ಎಲ್ಲೆಡೆ ಹಚ್ಚ ಹಸಿರು….ಆಗ ತಾನೆ ಅರಳಿದ ಹೂಗಳು…ಆಚೆ ಈಚೆ ಓಡಾಡುತ್ತಿರುವ ಪ್ರಾಣಿಗಳು… ವಿವಿಧ ರೀತಿಯ ಇಂಪಾದ ಧ್ವನಿಯಿಂದಲೇ ಎಲ್ಲರನ್ನೂ ಆಕರ್ಷಿಸುವ ಪಕ್ಷಿಗಳು.. ಆಹಾ ಎಂತ ಪ್ರಪಂಚ ಅಲ್ವಾ.. !!ಎನ್ನುತ್ತಿದ್ದಾಗಲೇ ಯಾರೋ ಕರೆಯೋ ರೀತಿ ಆಯಿತು. ನಿದ್ದೆಯ ಮಂಪರಿನಿಂದ ಕಣ್ಣು ಬಿಟ್ಟವಳಿಗೆ ಆಗಲೇ ತಿಳಿದದ್ದು ಅದು ಕನಸು ಅಂತ. ಕಾಲೇಜಿಗೆ ಹೋಗಲ್ವಾ ಅಂತ ಅಮ್ಮ ಕೇಳಿದಾಗ ಒಮ್ಮೆಲೇ ದಿಗಿಲುಗೊಂಡು ಎದ್ದೆ. ಯಾವತ್ತೂ ಬೇಗ ಏಳುವವಳು ಅಂದು ಕನಸಿನ ಪ್ರಪಂಚದಲ್ಲಿ ಮುಳುಗಿ ಹೋಗಿದ್ದೆ.
ಬೇಗ ಬೇಗ ಹೊರಟ ನನಗೆ ತಕ್ಷಣಕ್ಕೆ ಸೂಕ್ತ ಸಮಯಕ್ಕೆ ಕಾಲೇಜು ಮುಟ್ಟುವುದೇ ದೊಡ್ಡ ಗುರಿಯಾಗಿತ್ತು.ಮನೆಯಿಂದ ಕಾಲೇಜಿಗೆ ಒಂದೂವರೆ ಗಂಟೆ ಹೆಚ್ಚೇ ಪ್ರಯಾಣ ಇತ್ತು. ಅದಾಗಲೇ ಕಾಲೇಜಿಗೆ ಲೇಟಾಗಿದ್ದರಿಂದ ಓಡಿಕೊಂಡು ಬಂದು ಬಸ್ಸು ಹತ್ತುವ ವೇಳೆಗೆ ಉಸಿರಾಡಲು ಕಷ್ಟವಾಗುವಷ್ಟು ಸುಸ್ತಾಗಿತ್ತು. ಬಾಯಾರಿಕೆ ಮತ್ತು ಸುಸ್ತುನಿಂದಾಗಿ ನಿಲ್ಲಲು ಸಹ ಶಕ್ತಿ ಇರಲಿಲ್ಲ. ಆಗಾಗ ನನ್ನ ಹತ್ತಿರ ನಿಂತ ಗೆಳತಿ ಬಳಿ ಬಾಯಾರಿಕೆ ವೇದನೆಯನ್ನು ಪ್ರಸ್ತಾಪಿಸುತ್ತಿದ್ದೆ.ಬೆಳಗ್ಗೆ ಬಸ್ ನಲ್ಲಿ ಸೀಟು ಸಿಗುವುದೆಂದರೆ ಮರುಭೂಮಿಯಲ್ಲಿ ನೀರು ಸಿಕ್ಕಂತೆ ಸರಿ.ಆದರೆ ನನಗೆ ನೀರು ಸಿಕ್ಕಿತು ಮರುಭೂಮಿಯಲ್ಲಿ ಅಲ್ಲ ಬದಲಾಗಿ ಬಸ್ ನಲ್ಲಿ. ನನ್ನ ಅಸ್ವಸ್ಥ ಸ್ಥಿತಿಯನ್ನು ಬಹಳ ಹೊತ್ತಿನಿಂದ ಅಪರಿಚಿತರೊಬ್ಬರು ಗಮನಿಸುತ್ತಿದ್ದರು. ಸುಮಾರು ನಲುವತ್ತು ವರುಷ ಇರಬಹುದು,ತಲೆಕೂದಲು ಮತ್ತು ಅವರ ಗಡ್ಡಗಳಲ್ಲಿ ಅಲ್ಲಲ್ಲಿ ಬಿಳಿ ಕೂದಲುಗಳು ನಲಿದಾಡುತ್ತಿತ್ತು.ಮತ್ತೊಮ್ಮೆ ನಾನು ನನ್ನ ಗೆಳತಿ ಬಳಿ ಬಾಯಾರಿಕೆ ಆಗುತ್ತಿದೆ ಎಂದು ಹೇಳುತ್ತಿದ್ದಂತೆ ಅ ವ್ಯಕ್ತಿ ತಮ್ಮಲ್ಲಿದಂತಹ ನೀರಿನ ಬಾಟಲಿಯನ್ನು ನನಗೆ ನೀಡಿಯೇ ಬಿಟ್ಟರು.ಅವರಿಗೊಂದು ಧನ್ಯತೆಯ ನಗು ಬೀರಿ ತಕ್ಷಣವೇ ಒಂದೇ ಗೂಟುಕಿಗೆ ಕುಡಿದೆ ಬಿಟ್ಟೆ.ನಂತರ ಪ್ರಯಾಣದ ದಾರಿಯುದ್ದಕ್ಕೂ ಅವರನ್ನೇ ಗಮನಿಸುತ್ತಿದ್ದೆ. ಸೀಟಿನಲ್ಲಿ ಕುಳಿತವರಲ್ಲಿ ಬ್ಯಾಗ್ ನೀಡಿ ಎಂದು ಆಗಾಗ ಕಂಡಕ್ಟರ್ ಆದೇಶ ನೀಡುತ್ತಿದ್ದ ಆದರೆ ಬ್ಯಾಗ್ ಕೊಡಲು ಮುಂದಾದಾಗ ತೆಗೆದುಕೊಳ್ಳುವವರ ಮುಖಭಾವನೆ ವಿಚಿತ್ರವಾಗಿ ಬದಲಾಗುತ್ತಿತ್ತು ಇನ್ನೂ ಕೆಲವರಂತು ನೇರವಾಗಿ ಬೇರೆಯವರಲ್ಲಿ ನೀಡಿ ಎಂದು ಹೇಳಿಯೇ ಬಿಡುತ್ತಿದ್ದರು.ಆದರೆ ಅ ವ್ಯಕ್ತಿ ಮಾತ್ರ ಸದಾ ಹಸನ್ಮುಖಿಯಾಗಿ ತಾನೇ ಕೇಳಿ ಬ್ಯಾಗ್ ತೆಗೆದುಕೊಳ್ಳುತ್ತಿದ್ದರು. ನನಗಂತೂ ಸ್ವಾರ್ಥಿಗಳ ನಡುವೆ ನಿಸ್ವಾರ್ಥಿಯೊಬ್ಬರು ಮಾನವೀಯತೆ ಮೆರೆದರು ಅನಿಸಿತು. ಸಣ್ಣಸಹಾಯ ಎಂದೂ ಅನಿಸಿದರೂ ನನ್ನ ಮನದಾಳದಲ್ಲಿ ಮರೆಯಾಗದೇ ಇಂದು ಉಳಿದಿದೆ.
ಗ್ರೀಷ್ಮಾ ಭಂಡಾರಿ
ತೃತೀಯ ಪತ್ರಿಕೋದ್ಯಮ
ವಿ.ವಿ ಕಾಲೇಜು ಮಂಗಳೂರು