ಮುಳ್ಳು ಸೌತೆಕಾಯಿಗೆ ತುಲುನಾಡಿನ ತುಲು ಭಾಷೆಯಲ್ಲಿ ತೆಕ್ಕರೆ ಎನ್ನುತ್ತಾರೆ. “ತೆಕ್ಕರೆ” ಎಂದರೆ ನಂದಿಸಲು ಎಂಬ ಅರ್ಥ. ತುಡಾರ್ ತೆಕ್ಕವು(ದೀಪ ನಂದಿಸು),ಬೊಲ್ಪು ತೆಕ್ಕವು (ಬೆಳಕು ಆರಿಸು),ಉರಿ ತೆಕ್ಕರೆ(ಉರಿ ತಗ್ಗಿಸಲು) ಎಂಬ ಅರ್ಥಗಳು ಬರುತ್ತದೆ.
“ತೆಕ್ಕರೆ“ಎಂಬ ಪದವು ತುಲು ಭಾಷೆಯು ಹುಟ್ಟುವಾಗಲೇ ಹುಟ್ಟಿರುತ್ತದೆ. ಆ ಕಾಲದಲ್ಲಿ ತುಲುನಾಡಲ್ಲಿ ಹಲಸಿನಕಾಯಿ ಹಲಸಿನಹಣ್ಣುಗಳನ್ನು ತಿನ್ನುವುದು ಇತ್ತು. ಎಷ್ಟೋ ವರ್ಷಗಳವರೆಗೆ ಇದನ್ನು ಮತ್ತು ಇದರ ಬೇರೆ ಬೇರೆ ಉತ್ಪನ್ನಗಳನ್ನು ತಿಂದು ಬದುಕಿದ್ದಾರೆ. ಹಲಸಿನ ಬೀಜಕ್ಕೆ “ಅರಿ“(ಪೆಲತ್ತರಿ – ಹಲಸಿನ ಅಕ್ಕಿ)ಎಂದೇ ಗೌರವದಿಂದ ಕರೆದಿದ್ದಾರೆ.
ತುಲುನಾಡಲ್ಲಿ ಹಲಸಿನ ಹಣ್ಣುಗಳಿಂದ ವಿವಿಧ ಅಡ್ಯೆ (ತಿಂಡಿ)ಮಾಡುತ್ತಾರೆ. ಈ ತಿಂಡಿಗಳನ್ನು ತಿನ್ನುವ ಮೊದಲು ಒಂದಿಷ್ಟು ಗಂಜಿ ಉಂಡರೆ ಎದೆ ಉರಿ,ಹೊಟ್ಟೆ ಉರಿ ಇರು ವುದಿಲ್ಲ. ಆ ಕಾಲದಲ್ಲಿ ಯಥೇಚ್ಛವಾಗಿ ಗಂಜಿ ಉಣ್ಣಲು ಇರದ ಕಾರಣದಿಂದ ಈ ಹಣ್ಣುಗಳಿಗೆ ಒಂದಿಷ್ಟು ಅಕ್ಕಿ ಹಾಕಿ ವಿವಿಧ ಪೆಲಕಾಯಿ ಅಡ್ಯೆ ಮಾಡುತ್ತಿದ್ದರು. ಇದರಿಂದ ಎದೆ ಉರಿ (ತಿಗಲೆ ಪೊತ್ತುನು),ಹೊಟ್ಟೆ ಉರಿ(ಬಂಜಿ ಪೊತ್ತುನು) ಒಂದೇ ಸಮನೆ ಬರುತಿತ್ತು.ಈ ತಿಂಡಿಗಳನ್ನು ತಿಂದು ಸುಮ್ಮನೆ ಕೂತರೆ ಈ “ಪೊತ್ತುನ ಸೀಕ್“(ಉರಿಯುವ ರೋಗ)ಬರುವುದಿಲ್ಲ. ತಗ್ಗಿ ಬಗ್ಗಿ ಕೆಲಸ ಮಾಡುವಾಗ ಅದರಲ್ಲೂ ಕೃಷಿ ಕಾರ್ಮಿಕರಿಗೆ ಬಹಳ ತೊಂದರೆ ಅನುಭವಿಸುತ್ತಿದ್ದರು. ಆಮ್ಲೀಯತೆ(acidity)ಯಿಂದ ಹುಳಿ ತೇಗು ಬಂದು ತಲೆನೋವು ಬರುತ್ತಿತ್ತು.
ಇಂತಹ ಸಂದರ್ಭದಲ್ಲಿ ಅವರು ಕಂಡು ಹಿಡಿದ ಮದ್ದೇ ಈ ತರಕಾರಿ. ಉಂದೆನ್ ತಿಂದ್ ತಿಗಲೆ ಪೊತ್ತುನ ,ಬಂಜಿ ಪೊತ್ತುನ ಸೀಕ್ನ್ ಸುಮರ್ ಮಲ್ತೊನುವೆರ್(ಈ ತರಕಾರಿ ತಿಂದು ಎದೆಯಲ್ಲಿ ಹೊಟ್ಟೆಯಲ್ಲಿ ಬೆಂಕಿಯಂತೆ ಬರುವ ಉರಿಯನ್ನು ಶಮನಗೊಳಿಸುತ್ತಾರೆ). ಆಮ್ಲ ಪಿತ್ತದಿಂದ ಬರುವ ನೋವುಗಳನ್ನು ತಣ್ಣನೆ ಗೊಳಿಸುತ್ತಾರೆ.
ತಿಗಲೆದ ತೂ ತೆಕ್ಕರೆ ನಾಡಿನ ಮರ್ದಗ್ “ತೆಕ್ಕರೆ” ಪಂದೇ ಲೆತ್ತೆರ್(ಎದೆ ಉರಿಯನ್ನು ನಂದಿಸಲು ಕಂಡು ಹಿಡಿದ ಮದ್ದೇ”ತೆಕ್ಕರೆ”ಎಂದು ಕರೆದರು).”ತೂ”(ಉರಿ|ಬೆಂಕಿ) ಪದವು ನಿಶಬ್ಧ|ಮೂಕ ಆಯಿತು.ಈ ಮುಳ್ಳು ಸೌತೆಕಾಯಿ ಯು ಇಂತಹುದೇ ಕಾಯಿಲೆಗೆ ಎಂದು ಅರಿತುಕೊಂಡು “ತೂ” ಪದವನ್ನು ಉಚ್ಛಾರ ಮಾಡದೆ “ತೆಕ್ಕರೆ” ಎಂದು ನಾಮಕರಣ ಮಾಡಿದ್ದರು.
ತಿಗಲೆ ಪೊತ್ತುನ, ಬಂಜಿ ಪೊತ್ತುನ|ತಿಗಲೆ ತೂ ಬರ್ಪುನ, ಬಂಜಿ ತೂ ಬರ್ಪುನ ಸೀಕುಲೆನ್ ತೆಕ್ಕವುನ(ನಂದಿಸುವ) ಮರ್ದೇ “ತೆಕ್ಕರೆ”.ಈ ತೆಕ್ಕರೆಯನ್ನು ಹಸಿಯಾಗಿಯೇ ತಿನ್ನಬೇಕು. ಇದಕ್ಕೆ ಅಕ್ಕಿ ಹಾಕಿ ತಿಂಡಿ ತಿನಿಸುಗಳನ್ನು ಮಾಡಿ ತಿಂದರೆ ಪುನಃ ಎಸಿಡಿಟಿ ಆಗುತ್ತದೆ. ಅದಕ್ಕೆ ಪುನಃ ಹಸಿ ತೆಕ್ಕರೆ ತಿನ್ನಬೇಕು.
ಈ ತೆಕ್ಕರೆ ಹಣ್ಣಾದ ಮೇಲೂ ಇದರ ಜ್ಯೂಸ್ ಮಾಡಿ ಕುಡಿಯಬಹುದು. ಉಪ್ಪುಖಾರ ಬೆರೆಸದೆ ತೆಕ್ಕರೆ ತಿಂದರೆ ಹೆಚ್ಚು ಪರಿಣಾಮಕಾರಿಯಾಗಿದೆ.ಬೇಗನೆ ತೂ ತೆಕ್ಕುಂಡು (ಬೇಗನೆ ಬೆಂಕಿ ಉರಿ ಆರುತ್ತದೆ). ನಮ್ಮ ತುಲುವ ಜ್ಞಾನಿಗಳು ಈ ಕಾಯಿಗೆ ಒಂದು ಹೆಸರಿಟ್ಟು ಅದರಲ್ಲೇ ಈ ಕಾಯಿ ಇಂತಹುದೇ ಕಾಯಿಲೆಗೆ ದಿವ್ಯ ಔಷಧ ಎಂದಿದ್ದಾರೆ.ಅವರನ್ನು ನಮಿಸೋಣ ಅಲ್ಲವೇ?