September 19, 2024

ದೇಹದ ಮೂಳೆಗಳು ಗಟ್ಟಿಮುಟ್ಟಾಗಿ ಇರಬೇಕೆಂದರೆ, ಇವುಗಳನ್ನು ತಿನ್ನಿ ಸಾಕು!

ನಮಗೆಲ್ಲಾ ಗೊತ್ತೇ ಇರುವ ಹಾಗೆ, ಕ್ಯಾಲ್ಸಿಯಂ ಅಂಶ ಹೆಚ್ಚಾಗಿರುವ ಆಹಾರ ಪದಾರ್ಥಗಳು ಮೂಳೆಗಳ ಆರೋಗ್ಯವನ್ನು ವೃದ್ಧಿಸುತ್ತವೆ. ಅಂತೆಯೇ ಕಬ್ಬಿಣಾಂಶ ಹಾಗೂ ಸತು ಅಂಶ ಹೆಚ್ಚಿರುವ

ನಿಮಗೆಲ್ಲಾ ನೆನಪಿರಬಹುದು, ಮನೆಯಲ್ಲಿ ಹಿರಿಯರು, ಬಾಲ್ಯದಿಂದಲೂ ಕೂಡ ಮೂಳೆಗಳನ್ನು ಬಲ ಪಡಿಸಲು ಕ್ಯಾಲ್ಸಿಯಂ ಭರಿತ ಆಹಾರಗಳಾದ ಡೈರಿ ಉತ್ಪನ್ನಗಳು ಹಾಗೂ ಕ್ಯಾಲ್ಸಿಯಂ ಪೂರಕಗಳನ್ನು ಸೇವಿಸುವಂತೆ ಸಲಹೆಗಳನ್ನು ನೀಡುತ್ತಿದ್ದರು. ಉದಾಹರಣೆಗೆ ಪ್ರತಿದಿನ ಒಂದು ಲೋಟ ಹಾಲು ಕುಡಿಯುವುದು, ಊಟದ ಜೊತೆಗೆ ಒಂದು ಕಪ್ ಮೊಸರು ಸೇವನೆ ಮಾಡಲು ಸಲಹೆ ನೀಡುತ್ತಿದ್ದರು. ಇದಕ್ಕೆ ಕಾರಣ ಇಷ್ಟೇ, ದೇಹದ ಮೂಳೆಗಳು ಸದೃಢಗೊಳ್ಳಲಿ ಎಂದು.

ಆದರೆ ಆರೋಗ್ಯ ತಜ್ಞರು ಹೇಳುವ ಪ್ರಕಾರ, ಮೂಳೆಯ ಆರೋಗ್ಯವನ್ನು ಕಾಪಾಡಿಕೊಳ್ಳಲು ಅಥವಾ ಸದೃಢಪಡಿಸಲು, ಕ್ಯಾಲ್ಸಿಯಂ ಹೊರತುಪಡಿಸಿ, ಇತರ ಅನೇಕ ಬಗೆಯ ಪೌಷ್ಟಿಕ ಸತ್ವಗಳಿರುವ ಆಹಾರ ಪದಾರ್ಥಗಳು ಕೂಡ ಅವಶ್ಯಕತೆ ಇರುತ್ತದೆಯಂತೆ.

ಮುಖ್ಯವಾಗಿ ಕ್ಯಾಲ್ಸಿಯಂ ಅಂಶದ ಜೊತೆಗೆ ಕಬ್ಬಿಣ ಮತ್ತು ಸತು ಅಂಶ ಹೆಚ್ಚಿರುವ ಆಹಾರಗಳನ್ನು ಕೂಡ, ನಮ್ಮ ಆಹಾರ ಪದ್ಧತಿಯಲ್ಲಿ ಸೇರಿಸಿಕೊಂಡರೆ ಮಾತ್ರ, ದೇಹದ ಮೂಳೆಗಳ ಆರೋಗ್ಯ ಕೂಡ ಚೆನ್ನಾಗಿರುತ್ತದೆ. ಬನ್ನಿ ಇಂದಿನ ಲೇಖನದಲ್ಲಿ ಮೂಳೆಗಳ ಆರೋಗ್ಯವನ್ನು ಕಾಪಾಡುವ ಆಹಾರಗಳು ಯಾವುದು ಎನ್ನುವುದನ್ನು ನೋಡೋಣ…

ಮೀನು

  • ಕರಾವಳಿ ಭಾಗದವರು ಹಾಗೂ ಪಶ್ಚಿಮ ಬಂಗಾಳದವರಿಗೆ ಮೀನು ಇಲ್ಲದೆ ಊಟನೇ ಸೇರುವುದಿಲ್ಲ ಎಂದು ಹೇಳಲಾಗುತ್ತದೆ! ವಾರದಲ್ಲಿ ಎರಡು-ಮೂರು ದಿನವಾದರೂ ಊಟಕ್ಕೆ ಮೀನಿನ ಪದಾರ್ಥ ಬೇಕೇಬೇಕು.
  • ಈ ಬಗ್ಗೆ ಆರೋಗ್ಯ ತಜ್ಞರು ಕೂಡ ಹೇಳುವ ಹಾಗೆ, ಮಿತವಾಗಿಮೀನು ಸೇವನೆ ಮಾಡುವುದ ರಿಂದ, ಆರೋಗ್ಯಕ್ಕೆ ಒಳ್ಳೆಯದಂತೆ. ಮುಖ್ಯವಾಗಿ ಇದರಲ್ಲಿ ಕ್ಯಾಲ್ಸಿಯಂ ಅಂಶದ ಪ್ರಮಾಣದ ಜೊತೆಗೆ, ವಿಟಮಿನ್ ಡಿ, ಒಮೆಗಾ-3 ಕೊಬ್ಬಿನಾಮ್ಲದ ಹಾಗೂ ಒಮೆಗ 3 ಫ್ಯಾಟಿ ಆಸಿಡ್ ಅಂಶಗಳು ಕೂಡ ಸಿಗುವುದರಿಂದ ವಯಸ್ಸಾದಂತೆ ಮೂಳೆಗಳ ಸವೆತ ಉಂಟಾಗುವ ಸಾಧ್ಯತೆ ಇರುವುದಿಲ್ಲ. ಅಷ್ಟೇ ಅಲ್ಲದೆ, ಮೂಳೆಗಳ ದುರ್ಬಲತೆ ದೂರವಾಗಿ ಸದೃಢತೆ ಹೆಚ್ಚಾಗುತ್ತದೆ.

ಹಸಿರು ಎಲೆ-ತರಕಾರಿಗಳು

  • ಹಸಿರು ಎಲೆ-ತರಕಾರಿಗಳಲ್ಲಿ ಅಡಗಿರುವ ಆರೋಗ್ಯಕಾರಿ ಪ್ರಯೋಜನಗಳ ಬಗ್ಗೆ ನಮಗೆಲ್ಲಾ ಗೊತ್ತೇ ಇದೆ. ಈ ಬಗ್ಗೆ ವೈದ್ಯರು ಕೂಡ ಹೇಳುವ ಹಾಗೆ, ನಮ್ಮ ದೈನಂದಿನ ಆಹಾರ ಪದ್ಧತಿಯಲ್ಲಿ ಹಸಿರು ಎಲೆ-ತರಕಾರಿ ಗಳನ್ನು ಹಾಗೂ ಸೊಪ್ಪುಗಳನ್ನು ಹೆಚ್ಚಾಗಿ ಬಳಸುವುದರಿಂದ, ಆರೋಗ್ಯಕ್ಕೆ ಬೇಕಾದ ಎಲ್ಲಾ ಬಗೆಯ ಪೌಷ್ಟಿಕ ಸತ್ವಗಳು ನೈಸರ್ಗಿಕವಾಗಿ ಸಿಕ್ಕಂತಗುತ್ತದೆ.
  • ಇನ್ನು ತಮ್ಮಲ್ಲಿ ಅಧಿಕ ಪ್ರಮಾಣದಲ್ಲಿ ಕ್ಯಾಲ್ಸಿಯಂ ಅಂಶ ಒಳಗೊಂಡಿರುವ ತರಕಾರಿಗಳಾದ ಪಾಲಕ್ ಸೊಪ್ಪು, ಮೆಂತ್ಯ ಸೊಪ್ಪು, ಹರಿವೆ ಸೊಪ್ಪು, ಬಸಳೆ, ಬ್ರೊಕೋಲಿ, ಹೂಕೋಸು, ಈರುಳ್ಳಿ ಹೂವು ಇಂತಹ ತರಕಾರಿಗಳನ್ನು ದೈನಂದಿನ ಆಹಾರಕ್ರಮದಲ್ಲಿ ಸೇರಿಸುವುದನ್ನು ಮರೆಯಬೇಡಿ.
  • ಪ್ರಮುಖವಾಗಿ ಯಾರೆಲ್ಲಾ ಹಾಲು, ಮೊಸರು, ತುಪ್ಪ, ಬೆಣ್ಣೆ, ಪನ್ನೀರ್ ಇಂತಹ ಡೈರಿ ಪದಾರ್ಥ ಗಳನ್ನು ಸೇವನೆ ಮಾಡುವುದಿಲ್ಲ ಅಂತಹವರು ಈ ಮೇಲೆ ತಿಳಿಸಿದ ತರಕಾರಿಗಳನ್ನು ಸೇವನೆ ಮಾಡು ವುದನ್ನು ಮರೆಯಬಾರದು.

ದಿನಕ್ಕೊಂದು ಮೊಟ್ಟೆ

  • ದಿನಕ್ಕೊಂದು ಬೇಯಿಸಿದ ಮೊಟ್ಟೆ ತಿಂದರೆ ವೈದ್ಯರಿಂದ ದೂರವಿಡಬಹುದು, ಎನ್ನುವ ನಾಣ್ಣುಡಿ ನಮಗೆ ಲ್ಲಾ ಗೊತ್ತೇ ಇದೆ. ತನ್ನಲ್ಲಿ ಅಪಾರ ಪ್ರಮಾಣದ ಪೌಷ್ಟಿಕ ಸತ್ವಗಳ ಜೊತೆಗೆ ವಿಟಮಿನ್ ಬಿ6, ವಿಟಮಿನ್ ಬಿ12 ಮತ್ತು ವಿಟಮಿನ್ ‘ಡಿ’ ಅಂಶಗಳು ಯಥೇಚ್ಛವಾಗಿ ಸಿಗುತ್ತದೆ.
  • ಇನ್ನೂ ಪ್ರಮುಖವಾಗಿ ಮೊಟ್ಟೆಯ ಹಳದಿ ಭಾಗದಲ್ಲಿ ವಿಟಮಿನ್ ಡಿ ಅಂಶ ಸಿಗುವುದರಿಂದ ಇದು ಮೂಳೆಗಳ ಆರೋಗ್ಯವನ್ನು ವೃದ್ಧಿಸಲು ನೆರವಾಗುವುದು

ಸತು ಅಂಶ ಹೆಚ್ಚಿರುವ ಆಹಾರಗಳು

ಸತು ಅಂಶ ಹೆಚ್ಚಿರುವ ಆಹಾರಗಳಾದ ಬೇಯಿಸಿರುವ ಬೀನ್ಸ್, ಹಾಲು, ಮೊಸರು, ಚೀಸ್, ಮಿತವಾಗಿ ಕೆಂಪು ಮಾಂಸ, ಬೇಳೆಗಳು, ಕಡ್ಲೆಕಾಳು, ಕುಂಬಳಕಾಯಿ ಹಾಗೂ ಇದರ ಬೀಜಗಳು, ಎಳ್ಳು, ಶೇಂಗಾಬೀಜ, ಗೋಡಂಬಿ, ಬಾದಾಮಿ ಇಂತಹ ಆಹಾರಗಳನ್ನು ತಮ್ಮ ದೈನಂದಿನ ಆಹಾರಪದಾರ್ಥಗಳಲ್ಲಿ ಹೆಚ್ಚಾಗಿ ಸೇವಿಸಿ.

ಒಣ ಬೀಜಗಳು

  • ಒಣ ಬೀಜಗಳು ಬೆಲೆಯಲ್ಲಿ ದುಬಾರಿ ಎನ್ನುವ ಒಂದೇ ಕಾರಣ ಬಿಟ್ಟರೆ, ಉಳಿದೆಲ್ಲಾ ವಿಷ್ಯದಲ್ಲೂ ಕೂಡ ಆರೋಗ್ಯಕ್ಕೆ ಬಹಳ ಒಳ್ಳೆಯದು. ಪ್ರಮುಖವಾಗಿ ಬಾದಾಮಿ, ಗೋಡಂಬಿ ಅಥವಾ ಕಡಲೇಬೀಜಗಳಲ್ಲಿ  ಆರೋಗ್ಯಕ್ಕೆ ಬೇಕಾಗುವ ಪ್ರೋಟೀನ್ ಅಂಶದ ಜೊತೆಗೆ, ಪೊಟ್ಯಾಶಿಯಂ ಹಾಗೂ ಕ್ಯಾಲ್ಸಿಯಂ ಅಂಶದ ಪ್ರಮಾಣ ಕೂಡ ಹೆಚ್ಚಾಗಿ ಸಿಗುತ್ತದೆ.
  • ಇನ್ನೂ ಮುಖ್ಯವಾಗಿ ಮೂಳೆಗಳ ಆರೋಗ್ಯಕ್ಕೆ ಬೇಕಾಗುವ ಒಮೆಗ 3 ಫ್ಯಾಟಿ ಆಸಿಡ್ ಅಂಶಗಳು ಕೂಡ ಇಂತಹ ಒಣಬೀಜಗಳಲ್ಲಿ ಯಥೇಚ್ಛವಾಗಿ ಸಿಗುವುದರಿಂದ, ಪ್ರತಿದಿನ ಬೆಳಗ್ಗೆ ಅಥವಾ ಸಂಜೆಯ ಸ್ನ್ಯಾಕ್ಸ್ ಸಮಯದಲ್ಲಿ ಇಂತಹ ಒಣ ಬೀಜಗಳನ್ನು ಸೇವನೆ ಮಾಡುವ ಅಭ್ಯಾಸ ಇಟ್ಟುಕೊಳ್ಳುವುದು ಒಳ್ಳೆಯದು.

 

ಸಂಗ್ರಹ : ಎಸ್.ಬಿ ನೆಲ್ಯಾಡಿ

ಮೂಲ: ವಿ ಕೆ

Leave a Reply

Your email address will not be published. Required fields are marked *