ಮಳೆಗಾಲ ಬಂತೆಂದರೆ ತುಳುನಾಡಿನಲ್ಲಿ ನೆನಪಾಗುವುದು ಆಷಾಢ(ಆಟಿ)ತಿಂಗಳ ವಿಶೇಷ ಆಚರಣೆ ಮತ್ತು ಬಗೆಬಗೆಯ ಖಾದ್ಯಗಳು. ಆಷಾಢ ಮಾಸದುದ್ದಕ್ಕೂ ಮನೆಮನೆಯಲ್ಲಿ ಘಮಘಮಿಸುವ ಕರಾವಳಿ ಸ್ಪೆಷಲ್ ಖಾದ್ಯ ಪತ್ರೊಡೆ. ಇದು ತುಳುನಾಡಿನ ಬ್ರ್ಯಾಂಡ್ ಡಿಶ್ ಎಂದೇ ಪ್ರಸಿದ್ಧಿ ಪಡೆದಿದೆ.
ಪ್ರಾಚೀನ ಕಾಲದಲ್ಲಿ ಬಡತನವಿತ್ತು. ಅದರಲ್ಲೂ ಆಷಾಢ ಮಾಸದ ಉಷ್ಣ ವಾತಾವರಣ, ತಿನ್ನಲು ಅನ್ನಕ್ಕೂ ತತ್ವಾರವಿರುವ ಹೊತ್ತು. ರೋಗರುಜಿನಗಳ ಹಾವಳಿ ಒಂದೆಡೆಯಾದರೆ ಜನರು ಕೆಲಸವಿಲ್ಲದೆ ಮನೆಯಲ್ಲೇ ಇರಬೇಕಾದ ಪರಿಸ್ಥಿತಿ ಇನ್ನೊಂದೆಡೆ. ಇಂತಹ ಸಮಯದಲ್ಲಿ ಪ್ರಕೃತಿ ಜನ್ಯ ವಸ್ತುಗಳನ್ನೇ ನಮ್ಮ ಹಿರಿಯರು ಬಳಸಿದರು. ಆಗ ಹುಟ್ಟಿಕೊಂಡ ಪತ್ರೊಡೆ ತುಳುನಾಡಿನ ಅನನ್ಯ ಆಹಾರ ಎಂದೇ ಹೆಸರಾಗಿದೆ. ಮಳೆಗಾಲದಲ್ಲಿ ವಾತಾವರಣ ಶೀತಗಾಳಿಯಿಂದ ಕೂಡಿರುವುದರಿಂದ ದೇಹವನ್ನು ಬೆಚ್ಚಗಿರಿಸಲು ಬಹುತೇಕರ ಮನೆಗಳಲ್ಲಿ ಪತ್ರೊಡೆ ಸೇವಿಸುತ್ತಾರೆ.
ಪತ್ರೊಡೆಯಲ್ಲಿ ಸಾಮಾನ್ಯವಾಗಿ ಎರಡು ರೀತಿಯ ಶೈಲಿಗಳನ್ನು ಕಾಣಬಹುದು. ತುಳು ಶೈಲಿಯ ಪತ್ರೂಡೆಯಲ್ಲಿ ಕೆಸುವಿನ ಎಲೆಯನ್ನು ಸಣ್ಣಸಣ್ಣ ಚೂರುಗಳನ್ನಾಗಿ ಹೆಚ್ಚಿ ಅದನ್ನು ಅಕ್ಕಿಯ ಹಿಟ್ಟಿನೊಂದಿಗೆ ಕಲಸಿ ರುಚಿಗೆ ಬೇಕಾದ ಜೀರಿಗೆ,ಮೆಣಸು, ಮತ್ತಿತರ ಸಾಂಬಾರು ಪದಾರ್ಥಗಳನ್ನು ಹಾಕುತ್ತಾರೆ. ಬಳಿಕ ಅದನ್ನು ಬಾಳೆಎಲೆ ಅಥವಾ ಉಪ್ಪಲಿಗೆ ಎಲೆಯಲ್ಲಿ ಕಟ್ಟಿ ಶಾಖದಲ್ಲಿ ಬೇಯಿಸಲಾಗುತ್ತದೆ. ನಂತರ ಅದನ್ನು ಮಧ್ಯಮ ಗಾತ್ರಕ್ಕೆ ಕತ್ತರಿಸಿ ಪ್ರತ್ಯೇಕ ಮಸಾಲೆಯೊಂದಿಗೆ ಬೆರೆಸಿ ಒಂದೆರಡು ಕುದಿ ಬರುವವರೆಗೆ ಬೇಯಿಸಲಾಗುತ್ತದೆ. ಇನ್ನೊಂದು ಶೈಲಿಯ ಪತ್ರೊಡೆಯನ್ನು ಪ್ರತ್ಯೇಕ ಮಸಾಲೆಯಲ್ಲಿ ಬೇಯಿಸುವ ಕ್ರಮವಿಲ್ಲ.ಇಲ್ಲಿ ಕೆಸುವಿನ ಎಲೆಗೆ ಮಸಾಲೆ ಹಚ್ಚಿ ಅದನ್ನೇ ಹಲವು ಪದರಗಳಲ್ಲಿ ಸುತ್ತಿ ಬೇಯಿಸಿದ ಬಳಿಕ ಕತ್ತರಿಸಿ ತಿನ್ನಲಾಗುತ್ತದೆ. ಜನರು ಹೆಚ್ಚಾಗಿ ಉಪಹಾರ ಅಥವಾ ಸಂಜೆಯ ಕಾಫಿ, ಟೀಯೊಂದಿಗೆ ಸೇವಿಸುತ್ತಾರೆ.
ತುಳುನಾಡಿನ ವಿಶಿಷ್ಟ ತಿನಿಸಾದ ಪತ್ರೊಡೆಯಲ್ಲಿ ಔಷದಿಯ ಗುಣವೂ ಅಡಗಿದೆ. ಹೊಟ್ಟೆಯಲ್ಲಿ ಕೂದಲಿನಂತಹ ವಸ್ತುಗಳಿದ್ದರೂ ದೇಹದಿಂದ ಹೂರಕ್ಕೆ ಹಾಕುವ ಶಕ್ತಿ ಹಾಗೂ ಮಳೆಗಾಲದ ತಂಪು ವಾತವರಣದಲ್ಲಿ ಮೈ ಬೆಚ್ಚಗಿರಿಸುವ ಅನನ್ಯ ಗುಣವಿದೆ. ಗ್ರಾಮೀಣ ಪ್ರದೇಶಗಳಲ್ಲಿ ಜನಪ್ರಿಯತೆ ಹೊಂದಿದ ಪತ್ರೊಡೆ ಬಡವರ ಮೃಷ್ಟಾನ್ನವಾಗಿದೆ.
-ಗ್ರೀಷ್ಮಾ ಭಂಡಾರಿ
ಅಂತಿಮ ಪತ್ರಿಕೋದ್ಯಮ ವಿದ್ಯಾರ್ಥಿನಿ
ವಿ.ವಿ ಕಾಲೇಜು ಮಂಗಳೂರು