November 22, 2024
1

ಗರ್ಭಧಾರಣೆಯ ಮೊದಲ ತ್ರೈಮಾಸಿಕದಲ್ಲಿ ಪೋಷಕಾಂಶ ಪೂರೈಸಲು ಈ ಆಹಾರಗಳು ಬೆಸ್ಟ್‌

ಗರ್ಭಧಾರಣೆಯ ಮೊದಲ ಮೂರು ತಿಂಗಳು ಅತೀ ಸೂಕ್ಷ್ಮ ದಿನಗಳು. ಹೀಗಾಗಿ ಆಹಾರದ ವಿಚಾರದಲ್ಲಿಯೂ ಅಷ್ಟೇ ಜಾಗೃತಿವಹಿಸಬೇಕಾಗುತ್ತದೆ. ಯಾವೆಲ್ಲಾ ಆಹಾರಗಳು ಮೊದಲ ತ್ರೈಮಾಸಿಕದಲ್ಲಿ ಪೋಷಕಾಂಶ ಪೂರೈಸಲು ಸಹಾಯ ಮಾಡುತ್ತವೆ ಎನ್ನುವ ಮಾಹಿತಿ ಇಲ್ಲಿದೆ.

ಗರ್ಭಾವಸ್ಥೆಯ ಮೊದಲ ತ್ರೈಮಾಸಿಕದಲ್ಲಿ ಬೆಳಗಿನ ಅನಾರೋಗ್ಯ, ಆಹಾರ ನೋಡಿದರೆ ಅಸಹ್ಯವಾಗುವುದು ಮತ್ತು ಆಯಾಸವಾದರೂ ಕೂಡ ಒಂದಷ್ಟು ಆಹಾರಗಳನ್ನು ಸೇವನೆ ಮಾಡಲೇಬೇಕಾಗುತ್ತದೆ.

ಏನೂ ಸೇರುವುದಿಲ್ಲ ಎಂದು ಹಾಗೆಯೇ ಇರುವುದು ಒಳ್ಳೆಯದಲ್ಲ. ಇದು ಇನ್ನಷ್ಟು ಆಯಾಸಕ್ಕೆ ಕಾರಣವಾಗುತ್ತದೆ. ಅಲ್ಲದೆ ಬೆಳೆಯುತ್ತಿರುವ ಭ್ರೂಣದ ಮೇಲೆ ಕೂಡ ಪರಿಣಾಮ ಬೀರುತ್ತದೆ. ಹೀಗಾಗಿ ತಿನ್ನಬೇಕು ಎನಿಸಿದಾಗ ಹೆಚ್ಚು ಪೌಷ್ಟಿಕತೆ ಇರುವ ಆಹಾರವನ್ನು ಸ್ವಲ್ಪ ಸ್ಚಲ್ಪವೇ ಸೇವನೆ ಮಾಡಿದರೆ ದೇಹವನ್ನು ಆರೋಗ್ಯವಾಗಿರಿಸಿಕೊಳ್ಳಬಹುದಾಗಿದೆ.

ಹಾಗಾದರೆ ಗರ್ಭಧಾರಣೆಯ ಮೊದಲನೇ ತ್ರೈಮಾಸಿಕದಲ್ಲಿ ಹೆಚ್ಚು ಪೋಷಕಾಂಶ ಪಡೆಯಲು ಯಾವ ಆಹಾರಗಳ ಮೇಲೆ ಗಮನಹರಿಸಬೇಕು ಎನ್ನುವ ಬಗ್ಗೆ ಆಯುರ್ವೇದ ವೈದ್ಯೆ ಲವ್ಲೀನಾ ಅವರು ಮಾಹಿತಿ ಹಂಚಿಕೊಂಡಿದ್ದಾರೆ ಇಲ್ಲಿದೆ ನೋಡಿ.

ಬಾಳೆಹಣ್ಣು

ಬಾಳೆಹಣ್ಣು ಪೊಟ್ಯಾಸಿಯಮ್‌ನ ಉತ್ತಮ ಮೂಲವಾಗಿದೆ, ಇದು ವಾಕರಿಕೆ ನಿವಾರಿಸಲು ಸಹಾಯ ಮಾಡುತ್ತದೆ. ಅಲ್ಲದೆ ವಿಟಮಿನ್ ಬಿ 6 ಅನ್ನು ಸಹ ಒಳಗೊಂಡಿರುತ್ತವೆ, ಅಧ್ಯಯನಗಳು ಕೂಡ ವಿಟಮಿನ್ ಬಿ 6 ಆರಂಭಿಕ ಗರ್ಭಾವಸ್ಥೆಯಲ್ಲಿ ವಾಕರಿಕೆ ಮತ್ತು ವಾಂತಿಯನ್ನು ನಿವಾರಿಸಲು ಸಹಾಯ ಮಾಡುತ್ತದೆ ಎಂದು ಸಾಬೀತುಪಡಿಸಿವೆ.

ಬಾಳೆಹಣ್ಣಿನಲ್ಲಿ ಕಾರ್ಬೋಹೈಡ್ರೇಟ್‌ ಅಂಶ ಸಮೃದ್ಧವಾಗಿವೆ ಮತ್ತು ಗರ್ಭಧಾರಣೆಯ ಆರಂಭದಲ್ಲಿ ನಿಮಗೆ ಹೆಚ್ಚು ಅಗತ್ಯವಿರುವ ಶಕ್ತಿಯನ್ನು ನೀಡುತ್ತದೆ. ಹೀಗಾಗಿ ಬಾಳೆಹಣ್ಣಿನ ಸೇವನೆ ಇದ್ದರೆ ಒಳ್ಳೆಯದು.

​ದಾಳಿಂಬೆ ಹಣ್ಣು

ದಾಳಿಂಬೆಯಲ್ಲಿ ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿವೆ. ಅವು ಫೋಲಿಕ್ ಆಮ್ಲವನ್ನು ಹೊಂದಿರುತ್ತವೆ, ಇದು ನರ ಕೊಳವೆಯ ದೋಷಗಳನ್ನು ತಪ್ಪಿಸಲು ಭ್ರೂಣದ ಬೆನ್ನುಹುರಿಗೆ ಉಂಟಾಗುವ ಹಾನಿಯನ್ನು ತಡೆಯುತ್ತದೆ.

ಹೀಗಾಗಿ ಗರ್ಭಧಾರಣೆಯ ಆರಂಬದಲ್ಲಿ ದಾಳಿಂಬೆ ಹಣ್ಣಿನ ಜ್ಯೂಸ್‌ ಅಥವಾ ದಿನನಿತ್ಯ ಒಂದು ಹಣ್ಣನ್ನು ಸೇವನೆ ಮಾಡುವುದು ಒಳ್ಳೆಯದು ಎನ್ನುತ್ತಾರೆ ವೈದ್ಯರು. ಅಲ್ಲದೆ ಆರಂಭದಿಂದಲೇ ನೀವು ದಾಳಿಂಬೆ ಹಣ್ಣನ್ನು ಸೇವನೆ ಮಾಡುತ್ತಾ ಬಂದರೆ ರಕ್ತಹೀನತೆಯ ಸಮಸ್ಯೆ ಕಾಡದಂತೆ ದೇಹವನ್ನು ಕಾಪಾಡಿಕೊಳ್ಳಬಹುದಾಗಿದೆ.

​ತುಪ್ಪದ ಸೇವನೆ

ಗರ್ಭಾಶಯದೊಳಗೆ ಮಗುವನ್ನು ಪೋಷಿಸುವ ಅತ್ಯಂತ ನೈಸರ್ಗಿಕ ವಿಧಾನಗಳಲ್ಲಿ ತುಪ್ಪದ ಸೇವನೆ ಕೂಡ ಒಂದಾಗಿದೆ. ಇದು ಒಮೆಗಾ -3 ಕೊಬ್ಬಿನಾಮ್ಲಗಳಲ್ಲಿ ಪ್ರಾಥಮಿಕವಾಗಿ ಲಿನೋಲಿಕ್ ಆಮ್ಲ ಮತ್ತು ಡೊಕೊಸಾಹೆಕ್ಸೆನೊಯಿಕ್ ಆಮ್ಲಗಳಲ್ಲಿ ಸಮೃದ್ಧವಾಗಿದೆ, ಇದು ಭ್ರೂಣದ ಮೆದುಳು ಮತ್ತು ಕಣ್ಣಿನ ಬೆಳವಣಿಗೆಗೆ ಅವಶ್ಯಕವಾಗಿದೆ.

ಹೀಗಾಗಿ ದಿನನಿತ್ಯ ಊಟದಲ್ಲಿ ತುಪ್ಪವನ್ನು ಬಳಕೆ ಮಾಡುವುದು ಬಹಳ ಒಳ್ಳೆಯದು. ಅಲ್ಲದೆ ತುಪ್ಪ ಜೀರ್ಣಕ್ರಿಯೆಯನ್ನೂ ಉತ್ತಮವಾಗಿಸುತ್ತದೆ.

ಹೆಸರು ಕಾಳು

ಹೆಸರು ಕಾಳುಗಳು ಪ್ರೋಟೀನ್‌ನ ಅದ್ಭುತ ಮೂಲವಾಗಿದ್ದು ಅದು ಸುಲಭವಾಗಿ ಜೀರ್ಣವಾಗುತ್ತದೆ. ಹೆಸರು ಕಾಳಿನ ಇಡ್ಲಿ, ಹೆಸರು ಕಾಳನ್ನು ಬೇಯಿಸಿದ ಕಿಚಡಿ, ದಾಲ್, ಸೂಪ್‌ನಂತಹ ಆಹಾರಗಳನ್ನು ಸೇವನೆ ಮಾಡುವುದಿರಿಂದ ದೇಹಕ್ಕೆ ಅಗತ್ಯವಿರುವ ಪೋಷಕಾಂಶ ಸಿಗುತ್ತದೆ.

ಮೊಳಕೆ ಭರಿಸಿದ ಹೆಸರು ಕಾಳು ಅಥವಾ ಹೆಸರು ಕಾಳಿನ ಜ್ಯೂಸ್‌ ಕೂಡ ಮಾಡಿ ಸೇವಿಸಬಹುದು. ಹೆಸರು ಕಾಳಿನ ಸೇವನೆಯಿಂದ ಪಿತ್ತವನ್ನು ಕಡಿಮೆ ಮಾಡಬಹುದಾಗಿದೆ.

ಬಾದಾಮಿ

ಪ್ರೋಟೀನ್, ಆರೋಗ್ಯಕರ ಕೊಬ್ಬುಗಳು, ಫೋಲೇಟ್, ವಿಟಮಿನ್ ಇ, ಮೆಗ್ನೀಸಿಯಮ್ ಮತ್ತು ಒಮೆಗಾ- ಮತ್ತು ಒಮೆಗಾ -6 ತುಂಬಿದ ಬಾದಾಮಿ ಅದ್ಭುತ ಶಕ್ತಿ ಆಹಾರವಾಗಿದೆ. ಗರ್ಭಿಣಿಯರಿಗೆ ಉತ್ತಮ ಸ್ನ್ಯಾಕ್ಸ್‌ ಆಗಿಯೂ ಕೂಡ ಬಾದಾಮಿ ಸಹಾಯ ಮಾಡುತ್ತದೆ.

ಹೀಗಾಗಿ ಪ್ರತಿನಿತ್ಯ 5 ರಿಂದ 6 ಬಾದಾಮಿಯನ್ನು ಹಾಲಿನಲ್ಲಿ ನೆನೆಸಿ ಅಥವಾ ನೀರಿನಲ್ಲಿ ನೆನಸಿಟ್ಟು ಸೇವನೆ ಮಾಡುವುದು ಅಥವಾ ಹಾಲಿನ ಜೊತೆಗೆ ಸೇವನೆ ಮಾಡುವುದರಿಂದ ದೇಹಕ್ಕೆ ಸಾಕಷ್ಟು ಶಕ್ತಿಯನ್ನು ನೀಡುತ್ತದೆ.

 

ಸಂಗ್ರಹ : ಎಸ್.ಬಿ ನೆಲ್ಯಾಡಿ

ಮೂಲ: ವಿ ಕೆ

Leave a Reply

Your email address will not be published. Required fields are marked *