January 18, 2025
TG Bhandary

ನಿಸ್ವಾರ್ಥ ಸಮಾಜ ಸೇವಕ ಮಿತಭಾಷಿ ಜ್ಞಾನಭಂಡಾರದ ಅಘಾದ ವ್ಯಕ್ತಿತ್ವದ ತೋಕೂರು ಗೋಪಾಲ ಭಂಡಾರಿ (ಟಿ.ಜಿ.ಭಂಡಾರಿ) ತಾರೀಕು ಮೇ 6 ರಂದು ಮದ್ಯಾಹ್ನ ಅಲ್ಪಕಾಲದ ಅಸೌಖ್ಯದಿಂದ  ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.

ಶ್ರೀಯುತರು ಪತ್ನಿ ಶ್ರಿಮತಿ ಪುಷ್ಪಾ, ಪುತ್ರ ಅರವಿಂದ, ಸೊಸೆ ವರ್ಷಾ ಹಾಗೂ ಮೊಮ್ಮಗಳನ್ನು ಅಗಲಿದ್ದಾರೆ.

ಸುರತ್ಕಲ್ ಎನ್‌ಐಟಿಕೆಯಲ್ಲಿ ಉದ್ಯೋಗದಲ್ಲಿದ್ದು ನಿವೃತ್ತಿ ಹೊಂದಿದ್ದ ಅವರು ತನ್ನ 67 ನೇ ವರ್ಷಕ್ಕೆ ಅಂತಿಮ ವಿದಾಯ ಹೇಳಿದ್ದಾರೆ. ತೋಕೂರಿನ ಗ್ರಾಮೀಣ ಭಾಗದಲ್ಲಿ ಸಮಾಜ ಸೇವೆಯ ಮೂಲ ಸಂಕಲ್ಪವನ್ನು ಹೊಂದಿದ್ದ ಗೋಪಾಲ ಭಂಡಾರಿ ಅವರು ತೋಕೂರು ಯುವಕ ಸಂಘದ ಮಾಜಿ ಅಧ್ಯಕ್ಷರಾಗಿ ಸಂಘವನ್ನು ಬಲಿಷ್ಠ ಸಂಘಟನಾ ಶಕ್ತಿಯಲ್ಲಿ ಬೆಳೆಸುವಲ್ಲಿ ಸಫಲರಾಗಿದ್ದರು, ಸಂಘದ ಕಟ್ಟಡ ಸಮಿತಿಯ ಅಧ್ಯಕ್ಷರಾಗಿ ಸಂಘದ ಸುಸಜ್ಜಿತ ಸೇವಾ ಕಟ್ಟಡ ನಿರ್ಮಾಣಕ್ಕೆ ಪರೋಕ್ಷವಾಗಿ ದುಡಿದಿದ್ದರು. ಅದರ ಸುವರ್ಣ ಮಹೋತ್ಸವದಲ್ಲಿ ಗೌರವಾಧ್ಯಕ್ಷರಾಗಿ ತಮ್ಮ ಸೇವಾ ಮನೋಭಾವನೆಯನ್ನು ಇನ್ನಷ್ಟು ಅರಳಿಸಿದವರು. ತನ್ನ ಕೊನೆಯ ಉಸಿರು ಇರುವವರೆಗೂ ಸಂಸ್ಥೆಯ ಬೆನ್ನೆಲುಬಾಗಿದ್ದರು.

ತೋಕೂರು ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ದೇವಸ್ಥಾನದ ವ್ಯವಸ್ಥಾಪನಾ ಮಂಡಳಿಯ ಮಾಜಿ ಸದಸ್ಯರಾಗಿ ದೇವಳದ ಈ ಹಿಂದಿನ ಬ್ರಹ್ಮಕಲಶೋತ್ಸವ ಇತ್ಯಾದಿ ಉತ್ಸವಾದಿಯಲ್ಲಿ ಪ್ರಾಮಾಣಿಕವಾಗಿ ದುಡಿದವರು. ರಾಷ್ಟ್ರದಲ್ಲಿಯೇ ಮೆಚ್ಚುಗೆ ಗಳಿಸಿರುವ ತೋಕೂರು ವಿಶ್ವಬ್ಯಾಂಕ್‌ನ ನೀರು ನಿರ್ವಹಣಾ ಸಮಿತಿಯ ಮಾಜಿ ಅಧ್ಯಕ್ಷರಾಗಿದ್ದುಕೊಂಡು ಸಮಿತಿಯ ಮೂಲಕ ತಮ್ಮ ತಂತ್ರಗಾರಿಕೆಯ ಮೂಲಕ ವಿಶ್ವಸಾರ್ಹ ವ್ಯವಸ್ಥೆಯನ್ನು ಕಲ್ಪಿಸುವಲ್ಲಿ ಹೊರ ರಾಜ್ಯದಲ್ಲಿಯೂ ಅದರ ಬಗ್ಗೆ ಮಾಹಿತಿ ನೀಡುವಲ್ಲಿ ಯಶಸ್ದಾಗಿದ್ದರು.

ರಾಷ್ಟ್ರೀಯ ಸೇವಾ ಸಂಘದ ಎಲ್ಲಾ ಕಾರ್ಯಕ್ರಮಗಳಲ್ಲು ಪಾಲ್ಗೊಂಡು ರಾಷ್ಟ್ರಪ್ರೇಮವನ್ನು ಅರಳಿಸಿದವರು.

ಗ್ರಾಮದಿಂದ ಅಂತಾರಾಷ್ಟ್ರೀಯ ಸಂಸ್ಥೆಯೆಡೆಗೆ:

ತೋಕೂರು ಎನ್ನುವ ಸ್ವಚ್ಚಂದ ಗ್ರಾಮದಿಂದ ಅಂತಾರಾಷ್ಟ್ರೀಯ ಸೇವಾ ಸಂಸ್ಥೆಯಾಗಿರುವ ರೋಟರಿ ಕ್ಲಬ್‌ನ ಮೂಲ್ಕಿಯ ಸದಸ್ಯರಾಗಿ ಪದಾಧಿಕಾರಿಯಾಗಿ, ನಿರ್ದೇಶಕರಾಗಿ ರಜತ ಸಂಭ್ರಮದಲ್ಲಿರುವ ಮೂಲ್ಕಿ ರೋಟರಿ ಕ್ಲಬ್‌ನ ರಜತ ವರ್ಷದ ಅಧ್ಯಕ್ಷರಾಗಿ ನಿಯೋಜಿತರಾಗಿ ಆಯ್ಕೆಯಾಗಿದ್ದು, ಈಗಾಗಲೇ ಗೋವಾದಲ್ಲಿ ನಡೆದ ವಿಶೇಷ ರಾಷ್ಟ್ರೀಯ ತರಬೇತಿಯನ್ನು ಪಡೆದು ಬಂದಿದ್ದರು. ಅವರ ವಾಕ್‌ಚಾತುರ್ಯ ಹಾಗೂ ಮಾಹಿತಿ ಕಲೆಗಾರಿಕೆ ರೋಟರಿ ಸಂಸ್ಥೆಗೆ ಅಪಾರವಾಗಿ ಸಿಕ್ಕಿತ್ತು. ಅದಿನ್ನು ನೆನಪು ಮಾತ್ರ.

ಕುಟುಂಬಕ್ಕೆ ಈ ದುಖಃವನ್ನು ತಡೆದುಕೊಳ್ಳುವ ಶಕ್ತಿ ನೀಡಲಿ ಭಗವಂತ ಅವರ ದಿವ್ಯ ಆತ್ಮಕ್ಕೆ ಚಿರಶಾಂತಿಯನ್ನು ಕರುಣಿಸಲಿ ಎಂದು ಭಂಡಾರಿ ಕುಟುಂಬಗಳ ಮನೆ ಮನದ ಮಾತು ಭಂಡಾರಿ ವಾರ್ತೆ ಈ ಸಂದರ್ಭದಲ್ಲಿ ಪ್ರಾರ್ಥಿಸುತ್ತದೆ.

-ಭಂಡಾರಿ ವಾರ್ತೆ

Leave a Reply

Your email address will not be published. Required fields are marked *