September 20, 2024

        ಮಲಬಾರು ಪಶ್ಚಿಮಗಟ್ಟದ ತಪ್ಪಲಲ್ಲಿ ವಾಸಿಸುತ್ತಿದ್ದ ಪ್ರಕೃತಿ ಆರಾಧಕರಾದ ದ್ರಾವಿಡ ಶೂದ್ರ ಜನಾಂಗವೊಂದು ಅಲ್ಲಿಯ ಅಸ್ಪೃಶ್ಯತೆ ಮತ್ತು ಕೀಳರಿಮೆ ಪಿಡುಗುಗಳಿಂದ ಸೋತುಸುಣ್ಣವಾಗಿ ಅಲ್ಲಿ ಬದುಕಲು ಕಷ್ಟವಾಗಿ ಗುಂಪು ಗುಂಪಾಗಿ ಮಲಬಾರ್ ಹಟ್ಟ ಹತ್ತಿ ಪಶ್ಚಿಮ ಗಟ್ಟದ ಮೇಲೆ ಸಂಚರಿಸುತ್ತಾ ಕೊಡಗು, ಹಾಸನ, ಚಿಕ್ಕಮಗಳೂರು ಪಶ್ಚಿಮಘಟ್ಟದ ಸಾಲುಗಳನ್ನು ದಾಟುತ್ತಾ ಕುದುರೆಮುಖದಿಂದ ಕಾರ್ಲದ ಕಡಾರಿ(ಕಾಡಬರಿ) ಪ್ರದೇಶದಲ್ಲಿ ಪ್ರಕೃತಿ ನಿರ್ಮಿತ ತುಳುಕಾಡು ಪ್ರವೇಶಿಸುತ್ತಾರೆ. ಗಟ್ಟದ ಕೋರೆಯಲ್ಲಿ ವಾಸಿಸುತ್ತಿದ್ದ ಆದಿದ್ರಾವಿಡ ಕೊರಗ ಜನಾಂಗ ಮತ್ತು ‘ದಿಕ್ ದೇಸ’ ಇಲ್ಲದ ದ್ರಾವಿಡ ದಲಿತ ಸಮೂಹಗಳು ತುಳುಕಾಡಿಗೆ ಇಳಿದು ಕಾಡು ಉತ್ಪತ್ತಿಗಳನ್ನು ಕೊಂಡೊಯ್ಯುತ್ತಿದ್ದರು. ಆದರೆ ಇಲ್ಲಿ ಶಾಶ್ವತವಾಗಿ ನೆಲೆವೂರಲು ಅವರಲ್ಲಿ ದೈರ್ಯ ಇರಲಿಲ್, ಏಕೆಂದರೆ ಈ ತುಲು (ಮೃದು) ನೆಲದ ಕಾಡಲ್ಲಿ ಅಪಾರ ಸಂಖ್ಯೆಯಲ್ಲಿ ನಾಗಸರ್ಪ ಮರಿ ಸ್ವೇಚೆಯಾಗಿ ಬದುಕಿ ಓಡಾಡುತ್ತಿದ್ದವು. ಎಲ್ಲಾತರದ ಮೃಗ, ಪಕ್ಷಿಗಳು ನಿರ್ಭಯವಾಗಿ ವಾಸಿಸುತ್ತಿದ್ದವು. ದಟ್ಟಕಾಡು , ಗುಡ್ಡಗಳು , ಹಳ್ಳಕೊಳ್ಳ , ಸರೋವರ ಕಣಿವೆಗಳಿಂದ ಕೂಡಿದ್ದವು. ಭಾರಿ ಪ್ರಮಾಣ ಮಳೆ ಬರುತ್ತಿತ್ತು‌.

        ಮನುಷ್ಯರೇ ಇಲ್ಲದ ಪ್ರಕೃತಿ ನಿರ್ಮಿತ ತುಳುಕಾಡಿನ (ಗಟ್ಟದತಲಪ್ರದೇಶ) ದಟ್ಟ ಅರಣ್ಯದಲ್ಲಿ ವಾಸಿಸುವುದು ಸುಲಭವೇ? ಆದರೂ ಕೀಳರಿಮೆ ಅಸ್ಪೃಶ್ಯತೆ, ದಬ್ಬಾಳಿಕೆಗಳಿಂದ ಸತ್ತುಬದುಕುವುದಕ್ಕಿಂತ ಈ ಕಾಡು ವಾಸವೇ ವಾಸಿ ಎಂದು ತುಳುಕಾಡಲ್ಲಿ ಶಾಶ್ವತವಾಗಿ ನೆಲೆ ಊರಲು ಈ ದ್ರಾವಿಡ ಶೂದ್ರ ಜನಾಂಗ ನಿರ್ಧರಿಸುತ್ತದೆ. ಈ ಶೂದ್ರಜನಾಂಗವನ್ನು ಕೊರಗರು  ‘ಬೈದ್ದೆರ್’ಎಂದರು. ಅಂದರೆ ತುಳುಕಾಡಿಗೆ ‘ಬಂದಿದ್ದಾರೆ’( ಬೈದೆರ್) ಎಂದು ಹೇಳಿದರು. ಪ್ರಪ್ರಥಮವಾಗಿ ತುಳುಕಾಡಿಗೆ ಬಂದು ‘ಕುಡುಅರಿ ’ಬಿತ್ತಿ ಸೃಷ್ಟಿಸಿದವರು ಇದೇ ‘ಬೈದೆರ್’ ಆಗಿರುವರು. ತುಳುಕಾಡನ್ನು ತುಳುನಾಡಾಗಿ ಸೃಷ್ಟಿಮಾಡಿದವರು ಇವರೆ, ಪ್ರಕೃತಿ ಆರಾಧಕರಾದ ಈ ಶೂದ್ರ ‘ಬೈದೆರ್’ ಪ್ರಕೃತಿ ಆರಾಧನೆಯಡಿ ನಾಗ ಮತ್ತು ಬೂತೊಲು ( ಭೂಮಿತಲದಲ್ಲಿರುವವರು)ಗಳನ್ನು ಆರಾಧಿಸುತ್ತಾ ‘ಪುಜಾರಿ’ ಎಂದು ಕರೆಸಿಕೊಂಡರು . ಅಂದರೆ ದೈವ ( ನಾಗ ಮತ್ತು ಬೂತೊಲು) ಗಳಿಗೆ ಪೂಜೆ ಮಾಡುವವರು. ಕಾಡಲ್ಲಿ ವಾಸವಾಗಲು ನಿರ್ಧರಿಸಿದ ದಿನವೇ ಕಾಡ್ವಾಸ (ಕೆಡ್ವಾಸ, ಕೆಡ್ಡಸ,ಕೆಡ್ಡೊಸ) ಎಂದು ಹೇಳಿದವರು ಇವರೇ. ಇವರು ಬಿಲ್ಲುಗಾರಿಕೆ, ವೈದ್ಯ ವೃತ್ತಿಯನ್ನು ಕೊರಗರಿಂದ ಕಲಿತಿದ್ದಾರೆ.

        ಕೆಡ್ವಾಸದಂದು ತುಳುನಾಡಿನ ಉದಯದ ಉದ್ಘಾಟನೆ ನೆರವೇರುವುದು. ಅಂದರೆ ಭೂಮಿ ಪೂಜೆ ನಡೆಯುವುದು. ಗುಂಪು ಗುಂಪಾಗಿ ಬಂದ ದ್ರಾವಿಡ ಶೂದ್ರ ಜನರು ಎಲ್ಲರೂ ಒಟ್ಟಾಗಿ ಭೂ ತಾಯಿಗೆ ವಂದಿಸುತ್ತಾ “ಭೂಮಿ ಅಪ್ಪೆ ನೀನು ಇಂದು ಪುಷ್ಪವತಿ ಆಗಿರುವಿ. ನಿನ್ನ ತುಳು ಮಣ್ಣಲ್ಲಿ ಹರಿಯಲಿ ಹೊಳೆ , ಸೃಷ್ಟಿ ಆಗಲಿ ಹೊಲಗದ್ದೆಗಳು, ಬೆಳೆಯಲಿ ಬೆಳೆ , ಸಮೃದ್ಧಿ ಆಗಲಿ ಕೃಷಿ, ಮುನಿಯದೆ  ಬದುಕಲುಬಿಡು, ಕುಡರಿದಕ್ಕುದು ಕುಡುಅರಿ ಸೃಷ್ಟಿಮಲ್ಪುವ. ಕುಡು ಅರಿ ದಕ್ಕಿನಲ್ಪ ತುಲುನಾಡ್ ಸೃಷ್ಟಿ ಆವಡ್, ಆದಿಶೇಷನು ನಿನ್ನನ್ನು ತನ್ನ ತಲೆಯಲ್ಲಿಟ್ಟು ಪ್ರಪಂಚವನ್ನೇ ರಕ್ಷಿಸುತ್ತಿರುವನು. ನಾವು ಇದನ್ನು ಬಲವಾಗಿ ನಂಬುತ್ತೇವೆ‌. ಪ್ರಕೃತಿ ಆರಾಧನೆಯೊಡನೆ ಅವನನ್ನು ಆರಾಧಿಸಿಕೊಂಡು ಬರಲು ಹೊಲಗದ್ದೆಗಳ ರಚನೆಯ ಸಮಯದಲ್ಲಿ ಪ್ರಥಮವಾಗಿ ಇಂತಿಷ್ಟೇ ದೂರದಲ್ಲೊಂದು ಇಂತಿಷ್ಟೇ ವಿಸ್ತೀರ್ಣದ ನಾಗಬನವನ್ನು ನಿರ್ಮಿಸುತ್ತೇವೆ. ಈ ಸ್ಥಳದಲ್ಲಿ ನಾಗಗಳ ವಂಶಾಭಿವೃದ್ಧಿ ಆಗಲಿ. ನಾಗಧಪನ (ಆದಿಯಲ್ಲಿ ಭಸ್ಮ ಮಾಡುವ ಪದ್ಧತಿ ಇರಲಿಲ್ಲ. ಮನುಷ್ಯನನ್ನು ಧಪನ ಮಾಡಿದಂತೆ ನಾಗ ಸರ್ಪಗಳನ್ನು ಧಪನ ಮಾಡಿ ಸಮಾಧಿ ಮಾಡುತ್ತಿದ್ದರು.) ಮತ್ತು ನಾಗ ಆರಾಧನಾ ಸ್ಥಳವನ್ನಾಗಿ ಕಾಪಾಡಿಕೊಂಡು ಬರುತ್ತೇವೆ. “ಇಲ್ಲಿಯ ಸರ್ಪಜೀವ ಜಂತುಗಳನ್ನು ಕಾಪಾಡಿದಂತೆ ನಮ್ಮನ್ನು ರಕ್ಷಿಸು.” ಎಂದು ಭೂ ತಾಯಿಯಲ್ಲಿ ವಿನಂತಿಸುವರು.

         ತುಳುವ ಭೂಮಿತಾಯಿ ಕೆಡ್ಡೊಸದ ದಿನ ಪುಷ್ಪವತಿ ಆದಳೆಂದು ಭಾವಿಸಿ ಅವಳಿಗೆ ಸ್ನಾನಮಾಡಲೆಂದು ನೊರೆಕಾಯಿ, ಸೀಗೆಕಾಯಿ ಭೂಮಿಗೆ ಅರ್ಪಿಸುವರು. ಸ್ನಾನಮಾಡಿ ಶೃಂಗಾರವಾಗಲು ಭೂಮಿಗೆ ಎಣ್ಣೆ ಸುರಿದು ಹರಸಿನ, ಕುಂಕುಮ , ಕಾಡುಹೂವುಗಳನ್ನು ಅರ್ಪಣೆಮಾಡುವರು. ಬೆಳಕಿಗೆ ಮಸಿ ತುಂಡು ಉರಿಸಿ ಕೆಂಡಮಾಡಿ ಅಗ್ನಿಪೂಜೆ ಮಾಡುವರು. ಕೆಂಡಕ್ಕೆ ಪರಿಮಳಯುಕ್ತ ಚೆಕ್ಕೆ ಸಿಂಪಡಿಸಿ ಹೊಗೆ ಬರಿಸಿ ಭೂಮಿಗೆ ಧೂಪ ಎತ್ತುವರು. ಅಂದಿನ ಉದ್ಘಾಟನಾದಿನವನ್ನೇ ಕೆಡ್ಡಸ, ಕೆಡ್ಡೊಸ, ಕೆಡ್ವಾಸ ಎಂಬ ಹೆಸರಿನಲ್ಲಿ ಆಚರಿಸುತ್ತಾ ಬಂದರು. ದೇವಾರಾಧನೆಯು ತುಳುನಾಡಿನಲ್ಲಿ ಆರಂಭ (ವೈಷ್ಣವರ ಆಗಮನ) ಆದಬಳಿಕ ಮಾನವನನ್ನು ಸುಡುವಂತೆ ಸರ್ಪಗಳನ್ನು ಸುಡುವ ಪದ್ದತಿ ಆರಂಭವಾಯಿತು. ಕೆಡ್ಡಸವನ್ನು ತುಳಸಿಕಟ್ಟೆಯ ಎದುರಲ್ಲಿ ಆಚರಿಸುವ ಕ್ರಮ ಶುರುವಾಯಿತು. ಪ್ರಕೃತಿ ಆರಾಧನೆಯ ರೂಪದಲ್ಲಿ ಭೂಮಿಗೆ ನಮಿಸಿ ತುಳುಕಾಡಲ್ಲಿ ವಾಸಮಾಡಲು ಬಿದಿರು, ತಾರಿಮರಗಳ ( ಆದಿಯಲ್ಲಿ ತೆಂಗು ಅಡಿಕೆ ಇದ್ದಿರಲಿಲ್ಲ.) ಸೋಗೆಗಳಿಂದ ಗುಡಿಸಲು ಕಟ್ಟುವರು. ಕಾಟ್ ಅಥವಾ ಕಾಡ್ವಾಸವೇ ಕೆಡ್ವಾಸವಾಯಿತು. ತುಳುನಾಡು ಉದಯದ ದಿನವಾಯಿತು.

         ಆರಂಭದಲ್ಲಿ ಇವರು ತಿನ್ನುತ್ತಿದ್ದ ಆಹಾರ ಎಂದರೆ ಅವರು ಹೊತ್ತು ತಂದ ಮರಗೆಣಸು ತುಳುಕಾಡಲ್ಲಿ ದಾರಾಳವಾಗಿ ಬೆಳೆಯುತ್ತಿದ್ದ ಇರೊಲು ಹಾಗೂ ಹಣ್ಣುಹಂಪಲುಗಳು ಮತ್ತು ಶೇಂದಿ. ಪ್ರಪಥಮವಾಗಿ ಇಲ್ಲಿ ಎಸೆದು ಬಿತ್ತಿ ಸೃಷ್ಟಿಸಿದ . ಧಾನ್ಯ ಎಂದರೆ ‘ಕುಡು’ . ಈ ಕಾರಣಕ್ಕೆ ಆಲಡೆ( ದೇವರಾಧನೆಗೆ ಕಟ್ಟಿದ ಪ್ರಥಮ ಆಲಯಗಳು) ಗಳಲ್ಲಿ ಕುಡು ಅರ್ಪಿಸುವ ಪದ್ದತಿ ಜೀವಂತವಾಗಿ ಉಳಿದಿದೆ. ಇದು ಪ್ರಥಮದ ಧಾನ್ಯ ಕುಡು ಇದಕ್ಕೆ ಕೊಡುವ ಗೌರವ. ಭತ್ತ ಬೆಳೆಯಲು ಹೊಲಗದ್ದೆಗಳು ಇರಲಿಲ್ಲ. ಸರಾಗವಾಗಿ ಮಳೆ ನೀರು ಹರಿದು ಹೋಗಲು ತೋಡು, ಹೊಳೆ ನದಿಗಳಿರಲಿಲ್ಲ ಮಳೆ ನೀರು ಮನ ಬಂದಂತೆ ತಗ್ಗು ಪ್ರದೇಶಗಳನ್ನು ಹುಡುಕಿ ಹಳ್ಳಕೊಳ್ಳ ಸರೋವರ  ನಿರ್ಮಿಸಿ ಸಮುದ್ರ ಸೇರುತ್ತಿತ್ತು. ನೀರು ನಿಲ್ಲದೆ ಇಳಿಜಾರುದಿಡ್ಡು, ದಿನ್ನೆ, ಅಡ್ಕ, ಪಲ್ಕೆ ಪ್ರದೇಶಗಳಲ್ಲಿ ಕುಡು ಬಿತ್ತಿ ಬೆಳೆತೆಗೆದರು. ಕುಡು ತಿಂದು ಬದುಕಿದರು. ಈ ಬೆಳೆಗೆ ನೀರು ಕಟ್ಟುವ ಅಗತ್ಯ ಇಲ್ಲ, ನೀರಿನ ತೇವಾಂಶ ಬೆಳೆಯುವ ಬೆಳೆ. 

          ಪ್ರಕೃತಿ ಆರಾಧಕರಾದ ಈ ಶೂದ್ರ ಜನಾಂಗದವರು ತುಳುನಾಡಿನ ಸಮಗ್ರ ಬೆಳವಣಿಗೆಗೆ ಯೋಜನೆಯನ್ನು ನಿರೂಪಿಸಿದರು. ಮೊದಲಾಗಿ ತಗ್ಗು ಕಣಿವೆ ಪ್ರದೇಶ ಮಧ್ಯದಲ್ಲಿ ನೀರು ಹರಿದು ಹೋಗಲು ಇಕ್ಕಡೆಗಳಲ್ಲಿ ಕಟ್ಟ ಪುಣಿ ನಿರ್ಮಿಸುತ್ತಾರೆ. ಇಕ್ಕಡೆಗಳಲ್ಲಿ ಬೈಲು ಗದ್ದೆಗಳ ನಿರ್ಮಾಣವಾಗುತ್ತದೆ. ಬೈಲುಗದ್ದೆಯಲ್ಲಿ ಬಿತ್ತಿ ಭತ್ತ ಸೃಷ್ಟಿಸುತ್ತಾರೆ. ಅದೆಷ್ಟೋ ವರ್ಷದ ನಂತರ ಬೊಟ್ಟು (ಹೊಲ) ಗಳನಿರ್ಮಾಣವಾಗುವುದು. ಹೊಲ ಗದ್ದೆಗಳ ಪುಣಿಗಳಲ್ಲಿ ತೆಂಗು ಅಡಿಕೆ ನೆಟ್ಟರು. ತುಲುಕಾಡಲ್ಲಿ ಕುಡು ಅರಿ ಎಸೆದು  ತುಳುನಾಡಿನ ಸೃಷ್ಟಿ ಆಯಿತು. ಬದುಕಲು, ಜೀವಿಸಲು, ಉಣಲು ತುಳು ಮಣ್ಣಲ್ಲಿ ಕುಡರಿ ಎಸೆದು ಕುಡರಿ ಸೃಷ್ಟಿಯಾಯಿತು. “ಕುಡರಿ ದಕ್ಕಿನಲ್ಪ ತುಲುನಾಡ್ ಸೃಷ್ಟಿ ಆವಡ್“ಎಂದರು. ನಂತರದ ಪೀಳಿಗೆಯವರು ತುಳುಕಾಡನ್ನು ತುಳುನಾಡು ಆಗಿ ಸೃಷ್ಟಿಸಿದ ಸಮಗ್ರ ಬೆಳವಣಿಗಗೆ ದುಡಿದ ಮಾನವರನ್ನು ಮುಂದಿನ ಕಾಲದಲ್ಲಿ ಅವರನ್ನು ಬೂತೊಲು ( ಭೂಮಿಯ ತಲದಲ್ಲಿ ಇದ್ದಾರೆ ಎಂಬ ನಂಬಿಕೆ) ಆಗಿ ಆರಾಧಿಸಿದರು. ಬೂತಾರಾಧನೆಯೂ ನಾಗರಾಧನೆಯಂತೆ ಪ್ರಕೃತಿ ಆರಾಧನೆ ಗುಡಿಯಲ್ಲಿ ಬರುತ್ತದೆ.

          ‘ಕುಡರಿ’ ಎಂದ ತಕ್ಷಣ ಎದುರು ಬರುವುದು ಪರಶುರಾಮನ ಕೊಡಲಿ ಎಸೆದು ತುಳುನಾಡು ಸೃಷ್ಟಿಯಾಯಿತೆಂದು ಕೆಲವರು ಭಾವಿಸಿದ್ದರು. ಕೆಲವು ಸಾಹಿತಿಗಳು, ಬರಹಗಾರರು, ವಿದ್ವಾಂಸರೆಲ್ಲರೂ ಇದನ್ನು ಮುರಿಯಲು ಪ್ರಯತ್ನಿಸಲಿಲ್ಲ. ಟಿ.ವಿ, ಪತ್ರಿಕೆ, ಭಾಷಣಕಾರರೂ ಸಿನಿಮಾ ನಿರ್ದೇಶಕರು, ನಿರ್ಮಾಪಕರು ಎಲ್ಲರೂ ಇದೇ ರಾಗವನ್ನು ಕೊಟ್ಟು“ಪರಶುರಾಮ ಕುಡರಿ  ಎಸೆದು ಸೃಷ್ಟಿಸಿದ ತುಳುನಾಡು”ಎಂದು ಮೆರಗು ಕೊಟ್ಟರು. ಕೊನೆಗೆ ಬೂತಕೋಲದ ಸಂಧಿ, ಬೀರ ಪಾಡ್ದನಗಳಲ್ಲಿ ಜೋಡಿಸುತ್ತಾ ಬಂದರು. ಸಿನಿಮಾ, ಯಕ್ಷಗಾನದಲ್ಲಿ ಪರಶುರಾಮನಿಗೆ ಪ್ರಾಮುಖ್ಯತೆ ಕೊಟ್ಟು ಹಾಡು ರಚಿಸಿದರು.

         ನಾಗದೇವರ ಎದುರಲ್ಲಿ ದೀರ್ಘವಾಗಿ ಚಿಂತಿಸಿದಾಗ ಅವರ ಪ್ರೇರಣೆಯಿಂದಲೇ ತುಳುನಾಡಿನ ರಹಸ್ಯ ಬೆಳಕಿಗೆ ಬರುವುದು. ರಹಸ್ಯ ಕತೆ ಬರೆಯಲು ಬೂತೊಲು ದೈರ್ಯ ತುಂಬಿಸುತ್ತವೆ. ದೇವರುಗಳು ಕೈಸನ್ನೆಯಿಂದಲೇ ದಯೆ ತೋರಿಸುತ್ತವೆ. ಇಲ್ಲಿ  ‘ಕುಡರಿ’ ಎಂದರೆ ಪರಶುರಾಮನ ಕೊಡಲಿಅಲ್ಲ. ಬದಲಾಗಿ‘ಕುಡು ’(ಹುರುಳಿ) ಮತ್ತು ‘ಅರಿ’ ಆಗಿರುತ್ತದೆ. ದ್ರಾವಿಡ ಶೂದ್ರರು ಪ್ರಕೃತಿ ನಿರ್ಮಿತ ತುಲುಕಾಡಿಗೆ ಬಂದು ಕುಡು ಅರಿ ಎಸೆದು ಕುಡರಿ ಸೃಷ್ಟಿಸಿದರು. ಇಲ್ಲಿ ‘ಸೃಷ್ಟಿ’ ಎಂದರೆ ಭೂಮಿ ಸೃಷ್ಟಿ ಆಗಿದೆ ಎಂದುಕೊಳ್ಳಬಾರದು. ಶೂದ್ರರು ಇಲ್ಲಿ ಬದುಕಲು ಬೇಕಾದ ಪರಿಸರವನ್ನು ನಿರ್ಮಾಣ ಮಾಡಿದರು. ಉನ್ನಲು – ತಿನ್ನಲು ಕುಡರಿಯನ್ನು ತುಳು ಮಣ್ಣಲ್ಲಿ ಎಸೆದು ಬದುಕು ಈ ಕುಡರಿಯಿಂದ ಸೃಷ್ಟಿಯಾಯಿತು. ತುಳುನಾಡು ಉದಯವಾಯಿತು.

        ಈ‘ಕುಡರಿ’ಯಲ್ಲಿ ಕುಡು ಬಿತ್ತಿ ಕುಡು ಬೆಳೆಸಬಹುದು. ಆದರೆ ಅರಿ ಬೆಳೆಸಲು ಸಾಧ್ಯವೇ ಎಂಬ ಸಂಶಯ ಬರಬಹುದು. ಇಲ್ಲಿ ತುಳುವರು ‘ಅರಿಬಾರ್’ ಎಂದು ಹೇಳುತ್ತಾರೆ ವಿನಹ ಬಾರಾರಿ ಎಂದುಹೇಳುವುದಿಲ್ಲ. ಇದು ಆದಿಯಿಂದಲೇ ‘ಅರಿಬಾರ್’ಎಂದೇ ಹೇಳುತ್ತಾರೆ. ‘ಬಾರ್ ಬಿತ್ತುನು’ಎಂದುಹೇಳುವುದಿಲ್ಲ. ‘ಬಿತ್ತುನು’ ಎನ್ನುತ್ತಾರೆ. ಅದೇರೀತಿ ‘ಅರಿ ತಾರಾಯಿ’ ಎನ್ನುವರು. ಭತ್ತಕ್ಕಿಂತ ಅಕ್ಕಿ ಪವಿತ್ರ ಆಗಿದೆ. ಈ ಕಾರಣಕ್ಕೆ ಅಕ್ಕಿ ಪ್ರಥಮ ಆಗಿದೆ. ‘ಕುಡರಿದಕ್ಕ್ದ್ಉಂಡಾತಿನ’ ತುಳುನಾಡು ನೆನಪಿಗೆ ಕೆಡ್ಡೊಸದ ದಿನ ಪವಿತ್ರ ಕುಡರಿಯನ್ನು ಹುರಿದು ತಿನ್ನುವ ಪದ್ದತಿ ಆರಂಭಿಸಿದರು. ‘ಕುಡರಿಪೊದುಪ್ಪುನ್’ ಎಂಬ ಶಬ್ದದಿಂದಲೇ ಕುಡರಿಯಿಂದ ತುಳುನಾಡು ಸೃಷ್ಟಿ ಆಗಿದೆ ಎಂದು ತಿಳಿಯಬಹುದು. ನಂತರದ ಕಾಲದಲ್ಲಿ ತುಳುನಾಡಿನಲ್ಲಿ ತೆಂಗು ಬೆಳೆಸಿದರು. ಕುಡು ಅರಿಯೊಡನೆ ಹೆಸ್ರು, ಉದ್ದು ಎಳ್ಳು ಬೆಳೆಸಿದರು. ಇದೆ ತುಲುನಾಡಿನ ಪಂಚಧಾನ್ಯಗಳು ಎಂದರು. ಕೆಡ್ಡಸದಂದು ಕುಡರಿಯೊಡನೆ ಹೆಸ್ರು, ಉದ್ದು, ಎಳ್ಳು ಧಾನ್ಯಗಳನ್ನು ಹುರಿದು ತಿಂದರು. ರುಚಿಗಾಗಿ ಕೊಬ್ಬರಿಯನ್ನು ಕುಡರಿಗೆ ಸೇರಿಸಿದರು.

        ಹಿಂದೆ ತುಳುನಾಡು ಪ್ರದೇಶವು ಸಮುದ್ರವಾಗಿತ್ತು‌. ಪರಶುರಾಮ ತನ್ನ ಕೊಡಲಿಯನ್ನು ಸಮುದ್ರಕ್ಕೆ ಎಸೆದು ಭೂಮಿ ಸೃಷ್ಟಿ ಮಾಡಿದ ಎಂಬ ಕಟ್ಟುಕತೆಯನ್ನು ನಂತರ ಬಂದ ವೈಷ್ಣವರು ತಲೆಯಲ್ಲಿ ಬೊಂಡು ಇಲ್ಲದ ಶೂದ್ರರಿಗೆ ತಿಳಿಸಿದರು. ವೈಷ್ಣವರು ದೇವರಿಗೆ ಸಮಾನರೆಂದು ಮುಗ್ಧ ಶೂದ್ರರು ಭಾವಿಸಿದರು. ತುಲುಭಾಷೆಯ ಜ್ಞಾನ ಇಲ್ಲದ ವೈಷ್ಣವರು ‘ಕುಡರಿ’ಎಂದರೆ ಕೊಡಲಿ ಎಂದು ಅರ್ಥೈಸಿದರು. ತುಲುನಾಡಲ್ಲಿ ದೈವ (ನಾಗ ಮತ್ತು ಬೂತೊಲು) ಆರಾಧನೆಯನ್ನು ತಗ್ಗಿಸಲು ಮತ್ತು ದೇವರಾಧನೆಯನ್ನು ಹಿಗ್ಗಿಸಲು ಈ ಕುತಂತ್ರ ಹೆಣೆದಿದ್ದಾರೆ. ಕೀಳರಿಮೆಯ ಶೂದ್ರರು ಕುಡು ಅರಿಯ ಮಹತ್ವವನ್ನೇ ಮರೆತರು. ಪರಶುರಾಮನು ಬ್ರಾಹ್ಮಣನು, ಅವನ ಪರಾಕ್ರಮವನ್ನು ಬಿಂಬಿಸಲು ಈ ಕಟ್ಟುಕತೆಯನ್ನು ಉಳಿಸಿಕೊಂಡು ಬಂದಿದ್ದಾರೆ.

       ಪರಶುರಾಮ ತನ್ನ ಕೊಡಲಿಯನ್ನು ಹಾಗೆ ಎಸೆಯುವನೇ? ಅವನಿಗೆ ಕೊಡಲಿ ಬೇಡವೇ? ಎಲ್ಲ ಕ್ಷತ್ರೀಯರನ್ನು ಸಾಯಿಸಿರುವುದು ಈ ಕೊಡಲಿಯಿಂದ ಅಲ್ಲವೇ? ಅಂತಹ ಶಕ್ತಿಯುತ ಕೊಡಲಿಯನ್ನು ಸಮುದ್ರಕ್ಕೆ ಎಸೆಯುವ ಸಣ್ಣಕೆಲಸ ಅವನು ಮಾಡಲಾರ. ಅವನಿಗೆ ಇರಲು ಭೂಮಿ ಅಗತ್ಯ ಇದ್ದರೆ ಕೊಡಲಿಯನ್ನು ಎಸೆಯುವ ಅಗತ್ಯ ಇಲ್ಲ. ತನ್ನ ಕಮಂಡಲದಿಂದ ನೀರನ್ನು ಸಿಂಪಡಿಸಿ ಅವನಿಗೆ ಬೇಕಾದಷ್ಟು ಎಕ್ರೆ ಎಕ್ರೆ ಜಾಗವನ್ನು ಸೃಷ್ಟಿ ಮಾಡಬಹುದಿತ್ತು. ಪರಶುರಾಮ ಪರಾಕ್ರಮಿ, ದೇವಸ್ವರೂಪಿ. ಅವನು ಸೃಷ್ಟಿ ಮಾಡಿದ್ದರೆ ಅಂಕುಡೊಂಕು, ಎತ್ತರ- ತಗ್ಗು, ಪಾದೆಕಲ್ಲುಗಳ ಭೂಮಿಯನ್ನು ಸೃಷ್ಟಿ ಮಾಡುತ್ತಿದ್ದ. ಒಂದು ವೇಳೆ ತುಳುನಾಡನ್ನು  ಪರಶುರಾಮ ಸೃಷ್ಟಿ ಮಾಡಿದ್ದರೆ ತುಳುನಾಡಲ್ಲಿ ನಾಗಬನ , ನಾಗಕಲ್ಲು, ಬ್ರಹ್ಮಸ್ಥಾನ ಇರುತ್ತಿರಲಿಲ್ಲ. ಅದೇ ರೀತಿ ಬೂತಕಲ್ಲು, ಬೂತ ಗುಡಿಗಳು ಇರುತ್ತಿರಲಿಲ್ಲ. ಒಟ್ಟಾರೆ ದೈವ ಆರಾಧನೆ ಇರುತ್ತಿರಲಿಲ್ಲ. ಬದಲಾಗಿ ಪರಶುರಾಮನ ಮಂದಿರಗಳು ಇರುತಿತ್ತು. ದೇವರಾಧನೆ ಮಾತ್ರ ಇರುತ್ತಿತ್ತು. ಈ ಶೂದ್ರಜನರನ್ನು ಮಂಗಮಾಡಿ ಈ ಕತೆಯನ್ನು ಸೃಷ್ಟಿಸಿದ್ದು ಮಾತ್ರ ಸತ್ಯ. ಈ ತುಳುನಾಡು (ಹಿಂದೆ ತುಳುಕಾಡು) ಸ್ವಾಭಾವಿಕವಾಗಿಯೇ ಇತ್ತು.

        ತುಳುನಾಡಿಗೆ ಕೆಡ್ವಾಸವೇ ಹೊಸವರ್ಷ. ನಾಡ ಹಬ್ಬನೂ ಕೆಡ್ವಾಸ ಆಗಿರುತ್ತದೆ. ಭೂಮಿ, ಸೂರ್ಯ, ಚಂದ್ರ, ಸಮುದ್ರ, ಮಳೆ, ಗಾಳಿ, ನಾಗ, ಬೂತೊಲು, ಆಕಾಶ, ನಕ್ಷತ್ರ ಎಂಬ ಸಮಸ್ತ ಪ್ರಕೃತಿಯನ್ನೆ ಆರಾಧಿಸಿ ಸಂಭ್ರಮಿಸುವ ದಿನ. ನಂತರದ ಕಾಲದಲ್ಲಿ ಶ್ರೀರಾಮನ ಮಡದಿ ಸೀತಾ ದೇವಿಯ ಜನನ ಕೆಡ್ವಾಸದ ದಿನವಾಯಿತು. ಪ್ರಕೃತಿ ನಿರ್ಮಿತ ಕಾಡನ್ನು ತುಳುನಾಡನ್ನಾಗಿ ಸೃಷ್ಟಿಸಿದ್ದು ಪರಶುರಾಮನ ಕುಡರಿ ಅಲ್ಲ. ಬದಲಾಗಿ ನಾವು ತಿಂದು ಬದುಕುವ ಧಾನ್ಯಗಳು ಅದೇ ಕುಡು ಮತ್ತು ಅರಿ

ಇರ್ವತ್ತೂರು ಗೋವಿಂದ ಭಂಡಾರಿ ಕಾರ್ಕಳ

5 thoughts on “ತುಲುನಾಡು ಸೃಷ್ಟಿಸಿದ ಕುಡರಿ ಪರಶುರಾಮನದ್ದಲ್ಲ.

Leave a Reply

Your email address will not be published. Required fields are marked *