ಈ ಆಹಾರ ಪದ್ಧತಿ ಮಾನಸಿಕ ಆರೋಗ್ಯ ವೃದ್ಧಿಸಲು ತುಂಬಾನೇ ಸಹಾಯ ಮಾಡುತ್ತೆ
ಬಿಡುವಿಲ್ಲದ ಕೆಲಸ ಅಸಮರ್ಪಕ ಜೀವನ ಶೈಲಿ ಮತ್ತು ಒತ್ತಡದ ಕೆಲಸಗಳ ವೇಳಾಪಟ್ಟಿಗಳಿಂದ ಇಂದಿನ ಪೀಳಿಗೆಯು ಒತ್ತಡ,ಖಿನ್ನತೆ,ವ್ಯಾಕುಲತೆಗಳಿಗೆ ತುತ್ತಾಗುತ್ತಿದ್ದಾರೆ. ಇವು ಮಾನಸಿಕ ಆರೋಗ್ಯವನ್ನಷ್ಟೇ ಅಲ್ಲದೆ ದೈಹಿಕ ಆರೋಗ್ಯವನ್ನೂ ಹದಗೆಡಿಸುತ್ತದೆ.
ಹೀಗಾಗಿ, ಮಾನಸಿಕ ಸಮಸ್ಯೆಗಳಿಗೆ ಸಿಲುಕಿ ಕೊಳ್ಳದಂತೆ ನಮ್ಮನ್ನು ನಾವು ಕಾಪಾಡಿಕೊಳ್ಳುವುದು ಅತಿ ಮುಖ್ಯವಾಗಿದೆ. ಈ ದೃಷ್ಟಿಯಿಂದ, ಪೌಷ್ಟಿಕ ತಜ್ಞ ಲೊವ್ನೀತ್ ಬಾತ್ರಾ ಅವರು ನಿಮ್ಮ ಮಾನಸಿಕ ಆರೋಗ್ಯವನ್ನು ಹೆಚ್ಚಿಸಲು, ವ್ಯಾಕುಲತೆಯ ಲಕ್ಷಣಗಳನ್ನು ನಿವಾರಿಸಲು ಹಾಗೂ ಉತ್ತಮ ಮೆದುಳಿನ ಆರೋಗ್ಯವನ್ನು ಉತ್ತೇಜಿಸಲು ಕೆಲವು ಪೋಷಕಾಂಶಗಳನ್ನು ತಪ್ಪದೇ ಸೇವಿಸಿ, ಇವು ಬಹಳ ಪರಿಣಾಮಕಾರಿ ಎನ್ನುತ್ತಾರೆ.
ಇಂದಿನ ಗಡಿಬಿಡಿಯ ಜೀವನದಲ್ಲಿ ದಾವಂತ,ಒತ್ತಡ ಗಳಿಂದ ದೂರ ಉಳಿಯುವುದು ಅಷ್ಟು ಸುಲಭದ ಮಾತೇನಲ್ಲ. ಆದರೆ, ನಿಮ್ಮ ಡಯಟ್ ಮೂಲಕವೂ ಮಾನಸಿಕ ಆರೋಗ್ಯವನ್ನು ಹೆಚ್ಚಿಸಿಕೊಳ್ಳಬಹುದು
ಸೂಕ್ತ ಡಯಟ್ ಅನುಸರಿಸುವುದರಿಂದ ಮೆದುಳಿನ ಆರೋಗ್ಯವನ್ನು ಹೆಚ್ಚಿಸಿಕೊಂಡು ಮಾನಸಿಕ ರೋಗಗಳಿಂದ ಮುಕ್ತಿ ಹೊಂದಬಹುದೆಂದು ಪೌಷ್ಟಿಕ ತಜ್ಞ ಲೊವ್ನೀತ್ ಬಾತ್ರಾ ಹೇಳುತ್ತಾರೆ.
ಮೆಗ್ನೀಸಿಯಂ
ಇದು ನರಮಂಡಲವನ್ನು ಪೋಷಿಸಿ ಶಾಂತಗೊಳಿಸುವಂತಹ ಖನಿಜ. ಆತಂಕ, ಭಯ,ಹೆದರಿಕೆ ತಳಮಳ ಮತ್ತು ಕಿರಿಕಿರಿಯನ್ನು ನಿವಾರಿಸಲು ಸಹಕರಿಸುತ್ತದೆ. ಈ ಪೋಷಕಾಂಶಗಳು ನಿಮಗೆ ಸೂರ್ಯಕಾಂತಿ ಬೀಜಗಳು, ವಾಲ್ನಟ್ಸ್, ಬಾಳೆಹಣ್ಣು, ಆಪ್ರಿಕಾಟ್ ಗಳು, ದಂಟಿನ ಸೊಪ್ಪು ಇವುಗಳಲ್ಲಿ ಹೇರಳವಾಗಿ ದೊರೆಯುತ್ತದೆ.
ಒಮೇಗ 3 ಫ್ಯಾಟಿ ಆಸಿಡ್
ಮೂರು ರೀತಿಯ ಫ್ಯಾಟಿ ಆಸಿಡ್ಗಳಾದ ಎಎಲ್ಎ, ಇಪಿಎ ಮತ್ತು ಡಿ ಎಚ್ ಎ ಗಳಲ್ಲಿ ಈ ಪಿ ಎ ಒತ್ತಡವನ್ನು ನಿವಾರಿಸುವಲ್ಲಿ ಸಾಕಷ್ಟು ನೆರವಿಗೆ ಬರುತ್ತದೆ. ಚಿಯಾ ಬೀಜಗಳು, ಅಗಸೆ ಬೀಜಗಳು ಮತ್ತು ತುಪ್ಪವನ್ನು ನಿಯಮಿತವಾಗಿ ಸೇವಿಸಿ, ಈ ಉತ್ತಮ ಫ್ಯಾಟಿ ಆಸಿಡ್ ಗಳನ್ನು ದೇಹಕ್ಕೆ ಸೇರಿಸಿಕೊಳ್ಳಬಹುದು.
ಬಿ ವಿಟಮಿನ್ ಗಳು
ಬಿ ವಿಟಮಿನ್ ಗಳು ಎಂಟು ವಿಭಿನ್ನ ಪೋಷಕಾಂಶಗಳ ಗುಂಪಾಗಿದ್ದು, ಇದರಲ್ಲಿ ವಿಶೇಷವಾಗಿ ಬಿ6, ಬಿ9 (ಫೋಲಿಕ್ ಆಸಿಡ್) ಮತ್ತು ಬಿ12 ನರಮಂಡಲದ ವ್ಯವಸ್ಥೆಯನ್ನು ಉತ್ತಮಗೊಳಿಸಿ ಒತ್ತಡವನ್ನು ನಿಭಾಯಿಸುವಲ್ಲಿ ಸಹಕರಿಸುತ್ತದೆ. ಇವುಗಳನ್ನು ಕಡಲೆಕಾಯಿ, ದ್ವಿದಳ ಧಾನ್ಯಗಳು ಮತ್ತು ಹಸಿರು ಎಲೆಗಳ ತರಕಾರಿಗಳನ್ನು ಸೇವಿಸುವ ಮೂಲಕ ಪಡೆದುಕೊಳ್ಳಬಹುದು.
ಸತು/ಝಿಂಕ್
ನಮ್ಮ ದೇಹದಲ್ಲಿ ಝಿಂಕ್ ಅಂಶವು ಕಡಿಮೆಯಾದಲ್ಲಿ, ಅದು ಜಿಎಬಿಎ ಮತ್ತು ಗ್ಲುಟಮೇಟ್ ಮಟ್ಟವನ್ನು ಕಡಿಮೆ ಮಾಡಿ ಒತ್ತಡವನ್ನು ಹೆಚ್ಚಿಸುತ್ತದೆ. ಆದುದರಿಂದ ನಾವು ಝಿಂಕ್ ಸಮೃದ್ಧವಾಗಿರುವ ಗಾರ್ಡನ್ ಕ್ರೆಸ್ ಸೀಡ್ಸ್/ ಅಲಿವ್/ ಹಲಿಮ್ ಬೀಜಗಳು ಮತ್ತು ಬೇಳೆಗಳನ್ನು ಸೇವಿಸುವುದರಿಂದ ಈ ದುಷ್ಪರಿಣಾಮವನ್ನು ತಡೆಯಬಹುದು.
ವಿಟಮಿನ್ ಡಿ
ಪೌಷ್ಟಿಕ ತಜ್ಞರ ಪ್ರಕಾರ ಬಹಳಷ್ಟು ಜನರು ವಿಟಮಿನ್ ಡಿ ಕೊರತೆಯನ್ನು ಹೊಂದಿರುತ್ತಾರೆ ಅಥವಾ ಪರ್ಯಾಪ್ತವಾಗುವಷ್ಟು ಇರುವುದಿಲ್ಲ. ಇದು ಮೆದುಳು ಮತ್ತು ಮೂಡ್ ನಿಯಂತ್ರಿಸುವಲ್ಲಿ ಸಾಕಷ್ಟು ಸಹಾಯ ಮಾಡುತ್ತದೆ. ಯಾರು ಮಾನಸಿಕ ಅನಾರೋಗ್ಯಗಳಿಂದ ಬಳಲುತ್ತಿರುತ್ತಾರೋ ಅವರಲ್ಲಿ ವಿಟಮಿನ್ ಡಿ ಕೊರತೆ ಕಂಡು ಬಂದಿದೆ ಎಂದು ಅನೇಕ ಅಧ್ಯಯನಗಳಿಂದ ತಿಳಿದು ಬಂದಿದೆ.ಮೊಟ್ಟೆಯ ಹಳದಿ ಲೋಳೆ, ಮಶ್ರೂಮ್, ಡೈರಿ ಉತ್ಪನ್ನಗಳು ಅಥವಾ ಪೂರಕಾಂಶಗಳನ್ನು ಸೇವಿಸುವುದರಿಂದ ವಿಟಮಿನ್ ಡಿ ಪಡೆದುಕೊಂಡು ನಿಮ್ಮ ಮಾನಸಿಕ ಆರೋಗ್ಯವನ್ನು ವೃದ್ಧಿಸಿಕೊಳ್ಳಬಹುದು.
ಈ ಪೋಷಕಾಂಶಗಳಿಂದ ನಿಮ್ಮ ಮಾನಸಿಕ ಆರೋಗ್ಯವನ್ನು ಪೋಷಿಸಿಕೊಳ್ಳಿ.
ಸಂಗ್ರಹ : ಎಸ್.ಬಿ ನೆಲ್ಯಾಡಿ
ಮೂಲ:ಬಿ ಎಸ್