ಸುರಕ್ಷಿತ ಮುಚ್ಚಳ ದೊಳಗೆ ಹಾಯ್ದು ತಿಪ್ಪಿಗೆ ಸೇರಿರುತ್ತದೆ. ತಿಪ್ಪಿಯಲ್ಲಿ ಸಂಗ್ರಹವಾದ ಗ್ಲೂಕೋಸ್ ಪುಡಿಯು ಕೆಳಗಿನಿಂದ ಮೇಲ್ಮುಖವಾಗಿ ಬಾವೆಯ (cream)ರೂಪದಲ್ಲಿ ಸಂಗ್ರಹವಾಗುತ್ತದೆ.ಪದರು ಪದರುಗಳಾಗಿ ಸೇರಿ ಕೊಳ್ಳುತ್ತದೆ. ಗ್ಲೂಕೋಸ್ ವಾಟರ್ ಹನಿ ಹನಿಯಾಗಿ ತಿಪ್ಪಿಗೆ ಬೀಳುತ್ತಾ ಇರುತ್ತದೆ.ಬಾವೆಯು ಗಟ್ಟಿಯಾದಂತೆ ನೀರು ಹರಿಯುವ ಪ್ರಮಾಣ ಕಡಿಮೆ ಆಗುತ್ತಾ ತಿಪ್ಪಿ ಪೂರ್ತಿ ಭರ್ತಿ ಆಗುತ್ತದೆ.

 

(ತೆಂಗಿನಕಾಯಿ ಗೊಂಚಲು. ತಾರಾಯಿದ ಕೈಲ್(ಕಾಯಿಲು).ಮಡಲಿನ ಸಂದಿಯಿಂದ ಮೂಡಿ ಬಂದ “ಕೊಂಬು”ಇದರ ಇನ್ನೊಂದು ರೂಪ. ಇದರ ದಿಂಡಿನಿಂದ ನೀರು ಹರಿದು ಹೋಗಿ ಕಾಯಿಗಳ ನಳಿಕೆಗಳಿಂದ ತುಂಬಿಸುತ್ತಾ ಇರುತ್ತದೆ.)

ಕಾಯಿಗೆ ಭದ್ರ ಪಡಿಸಿದ, ಟೈಟ್ ಆಗಿ ಫಿಕ್ಸ್ ಆದ ಕ್ಯಾಪ್ ಅಥವಾ ಮುಚ್ಚಳದಲ್ಲಿ ಎರಡು ನಳಿಕೆಗಳು ಇವೆ.ಈ ಎರಡೂ ನಳಿಕೆಗಳು ಮುಚ್ಚಳಿಕೆಯಲ್ಲಿ ಇದ್ದು ತಿಪ್ಪಿಗೆ ಸಂಪರ್ಕಕ್ಕೆ ಇದೆ.ಒಂದು ನಳಿಕೆಯ ಕೊನೆ ಕಾಯಿಯ ಗೊಂಚಲು ಅಥವಾ ಕೈಲ್ ಇದರ ದಂಡಿನ ಲ್ಲಿ ಇರುತ್ತದೆ.ಈ ನಳಿಕೆಯ ಮುಖಾಂತರ ಗ್ಲೂಕೋಸ್ ನೀರನ್ನು ದಂಡ್ ತಿಪ್ಪಿಯ ಒಳಗೆ ರವಾನಿಸುತ್ತದೆ.ಸುರ ಕ್ಷಿತ ಮುಚ್ಚಳದಿಂದ ಹೊರಗೆ ಕಾಣುವ ನಳಿಕೆಯ ಮುಖಾಂತರ ತಿಪ್ಪಿಯ ಒಳಗಿನ ಎಸಿಡ್ ಗ್ಯಾಸ್ ಅನಿಲ ರೂಪದಲ್ಲಿ ಹೊರಗೆ ಬರುತ್ತದೆ. ಈ ಅನಿಲ ಹೊರಗೆ ರಿಲೀಸ್ ಆಗದಿದ್ದರೆ ಕಾಯಿಯ ತಿಪ್ಪಿಯು ಬ್ಲಾಸ್ಟ್ ಆಗುತ್ತದೆ.ಚಿಪ್ಪು ಒಳಗೆ ಒಡೆದ ಕಾಯಿಯನ್ನು ನಾವು ಕಾಣುತ್ತೇವೆ. ಇದರಲ್ಲಿ ತಾರಾಯಿ ಪೂವು ಇರುವುದಿಲ್ಲ. ಮುಚ್ಚಳದಿಂದ ಹೊರ ಬಂದ ಇದೇ ನಳಿಕೆಯಲ್ಲಿ ಅಲ್ಲಲ್ಲಿ ತೂತುಗಳು ಇವೆ.ಇವುಗಳಿಂದ ಗಾಳಿಯು ತಿಪ್ಪಿ ಒಳಗೆ ಪ್ರವೇಶವಾಗುತ್ತದೆ.ತಿಪ್ಪಿಯ ಒಳಗೆ ಕಾಯಿಯ ತಿರುಳನ್ನು ಬೆಳೆಸುತ್ತದೆ. ತೆಂಗಿನಕಾಯಿಯ ಹೊರಗೆ ಕಾಣುವ ಈ ಎರಡು ನಳಿಕೆಗಳು ಬಹು ಬಹು ಪ್ರಾಮುಖ್ಯತೆಯನ್ನು ಪಡೆದಿದೆ.ಒಂದೇ ನಳಿಕೆಯಲ್ಲಿ ಎರಡು ವ್ಯವಸ್ಥೆಗಳು.ಇಲ್ಲಿ ಒಳ ಮತ್ತು ಹೊರ ಕವಚಗಳು ಇವೆ.ಇದು ಪ್ರಕೃತಿ ಸೃಷ್ಟಿಯ ಅದ್ಭುತ ಮಾಯೆ.

 

(ಮಿಡಿ ತೆಂಗಿನಕಾಯಿ. ಗೆರಟೆಯ(ತಿಪ್ಪಿ) ಬಿಂದು ನೋಡಬಹುದು.)

ತಿಪ್ಪಿ ಒಳಗಿನ ಗ್ಲೂಕೋಸ್ ನೀರು ತಿರುಳು ರೂಪದಲ್ಲಿ ಪರಿವರ್ತನೆ ಆಗಿ ಗಟ್ಟಿಯಾಗಿ ಹರಿಯುವ ನೀರಿನ ದ್ವಾರವನ್ನು ಬ್ಲಾಕ್ ಮಾಡಿ ಮುಚ್ಚಿ ಬಿಡುತ್ತದೆ.ಈಗ ಇಲ್ಲಿ ತಿಪ್ಪಿಯಲ್ಲಿ ನೂರಕ್ಕೆ ನೂರು ಭಾಗ ಗ್ಲೂಕೋಸ್ ವಾಟರ್ ತುಂಬಿರುತ್ತದೆ. ಗ್ಲೂಕೋಸ್ ಪುಡಿಯು ಕಾಯಿ ತಿರುಳಿಗೆ ಅಂಟುತ್ತಾ ಹೋಗುತ್ತದೆ.ನೀರಿನ ಹರಿವು ಬಂದಾಗುವುದು.ಈಗ ಇದರ ಸ್ಥಾನ ಅಥವಾ ಪೊಸಿಷನ್ ತುಲು ಭಾಷೆಯಲ್ಲಿ “ಬೊಂಡ” ಎಂದಾಗಿದೆ. ಅಂದರೆ ಗೆರಟೆ ತುಂಬಾ ತಿರುಳು ತುಂಬಿರುತ್ತದೆ. ನೀರು ಅಲುಗಾಡುವುದಿಲ್ಲ.ಗ್ಯಾಸ್ ರಿಲೀಸ್ ಆಗುವ ಮತ್ತು ಗಾಳಿ ಪ್ರವೇಶಿಸುವ ನಳಿಕೆಯು ತನ್ನ ಕಾರ್ಯವನ್ನು ಮುಂದುವರಿಸುವುದು. ಅದು ತಿಪ್ಪಿಯ ನೀರು ಆರಿಸಿ ಹೋಗಿ ಗೋಟುವಾಗುವವರೆಗೂ ತನ್ನ ಡ್ಯೂಟಿಯನ್ನು ಮಾಡುತ್ತಾ ಹೋಗುತ್ತದೆ. ಸುರಕ್ಷಿತ ಮುಚ್ಚಳ ಕಳಚಿದ ಬಳಿಕವೂ ನಿರ್ವಹಣೆ ಮಾಡುತ್ತದೆ. ನಾರು ಮಿಶ್ರಿತ ಚಿಪ್ಪು ಇದರ ಕವಚವಾಗಿರುವುದರಿಂದ ಇದು ಸಾಧ್ಯ ಆಗುತ್ತದೆ.

 

(ಸುರಕ್ಷಿತ ಮುಚ್ಚಳದ ಹೊರಮೈ)

 

(ಸುರಕ್ಷಿತ ಮುಚ್ಚಳದ ಒಳಮೈ)

ಇನ್ನೇನು ಬೊಂಡದ ಬಣ್ಣ ತುಸು ಕಪ್ಪಾಗಲು ಆರಂಭಿ ಸುತ್ತದೆ.ಗ್ಲೂಕೋಸ್ ಪುಡಿಯು ಬೊಂಡು ಇದಕ್ಕೆ ಪೂರ್ತಿ ಅಂಟಿ ಆಗಿರುತ್ತದೆ.ಕಾಯಿಯನ್ನು ಅಲುಗಾಡಿ ಸಿದಾಗ ಗುಳು ಗುಳು ಧ್ವನಿ ಬಾರದು.ಕೆಲವೇ ದಿನಗಳ ಒಳಗೆ ಅಲುಗಾಡಲು(ತುಲು ಭಾಷೆಯಲ್ಲಿ-ಅಲಂಕುನು) ರೆಡಿ ಆಗಿರುತ್ತದೆ. ಕಾಯಿಯ ಈ ಸ್ಥಾನವನ್ನು ತುಲುವರಭಾಷೆಯಲ್ಲಿ “ಬನ್ನಂಗಾಯಿ”ಎನ್ನುತ್ತಾರೆ.ಯುವಕರು ಬೇಗನೆ ಬೆಳೆಯಲು ಇದನ್ನು ಬಳಸಬೇಕು. ನೀರು ಕುಡಿದು ತಿರುಳನ್ನು ತಿನ್ನುವುದು ಉತ್ತಮ. ಬೇಕಿದ್ದರೆಅವಲಕ್ಕಿ ಬೆರೆಸಿ ತಿಂದರೆ ಬಲು ಉತ್ತಮ.ಬನ್ನಂಗಾಯಿಯ ನಂತರದ ರೂಪವೇ “ಬಡ್ಡ್ ತಾರಾಯಿ”.ಇಲ್ಲಿ ಅಲಂಕುಂಡು.ಅಲುಗಾಡಿಸುವಾಗನೀರಿನ ಗುಳು ಗುಳು ಧ್ವನಿ ಬರುತ್ತದೆ. ಆದರೆ ಒಣಗಿದಕಾಯಿಯನ್ನು ಅಲುಗಾಡಿಸುವಾಗ ಬರುವಷ್ಟು ಬರುವುದಿಲ್ಲ. ಔಷಧೀಯ ಗುಣಗಳು ಇದರಲ್ಲಿಅಪಾರವಿದೆ.ವಿವಿಧ ಕೆತ್ತೆ ಚೆಕ್ಕೆ ಗಂಜಿಯಲ್ಲಿ ಬನ್ನಂಗಾಯಿಯನ್ನು ಬಳಸುತ್ತಾರೆ. ಪಾಯಸ,ಇತರ ಸಿಹಿ ಐಟಂಗಳಿಗೆ ಇದರ ಹಾಲು ಬಲು ರುಚಿಕರ.ಮರದಿಂದ ಕೀಳುವಾಗ ಇದರ ಹೆಸರು ತಾರೆದ ಕಾಯಿ “ತಾರಾಯಿ”ಎಂದಾಗುತ್ತದೆ.ತಿಪ್ಪಿ ಒಳಗಿನ ನೀರು ಬತ್ತಿದ ಬಳಿಕ ಇದನ್ನು ನೀರ್ ಆಜಿನ ತಾರಾಯಿ ಎನ್ನುವುದು. ನಂತರದಲ್ಲಿ ತಿಪ್ಪಿಯ ಒಳಗೆ ಕೊಬ್ಬರಿ ಅಲುಗಾಡಿದಾಗ ಅದನ್ನು ಗೋಂಟು ತಾರಾಯಿ ಎನ್ನುತ್ತಾರೆ.ಗೋಂಟು ಆದ ನಂತರವೇ ಎಣ್ಣೆಯನ್ನು ತೆಗೆಯುವುದು ಉತ್ತಮ. ತೆಂಗಿನಕಾಯಿ ಹಿಂಡಿಯನ್ನು ತುಲು ಭಾಷೆಯಲ್ಲಿ “ಪುಂಡಿ”(ಮುಷ್ಟಿ)ಎಂದು ಕರೆಯುತ್ತಾರೆ. ಒಂದು ಕಾಲದಲ್ಲಿ ಕೊಬ್ಬರಿಯನ್ನು ಕಲ್ಲಿನಲ್ಲಿ ಜಜ್ಜಿ ಅರೆದು ಮುಷ್ಟಿಯಲ್ಲಿ ಹಿಂಡಿ ಎಣ್ಣೆಯನ್ನು ಸಂಗ್ರಹಿಸಿದ್ದಾರೆ. ಹಿಂಡಿದ ಎಣ್ಣೆಯನ್ನು ಕುದಿಸಿ ಇಡುತ್ತಿದ್ದರು ಎಂಬುವು ದಕ್ಕೆ ಈ “ಪುಂಡಿ”ಎಂಬ ಹೆಸರು ಪುರಾವೆಯನ್ನು ಒದಗಿಸುತ್ತದೆ.

 

 

(ತೆಂಗಿನಕಾಯಿ ಗೊನೆ ಮತ್ತು ಅದರ ಕೊನೆಯ ರೂಪ)

 

(ತೆಂಗಿನಮರದ ಸೋಗೆಯ ಸಂದಿಯಲ್ಲಿ ಮೂಡಿದ ತೆಂಗಿನ ಹೂವಿನ ಮೊಗ್ಗು.)

ಶೇಂದಿ ತಯಾರಿ
ಮಡಲಿನ ಸಂದುಗಳಲ್ಲಿ ಪೂರ್ತಿ ಮೂಡಿ ಬಂದ ಕೊಂಬುವನ್ನು ಅರಳುವ ಮುಂಚೆಯೇ ಅದರ ಹೊರಕವಚದ ಒಳಗೆ ಇರುವ ತೆಂಡೆಲುಗಳನ್ನು ಬಡಿದು ಕೊಂಬು ಅರಳದಂತೆ ಅಲ್ಲಲ್ಲಿ ಕಟ್ಟುವುದು. ಈಗಬೊಂಡದ ಗೊಂಚಲಿನ ದಿಂಡಿನಿಂದ ಗ್ಲೂಕೋಸ್ಪುಡಿ ಮಿಶ್ರಿತ ನೀರು ನಳಿಕೆಯಲ್ಲಿ ಇಳಿದು ಹರಿದು ತೆಂಡೆಲ್ ಬೊಂಡಗಳು ಇಲ್ಲದೆ ದಾರಿ ಕಾಣದೆ ಶೇಂದಿಕಲಿ ಕುಜಿಲ್ (ಮಣ್ಣಿನ ಮಡಿಕೆ)ಒಳಗೆ ಇಳಿಯುತ್ತದೆ.ತಾರೆದ ಕೈಲ್ ದಿಂಡಿನಿಂದ ‌ಹರಿದು ಬರುವ ಗ್ಲೂಕೋಸ್ವಾಟರ್ ದಿಂಡಿಗೆ ಎಟೇಚ್ ಆಗಿರುವ ನಳಿಕೆಗಳಲ್ಲಿಹರಿದು ಬಂದು ಬೊಂಡದ ಬದಲು ಕುಜಿಲ್ ಒಳಗೆಸಂಗ್ರಹ ವಾಗುತ್ತದೆ. ಹಿಂದೆಲ್ಲಾ ಕುಜಿಲ್ ವಿನ್ಯಾಸವುಬೊಂಡದ ವಿನ್ಯಾಸದಂತೆ ಇರುತ್ತಿತ್ತು. ಬೊಂಡದ ನೀರೇಎಸಿಡ್ ಆಗಿ ಕಲಿ ರೂಪವನ್ನು ಪಡೆಯುವುದು.

(ಅರಳಿದೆ ಅರಳಿದೆ ತೆಂಗಿನ ಹೂವು ಅರಳಿದೆ.ಮಡಲಿನ ಸಂದಿಯಿಂದ ಮೂಡಿದೆ.ಮಿಡಿ ತೆಂಗಿನಕಾಯಿಗಳನ್ನು ಪ್ರದರ್ಶೀಸುತ್ತಿದೆ.ತೆಂಗಿನಕಾಯಿ ಮರದ ಹೃದಯ ಭಾಗವು ಗೊಂಚಲಿನ ದಿಂಡಿನ ಮೂಲಕ ಎಲ್ಲಾ ಮಿಡಿಗಳಿಗೆ ನಳಿಕೆಯಲ್ಲಿ ಸಿಹಿಯಾದ ಗ್ಲೂಕೋಸ್ ವಾಟರನ್ನು ತುಂಬಿಸುತ್ತಿದೆ.ಇದೇ ಗ್ಲೂಕೋಸ್ ವಾಟರನ್ನು ತೆಂಡೆಲ್ | ಕಾಯಿ ಒಳಗೆ ಹರಿಯದಂತೆ ಮಾಡಿ ಕುಜಿಲ್ (ಮಣ್ಣಿನ ಮಡಿಕೆ)ಒಳಗೆ ಹರಿಯುವಂತೆ ಮಾಡುವಾಗ ಕಲಿ(ಶೇಂದಿ)ಸಿಗುತ್ತದೆ.)

 

ಮುಕ್ಕಣ್ಣ:


ತೆಂಗಿನಕಾಯಿಯ ಸುರಕ್ಷಿತ ಮುಚ್ಚಳದ ಒಳಗೆ ಮೂರು ಕಣ್ಣುಗಳು ಕಾಣುತ್ತದೆ.ಈ ಚಿತ್ರ ಮನುಷ್ಯನ ಮುಖದಂತೆ ಇದೆ.ಕೆಳಗಿನ ಒಂದು ಕಣ್ಣಿಂದ ಮೊಳಕೆ ಬಂದು ಸಸಿ ಹೊರ ಬರುತ್ತದೆ. ಸಮಾನಂತರವಾಗಿ ಕಾಣುವ ಒಂದು ಕಣ್ಣು ಅಥವಾ ದ್ವಾರದಲ್ಲಿ ಅದು ಕಾಯಿಗೆ ಅಂದು ಗ್ಲೂಕೋಸ್ ನೀರನ್ನು ನಳಿಕೆಯಲ್ಲಿ ತಿಪ್ಪಿ ಒಳಗೆ ತುಂಬಿಸುವುದು ಆಗಿತ್ತು. ಇನ್ನೊಂದು ಕಣ್ಣಿನ ದ್ವಾರದ ನಳಿಕೆಯು ಶುದ್ಧವಾದ ಗಾಳಿಯನ್ನು ಕಾಯಿಯ ತಿಪ್ಪಿ ಒಳಗೆ ಕಳುಹಿಸುವುದು ಮತ್ತು ಒಳಗೆ ಆಸಿಡ್ ಗ್ಯಾಸ್ ಆಮ್ಲತೆಯನ್ನು ಒಳಗಿನಿಂದ ಹೊರಗೆ ದಬ್ಬುವುದು.ಈ ನಳಿಕೆಯಲ್ಲಿ ಎರಡು ಪದರುಗಳು ಇವೆ.ಒಳಗಿನ ಪದರಿನಿಂದ ಆಸಿಡ್ ಹೊರಗೆ ಹೋಗುತ್ತದೆ. ಮತ್ತು ಹೊರಗಿನ ಪದರಿನಿಂದ ಶುದ್ಧವಾದ ಗಾಳಿ ಒಳ ಸೇರುತ್ತದೆ. ಇದು ಒಳಗಿನ ಪ್ರಕ್ರಿಯೆ ನಡೆಯಲು ಅಗತ್ಯ. ಗ್ಯಾಸ್ ಹೊರಗೆ ಹೋಗದಿದ್ದರೆ ತಿಪ್ಪಿ ಒಡೆದು ಹೋಗುತ್ತದೆ.

(ಮುಕ್ಕಣ್ಣನ ಕೆಳಗಿನ ಕಣ್ಣಲ್ಲಿ ಮೊಳಕೆ ಬರುತ್ತದೆ. ಎಡಭಾಗದ ಕಣ್ಣು ವಿಶ್ರಾಂತಿ ಪಡೆದರೆ ಬಲಕಣ್ಣು ತನ್ನ ಕರ್ತವ್ಯವನ್ನು ನಿರಂತರ ಮಾಡುತ್ತಾ ಇರುತ್ತದೆ. ಒಳಗಿನ ಆಮ್ಲತೆಯನ್ನು ಎಸಿಡ್ ಅಂಶವನ್ನು ಹೊರದಬ್ಬುತ್ತದೆ. ಅದೇ ರೀತಿಯಲ್ಲಿ ಸ್ವಚ್ಛವಾದ ಗಾಳಿಯನ್ನು ಒಳಗೆ ಕಳುಹಿಸುವುದು. ಮೊಳಕೆಯೊಡೆದು ಗಿಡವಾಗಲು ನೆರವಾಗುತ್ತದೆ.) 

(ಗ್ಲೂಕೋಸ್ ವಾಟರ್ ಗೊಂಚಲಿನ ದಿಂಡಿನಿಂದ ತೆಂಡೆಲುಗಳಿಗೆ ಹರಿಯದಂತೆ ಗುದ್ದಿ ಬಂದೋಬಸ್ತ್ ಮಾಡಿ ಕುಜಿಲ್ ಒಳಗೆ ಹರಿಸುವುದು.)

 

(ಇನ್ನೂ ಬಾವೆ(ಕ್ರೀಮ್)ಹರಡದ ಎಳನೀರು ಒಂದು ದಿನದ ಬಳಿಕ ಈ ರೂಪ ಪಡೆದು ಕಲಿ ವಾಸನೆ ಮೂಗಿಗೆ ಬಡಿಯಿತು.)

ತೆಂಗಿನಕಾಯಿ ಬೆಲ್ಲ
ಗ್ಲೂಕೋಸ್ ಪುಡಿಯು ತಿಪ್ಪಿ ಒಳಗೆ ಸೇರಿ ಕಾಯಿ ತಿರುಳು ಬೆಳೆಯುತ್ತದೆ. ಕಲಿ ತೆಗೆದಾಗ ಕಾಯಿ ಇರುವುದಿಲ್ಲ.ಬದಲಾಗಿ ಗ್ಲೂಕೋಸ್ ಪುಡಿ ಕಲಿಯಲ್ಲಿಬೆರೆತಿರುವುದರಿಂದ ಅದೇ ಪುಡಿಯಿಂದಲೇ ಬೆಲ್ಲ ಬರುತ್ತದೆ. ತಾರಿ ಮತ್ತು ತಾರೆ ಅಣ್ಣ ತಮ್ಮಂದಿರಾಗಿದ್ದರಿಂದ ತಾರಿ ಮತ್ತು ತಾರೆ ಕಲಿಯಿಂದ ಬೆಲ್ಲ ತಯಾರಿಆಗುತ್ತದೆ. ಆದರೆ ಈಂದ್ ಅಥವಾ ಬೈನೆ ಮರದ ಕಲಿಯಿಂದ ಬೆಲ್ಲ ಬರುವುದಿಲ್ಲ. ಏಕೆಂದರೆ ಇದರಗ್ಲೂಕೋಸ್ ಪುಡಿಯು ಸಂಪೂರ್ಣವಾಗಿ ದಿಂಡಿನಿಂದಹೊರಗೆ ಬರದೆ ಅದರಲ್ಲೇ ಉಳಿಯುತ್ತದೆ. ಈಂದ್ಕಲಿಯಲ್ಲಿ ಗ್ಲೂಕೋಸ್ ಪುಡಿಯ ಅಂಶ ಕಡಿಮೆ ಇರುವುದರಿಂದ ಬೆಲ್ಲ ಬರುವುದು ಇಲ್ಲ.ಬದಲಾಗಿಈಂದ್ ಮರದ ದಿಂಡುಗಳ ಒಳಗಿನ ಚೆಕ್ಕೆಯನ್ನು ಪುಡಿ ಮಾಡಿ ನೀರಿನಲ್ಲಿ ಅದ್ದಿ ಈಂದ್ ಪೌಡರ್ಅಥವಾ ಈಂದ್ ಗ್ಲೂಕೋಸ್ ಪುಡಿಯನ್ನು ತಯಾರು ಮಾಡುತ್ತಾರೆ.ಈ ಪುಡಿಯು ಸಿಹಿ ಇರುವುದಿಲ್ಲ. ಕಾರಣಸಿಹಿ ಅಂಶವು ಕಲಿಯಲ್ಲಿ ಹೋಗಿರುವುದು.

ತೆಂಗಿನ ಮರಗಳ ಮಡಲುಗಳಿಗೆ ಯಾವುದೇ ಇತರಮರ ಗಿಡಗಳು ತಾಗಿ ಕೊಂಡು ಇರಬಾರದು. ತಾಗಿದರೆಮಡಲುಗಳ ಸಂದಿಗಳು ಅಗಲವಾಗದೆ ಇರುತ್ತದೆ. ಕಾಯಿ ಕೊಂಬುಗಳು ಹೊರಗಡೆ ಬರಲು ಕಷ್ಟವಾಗುತ್ತದೆ.ಅರಳಲು ಕಷ್ಟವಾಗುತ್ತದೆ. ಗ್ಲೂಕೋಸ್ ನೀರುಗೊಂಚಲಿನ ದಿಂಡಿಗೆ ಹರಿಯಲು ಕಷ್ಟವಾಗಿ ಮಿಡಿಗಳು ಅಲ್ಲದೆ ನಂತರದ ಹಂತದ ಕಾಯಿಗಳುಉದುರುವುದು. ಮಡಲುಗಳ ಚಕ್ರವ್ಯೂಹಕ್ಕೆ ನೆಲದಿಂದ ನೀರನ್ನು ಎಳೆಯಲು ಕಷ್ಟವಾಗುತ್ತದೆ.

ತೆಂಗಿನಕಾಯಿ ಗಿಡಗಳನ್ನು ಬೆಳೆಸಲು ಕಾಯಿಗಳನ್ನುನೆಲದಲ್ಲಿ ನೇರವಾಗಿ ಇಡುವುದರ ಬದಲು ಮಲಗಿಸಿಇಟ್ಟರೆ ಬೇಗನೇ ಮೊಳಕೆ ಬರುತ್ತದೆ. ಅದಕ್ಕೆ ಕಾಯಿಯನೀರು ಸುಲಭದಲ್ಲಿ ಕೊನೆಯವರೆಗೂ ಸಿಗುತ್ತದೆ. ತೆಂಗಿನ ಗುಂಡಿಯಲ್ಲಿ ಕಾಯಿಗಳು ಗೋಚರಕ್ಕೆ ಬರದೆಉಳಿದು ಬಿಟ್ಟರೆ ಅಡ್ಡಲಾಗಿ ಬಿದ್ದ ಕಾಯಿ ಬೇಗನೇಮೊಳಕೆ ಬಂದು ಮೇಲೆ ಬರುತ್ತದೆ.ನೀರು ಹಾಕದಿದ್ದರೂ ಮೇಲೆ ಬರುತ್ತದೆ.ತಾರಿ ಕಾಯಿಯು ಕೂಡಾ ಅಡ್ಡಲಾಗಿಮೊಳಕೆ ಬರುತ್ತದೆ. ಎಲ್ಲಿ ಧಾನ್ಯಗಳು ಕೂಡಾ ಮಲಗಿಯೇ ಮೊಳಕೆ ಬರುತ್ತದೆ.

ಐ.ಕೆ.ಗೋವಿಂದ ಭಂಡಾರಿ , ಕಾರ್ಕಳ
(ನಿವೃತ್ತ ವಿಜಯಾ ಬ್ಯಾಂಕ್ ಮ್ಯಾನೇಜರ್)

Leave a Reply

Your email address will not be published. Required fields are marked *