January 18, 2025
Murulidhar TN
ಮಾನವ ಪ್ರಯೋಗಶೀಲ, ಹೊಸದನ್ನು ಕುತೂಹಲದಿಂದ ವೀಕ್ಷಿಸುವ, ವಿಶ್ಲೇಷಿಸುವ, ಸಂಶೋಧಿಸುವ ಹಾಗೂ ಕಲಿಯುವ ಗುಣ ಮಾನವನ ಸಹಜ ಗುಣಗಳಲ್ಲೊಂದು. ಹೊಸದನ್ನು ಮನುಷ್ಯ ಸ್ವಾಗತಿಸುತ್ತಾನೆ. ಭಿನ್ನವಾಗಿ ಆಲೋಚಿಸುವವರು ಗೆಲ್ಲುತ್ತಾರೆ ಮತ್ತು ಹಲವರ ಮನದಲ್ಲಿ ನೆಲೆ ನಿಲ್ಲುತ್ತಾರೆ. ಹಾಗೆಯೇ ಏಕತಾನತೆಯಿಂದ ಹೊರಬಂದು ವಿಶೇಷವಾದ ಸಾಧನೆ ಮಾಡಿದವರು ಉನ್ನತ ಸ್ಥಾನವನ್ನು ಏರಿದ ಉದಾಹರಣೆಯೂ ಉಂಟು. ಇದಕ್ಕೆ ತಾಜಾ ಉದಾಹರಣೆಯೆಂದರೆ ನಮ್ಮ ಸವಿತಾ ಸಮಾಜದ ಬಂಧು ಬೆಂಗಳೂರು ಉತ್ತರದ ಯಲಹಂಕ ತಾಲ್ಲೂಕಿನ,ಜಾಲ ಹೋಬಳಿಯ ತರಹುಣಿಸೆ ಗ್ರಾಮದ ಶ್ರೀಯುತ ಟಿ.ಎನ್. ಮುರುಳೀಧರ್.
 
 
 
ಇವರು ಚಿಕ್ಕ ಗ್ರಾಮವೊಂದರ ಕ್ಷೌರಿಕ ಕುಟುಂಬವೊಂದರಲ್ಲಿ ಜನಿಸಿ ಕಾಲಕ್ರಮೇಣ ವಂಶ ಪಾರಂಪರ್ಯವಾಗಿ ಮಾಡಿಕೊಂಡು ಬಂದಿದ್ದ ಪೌರೋಹಿತ್ಯವನ್ನು ರೂಢಿಸಿಕೊಂಡು, ಬ್ಯೂಟಿಷಿಯನ್ ಕೋರ್ಸ್ ನಲ್ಲಿ ಡಿಪ್ಲೋಮಾ ಪದವಿ ಪಡೆದು, ಮೇಕಪ್ ಆರ್ಟಿಸ್ಟ್ ಆಗಿಯೂ ಸೇವೆ ಸಲ್ಲಿಸಿ ನಂತರ ಜ್ಯೋತಿಷ್ಯ ಶಾಸ್ತ್ರವನ್ನು ಅಧ್ಯಯನ ಮಾಡಿ ಇಂದು “ಜ್ಯೋತಿಷ್ಯಶಾಸ್ತ್ರ ಮತ್ತು ಸಮಾಜ ಸೇವೆ” ಗಾಗಿ ಅಂತಾರಾಷ್ಟ್ರೀಯ ಮಟ್ಟದ ಖ್ಯಾತ ವಿಶ್ವವಿದ್ಯಾನಿಲಯವಾದ “ಇಂಟರ್ ನ್ಯಾಷನಲ್ ಗ್ಲೋಬಲ್ ಪೀಸ್ ಯೂನಿವರ್ಸಿಟಿ” ಯಿಂದ ಡಾಕ್ಟರೇಟ್ ಪದವಿಯನ್ನು ಪಡೆದಿದ್ದಾರೆ. ಈಗವರು ವಿದ್ವಾನ್ ಡಾ|| ಟಿ.ಎನ್.ಮುರುಳೀಧರ್. ಆದರೂ ರಾಜನಕುಂಟೆಯ ತಮ್ಮ ಯೂನಿಸೆಕ್ಸ್ ಬ್ಯೂಟಿಪಾರ್ಲರ್ ನಲ್ಲಿ ಕುಲಕಸುಬಾದ ಕ್ಷೌರಿಕ ವೃತ್ತಿಯನ್ನು ಮಾಡುತ್ತಿದ್ದಾರೆ.
 
 
ಶ್ರೀಯುತ ಮುರಳೀಧರ್ ರವರ ತಂದೆ ನರಸಿಂಹಮೂರ್ತಿಯವರು ಕುಲಕಸುಬಾದ ಕ್ಷೌರಿಕ ವೃತ್ತಿಯನ್ನು ಮಾಡಿಕೊಂಡು, ಅವರ ತಂದೆಯಿಂದ ಬಳುವಳಿಯಾಗಿ ಬಂದ ಪೌರೋಹಿತ್ಯವನ್ನು ನಿರ್ವಹಿಸಿಕೊಂಡು, ಜನರ ಸಣ್ಣ ಪುಟ್ಟ ಸಮಸ್ಯೆಗಳಿಗೆ ಆಯುರ್ವೇದ ಪದ್ಧತಿಯ ಔಷಧಗಳನ್ನು ನೀಡುತ್ತಾ, ಯಂತ್ರ, ಮಂತ್ರ  ಪದ್ಧತಿಯಿಂದ ಜನರಿಗೆ ಸೇವೆ ಸಲ್ಲಿಸುತ್ತಾ ಬಂದವರು. ತಾಯಿ ರತ್ನಮ್ಮನವರು ಕೂಡಾ ಗೃಹಿಣಿಯಾಗಿದ್ದರೂ ಮಂತ್ರ ಪದ್ಧತಿ, ಆಯುರ್ವೇದ ಪದ್ಧತಿ, ವೈದಿಕ ಪದ್ಧತಿಗಳಿಂದ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಾ ಮನೆ ಮಾತಾಗಿದ್ದರು. ಇಂತಹ ಸಾತ್ವಿಕ ದಂಪತಿಗಳ ಮಗನಾದ ಮುರಳೀಧರ್ ರವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಹುಟ್ಟೂರಾದ ತರಹುಣಿಸೆಯಲ್ಲಿ ಪೂರೈಸಿ, ಹೈಸ್ಕೂಲ್ ವಿದ್ಯಾಭ್ಯಾಸವನ್ನು ರಾಜನಕುಂಟೆಯ ಸೂರ್ಯೋದಯ ಪ್ರೌಢಶಾಲೆಯಲ್ಲಿ ಪೂರ್ಣಗೊಳಿಸಿದರು. ಯಲಹಂಕದ ಪದವಿ ಪೂರ್ವ ಕಾಲೇಜಿನಲ್ಲಿ ವಿಜ್ಞಾನ ವಿಭಾಗದಲ್ಲಿ ಪಿಯುಸಿ ವಿದ್ಯಾಭ್ಯಾಸವನ್ನು ಪಡೆದು, ಬಿಎಸ್ಸಿ ಪದವಿಯನ್ನು  ಬೆಂಗಳೂರಿನ ಸೈನ್ಸ್ ಕಾಲೇಜಿನಲ್ಲಿ ಪೂರ್ಣಗೊಳಿಸಿದರು. ನಂತರ ಮುಂಬಯಿಯಲ್ಲಿ ಬ್ಯೂಟೀಷಿಯನ್ ಕೋರ್ಸ್ ನಲ್ಲಿ ಡಿಪ್ಲೋಮಾ ಪದವಿ ಪಡೆದು ಮೂರು ವರ್ಷಗಳ ಕಾಲ ಮುಂಬಯಿಯ ವಿಂಡ್ಸರ್ ಮ್ಯಾನರ್ ಸವೆನ್ ಸ್ಟಾರ್ ಹೋಟೆಲ್ ನಲ್ಲಿ ವಿಐಪಿಗಳಿಗೆ ಮೇಕಪ್ ಆರ್ಟಿಸ್ಟ್ ಆಗಿಯೂ ಕಾರ್ಯನಿರ್ವಹಿಸಿದರು. 
 
ಬಾಲ್ಯದಿಂದಲೂ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕರ್ತನಾಗಿ ಸೇವೆ ಸಲ್ಲಿಸುತ್ತಾ ಬಂದಿದ್ದ ಮುರುಳೀಧರ್ ರವರು ಸಾಮಾಜಿಕ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.ಇಪ್ಪತ್ತಾರು ವರ್ಷಗಳ ಕಾಲ ರಾಷ್ಟ್ರೀಯ ಸ್ವಯಂ ಸೇವಕ ಸಂಘದಲ್ಲಿ ಸೇವೆ ಸಲ್ಲಿಸಿ, ಎಲ್ಲ ರೀತಿಯ ಜವಾಬ್ದಾರಿಗಳನ್ನು ನಿರ್ವಹಿಸಿ ನಿಸ್ವಾರ್ಥ ಸೇವೆಯ ಸ್ವ-ಅನುಭವವನ್ನು ಪಡೆದಿದ್ದರು.ಇವರ ಕುಟುಂಬಸ್ಥರು ವಂಶಪಾರಂಪರ್ಯವಾಗಿ ತರಹುಣಿಸೆಯ ಗ್ರಾಮದೇವತೆಯಾದ ದೊಡ್ಡಮ್ಮ ದೇವಿಯ ಅರ್ಚಕರಾಗಿ ಸೇವೆ ಸಲ್ಲಿಸುತ್ತಾ ಬಂದಿದ್ದರು, ಜೊತೆಗೆ ಆ ಭಾಗದಲ್ಲಿ ಜ್ಯೋತಿಷ್ಯಿಗಳಾಗಿಯೂ ಗುರುತಿಸಿಕೊಂಡಿದ್ದರು.ಆದ್ದರಿಂದ ತಾವೂ  ಜ್ಯೋತಿಷ್ಯ ಶಾಸ್ತ್ರವನ್ನು ಶಾಸ್ತ್ರೋಕ್ತವಾಗಿ ಕಲಿಯುವ ಉದ್ದೇಶದಿಂದ ವಿಶ್ವಕರ್ಮ ಇನ್ಸ್ಟಿಟ್ಯೂಟ್ ಆಫ್ ಜ್ಯೋತಿಷ್ಯ ಟೆಕ್ನಾಲಜಿಯಲ್ಲಿ  2012 ರಿಂದ  2016 ರ ಅವಧಿಯ ನಾಲ್ಕು ವರ್ಷಗಳ ಕಾಲ ಜ್ಯೋತಿಷ್ಯ ಶಾಸ್ತ್ರ, ವೇದಾಭ್ಯಾಸವನ್ನು ಅಧ್ಯಯನ ಮಾಡಿ, 2016-17 ರ ಅವದಿಯಲ್ಲಿ “ಮಾಯಾಕಾರ ವಿದ್ಯಾಸಂಸ್ಥೆ” ಯಲ್ಲಿ ಜ್ಯೋತಿಷ್ಯಶಾಸ್ತ್ರದಲ್ಲಿ ವಿದ್ವತ್ ನ್ನು ಪಡೆದುಕೊಂಡರು. ನಂತರ ಜ್ಯೋತಿಷ್ಯ ಮತ್ತು ವಾಸ್ತು ಶಾಸ್ತ್ರದಲ್ಲಿ ಡಾಕ್ಟರೇಟ್ ಪಡೆಯುವ ಉದ್ದೇಶದಿಂದ ಶಿರಸಿ, ಸೋಂದೇ ಮಠ, ಉಡುಪಿ, ಕುಂದಾಪುರ ಭಾಗದ ಅರಣ್ಯ ಪ್ರದೇಶಗಳಲ್ಲಿ ವಾಸ್ತುವಿನ ಗಂಧಗಾಳಿಯೂ ಇಲ್ಲದೇ ನಿರ್ಮಿಸಿದ್ದ ಪುರಾತನ ಮನೆಗಳಿಗೆ ಬೇಟಿ ನೀಡಿ, ಅಲ್ಲಿ ವಾಸಿಸುತ್ತಿರುವವರ ಮನವೊಲಿಸಿ, ಆ ಮನೆಗಳಲ್ಲಿದ್ದ ವಾಸ್ತುದೋಷಗಳನ್ನು ಯಾವುದೇ ರೀತಿಯ ಹಣವ್ಯಯ ಮಾಡದೇ ಪರಿಹರಿಸಿ,ನಂತರದ ದಿನಗಳಲ್ಲಿ ಆ ಮನೆಗಳಲ್ಲಿ ವಾಸಿಸುತ್ತಿರುವವರು ಉತ್ತರೋತ್ತರ ಅಭಿವೃದ್ಧಿ ಹೊಂದಿರುವುದನ್ನು ಮನಗಂಡು,ಆ ದಾಖಲೆಗಳನ್ನು,ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿ “ಇಂಟರ್ ನ್ಯಾಷನಲ್ ಗ್ಲೋಬಲ್ ಪೀಸ್ ಯೂನಿವರ್ಸಿಟಿ” ಯವರಿಗೆ ವರದಿ ಕಳುಹಿಸಿಕೊಟ್ಟಿದ್ದರು. ಅದನ್ನು ಕೂಲಂಕಷವಾಗಿ ಪರಿಶೀಲಿಸಿದ ತಜ್ಞರ ತಂಡ ಇವರಿಗೆ ಗೌರವ ಡಾಕ್ಟರೇಟ್ ನೀಡುವ ತೀರ್ಮಾನವನ್ನು ತೆಗೆದುಕೊಂಡು ನವೆಂಬರ್ 16,2019 ರ ಶನಿವಾರ ಪಾಂಡಿಚೆರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಡಾಕ್ಟರೇಟ್ ಪದವಿ ಪ್ರಮಾಣ ನೀಡಿ ಗೌರವಿಸಿತು.
 
 
 
ಇಪ್ಪತ್ತಾರು ವರ್ಷಗಳ ಕಾಲ ರಾಷ್ಟ್ರೀಯ ಸ್ವಯಂ ಸೇವಕ ಸಂಘದಲ್ಲಿ ಸೇವೆ ಸಲ್ಲಿಸಿ, ಸಂಘದ ಹಲವಾರು ಜವಾಬ್ದಾರಿಗಳನ್ನು ನಿರ್ವಹಿಸಿ ಈಗ ಬೆಂಗಳೂರು ಉತ್ತರ ಭಾಗದ ಸ್ವದೇಶಿ ಜಾಗರಣ ಮಂಚ್ ನ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಜ್ಯೋತಿಷ್ಯಶಾಸ್ತ್ರ, ವಾಸ್ತು ಶಾಸ್ತ್ರ, ಸಮಾಜ ಸೇವೆ, ಕುಂಡಲಿ, ವೈದಿಕ ಪದ್ಧತಿ, ಜಾತಕ, ಸಂಖ್ಯಾಶಾಸ್ತ್ರ ಹೀಗೆ ಹಲವಾರು ಕ್ಷೇತ್ರಗಳಲ್ಲಿ ಸಾಧನೆ ಮಾಡಿದ್ದರೂ ತಮ್ಮ ಕುಲಕಸುಬಾದ ಕ್ಷೌರಿಕ ವೃತ್ತಿಯನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಬೆಳಿಗ್ಗೆ ಬೇಗನೆ ಎದ್ದು ಪ್ರಾಣಾಯಾಮ, ಧ್ಯಾನ ಮುಗಿಸಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಶಾಖೆಗೆ ಭೇಟಿ ನೀಡಿ, ಜಪ ತಪ ಮುಗಿಸಿಕೊಂಡು ಜೀವನ ನಿರ್ವಹಣೆಗಾಗಿ ರಾಜನಕುಂಟೆಯ ತಮ್ಮ ಯುನಿಸೆಕ್ಸ್ ಬ್ಯೂಟಿ ಪಾರ್ಲರ್ ನಲ್ಲಿ  ಲೇಡಿಸ್ ಸ್ಪೆಷಲಿಸ್ಟ್  ಉದ್ಯೋಗ ಮಾಡಿಕೊಂಡು, ಅಲ್ಲಿಯೇ ಒಂದು ಜ್ಯೋತಿಷ್ಯಶಾಸ್ತ್ರದ ವಿಭಾಗ ಮಾಡಿಕೊಂಡು ಸೇವೆ ಬಯಸಿ ಬರುವವರಿಗೆ ಜ್ಯೋತಿಷ್ಯ ಶಾಸ್ತ್ರದ ಸೇವೆಯನ್ನು ಒದಗಿಸುತ್ತಿದ್ದಾರೆ.
 
 
ಬೆಂಗಳೂರಿನ ಆತ್ಮಶ್ರೀ ಕನ್ನಡ ಸಾಂಸ್ಕೃತಿಕ ಪ್ರತಿಷ್ಠಾನ(ರಿ.) ನವರು ಪ್ರತಿ ವರ್ಷ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಹಲವಾರು ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಪ್ರಶಸ್ತಿಗಳನ್ನು ನೀಡುತ್ತಾ ಬರುತ್ತಿದ್ದಾರೆ. ಈ ಬಾರಿಯ ಧಾರ್ಮಿಕ ಕ್ಷೇತ್ರಕ್ಕೆ ನೀಡುವ ಪ್ರಶಸ್ತಿಯಾದ ಧಾರ್ಮಿಕ ಸೇವಾ ರತ್ನ ಪ್ರಶಸ್ತಿಯನ್ನು ವಿದ್ವಾನ್ ಡಾಕ್ಟರ್ ಮುರುಳೀಧರ್ ರವರಿಗೆ ನೀಡಿದ್ದಾರೆ. ನವೆಂಬರ್ 30, 2019 ರ  ಶನಿವಾರ ಬೆಂಗಳೂರಿನ ನಯನ ಸಭಾಂಗಣದಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ಮುರುಳೀಧರ್ ರವರಿಗೆ “ಧಾರ್ಮಿಕ ಸೇವಾ ರತ್ನ” ಪ್ರಶಸ್ತಿಯನ್ನು ಪ್ರಧಾನ ಮಾಡಿ ಗೌರವಿಸಲಾಯಿತು.
 
 
“ಡಾಕ್ಟರೇಟ್ ಪದವಿ” ಮತ್ತು “ಧಾರ್ಮಿಕ ಸೇವಾ ರತ್ನ” ಪ್ರಶಸ್ತಿ ಪಡೆದ ಮುರಳಿಧರ್ ಅವರನ್ನು ಅಭಿನಂದಿಸಲು “ಭಂಡಾರಿವಾರ್ತೆ” ಅವರಿಗೆ ಕರೆ ಮಾಡಿದಾಗ ಮುಕ್ತವಾಗಿ ನಮ್ಮೊಂದಿಗೆ ಮಾತನಾಡಿದರು… 
 
 
ಧನ್ಯವಾದಗಳು ಮುರಳಿಧರ್ ಅವರಿಗೆ, ಡಾಕ್ಟರೇಟ್ ಪದವಿ ಜೊತೆಗೆ ಧಾರ್ಮಿಕ ಸೇವಾ ರತ್ನ ಪ್ರಶಸ್ತಿಯನ್ನು ಪಡೆದ ತಮಗೆ ಅಭಿನಂದನೆಗಳು.
ಮು :  ಧನ್ಯವಾದಗಳು.
 
ನಿಮ್ಮ ಪರಿಚಯ ಮಾಡಿಕೊಡಿ ಗುರೂಜಿ. 
 
ಮು : ನನ್ನ ತಂದೆ ಯಲಹಂಕ ತಾಲ್ಲೂಕು ಜಾಲ ಹೋಬಳಿಯ ತರಹುಣಿಸೆ ಗ್ರಾಮದ ನರಸಿಂಹಮೂರ್ತಿಯವರು, ತಾಯಿ ರತ್ನಮ್ಮ. ನನ್ನ ಪತ್ನಿ ಶ್ರೀಮತಿ ಲಕ್ಷ್ಮೀದೇವಿ,ಕನಕಪುರ ಮೂಲದವರು. ಮೊದಲನೆಯವನು ಮಗ ಚುಕ್ಕಿ, ಮೂರನೇ ತರಗತಿ ಓದುತ್ತಿದ್ದಾನೆ.ಮಗಳು ಧರೆ ಅವಳಿಗೀಗ ಮೂರು ವರ್ಷದ ಬಾಲ್ಯ.ನಮ್ಮದು ಹದಿನೈದು ಸದಸ್ಯರನ್ನೊಳಗೊಂಡ ಅವಿಭಕ್ತ ಕುಟುಂಬ.ಕುಟುಂಬದ ಪ್ರತಿಯೊಬ್ಬರೂ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತರಾಗಿದ್ದೇವೆ.ಕುಟುಂಬದ ಪ್ರತಿಯೊಬ್ಬರೂ ಅರ್ಚಕರಾಗಿ, ಜ್ಯೋತಿಷಿಗಳಾಗಿ,ವಾಸ್ತುಶಾಸ್ತ್ರಜ್ಞ ರಾಗಿ,ವೈದಿಕ ಪದ್ದತಿಯ ಆಯುರ್ವೇದ ವೈದ್ಯರಾಗಿ….ಹೀಗೆ ಧಾರ್ಮಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದೇವೆ.ಮತ್ತು ಕುಲಕಸುಬಾದ ಕ್ಷೌರಿಕ ವೃತ್ತಿಯನ್ನು, ಬ್ಯೂಟಿಪಾರ್ಲರ್ ಉದ್ಯಮವನ್ನು ನಡೆಸುತ್ತಾ ಮೂಲವೃತ್ತಿಯ ನೆರಳಲ್ಲಿ ಬದುಕುತ್ತಿದ್ದೇವೆ ಎಂಬ ಹೆಮ್ಮೆ ನಮಗಿದೆ.ದೇಶಸೇವೆಗೆ ಆರ್ ಎಸ್ ಎಸ್,ಧಾರ್ಮಿಕ ಸೇವೆಗೆ ಜ್ಯೋತಿಷ್ಯ, ಪೌರೋಹಿತ್ಯ, ಜನಸೇವೆಗೆ ಕ್ಷೌರಿಕ ವೃತ್ತಿಗೆ  ನಮ್ಮ ಇಡೀ ಕುಟುಂಬ ಮುಡಿಪಾಗಿದೆ ಎನ್ನಬಹುದು.
 
ನಿಮ್ಮ ಕುಟುಂಬದ ಹಿನ್ನೆಲೆಯನ್ನು ಸ್ವಲ್ಪ ವಿವರಿಸುವಿರಾ?
 
ಮು : ನನ್ನ ತಾತ, ತಂದೆಯವರು ನನ್ನ ಹುಟ್ಟೂರು ತರಹುಣಿಸೆಯ ಗ್ರಾಮದೇವತೆ ದೊಡ್ಡಮ್ಮ ದೇವಿಯ ಅರ್ಚಕರಾಗಿ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ. ಈಗ ಆ ಜವಾಬ್ದಾರಿ ನಮ್ಮ ಹೆಗಲಿಗೇರಿದೆ.ನನ್ನೊಂದಿಗೆ ನಮ್ಮ ಇಡೀ ಕುಟುಂಬದ ಸದಸ್ಯರು ದೇವಿಯ ಸೇವಾ ಕೈಂಕರ್ಯದಲ್ಲಿ ಭಾಗಿಯಾಗುತ್ತಾರೆ.ಸಹೋದರ ಶ್ರೀ ನವೀಂದ್ರ ರವರು ನನ್ನೊಂದಿಗೆ ದೇವಸ್ಥಾನದ ಅರ್ಚಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. 
ದೇವಿಗೆ ಮಂಗಳವಾರ ಮತ್ತು ಶುಕ್ರವಾರ ವಿಶೇಷ ಪೂಜೆ, ವಿಶೇಷ ಅಲಂಕಾರ ಇರುತ್ತದೆ. ಸುಮಾರು ಇನ್ನೂರಾ ಐವತ್ತು ವಿವಿಧ ರೀತಿಯ ಅಲಂಕಾರಗಳನ್ನು ದೇವಿಗೆ ಮಾಡಲಾಗುತ್ತದೆ. ಪ್ರತಿ ಅಮಾವಾಸ್ಯೆ ಮತ್ತು ಹುಣ್ಣಿಮೆಯ ದಿನದಂದು ದೇವಸ್ಥಾನದಲ್ಲಿ ವಿಶೇಷವಾದ ಪೂಜೆ, ಹೋಮ,ಹವನ,ಯಜ್ಞಗಳು ಜರುಗುತ್ತವೆ. ಈ ಹೋಮ ಹವನ ಯಜ್ಞಾದಿಗಳಿಂದಾಗು ಬಂದಿರುವ ಭಕ್ತರ ನಾನಾ ಸಮಸ್ಯೆಗಳಿಗೆ ಪರಿಹಾರ ಒದಗುತ್ತದೆ. ಬಂದಿರುವ ಭಕ್ತರ ಆರೋಗ್ಯ ಸಮಸ್ಯೆಗಳಿಗೆ ಔಷಧೀಯ ಸಸ್ಯಗಳಿಂದ ತಯಾರಿಸಿದ ಔಷಧಗಳನ್ನು ನೀಡಲಾಗುತ್ತದೆ. ಸುಮಾರು ಐದು ನೂರಾ ಹದಿಮೂರು ಗಿಡಮೂಲಿಕೆಗಳನ್ನು ಬಳಸಿ ತಯಾರಿಸಲಾದ ಆಯುರ್ವೇದ ಔಷಧಗಳನ್ನು ಸಂತಾನ ಸಮಸ್ಯೆ, ಸ್ತ್ರೀಯರ ವೈಯಕ್ತಿಕ ಸಮಸ್ಯೆ, ಚರ್ಮರೋಗಗಳು ಹೀಗೆ ನಾನಾ ಸಮಸ್ಯೆಗಳಿರುವ ಭಕ್ತರಿಗೆ ವಿತರಿಸಲಾಗುತ್ತದೆ. ದೇವಿಯ ಕೃಪಾಶೀರ್ವಾದದಿಂದ ವಿಶೇಷ ಕವಚಗಳನ್ನು ತಯಾರಿಸಿ ಭಕ್ತರಿಗೆ ನೀಡಲಾಗುತ್ತದೆ. ವಿದ್ಯಾರ್ಥಿಗಳಿಗೆ ಸರಸ್ವತೀ ಕವಚ, ವ್ಯಾಪಾರಸ್ಥರಿಗೆ ಮಹಾಲಕ್ಷ್ಮೀ ಕವಚ, ವಾಹನ ಸವಾರರಿಗೆ ವಾಹನ ಸಿದ್ಧಿರಸ್ತು ಕವಚ ಹೀಗೆ ವಿಶೇಷ ಕವಚಗಳನ್ನು ಸಹ ನೀಡಲಾಗುತ್ತದೆ. ಯಂತ್ರಗಳು, ತಾಯಿತ ಮತ್ತು ಕೈಗೆ ಹಾಕುವ ಬಳೆ, ಕಡಗಗಳನ್ನು ನೀಡಿ ಭಕ್ತರ ನಾನಾ ಸಮಸ್ಯೆಗಳಿಗೆ ವಿವಿಧ ರೀತಿಯಲ್ಲಿ ಪರಿಹಾರವನ್ನು ಸೂಚಿಸಲಾಗುವುದು. 
 
ಗುರೂಜಿ ನಿಮ್ಮ ಜೀವನದ ಧ್ಯೇಯೋದ್ದೇಶಗಳೇನು? ಮುಂದಿನ ಯೋಜನೆಗಳೇನು? 
 
ಮು : ಯಾರೂ ಹುಟ್ಟಿನಿಂದ ಬ್ರಾಹ್ಮಣನಲ್ಲ. ಮನಃಶುದ್ಧಿ ಇರುವವನು, ಸರ್ವರಿಗೂ ಒಳಿತನ್ನು ಬಯಸುವವನು ಬ್ರಾಹ್ಮಣ ಎಂಬುದು ನನ್ನ ಅಭಿಪ್ರಾಯ. ನಮ್ಮ ಭಾಗದ ಹಲವಾರು ಬ್ರಾಹ್ಮಣ, ಲಿಂಗಾಯಿತರಂತಹ ಪ್ರಬಲ ಕೋಮಿನ ಜನರು ಮನೆಯ ವಾಸ್ತುಗಾಗಿ, ಪಾಯ ಹಾಕಿಸಲು ಸಲಹೆ ಸೂಚನೆಗಳನ್ನು ಕೇಳಿಕೊಂಡು ನಮ್ಮ ಬಳಿ ಬರುತ್ತಾರೆ.ದೇವಿಯ ಆಶೀರ್ವಾದದಿಂದ ದೇವಸ್ಥಾನದ ಪ್ರತಿಷ್ಠಾಪನೆಗಳಿಗೂ ನಾನು ಸಾರಥ್ಯ ವಹಿಸುತ್ತೇನೆ.
 
ಮಾತೃ ಸಮಾಜವಾದ ಸವಿತಾ ಸಮಾಜದ ಅಭಿವೃದ್ಧಿಗಾಗಿ ನನ್ನ ಕೈಲಾದ ಸೇವೆಯನ್ನು ಸಲ್ಲಿಸುತ್ತಿದ್ದೇನೆ.ಕ್ಷೌರಿಕ ಬ್ರಿಗೇಡ್ ನ ರಾಜ್ಯಾಧ್ಯಕ್ಷನಾಗಿ, ಕರ್ನಾಟಕ ರಾಜ್ಯ ಸವಿತಾ ಸಮಾಜದ ರಾಜ್ಯ ನಿರ್ದೇಶಕನಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ. ನನ್ನ ಮೂಲ ಉದ್ದೇಶ ಪ್ರತಿ ತಾಲ್ಲೂಕಿನಲ್ಲಿ, ಪ್ರತಿ ಜಿಲ್ಲೆಯಲ್ಲಿ ನಮ್ಮ ಸವಿತಾ ಸಮಾಜದ ಒಬ್ಬ ವ್ಯಕ್ತಿಯನ್ನು ಜ್ಯೋತಿಷಿಗಳನ್ನಾಗಿ ಬೆಳೆಸಬೇಕೆಂಬುದಾಗಿದೆ.ನಿಸ್ವಾರ್ಥ ಸೇವೆಯಿಂದ, ಸೇವಾ ಮನೋಭಾವದಿಂದ ಸಮಾಜ ಸೇವೆ ಮಾಡುವ ಉದ್ದೇಶ ಹೊಂದಿರುವ ಸಮಾಜದ ಬಂಧುಗಳು ಆಸಕ್ತಿ ತೋರಿ ಮುಂದೆ ಬಂದರೆ ಅವರಿಗೆ ಆರು ತಿಂಗಳ ತರಬೇತಿ ನೀಡಿ ಜ್ಯೋತಿಷಿಗಳಾಗಿ ತಯಾರು ಮಾಡಲಾಗುವುದು.ಒಂದು ವರ್ಷದ ಅವದಿಯ ತರಬೇತಿಗೆ ಅವರು ಸಿದ್ಧರಿದ್ದರೆ ಅವರನ್ನು ವೇದಶಾಸ್ತ್ರ ಪಂಡಿತರನ್ನಾಗಿ ತಯಾರು ಮಾಡಲಾಗುವುದು,ಆದರೆ ಕೆಲವು ಆಹಾರ ಪದ್ದತಿ, ಆಹಾರ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಾಗುತ್ತದೆ.
 
ಧನ್ಯವಾದಗಳು ಗುರೂಜಿ ತಮ್ಮ ಅಮೂಲ್ಯವಾದ ಸಮಯವನ್ನು ನಮ್ಮೊಂದಿಗೆ ಹಂಚಿಕೊಂಡಿದ್ದಕ್ಕಾಗಿ.
 
ಮು : ಧನ್ಯವಾದಗಳು ನಿಮಗೂ ಸಹ.
 
ನೋಡಿದಿರಲ್ಲಾ ಬಂಧುಗಳೇ… ಇಷ್ಟೆಲ್ಲಾ ಸಾಧನೆ ಮಾಡಿಯೂ ವಿನಮ್ರವಾಗಿ, ವಿನೀತರಾಗಿ ತಮ್ಮ ಕುಲ ಕಸುಬನ್ನು ನಿಷ್ಠೆಯಿಂದ ಮಾಡಿಕೊಂಡು ಸಮಾಜದ ಬಂಧುಗಳಿಗೆ ಆದರ್ಶಪ್ರಾಯವಾಗಿರುವ ವಿದ್ವಾನ್ ಡಾಕ್ಟರ್ ಮುರಳಿಧರ್ ರವರ ಮಾತುಗಳು ಎಷ್ಟು ಸ್ಫೂರ್ತಿದಾಯಕವಾಗಿದ್ದವು. ಇವರು ಜೀವನದಲ್ಲಿ ನಡೆದು ಬಂದ ದಾರಿ ಸಮಾಜದ ಕೆಲವೇ ಕೆಲವು ಯುವಕರಾದರೂ ದಾರಿ ದೀಪವಾದರೆ ನಮ್ಮ ಈ ಲೇಖನದ ಬರವಣಿಗೆ ಸಾರ್ಥಕವೆಂದು ಭಾವಿಸುತ್ತೇವೆ.
 
ಜ್ಯೋತಿಷ್ಯ ಶಾಸ್ತ್ರದಲ್ಲಿ ಮತ್ತು ಸಮಾಜ ಸೇವೆಯಲ್ಲಿ ಡಾಕ್ಟರೇಟ್ ಪದವಿ ಪಡೆದಿರುವ ವಿದ್ವಾನ್ ಡಾಕ್ಟರ್ ಮುರಳಿಧರ್ ಅವರಿಗೆ ಭಂಡಾರಿ ಕುಟುಂಬದ ಮನೆ ಮನದ ಮಾತು “ಭಂಡಾರಿವಾರ್ತೆ” ಯಿಂದ ಹಾರ್ದಿಕ ಅಭಿನಂದನೆಗಳನ್ನು ಸಲ್ಲಿಸುತ್ತಿದ್ದೇವೆ. 
 
ಅಭಿನಂದನೆಗಳು ಗುರೂಜಿ….
 
 
 
ನಿಮ್ಮ ಯಾವುದೇ ವಾಸ್ತು ಸಮಸ್ಯೆಗಳಿಗೆ, ಆರೋಗ್ಯ ಸಮಸ್ಯೆಗಳಿಗೆ, ಜಾತಕ ದೋಷಗಳಿಗೆ ಹೀಗೆ ಹಲವಾರು ಸಮಸ್ಯೆಗಳಿಗೆ ವಿದ್ವಾನ್ ಡಾಕ್ಟರ್ ಶ್ರೀ ಟಿ.ಎನ್. ಮುರಳೀಧರ್ ಅವರನ್ನು ಸಂಪರ್ಕಿಸಲು ಈ ಮೊಬೈಲ್ ಸಂಖ್ಯೆಗೆ ಕರೆ ಮಾಡಿ… 9945545240
ದೇವಿಯ ಅರ್ಚಕರಾದ ಶ್ರೀ ಟಿ.ಎನ್.ನವೀಂದ್ರ ರವರನ್ನು ಸಂಪರ್ಕಿಸಲು…
9738668830
 
ವರದಿ : ಭಾಸ್ಕರ್ ಭಂಡಾರಿ ಶಿರಾಳಕೊಪ್ಪ.
9964275012.

2 thoughts on ““ಜ್ಯೋತಿಷ್ಯ ಶಾಸ್ತ್ರ ಮತ್ತು ಸಮಾಜ ಸೇವೆಗಾಗಿ ಡಾಕ್ಟರೇಟ್ ಪದವಿ ಪಡೆದ ಸವಿತಾ ಬಂಧು ವಿದ್ವಾನ್ ಡಾ|| ಟಿ.ಎನ್.ಮುರುಳೀಧರ್.”

  1. ಸಮಾಜದ ಹೆಮ್ಮೆ ಇಮ್ಮಡಿಯಾಯ್ತು
    ಅದ್ಬುತವಾದ ಬರಹ

Leave a Reply

Your email address will not be published. Required fields are marked *