ತುಲುನಾಡಿನಾದ್ಯಂತ ಪಾಂಡವರ ಕಲ್ಲು, ಪಾಂಡು ಕಲ್ಲು, ಪಾಂಡವರ ಗುಹೆ ಇತ್ಯಾದಿ ಹೆಸರುಗಳಲ್ಲಿ ಕರೆಯುವ ಕಲ್ಲುಗಳು ಮತ್ತು ಊರುಗಳಿವೆ. ಇಲ್ಲಿ “ಪಾಂಡ್ಯರು”ಎಂಬ ಪದವನ್ನು ಪಾಂಡಿ, ಪಾಂಡವರು ಎಂದು ಕರೆಯುತ್ತಾ ಬಂದಿದ್ದಾರೆ. ತುಲುನಾಡಿಗೂ ಮತ್ತು ಮಹಾಭಾರತದ ಪಾಂಡವರಿಗೂ ಯಾವುದೇ ಸಂಬಂಧ ಇಲ್ಲ. ತುಲುವಿನಲ್ಲಿ ಪಾಂಡ್ಯ|ಪಾಂಡವ|ಪಾಂಡ|ಪಾಂಡಿ ಎಂದರೆ ದೊಡ್ಡವರು ಎಂಬ ಅರ್ಥಗಳು ಇದೆ. ಇಲ್ಲಿನ ಮೂಲನಿವಾಸಿಗಳು ಧನಿ ಎಂಬ ಅರ್ಥದಲ್ಲಿ ಪಾಂಡವ|ಪಾಂಡವೆರ್ ಎಂದಿದ್ದಾರೆ. ತುಲುನಾಡಲ್ಲಿ ಪುದ ಮತ್ತು ಪಾಂಡವೆ ಎಂಬ ಎರಡು ಹಕ್ಕಿಗಳು ಇವೆ. ಇವುಗಳು ಒಂದೇ ಬಣ್ಣದಲ್ಲಿದ್ದು ನೋಡಲು ಗಾತ್ರದಲ್ಲಿ ಬೇರೆ ಬೇರೆ ಆಗಿದೆ. ದೊಡ್ಡ ಹಕ್ಕಿಯನ್ನು “ಪಾಂಡವ”ಎನ್ನುವರು. ಪಾಂಡು ಪಾಂಡವ ಕಲ್ಲು ಎಂದರೆ ದೊಡ್ಡ ಕಲ್ಲು ಎಂದು ಹೇಳಬಹುದು.
ತುಲುನಾಡಲ್ಲಿ ಪಾಂಡ್ಯರ ಇತಿಹಾಸ ಇದೆ. ಇಲ್ಲಿನ ಮೂಲ ನಿವಾಸಿಗಳು ತುಲುಕಾಡಲ್ಲಿ ನಾಗನನ್ನು ಕಲ್ಲು ಹಾಕಿ ನಂಬಿದ್ದರು. ನಾಗನ ತುಲು ಮಣ್ಣಿನಲ್ಲಿ ಕುಡರಿ(ಹುರುಳಿ ಮತ್ತು ಅಕ್ಕಿ)ಎಸೆದು ತುಲುನಾಡ್ ಸೃಷ್ಟಿ ಮಾಡಿದ್ದರು. ಬೂತರಾಧನೆಯನ್ನೂ ಸ್ಥಾಪನೆ ಮಾಡಿದ್ದರು. ಆದರೆ ತುಲುನಾಡ್ ಕಟ್ಟುವುದು ಇದೇ ಪಾಂಡ್ಯರು. ತುಲುನಾಡನ್ನು ಶ್ರೀಮಂತಗೊಳಿಸಿ ಆಳಿದ್ದಾರೆ. ವಿಜೃಂಭಿಸಿ ಮೆರೆದು ರಾಜರಾಗಿದ್ದಾರೆ.
ಆ ಕಾಲದಲ್ಲಿ “ಪಾಂಡ್ಯರು” ಎಂದು ಕರೆಯಲ್ಪಡುವ ರಾಜ ವಂಶಸ್ಥರ ಪೀಳಿಗೆಯವರು ತುಲುನಾಡಿಗೆ ರಾಜರಾಗಿ ಬಂದಿರಲಿಲ್ಲ. ಜೀವನೋಪಾಯಕ್ಕಾಗಿ ಗಟ್ಟದ ಮೇಲಿಂದ ತಲನಾಡಿಗೆ (ತುಲುನಾಡಿಗೆ)ಬಂದಿ ದ್ದಾರೆ. ಬಂದವರು ಇಲ್ಲಿ ಕಂಡಿದ್ದು ಕೊಳ (ಪಟ್ಲ) ಪ್ರದೇಶಗಳು. ದಟ್ಟವಾಗಿ ಬೆಳೆದ ಕಾಡುಗಳು. ಕಾಡುಗಳ ಲ್ಲಿ ತಿರುಗಾಡುವ ವಿವಿಧ ಮೃಗ ಪಕ್ಷಿಗಳು ಸರಿಸೃಪಗಳು. ಇಲ್ಲಿನ ಮೂಲ ನಿವಾಸಿಗಳು ಎತ್ತರದ ಪ್ರದೇಶಗಳಲ್ಲಿ ಪಾದೆಗಳ ಗುಡ್ಡಗಳ ಸಮತಟ್ಟಾದ ನೆಲ ಪರಿಸರದಲ್ಲಿ ಬದುಕುವುದನ್ನು ಕಾಣುತ್ತಾರೆ.
ಬಂದ ಈ ಜನರು ಕೊಳ ಪ್ರದೇಶ ಆವರಿಸಿದ್ದ ಸ್ಥಳಗಳ ದಂಡೆಗಳಲ್ಲಿ ಅಲ್ಲಲ್ಲಿ ಗುಡಿಸಲು ಹಾಕಿ ವಾಸ ಮಾಡಲು ಆರಂಭಿಸುತ್ತಾರೆ. ಆ ಕಾಲದಲ್ಲಿ ತಮಗೆ ಎಷ್ಟು ಬೇಕು ಅ ಷ್ಟು ಜಾಗವನ್ನು ತಮ್ಮದಾಗಿಸಬಹುದಾಗಿತ್ತು. ಅದರಂತೆ ಒಂದೊಂದು ಪ್ರದೇಶವನ್ನೇ ತಮ್ಮದೇ ಎಂದು ಗಟ್ಟಿ ಮಾಡಿಸಿ ಕೊಳ್ಳುತ್ತಾರೆ. ಕೊಳ ಪ್ರದೇಶವನ್ನು “ಕೊಳ”ಕ್ಕೆ ಗದ್ದೆಗಳನ್ನಾಗಿ ಪರಿವರ್ತಿಸುವರು. ಮಜಲು, ಬೆಟ್ಟು ಗದ್ದೆಗಳನ್ನು ನಿರ್ಮಾಣ ಮಾಡುತ್ತಾರೆ. ಕೆಲಸಕ್ಕೆ ಇಲ್ಲಿನ ಮೂಲವಾಸಿಗಳನ್ನು ಬಳಸುವುದಲ್ಲದೆ ಬೇರೆ ಬೇರೆ ಊರುಗಳಿಂದ ಕೆಲಸಕ್ಕೆ ಜನರನ್ನು ಕರೆದುಕೊಂಡು ಬರುತ್ತಾರೆ. ಅವರನ್ನೂ ಇಲ್ಲೇ ನೆಲೆಯಾಗುವಂತೆ ಮಾಡುವರು. ಜೀವನೋಪಾಯಕ್ಕಾಗಿ ಬಂದ ಇವರ ನ್ನು ಪಾಂಡ್ಯರು,ಪಾಂಡವರು, ದೊಡ್ಡವರು ಎಂದು ಇತರರಿಂದ ಕರೆಸಿಕೊಳ್ಳುವರು. ತುಂಡರಸರು ಎಂದು ಮೆರೆಯುವರು. ಅವರು ಪುಕ್ಕಟೆಯಾಗಿ ತಮ್ಮದಾಗಿಸಿ ಕೊಂಡ ಭೂಮಿಯನ್ನು ನಂತರದ ಕಾಲದಲ್ಲಿ ತುಂಡು ತುಂಡು ಮಾಡಿ ಗೇಣಿಗೆ ಕೊಡುವರು. ರಾಜರಾಗುವರು.
( ಬೆಂಕಿ ಗೂಡಿನ ಆರು ಚಪ್ಪಡಿ ಕಲ್ಲುಗಳಲ್ಲಿ ಮುಂಭಾಗದ ಒಂದು ಚಪ್ಪಡಿ ಎದುರಿನಲ್ಲಿ ಬಿದ್ದಿದೆ.ಬಿದ್ದಿರುವ ಚಪ್ಪಡಿ ಕಲ್ಲಿನ ಮೊಣಚಾದ ಭಾಗವು ನೆಲದಲ್ಲಿ ಹೂತಿರಬೇಕಿತ್ತು)
ಈ ರೀತಿಯಾಗಿ ಜಮೀನು ಮಾಡಿ ಕೊಂಡ ಪಾಂಡ್ಯ ರಿಗೆ ದೊಡ್ಡ ತೊಂದರೆ ಆಗಿದ್ದು ಪ್ರಾಣಿಗಳದ್ದು. ಇದರಿಂ ದ ಹೊರ ಬರುವುದೇ ಒಂದು ದೊಡ್ಡ ಸವಾಲಾಗಿತ್ತು. ಆ ಕಾಲದಲ್ಲಿ ಕ್ರೂರವಾದ ಪ್ರಾಣಿಗಳು ಅಂದರೆ ಹುಲಿ ಮತ್ತು ಕಾಡು ಹಂದಿಗಳು. ಹುಲಿಗಳು ಮನೆಯ ಸಾಕು ಪ್ರಾಣಿಗಳನ್ನು ಭಕ್ಷಿಸುವುದಲ್ಲದೆ ಮಾನವರಿಗೂ ಅಪಾಯಕಾರಿ ಆಗಿತ್ತು. ಕಾಡು ಹಂದಿಗಳು ಇರುವೆಗಳಂ ತೆ ಸಾಲು ಗಟ್ಟಿ ಹೋಗುತ್ತಿತ್ತು. ಇವುಗಳಿಂದ ಬೆಳೆ ನಾಶ ವಾಗುತ್ತಿತ್ತು. ವಿವಿಧ ವಿಷಪೂರಿತ ಹಾವುಗಳು ಎಲ್ಲೆಡೆ ಹರಿದಾಡುವುದು ಸಾಮಾನ್ಯವಾಗಿತ್ತು. ಲೆಕ್ಕವಿಲ್ಲದ ಮೃಗ ಪಕ್ಷಿ ಸರಿಸೃಪಗಳದ್ದೇ ನಾಡು ತುಲುನಾಡಾಗಿತ್ತು. ಮೃಗಗಳು ಎಂದರೆ ಬರೇ ಹುಲಿಗಳು,ಹಂದಿಗಳು ಮಾತ್ರ ಅಲ್ಲ. ಆನೆ,ಕರಡಿ, ಕಾಡು ಕೋಣಗಳು ಇತ್ಯಾದಿ ಇತರ ಎಲ್ಲಾ ಜಾತಿಯ ಪ್ರಾಣಿಗಳ ಪಡೆಗಳು ಇದ್ದವು. ಇವುಗಳಿಂದ ಹೊರ ಬರಲು ತಮ್ಮನ್ನು ರಕ್ಷಿಸಿಕೊಳ್ಳಲು ಪಾಂಡ್ಯರ ಜಮೀನ್ದಾರರೆಲ್ಲರೂ ಒಟ್ಟಾಗಿ ಸಭೆಗಳನ್ನು ನಡೆಸುವರು.
(ಈ ಚಪ್ಪಡಿಯ ಕಿಂಡಿಯಿಂದ ಬೆಂಕಿ|ಹೊಗೆ ಗೂಡಿಗೆ ಸೌದೆ,ಕಟ್ಟಿಗೆ, ಹುಟ್ಟು ಇತ್ಯಾದಿ ಇತ್ಯಾದಿ ಹಾಕುವುದು)
ಸಭೆಯಲ್ಲಿ ಇಲ್ಲಿನ ಮೂಲ ನಿವಾಸಿಗಳು ಆರಾಧಿಸು ವ ನಾಗನನ್ನು ಆರಾಧನೆ ಮಾಡುವ ನಿರ್ಣಯ ಮಾಡು ವರು. ಅಲ್ಲದೆ ಮೂಲನಿವಾಸಿಗಳ ಮೂಲ ಪಂಚ ಬೂತ ಗಳಾದ ಲೆಕ್ಕೆಸಿರಿ,ಮೈ ಸೈಂದಾಯ(ಬೃಹತ್ ಶರೀರದವ) ಗುಲಿಗ, ಪಂಜುರ್ಲಿ,ಜುಮಾದಿ ಬೂತಗಳನ್ನೂ ನಂಬಿ ಸ್ಥಾಪನೆ ಮಾಡುವ ನಿರ್ಣಯಕ್ಕೆ ಬರುವರು. ಈ ಬೂತ ಗಳ ಮಾಹಿತಿಯನ್ನು ಪಾಂಡ್ಯರು ಅವರಿಂದ ಪಡೆಯು ವರು. ತುಲುನಾಡಿನಲ್ಲಿ ದೈವಗಳಿಗೆ(ನಾಗ+ಬೂತೊಲು) ಪಾಂಡ್ಯರು ಒತ್ತು ಕೊಡುವರು. ಮೂಲನಿವಾಸಿಗಳು ಆರಾಧಿಸುವ ಪರಿಯಲ್ಲೇ ಪ್ರಕೃತಿಯನ್ನು ಆರಾಧಿಸುವಂ ತೆ ಆರಾಧನೆ ಮಾಡುವರು.
(ಈ ಎರಡು ಚಪ್ಪಡಿಗಳ ಸಂದಿಯಿಂದ ಗೂಡು ಒಳಗಿನ ಬೂದಿಯನ್ನು ಹೊರಗೆ ಹಾಕುವುದು)
(ಪಶ್ಚಿಮ ದಿಕ್ಕಿನಲ್ಲಿ ಇರುವ ಕಿಂಡಿಯಿಂದ ಬೆಂಕಿ ಉರಿಯಲು ಗಾಳಿ ಬೀಸುತ್ತದೆ)
(ಸಾಲಾಗಿ ನೆಲದಲ್ಲಿ ಕಾಣುವ ಈ ಕಲ್ಲುಗಳ ಸಹಾಯದಿಂದ ಮೇಲ್ಛಾವಣಿ ಚಪ್ಪಡಿ ಕಲ್ಲನ್ನು ಬಡಿಗೆಗಳಿಂದ ಮೇಲೆ ಹಾಸಲಾಗಿದೆ)
(ಬೆಂಕಿಯಿಂದ ಕಾದು ಕಾದು ಬಿಸಿ ಆಗಿ ಮೇಲ್ಛಾವಣಿ ಚಪ್ಪಡಿಯ ಅಡಿ ಭಾಗವು ದುರ್ಬಲ ಆಗಿದೆ.)
ಈ ಪಾಂಡ್ಯರು ಕಾಡುಗಳಿಂದ ನಾಡಿಗೆ ಬರುವ ಬೇರೆ ಬೇರೆ ಪ್ರಾಣಿಗಳನ್ನು ನಾಡಿಗೆ ಇಳಿಯದಂತೆ ಮಾಡುವ ಪ್ರಯೋಗವೇ “ಬೆಂಕಿಗೂಡು”ಅಥವಾ “ಹೊಗೆಗೂಡು”. ಈ ಗೂಡುಗಳನ್ನು ಪಾದೆ ಕಲ್ಲುಗಳ ಮೇಲೆ ಇಲ್ಲವೇ ಮುರಕಲ್ಲು ಹರಡಿರುವ ಜಾಗದಲ್ಲೇ ಕಟ್ಟುವರು. ಊರೆ ಲ್ಲಾ ನಮ್ಮದೆಂದು ಜಾಗವನ್ನು ಆಕ್ರಮಿಸಿರುವ ಇವರು ತಮ್ಮ ತಮ್ಮಮನೆ ಜಾಗ ಜಮೀನುಗಳ ಪಕ್ಕ ಕಾಡು ಪ ರ್ವತಗಳ ಕೆಳಗೆ ದೊಡ್ಡ ದೊಡ್ಡ ಕಲ್ಲುಗಳನ್ನು ಬಳಸಿ ಈ ಗೂಡುಗಳನ್ನು ನಿರ್ಮಾಣ ಮಾಡುವರು. ಈ ಪಾಂಡ್ಯ ರು ನಿರ್ಮಾಣ ಮಾಡಿದ ಬೃಹತ್ ಕಲ್ಲಿನ ಗೂಡುಗಳನ್ನು ಇಲ್ಲಿನ ಉಳಿದ ಜನರು “ಪಾಂಡ್ಯರ ಕಲ್ಲು” ಎಂದು ಕರೆ ಯುವರು. ಕ್ರಮೇಣವಾಗಿ “ಪಾಂಡವೆರೆ” ಕಲ್ಲ್ ಕಲ್ಲು ಎಂದರು. ಕೆಲವೆಡೆ ಕಾಡಿನ ತಪ್ಪಲಲ್ಲಿ ಬಂಡೆಗಕಲ್ಲುಗಳ ಗುಹೆಗಳಲ್ಲಿ ಸಂದುಗಳಲ್ಲಿ “ಹೊಗೆಗೂಡು”ಗಳನ್ನು ರಚಿಸುವರು. ಇದನ್ನು ಪಾಂಡ್ಯರ ಗುಹೆಗಳು ಎಂದು ಇಲ್ಲಿನ ಜನರು ಕರೆಯುತ್ತಾರೆ. ಕ್ರಮೇಣವಾಗಿ ಪಾಂಡವೆ ರೆ ಗೂಡು ಗುಹೆ ಎಂದು ಕರೆದರು. ಪ್ರಾಣಿಗಳಿಂದ ಆಗುವ ಅನಾಹುತಕ್ಕೆ ಬಲಿಯಾಗದಂತೆ,ಬೆಳೆಸಳೆಗಳ ಸಂರಕ್ಷಣೆಗೆ ಎಂದೇ ಜನಿಸಿತ್ತು ಪಾಂಡ್ಯರ ಕಲ್ಲಿನ ಬೆಂಕಿ ಗೂಡು ಅಥವಾ ಹೊಗೆ ಗೂಡು. ಇದು ಒಂದು ರೀತಿಯ ಬೃಹತ್ ಅಗ್ಗಿಷ್ಟಿಕೆ. ತುಲು ಭಾಷೆಯಲ್ಲಿ ಹೇಳುವುದಾದರೆ “ತೂ ಪಾಡುನ”(ಬೆಂಕಿ ಹಾಕುವುದು)ಅಥವಾ “ಪುಗೆ ಪಾಡುನ”(ಹೊಗೆ ಹಾಕುವುದು). ಬೆಂಕಿ ನಂದದಂತೆ ಚೆನ್ನಾಗಿ ಉರಿಯುವಂತೆ ಹೊಗೆಯಾಡುವಂತೆ ಸಮ ತಟ್ಟಾದ ಗಟ್ಟಿಯಾದ ಪಾದೆಕಲ್ಲು ಮುರಕಲ್ಲು ಹರಡಿದ್ದ ಜಾಗಗಳಲ್ಲಿ ಈ ಕಲ್ಲಿನ ಅಗ್ಗಿಷ್ಟಿಕೆ ಇಲ್ಲವೇ ಗುಹೆಗಳನ್ನು ನಿರ್ಮಾಣ ಮಾಡುತ್ತಾರೆ. ಪಾದೆಕಲ್ಲುಗಳ ಮತ್ತು ಮುರ ಕಲ್ಲುಗಳ ಜಾಗದಲ್ಲಿ ನೀರು ನಿಲ್ಲುವುದಿಲ್ಲ. ಮಣ್ಣು ಒದ್ದೆ ಯಾಗಿರುವುದಿಲ್ಲ. ಆದ್ದರಿಂದ ಇಂತಹ ಗಟ್ಟಿಯಾದ ಜಾಗಗಳಲ್ಲಿ ಶಾಶ್ವತವಾಗಿ ಈ ಅಗ್ಗಿಷ್ಟಿಕೆ ಮತ್ತು ಗುಹೆಗಳ ನಿರ್ಮಾಣ ಆಗುತ್ತದೆ.
(ತೂ ಪಾಡುನ|ಪುಗೆ ಪಾಡುನ(ಬೆಂಕಿ ಗೂಡು|ಹೊಗೆಗೂಡು)ಇಮೇಜುಗಳು)
ಕಾಡುಗಳಿಂದ ನಾಡಿಗೆ ನುಸುಳುವ ಮೃಗಗಳು ದೂರ ದಿಂದಲೇ ಈ ಉರಿಯುವ ಬೆಂಕಿಯನ್ನು ರಾತ್ರಿಯಲ್ಲಿ ಕಾಣುತ್ತವೆ. ಹಗಲಿನಲ್ಲಿ ಕಾಡೆಲ್ಲಾ ಹರಡಿರುವ ಹೊಗೆ ಯನ್ನು ಕಾಣುತ್ತವೆ. ಈ ದೃಶ್ಯಗಳು ಅವುಗಳಿಗೆ ಭಯ ಹುಟ್ಟಿಸುತ್ತದೆ. ತಮಗೆ ಅಪಾಯ ಇದೆ ಎಂದು ಅವುಗಳು ಅಲ್ಲಿಂದ ಪಲಾಯನ ಮಾಡಿ ಕಾಡುಗಳಲ್ಲೇ ಇದ್ದು ನಾಡಿಗೆ ಬರಲು ಪ್ರಯತ್ನಿಸುವುದಿಲ್ಲ. ಹಕ್ಕಿಗಳು ಕೂಡಾ ಹೊಗೆಯನ್ನು ಕಂಡು ನಾಡಿನತ್ತ ಬಾರವು ಎಂಬ ನಂಬಿಕೆಯಿಂದ ಅಗ್ಗಿಷ್ಟಿಕೆ ಗೂಡು ಗುಹೆಗಳನ್ನು ನಿರ್ಮಾ ಣ ಮಾಡುವರು.
ತುಲುನಾಡಿಗೆ ಜೈನರು ಪ್ರಪ್ರಥಮವಾಗಿ ನೀಡಿರುವ ಕಲ್ಲಿನ ಕಾಣಿಕೆ ಎಂದರೆ ಇದೇ ಕಲ್ಲಿನ ಬೆಂಕಿಯ ಬೆಳಕಿನ ಗೂಡು. ಹೊಗೆಯಾಡುವ ಗೂಡು. ನಾಡನ್ನು ಪ್ರಾಣಿಗ ಳಿಂದ ರಕ್ಷಿಸುವ ಕಲ್ಲುಗಳ ಗೂಡು. ತುಲುನಾಡು ಕಟ್ಟುವ ಯೋಜನೆಯ ಉದ್ದೇಶ. ಕೊಳ(ಪಟ್ಲ)ಪ್ರದೇಶವನ್ನು ಗದ್ದೆಗಳನ್ನಾಗಿ ಪರಿವರ್ತಿಸಿ ಕುಡುಅರಿ ಅಂತಹ ಧಾನ್ಯಗ ಳನ್ನು ಬೆಳೆಸಿ ಕೃಷಿಯನ್ನು ಉತ್ತುಂಗಕ್ಕೆ ಕೊಂಡೊಯ್ಯು ವ ಉದ್ದೇಶ. ಆ ಉದ್ದೇಶವನ್ನು ಹೊತ್ತ ಪರಿಣಾಮವಾ ಗಿ ಜಯಶೀಲರಾಗಿ ಮುಂದೆ ಇಲ್ಲಿನ ರಾಜರಾಗಿ ಆಳಿ ಮೆರೆಯುವರು.
(ಪಾಂಡವರ ಹೊಗೆಗೂಡು ಇಮೇಜುಗಳು)
ಪಾಂಡವರ ಕಲ್ಲು ಇಲ್ಲವೇ ಪಾಂಡವರ ಗುಹೆ ಎಂದರೆ ಬೆಂಕಿಗೂಡು ಅಥವಾ ಹೊಗೆಗೂಡು. ಇವುಗಳ ನ್ನು ಹರಡಿದ ಪಾದೆಕಲ್ಲು ಇಲ್ಲವೇ ಮುರಕಲ್ಲು ಇವುಗಳ ಮೇಲೆ ಅಥವಾ ಪ್ರಕೃತಿ ನಿರ್ಮಿತ ಮೇಲ್ಮುಖವಾಗಿ ಬೆಳೆದ ಕಲ್ಲು ಬಂಡೆಯ ಸಂದಿಗಳಲ್ಲಿ ಮತ್ತು ಪ್ರಕೃತಿ ನಿ ರ್ಮಿಸಿದ ಮುರ ಕಲ್ಲಿನ ಗುಹೆಗಳಲ್ಲಿ ನಿರ್ಮಾಣ ಮಾಡಿ ಡಿದ್ದಾರೆ. ಒಟ್ಟಿನಲ್ಲಿ ಕಲ್ಲುಗಳಿರುವ ಗಟ್ಟಿ ನೆಲ ಬೇಕು. ಹರಡಿರುವ ಪಾದೆಕಲ್ಲು ಮತ್ತು ಮುರಕಲ್ಲು ಇವುಗಳಲ್ಲಿ ಈ ಗೂಡುಗಳನ್ನು ನಿರ್ಮಾಣ ಮಾಡಲು ಮುಖ್ಯವಾಗಿ ಆರು ಪಾದೆಕಲ್ಲಿನ ಚಪ್ಪಡಿಗಳನ್ನು ಬಳಸಿದ್ದಾರೆ. ಈ ಚಪ್ಪಡಿಗಳ ವಿನ್ಯಾಸ ಮತ್ತು ಅಳತೆಗಳು ಒಂದೇ ರೀತಿಯಲ್ಲಿ ಕಂಡು ಬರುವುದಿಲ್ಲ. ಮೊದಲಾಗಿ ಗೂಡು ಅಥವಾ ಅಗ್ಗಿಷ್ಟಿಕೆಯನ್ನು ನಿರ್ಮಾಣ ಮಾಡುವ ಮೊದಲು ವಿಸ್ತಾರವಾದ ಪಾದೆ|ಮುರ ಕಲ್ಲಿನ ಮೇಲೆ ಎತ್ತರಕ್ಕೆ ಮಣ್ಣು ಹಾಕಿ ಹದಮಾಡಿ ಚಿಕ್ಕ ದಿನ್ನೆ ಮಾಡಿದ್ದಾರೆ. ಅದರ ಮೇಲೆ ಒಂದು ಚಪ್ಪಡಿ ಕಲ್ಲನ್ನು ಮಲಗಿಸಿದ್ದಾರೆ. ನಂತರದಲ್ಲಿ ಕೆಳಭಾಗವು ಮೊಣಚಾದ ವಿನ್ಯಾಸ ಇರುವ ನಾಲ್ಕು ಚಪ್ಪಡಿಗಳನ್ನು ಮೊದಲೇ ಪಾದೆಯನ್ನು ಚೌಕಾಕಾರದಲ್ಲಿ ಕೊರೆದ ಜಾಗಕ್ಕೆ ನೆಟ್ಟಿದ್ದಾರೆ. ಪಶ್ಚಿಮ ದಿಕ್ಕಿನಲ್ಲಿ ನೆಟ್ಟಿರುವ ಚಪ್ಪಡಿಯಲ್ಲಿ ಸುಮಾರು ಒಂದೂವರೆ ಅಡಿಯಷ್ಟು ವ್ಯಾಸದ ಕಿಂಡಿ ಇರುತ್ತದೆ. ಈ ನಾಲ್ಕು ಚಪ್ಪಡಿಗಳ ತಳಭಾಗದಲ್ಲಿ ಎರಡು ಚಪ್ಪಡಿಗಳನ್ನು ಒಂದಕ್ಕೊಂದು ತಾಗದಂತೆ ಓರೆಯಾಗಿ ನೆಟ್ಟು ಗೂಡಿನ ತಳಭಾಗವನ್ನು ಹೊರಗಿನಿಂದ ಇಣುಕಿ ನೋಡುವಂತೆ ಇರುತ್ತದೆ. ಚೌಕಾಕಾರದ ಗೂಡಿನ ರಚನೆ ಆದ ಬಳಿಕ ಈ ಕಂಬದಂತಿರುವ ನಾಲ್ಕು ಚಪ್ಪಡಿಗಳ ಸುತ್ತಲೂ ಹದಗೊಳಿಸಿದ ಮಣ್ಣಿನ ದಿನ್ನೆಯನ್ನು ಒಳಗಿನ ದಿನ್ನೆಯ ಮಟ್ಟಕ್ಕೆ ಏರಿಸಿದ್ದಾರೆ. ನಂತರ ನೆಟ್ಟಿರುವ ನಾಲ್ಕು ಚಪ್ಪಡಿಗಳ ಮೇಲೆ ದೊಡ್ಡ ಗಾತ್ರದ ದಪ್ಪನೆಯ ಚಪ್ಪಡಿಯನ್ನು ಇರಿಸಲಾಗಿದೆ. ಗೂಡಿನ ಒಳಗೆ ಮಳೆ ನೀರು ಬೀಳದಂತೆ ಮೇಲ್ಛಾವಣಿಯ ಕಲ್ಲು ಹೊರಗೆ ಚಾಚಿ ಮೀರಿಸುವಂತಿರಬೇಕು.
(ಸುಟ್ಟು ಕರಕಲಾದ ಹೊಗೆ ಗೂಡಿನ ಒಳಗಿನ ಕಲ್ಲುಗಳು)
ಮೇಲ್ಛಾವಣಿ ಚಪ್ಪಡಿಯನ್ನು ಬೇರೆ ಕಲ್ಲುಗಳ ಮೇಲೆ ಇನ್ನೊಂದು ಕಲ್ಲು ಇಡುತ್ತಾ ಅದರ ಮೇಲೆ ಮೇಲ್ಛಾವಣಿ ಚಪ್ಪಡಿಯನ್ನು ಮರದ ಬಡಿಗೆಗಳಿಂದ ನಿಧಾನವಾಗಿ ಜಾರಿಸುತ್ತಾ ಗೂಡಿನ ಎತ್ತರಕ್ಕೆ ಬಂದಾಗ ಆ ಬೃಹತ್ ಚಪ್ಪಡಿಯನ್ನು ಗೂಡಿನ ಮಾಡಿನ ಮೇಲೆ ಜಾಗರೂಕತೆಯಿಂದ ಜಾರಿಸುವುದು. ಮೇಲ್ಛಾವಣಿ ಚಪ್ಪಡಿಯು ಇಳಿಜಾರಾಗಿ ಮಳೆನೀರು ಇಳಿದು ಹೋಗುವಂತೆ ಇರಬೇಕು. ಮಳೆ ನೀರಿನಿಂದ ತೊಂದರೆ ಆಗಬಾರದೆಂಬ ಕಾರಣದಿಂದಲೇ ಈ ಗೂಡನ್ನು ಪಾದೆಕಲ್ಲಿನ ಮುರಕಲ್ಲಿನ ಮೇಲೆ ನಿರ್ಮಿಸಿದ್ದಾರೆ. ಮೇಲ್ಛಾವಣಿ ಚಪ್ಪಡಿ ಮತ್ತು ನೇರವಾಗಿ ನೆಟ್ಟಿರುವ ಚಪ್ಪಡಿಗಳ ಸಂದಿಗಳಲ್ಲಿ ಜಾಗ ಇರಬೇಕು. ಟಚ್ ಆಗಿರಬಾರದು. ಇಲ್ಲಿಗೆ ಬೆಂಕಿ|ಹೊಗೆ ಗೂಡು ತಯಾರಿ ಸಿದ್ಧವಾಗುತ್ತದೆ.
ಗೂಡಿನ ಕಿಂಡಿ ಮೂಲಕ ಕಟ್ಟಿಗೆ ಸೌದೆ ಹಾಕುವುದು. ಅಗತ್ಯ ಬಿದ್ದಾಗ ಈ ಕಿಂಡಿ ಮೂಲಕ ಪ್ರವೇಶ ಮಾಡುವುದು. ಕೆಳಭಾಗದ ಸಂದಿಗಳಲ್ಲಿ ಬೆಂಕಿ ಹಚ್ಚು ವುದು. ಈ ರಂಧ್ರಗಳಿಂದಲೇ ಗೂಡು ಒಳಗಿನ ಬೂದಿ ಯನ್ನು ಎಳೆದು ಹೊರಗೆ ಹಾಕುವುದು. ಗೂಡಿನ ಹೊರ ಬರುವ ಬೆಂಕಿಯ ಕೆನ್ನಾಲೆಗೆ ಮತ್ತು ಹೊಗೆಯು ಮೇಲ್ಛಾವಣಿಯ ಅಡಿ ಸಂದುಗಳಲ್ಲಿ ಹೊರಗೆ ಕಾಣುತ್ತದೆ. ಪಶ್ಚಿಮ ದಿಕ್ಕಿನಲ್ಲಿ ಇರುವ ಕಿಂಡಿಯಿಂದ ಬೆಂಕಿ ಉರಿಯಲು ಗಾಳಿ ಬರುತ್ತದೆ. ಯಾವುದೇ ಬೆಂಕಿಯಿಂದ ಅನಾಹುತ ಆಗಬಾರದೆಂದೇ ಈ ಗೂಡು ಕಲ್ಲುಗಳ ಮೇಲಿರುತ್ತದೆ. ಹೊಗೆ ಉಗುಳುವ ಬೆಂಕಿ ಉಗುಳುವ ಈ ಆಕೃತಿಯನ್ನು ಆಯಾಯ ಜಮೀನಿನ ಜಮೀನುದಾರರು ತಮ್ಮ ಭೂಮಿಯ ಪರಿಧಿಯಲ್ಲಿ ನಿರ್ಮಾಣ ಮಾಡಿ ಕಾಡಿಂದ ಬರುವ ಪ್ರಾಣಿಗಳಿಂದ ರಕ್ಷಣೆ ಪಡೆದಿದ್ದಾರೆ. ಬೆಳೆ ಬೆಳೆದು ತಮ್ಮ ಸಾಕುಪ್ರಾಣಿ ಗಳನ್ನು ಸಾಕಿದ್ದಾರೆ. ರಾತ್ರಿಯಲ್ಲಿ ಬೆಂಕಿಯು ಬಹು ದೂರದವರೆಗೆ ಕಾಣುವುದರಿಂದ ಮೃಗಗಳು ನಾಡಿ ನತ್ತ ಬರಲು ಹೆದರುತ್ತವೆ. ಅದೇ ರೀತಿಯಲ್ಲಿ ಹಗಲು ಹೊತ್ತು ಗೂಡಿನಿಂದ ಬರುವ ಹೊಗೆ ನೋಡಿ ಭಯದಿಂದ ಅವುಗಳು ನಾಡಿಗೆ ಪ್ರವೇಶ ಮಾಡುವು ದಿಲ್ಲ.
(ನೆಲಸಮವಾದ ಮತ್ತು ಕಲ್ಲು ಕೋರೆಯವರಿಂದ ವಿನಾಶವಾದ ಇತಿಹಾಸದ ಪಾಂಡವರ ಕಲ್ಲುಗಳು)
ಪಾಂಡವರ ಗುಹೆ ಎಂದು ಕರೆಯುವ ಬಂಡೆಗಳ ಸಂದುಗಳಲ್ಲಿ ನಿರ್ಮಾಣವಾದ ಗೂಡುಗಳು ಕೂಡಾ ಪ್ರಾಣಿಗಳಿಂದಾಗುವ ಅಪಾಯವನ್ನು ತಪ್ಪಿಸಲು ನಿರ್ಮಿಸಲಾಗಿದೆ. ಅಲ್ಲದೆ ಮುರ ಕಲ್ಲುಗಳು ಇರುವ ಪ್ರದೇಶದಲ್ಲಿ ಪ್ರಕೃತಿ ನಿರ್ಮಿತವಾದ ಗುಹೆಗಳಲ್ಲಿ ನಿರ್ಮಾಣ ಮಾಡಿದ ಗೂಡುಗಳು ಕೂಡಾ ಅದೇ ಉದ್ದೇಶದಿಂದ ನಿರ್ಮಿಸಲಾಗಿದೆ. ಇವುಗಳು ಹೊಗೆ ಗೂಡುಗಳಾಗಿ ಇರುತ್ತದೆ. ಇಂತಹ ಗೂಡುಗಳ ಒಳಗೆ ಮೇಲಿಂದ ನೀರು ಬೀಳದಂತೆ ಬಂಡೆ|ಮುರ ಕಲ್ಲುಗಳು ಛತ್ರಿಯನ್ನು ಹಿಡಿದಂತೆ ಇರುತ್ತದೆ. ನಾಲ್ಕು ಬದಿಗಳಲ್ಲೂ ಚಪ್ಪಡಿ ಕಲ್ಲುಗಳನ್ನು ನಿಲ್ಲಿಸಿ ಎದುರಿಗೆ ಕಿರು ಬಾಗಿಲು ಇರುತ್ತದೆ. ಈ ಕಿರು ಬಾಗಿಲಿನ ಮೂಲಕವೇ ಕಟ್ಟಿಗೆ ಸೌದೆಯನ್ನು ಇಟ್ಟು ಉರಿಸುವರು. ನಂತರ ಕಿರು ಬಾಗಿಲನ್ನು ಇನ್ನೊಂದು ಕಲ್ಲಿನಿಂದ ಮುಚ್ಚುವರು. ಉರಿದ ಮೇಲೆ ಬೂದಿಯನ್ನು ಈ ಬಾಗಿಲಿನಿಂದಲೇ ಹೊರಗೆ ಹಾಕುತ್ತಾರೆ. ಹೊಗೆ ಗೂಡು ಅಥವಾ ಅಗ್ಗಿಷ್ಟಿಕೆ ಯಿಂದ ಹೊರ ಬರುವ ಹೊಗೆಯು ಕಲ್ಲುಗಳ ಸಂದುಗ ಳಿಂದ ಮತ್ತು ರಂಧ್ರಗಳಿಂದಲೇ ಹೊರಗೆ ಬಂದು ಅಗಲವಾಗಿ ಕಾಡೆಲ್ಲಾ ಹರಡುತ್ತದೆ. ಮೃಗಗಳು ನಾಡಿಗೆ ಬರಲು ಹೆದರಿ ಕಾಡು ಒಳಗೆ ಹೋಗುತ್ತವೆ. ಇಂತಹ ಗೂಡುಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಗುಹೆಯ ಒಳಗಿರುವ ಗೂಡಿನ ಕಲ್ಲುಗಳಲ್ಲಿ ಹೊಗೆಯ ಹೊಡೆತಕ್ಕೆ ಕಲ್ಲುಗಳು ಮಸಿ ಬಳಿದು ಕಪ್ಪಾಗಿ ಕಾಣುತ್ತದೆ. ಗುಹೆಯ ಕಲ್ಲುಗಳಲ್ಲೂ ಮಸಿಯ ಬಣ್ಣದ ಸಾಕ್ಷ್ಯ ಸಿಗುತ್ತದೆ. ಬೆಂಕಿಯ ಬಿಸಿ ತಾಗಿ ಕಲ್ಲುಗಳು ದುರ್ಬಲವಾಗಿರುವು ದನ್ನು ಕಾಣಬಹುದು.
ಈ ಕಾಲದಲ್ಲೇ ಜೈನರು ಬೆಂಕಿಯಿಂದ ಪ್ರಕೃತಿ ಮಾತೆಗೆ ಯಾವುದೇ ಅನಾಹುತ ಆಗಬಾರದು ಎಂದು “ಹೂಕತ್ತೆರಿ”(ತೂಕತ್ತೆರಿ)ಎಂಬ ಬೂತದ ಹೆಸರಿನಲ್ಲಿ ಬೆಂಕಿಯನ್ನು ನಂಬುತ್ತಾರೆ. ಬೆಂಕಿಯಿಂದ ಅನಾಹುತ ಆದಲ್ಲಿ ಬೆಂಕಿಯನ್ನು ಕತ್ತರಿಸು ಅಥವಾ ನಂದಿಸು(ತೂ ತೆಕ್ಕವು) ಎಂಬ ಅರ್ಥದಲ್ಲಿ ನಂಬುತ್ತಾರೆ.
ಕಾಲಗಳು ಉರುಳಿದಂತೆ ಈ ಜೈನರು ತಮ್ಮ ಜಮೀನುಗಳನ್ನು ತುಂಡು ತುಂಡು ಮಾಡಿ ಗೇಣಿಗೆ ಕೊಡುತ್ತಾರೆ. ಆ ಭೂಮಿಯ ಜವಾಬ್ದಾರಿ ಗೇಣಿದಾರರ ಮೇಲೆ ಬೀಳುತ್ತದೆ. ತುಲುನಾಡಿನಾದ್ಯಂತ ಗೇಣಿದಾರರ ಸಂಖ್ಯೆ ಹೆಚ್ಚಿದಂತೆ ಇಲ್ಲಿನ ಜನಸಂಖ್ಯೆ ಹೆಚ್ಚಾಗುತ್ತದೆ. ಎಲ್ಲೆಡೆ ಮನೆಗಳು ಏಳುವುದು. ಪ್ರತಿ ಮನೆಯಲ್ಲೂ ವಿವಿಧ ಒಲೆಗಳು ಹುಟ್ಟುತ್ತವೆ. ಮನೆಯ ಅಡಿಗೆ ಒಲೆ, ಬಚ್ಚಿಲು ಒಲೆ,ಎಮ್ಮೆ ಕೊಟ್ಟಿಗೆಯಲ್ಲಿ ಅಕ್ಕಚ್ಚು ಬಿಸಿ ಮಾಡುವ ಒಲೆ, ಅಂಗಳದಲ್ಲಿ ದೊಡ್ಡ ಪ್ರಮಾಣದ ಭತ್ತ ಬೇಯಿಸುವ ಒಲೆ,ಬೇಸಿಗೆಯ ಬಚ್ಚಿಲು ಒಲೆ ಇತ್ಯಾದಿ ಗಳಿಂದ ನಾಡಿನಾದ್ಯಂತ ಅಗ್ಗಿಷ್ಟಿಕೆ ಉರಿಯುತ್ತದೆ ಮತ್ತು ಹೊಗೆಯಾಡುತ್ತದೆ. ಎಲ್ಲಾ ಜಮೀನಿನಲ್ಲಿ ತೂಂಟನ್(ಮಣ್ಣು ಸುಡುವುದು)ಇಡುವುದು ಸಾಮಾನ್ಯವಾಗುತ್ತದೆ. ಇದರಿಂದ ಬೆಂಕಿ ಹೊಗೆ ಎಲ್ಲೆಡೆ ಕಾಣಿಸುತ್ತದೆ. ಗುಡ್ಡದಲ್ಲಿ ಹುಲ್ಲು,ಮುಲಿ ಹುಲ್ಲು ಚೆನ್ನಾಗಿ ಬೆಳೆಯಲು ನೆಲದ ಹುಲ್ಲನ್ನು ಸುಡುವುದು ಇತ್ತು. ಈ ಎಲ್ಲಾ ಕಾರಣಗಳಿಂದ ಪಾಂಡವರ ಅಗ್ಗಿಷ್ಟಿಕೆಯ ಬಳಕೆ ಕಡಿಮೆಯಾಗುತ್ತದೆ. ಕೊನೆಗೆ ನಿಂತು ಬಿಡುತ್ತದೆ. ನಾಡು ಬೆಳೆಯುತ್ತಾ ಹೋಗುತ್ತದೆ. ಬೆಂಕಿ ಗೂಡುಗಳು ಶಿಥಿಲ ಗೊಳ್ಳುತ್ತಾ ಹೋಗುತ್ತದೆ.
ಈಗೆಲ್ಲಾ ತುಲುನಾಡಿನಾದ್ಯಂತ ಮೇಲಿನ ಬೆಂಕಿ ಮತ್ತು ಹೊಗೆಯಾಡುವ ವಿವಿಧ ಒಲೆ,ಅಗ್ಗಿಷ್ಟಿಕೆಗಳು,ಇತರ ಹೊಗೆಯಾಡುವ ಕೃಷಿ ಚಟುವಟಿಕೆ ಪೂರ್ತಿಯಾಗಿ ನಿಂತು ಬಿಟ್ಟಿದೆ. ಇದರ ಪರಿಣಾಮವಾಗಿ ಪ್ರಾಣಿಗಳು ನಾಡಿನತ್ತ ಮುಖ ಮಾಡಿ ಪ್ರವೇಶಿಸುವುದು ಕಾಣುತ್ತೇವೆ.
ತುಲುನಾಡಲ್ಲಿ ಮಂಗಿಲ ಕಲ್ಲ್, ಮಂಗಳ ಕಲ್ಲ್, ಮಂಗಿಲ ಪಾದೆ,ಮಂಗಳ ಪಾದೆ,ಮಂಗಿಲ ಪದವು ಎಂಬ ಪಾದೆಗಳು ಮತ್ತು ಮುರಕಲ್ಲು ಪ್ರದೇಶಗಳಲ್ಲಿ ಅಂದು ಆರಂಭದ ಕಾಲದಲ್ಲಿ ಮದುವೆ ಶುಭ ಕಾರ್ಯ ಕ್ರಮಗಳು ನಡೆಯುತ್ತಿತ್ತು. ಅದರಂತೆ ಪಾಂಡವರ ಕಲ್ಲು ಗಳು ಇರುವ ಪಾದೆ ಮತ್ತು ಮುರಕಲ್ಲು ಪ್ರದೇಶಗಳಲ್ಲಿ ಮದುವೆಯಂತಹ ಶುಭ ಸಭೆ ಸಮಾರಂಭಗಳು ನಡೆಯುತ್ತಿದ್ದವು. ಇಂತಹ ಸ್ಥಳಗಳಲ್ಲಿ ಈ ಅಗ್ಗಿಷ್ಟಿಕೆಗಳು ಬೆಳಕಿಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಇದ್ದವು. ಕಾರ್ಕಳದ ಪಳ್ಳಿ ,ಕಣಜಾರು ಊರುಗಳಲ್ಲಿ “ಮದ್ಮಲ್ ಪಾದೆ” ಎಂ ಬ ಪಾದೆ ಇದೆ. ಇಲ್ಲಿ ಪಾಂಡವರಕಲ್ಲು ಎಂದು ಕರೆಯು ವ ಗೂಡು ಇದೆ. “ಮದ್ಮೆದ(ಮದುವೆಯ)ಪಾದೆ”ಎಂಬು ವುದನ್ನು”ಮದ್ಮಲ್(ಮದುಮಗಳು)ಪಾದೆ”ಎಂದು ಕರೆದರು. ಜೈನರ ಪೂರ್ವಿಕರೂ ತುಲುನಾಡಲ್ಲಿ ಕಷ್ಟದ ಕಾಲಗಳನ್ನು ಕಳೆದಿದ್ದಾರೆ ಎಂದು ಇಲ್ಲಿ ತಿಳಿಯಬಹುದಾ ಗಿದೆ. ಅವರೂ ಮದುವೆ ಶುಭ ಸಮಾರಂಭಗಳನ್ನು ಪಾದೆಗಳಲ್ಲಿ ನಡೆಸಿದ್ದಾರೆ.
ತುಲುನಾಡಲ್ಲಿ ಕರೆಯುವ ಪಾಂಡವರ ಕಲ್ಲು ಅಥವಾ ಪಾಂಡವರ ಗುಹೆಗಳು ಎಂದರೆ ಅವುಗಳು ಗೋರಿ ಸಮಾಧಿಗಳಲ್ಲ. ಕಲ್ಲಿನಲ್ಲಿ ದಫನ ಮಾಡುತ್ತಾರೆ ಯೇ?ಇವುಗಳು ಪ್ರಾಣಿಗಳನ್ನು ಭಯ ಪಡಿಸುವ ಬೆಂಕಿ ಗೂಡು ಮತ್ತು ಹೊಗೆ ಗೂಡು(ತೂ ಪಾಡುನ, ಪುಗೆ ಪಾಡುನ). ಕರ್ನಾಟಕದ ಒಳಗೆ ಎಲ್ಲಿಯಾದರೂ ಈ ಹೆಸರಿನ ಗೂಡುಗಳು ಇದ್ದರೆ ಅದು ಪಾಂಡ್ಯರ ಗೂಡೇ ಆಗಿರುತ್ತದೆ. ದೇಶದ ಇತರ ರಾಜ್ಯಗಳಲ್ಲಿ ಮತ್ತು ಇತರ ದೇಶಗಳಲ್ಲಿ ಈ ರೀತಿಯ ಚಪ್ಪಡಿ ಕಲ್ಲುಗಳ ಶಿಲಾಕೃತಿ ಗಳ ಉದ್ದೇಶವನ್ನು ನೋಡದೆ ಹೇಳುವುದು ಕಷ್ಟ ಸಾ ಧ್ಯ. ಆದರೂ ಪ್ರಮುಖ ಕಾರಣಗಳಲ್ಲಿ ಪ್ರಾಣಿಗಳನ್ನು ಹಿಮ್ಮೆಟ್ಟಿಸುವ ಉದ್ದೇಶ ಇರಬಹುದು. ಪ್ರಾಚೀನ ಕಾಲದಲ್ಲಿ ಭೂಮಿಯ ಮೇಲೆ ಮಾನವ ಪ್ರಾಣಿಗಳಿ ಗಿಂತ ಮೃಗ ಪ್ರಾಣಿಗಳು ನೂರಾರು ಪಟ್ಟು ಹೆಚ್ಚಾಗಿ ಇದ್ದವು. ಚಪ್ಪಡಿಗಳನ್ನು ಬಳಸಿ ಗುಹೆ ಪಂಜರಗಳನ್ನು ರಚಿಸಿ ಪ್ರಾಣಿಗಳು ವಾಸಿಸುವ ವ್ಯವಸ್ಥೆ ಮಾಡಿ ಬಳಿಕ ಅವುಗಳನ್ನು ಸಾಯಿಸುವ ಯೋಜನೆಯೂ ಅಲ್ಲಿ ಅಂದು ಇದ್ದಿರಬಹುದು.
ತುಲುನಾಡಿನ ಪಾಂಡವರಕಲ್ಲು,ಪಾಂಡುಕಲ್ಲು ಇತ್ಯಾದಿ ಊರುಗಳಲ್ಲಿ ಈ ರೀತಿಯ ಗೂಡುಗಳಿದ್ದವು ಎಂಬುವುದಕ್ಕೆ ನೆಲಸಮ ಮಾಡಿದ ಸ್ಥಳಗಳಿಂದ ಗುರು ತಿಸಬಹುದು. ಈಗ ಊರು ಮಾತ್ರ ಆ ಹೆಸರಿನಿಂದ ಇದೆ. ಆದರೆ ಸಾಕ್ಷ್ಯಚಿತ್ರಗಳು ನಾಶವಾಗಿದೆ. ಸಾವಿರಾರು ವರ್ಷಗಳ ಇತಿಹಾಸ ಇರುವ ತುಲುನಾಡಿನ ಈ ಕಲ್ಲು ಗೂಡುಗಳನ್ನು ನೆಲಸಮ ಮಾಡದೆ ರಕ್ಷಿಸಬೇಕು. ಸ್ಥಳೀಯ ಸರಕಾರವು ಇದರ ಕಡೆ ವಿಶೇಷವಾಗಿ ಗಮನಿಸಿದರೆ ಅವುಗಳನ್ನು ಉಳಿಸಬಹುದು. ಸಂಬಂಧ ಪಟ್ಟ ಇಲಾಖೆಗಳ ಸಹಾಯ ಸಹಕಾರ ಪಡೆದು ಮುಂದಿನ ಪೀಳಿಗೆಯೂ ತುಲುನಾಡಿನ ಪ್ರಾಚೀನ ಕಾಲದ ಈ ಬೆಂಕಿಗೂಡು|ಹೊಗೆಗೂಡು ಗಳನ್ನು ನೋಡಿ ಇತಿಹಾಸ ತಿಳಿದುಕೊಳ್ಳಬಹುದು.
ಐ. ಕೆ. ಗೋವಿಂದ ಭಂಡಾರಿ, ಕಾರ್ಕಳ
(ನಿವೃತ್ತ ವಿಜಯಾಬ್ಯಾಂಕ್ ಮ್ಯಾನೇಜರ್)