January 18, 2025
bobarya

ಕರಾವಳಿ ಕರ್ನಾಟಕದ ಮೊಗವೀರ ಮೂಲ ತುಳುವ, ವೃತ್ತಿಯಿಂದ ಮೀನುಗಾರ ಸಮುದಾಯ, ಹಿಂದೆ ಈ ಸಮುದಾಯವು ಉಡುಪಿ ಆಸುಪಾಸಿನಲ್ಲಿ ಮರಕಲರು, ಉಳ್ಳಾಲದಿಂದ ದಕ್ಷಿಣಕ್ಕೆ ಬೋವಿ ಎಂಬ ಹೆಸರಿನಿಂದ ಕರೆಯಲ್ಪಡುತ್ತಿದ್ದರು. ಬ್ರಹ್ಮಾವರದಿಂದ ದಕ್ಷಿಣಕ್ಕೆ ತುಳು ಭಾಷೆ ಮತ್ತು ಬ್ರಹ್ಮಾವರದಿಂದ ಉತ್ತರಕ್ಕೆ ಕನ್ನಡ ಮತ್ತು ಕೊಂಕಣಿ ಮಾತೃಭಾಷೆ ಹೊಂದಿರುವ ಮೊಗವೀರರನ್ನು ನೋಡಬಹುದು.
ಎಡ್ಗರ್ ಥರ್‍ಸ್ಟನ್ ರ ಅಭಿಪ್ರಾಯದಂತೆ ತುಳುಭಾಷಿಗ ಮೊಗವೀರರು ತಮ್ಮನ್ನು ಮೊಗೆರ್ ಎಂಬುದಾಗಿ ಕರೆಸಿಕೊಳ್ಳುತ್ತಿದ್ದರು. ಈ ಹೆಸರಿನಲ್ಲಿ ತಮ್ಮನ್ನು ಗುರುತಿಸಿಕೊಳ್ಳುತ್ತಿದ್ದ ಸಮುದಾಯದ ಜನ ಕೃಷಿ, ಬೇಟೆ, ಮೀನುಗಾರಿಕೆ, ಎಣ್ಣೆ ಗಾಣ ಮತ್ತು ಸಂಗೀತ ವಾದ್ಯ ನುಡಿಸುವ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದರು.
ಬಚನಾನ್ (1807) ರ ಅಭಿಪ್ರಾಯದಂತೆ ಕೆಲ ಪ್ರದೇಶದ ಮೊಗವೀರರು ತಮ್ಮನ್ನು ಮೊಗೆಯರ್ ಎಂಬುದಾಗಿ ಕರೆಸಿಕೊಳ್ಳುತ್ತಿದ್ದರು. ಮೊಗೆಯರ್ ಎಂದು ಕರೆಯಲ್ಪಡುತ್ತಿದ್ದ ಸಮುದಾಯದ ಜನ ಅಂಬಿಗ, ಮೀನುಗಾರ, ಕೋಟೆ ರಕ್ಷಕ ಮತ್ತು ಪಲ್ಲಕ್ಕಿ ಹೊರುವ ಕೆಲಸದಲ್ಲಿ ತೊಡಗಿಸಿಕೊಂಡಿದ್ದರು.
ಉಡುಪಿ ಮತ್ತು ಕುಂದಾಪುರ ಪ್ರದೇಶದಲ್ಲಿ ಮೊಗವೀರರನ್ನು ಕ್ರಮವಾಗಿ ಮರಕಲರು ಮತ್ತು ನಾಯ್ಕರು ಎಂಬ ಹೆಸರಿನಲ್ಲಿ ಗುರುತಿಸುತ್ತಾರೆ. ಉತ್ತರ ಕನ್ನಡದ ಮೊಗವೀರರು ಕನ್ನಡ ಮತ್ತು ಕೊಂಕಣಿ ಭಾಷಿಗರಾಗಿದ್ದು ಹರಿಕಂಪು, ಖಾರ್ವಿ, ಮತ್ತು ಬೋವಿ ಎಂಬ ಹೆಸರಿನಲ್ಲಿ ಗುರುತಿಸಲ್ಪಡುತ್ತಾರೆ. ಕರ್ನಾಟಕದ ಇತರ ಪ್ರದೇಶಗಳಲ್ಲಿ ಮೀನುಗಾರ ವೃತ್ತಿಯ ಸಮುದಾಯಗಳು ಗಂಗಾಮತಸ್ಥ, ಬೆಸ್ತ, ಕೋಳಿ ಎಂಬುದಾಗಿ ಗುರುತಿಸಿಕೊಳ್ಳುತ್ತಾರೆ. ಕೇರಳದಲ್ಲಿ ಮೀನುಗಾರ ಸಮುದಾಯ ಮುಕ್ಕುವನ್ ಎಂಬ ಹೆಸರನ್ನು ಹೊಂದಿದೆ. ಆಂದ್ರಪ್ರದೇಶದಲ್ಲಿ ಅಗ್ನಿಕುಲ ಕ್ಷತ್ರೀಯ, ವಡಬಲಿಜ, ಸೂರ್ಯವಂಶಿ ಮತ್ತು ಪಲ್ಲೆಕರು ಎಂಬ ಹೆಸರುಗಳುಳ್ಳ ಮೀನುಗಾರ ಸಮುದಾಯವಿದೆ. ಹೀಗೆ ವಿವಿಧ ಸ್ಥಳಗಳಲ್ಲಿ ವಿವಿಧ ಹೆಸರುಗಳನ್ನು ಹೊಂದಿರುವ ಮೀನುಗಾರರ ಸಮುದಾಯ ದೇಶವ್ಯಾಪಿ ಕಂಡುಬರುತ್ತದೆ.

 ಐತಿಹಾಸಿಕ ಉಲ್ಲೇಖಗಳು:
ಸಿಂಧೂ ನಾಗರಿಕತೆಯಲ್ಲಿ ಮೀನಿನ ಉಲ್ಲೇಖ:

ಸಿಂಧೂ ನಾಗರಿಕತೆಯ ಇತಿಹಾಸ ಹೇಳುವಂತೆ ಸಮುದ್ರ ಜೀವಿಯಾದ ಮೀನನ್ನು ದೇವರ ರೂಪದಲ್ಲಿ ಪೂಜಿಸುತ್ತಿದ್ದರು. ಸುಮಾರು ಕ್ರಿ.ಪೂ 3000-1900 ವರ್ಷಗಳ ಕಾಲಾವಧಿಯಲ್ಲಿ ಈ ಬಗ್ಗೆ ಹಲವಾರು ಅಂಶಗಳು ಮತ್ತು ವಿವಿಧ ರೀತಿಯ ಕತೆಗಳ ಮೂಲಕ ವಿವರಿಸಲ್ಪಟ್ಟಿದೆ. ದೇವರೆಂದು ಪೂಜಿಸಿರುವ ಉಲ್ಲೇಖಗಳು ಕೂಡಾ ಸಿಗುತ್ತ

ದೆ. ವಿಷ್ಣುಪುರಾಣದಲ್ಲಿ ಮತ್ಸ್ಯದೇವ ವಿಷ್ಣುವಿನ ಅವತಾರವೆಂದು ಉಲ್ಲೇಖವಿದೆ. ಇಷ್ಟೇ ಅಲ್ಲದೇ ಅಧ್ಯಯನದ ಪ್ರಕಾರ ಮೀನು ಸಿಂಧೂ ನಾಗರಿಕತೆಯ ಜನರ ಅವಿಭಾಜ್ಯ ಅಂಗವಾಗಿತ್ತು. ಮೀನುಗಾರಿಕೆ ಆರ್ಥಿಕ ವ್ಯವಹಾರವಾಗಿತ್ತು ಮತ್ತು ಪ್ರಮುಖ ಆಹಾರವಾಗಿ ಬಳಕೆಯಲ್ಲಿತ್ತು.

 

ತುಳು ಜನಾಂಗದ ವಲಸೆ:

ಸುಮಾರು ಕ್ರಿ.ಪೂ 1900- 1500 ವರ್ಷಗಳ ಅವಧಿಯಲ್ಲಿ ಭರತಖಂಡದ ಉತ್ತರ ಪೂರ್ವಭಾಗದಲ್ಲಿ ತುಳುವರಿದ್ದ ಪಿರಾಕ್ ಎಂಬ ಪ್ರದೇಶವಿತ್ತು ಎಂಬುದನ್ನು ಋಗ್ವೇದ ತಿಳಿಸುತ್ತದೆ. ಹವಾಮಾನದ ಅಸಮತೋಲನ ಮತ್ತು ಪ್ರಾಕೃತಿಕ ವೈಪರೀತ್ಯಗಳಿಂದ ರಕ್ಷಿಸಿಕೊಳ್ಳಲು ಹಿಂದೆ ವಲಸೆ ಸಾಮಾನ್ಯವಾಗಿತ್ತು. ಹೀಗೆಯೇ ಪ್ರಾಕೃತಿಕ ಅಸಮತೋಲನದ ಪರಿಣಾಮ ಪಿರಾಕ್ ಪ್ರದೇಶದಲ್ಲಿದ್ದ ತುಳುವರು ಭಾರತದ ಭೂಭಾಗಕ್ಕೆ ವಲಸೆ ಬಂದು ನೆಲೆಸಿದರು. ಮೂಲಸ್ಥಾನ(ಮುಲ್ತಾನ), ಪಿರಾಕ್ ಮತ್ತು ಇತರ ತುಳು ಹೆಸರಿರುವ ಪ್ರದೇಶಗಳು ಈಗಿನ ಪಾಕಿಸ್ತಾನ ಮತ್ತು ಅಪ್ಘಾನಿಸ್ತಾನ ಪ್ರದೇಶಗಳಲ್ಲಿ ಈಗಲೂ ಕಂಡುಬರುತ್ತವೆ. ಇದು ತುಳುವರು ಭರತಖಂಡದ ಪೂರ್ವಭಾಗದಲ್ಲಿ ವಾಸಿಸುತ್ತಿದ್ದರು ಎಂಬುದಕ್ಕೆ ಸಾಕ್ಷಿಯಾಗಿದೆ.

• ದಶರಾಜ:

ಮಹಾಭಾರತದಲ್ಲೂ ಮೀನುಗಾರಿಕೆ ಮತ್ತು ಮೀನುಗಾರರ ಬಗ್ಗೆ ಉಲ್ಲೇಖವಿದ್ದು, ಮಹಾಭಾರತ ರಚಿಸಿದ ವೇದವ್ಯಾಸರು ದಶರಾಜನ ಮೊಮ್ಮಗನಾಗಿದ್ದು, ದಶರಾಜ ಮೀನುಗಾರ ಸಮುದಾಯದ ಪ್ರಮುಖ ಅಂಬಿಗನಾಗಿದ್ದ.
* ಈಗಲೂ ತುಳುಬಾಷಿಗ ಮೊಗವೀರರಲ್ಲಿ ಕೆಲವರು ತಮ್ಮನ್ನು ದಾಸ ಎಂಬುದಾಗಿ ಕರೆಸಿಕೊಳ್ಳುತ್ತಾರೆ.

1.ಇತಿಹಾಸ ಪೂರ್ವಕಾಲ:

ಮೂಲಸ್ತಾನ :

ಕರ್ನಾಟಕದ ಕರಾವಳಿಗೆ ವಲಸೆ ಬಂದು ಕ್ರಿ.ಪೂ. 700-600 ಅವಧಿಯಲ್ಲಿ ತುಳುನಾಡಿನ ಸಮುದ್ರ ಮತ್ತು ನದಿ ತೀರದಲ್ಲಿ ನೆಲೆಸಿದರು. ತುಳುಜನಾಂಗ ತಾವು ಮೊದಲು ನೆಲೆನಿಂತ ಪ್ರದೇಶ ಮೂಲಸ್ತಾನವೆಂದು ಕರೆಸಿಕೊಳ್ಳುತ್ತದೆ. ಪ್ರಸ್ತುತ ಜಾತಿಪದ್ಧತಿಯಲ್ಲಿ ಮೊಗವೀರರಲ್ಲಿ ಪ್ರಾಚೀನ ಮೂಲಸ್ತಾನದ ಹೆಸರುಗಳೆಂದರೆ ಸುವರ್ಣ ಮತ್ತು ಬಂಗೇರ ಬರಿ ಕ್ರಮವಾಗಿ ಈ ಹೆಸರು ಸ್ವರ್ಣ ನದಿ ತೀರ ಪ್ರದೇಶ ಮತ್ತು ಬೆಂಗರೆ ಪ್ರದೇಶದ ಮೂಲಸ್ಥಾನದ ಹೆಸರು ಬರಿ ಅಥವಾ ಗೋತ್ರವಾಗಿ ಗುರುತಿಸಲ್ಪಟ್ಟಿದೆ.

• ವಂಶ ಪಾರಂಪರ್ಯ ಬರಿ/ಗೋತ್ರ:

ತುಳುನಾಡಿನ ಬಹುತೇಕ ಎಲ್ಲ ಸಮುದಾಯದಲ್ಲೂ ಒಂದೇ ತರಹದ ಬರಿ/ಬಳಿ ಗಳು ಕಂಡುಬರುತ್ತದೆ. ಮೊಗವೀರ, ಬಂಟ, ಬಿಲ್ಲವ ಮತ್ತು ಇತರ ತುಳು ಭಾಷಿಗ ಜಾತಿಗಳಿಗೆ ಪರಸ್ಪರ ಸಂಬಂಧವಿದ್ದು ಪ್ರಮುಖ ಮೂರು ಸಮುದಾಯಗಳು ಒಂದೇ ಕುಟುಂಬದ ಸಹೋದರಿಯರ ಮಕ್ಕಳೆಂದು ಜನಪದೀಯ ಇತಿಹಾಸ ತಿಳಿಸುತ್ತದೆ. ಇದೇ ಕಾರಣಕ್ಕೆ ಆದಿ ಆಲಡೆ ಎಂಬುದು ಮೂಲ ಆರಾಧನಾ ಸ್ಥಳವಾಗಿದ್ದು ಇದು ತುಳುವರೆನಿಸಿಕೊಂಡ ಎಲ್ಲ ಸಮುದಾಯದ ಆಲಯವಾಗಿದೆ. ಸುವರ್ಣ ಮತ್ತು ಬಂಗೇರ ಬರಿಗಳು ಸಾಮಾನ್ಯ ಬರಿಯಾಗಿದ್ದು ಹಲವು ಜಾತಿಯ ಜನರು ಈ ಬರಿಯ ಮೂಲಕ ಗುರುತಿಸಿಕೊಳ್ಳುತ್ತಾರೆ. ಬರಿ/ಗೋತ್ರ ಎಂಬುದು ವಂಶವಾಹಿ, ಮೂಲಸ್ತಾನ, ರಾಜವಂಶ, ಋಷಿ-ಸಂತ ಪರಂಪರೆ ಮತ್ತು ವೃತ್ತಿಯ ಆಧಾರದಲ್ಲಿ ತಲೆ ತಲಾಂತರದಿಂದ ರೂಢಿಯಲ್ಲಿದೆ. ತುಳುವ ಜನಾಂಗಗಳು ಕ್ರಮೇಣ ವೃತ್ತಿ ಮತ್ತು ವಿವಿಧ ಕಾರಣಗಳಿಂದ ವಿಭಜನೆಗೊಂಡು 43 ಹಲವು ಜಾತಿಗಳು ಸೃಷ್ಟಿಯಾಗಿದ್ದು ಮೂಲತಃ ಒಂದೇ ಆಗಿದ್ದರು ಎಂಬುದು ಆಧಿ ಆಲಡೆ, ಮೂಲಸ್ತಾನ ಮತ್ತು ಬರಿ ಪದ್ಧತಿಗಳಿಂದ ತಿಳಿದುಬರುತ್ತದೆ. ಭರತಖಂಡದ ಪೂರ್ವ ಉತ್ತರ ಭಾಗದಲ್ಲಿದ್ದ ಮೊಗವೀರರು ಪಿರಾಕ್ ಪ್ರದೇಶದಲ್ಲಿದ್ದ ಆಚರಣೆಯನ್ನು ಮುಂದುವರೆಸಿಕೊಂಡು ಬಂದರು. ಕೆಲವು ಬರಿ ಹೆಸರುಗಳು ತಾವು ವಲಸೆಗೊಂಡು ಕಾಲಕಾಲಕ್ಕೆ ನೆಲೆಗೊಂಡ ಪ್ರದೇಶಗಳಿಗೆ ಸಂಬಂಧ ಹೊಂದಿದೆ. ಇನ್ನು ಕೆಲವು ಪೂರ್ವಜರ ವೃತ್ತಿ ಸೂಚಿಸುವ ಹೆಸರು ಬರಿಯೆಂದು ಬಳಕೆಯಲ್ಲಿದೆ. ಮೊಗವೀರ ಸಮುದಾಯದ ಬರಿ/ಗೋತ್ರ ಈ ಕೆಳಗಿನಂತಿದೆ.
ಅಮೀನ್, ಬಂಗೇರ, ಚಂದನ್, ಗುಜರನ್, ಕಾಂಚನ್, ಕರ್ಕೆರ, ಕೋಟ್ಯಾನ್, ಕುಂದರ್, ಮೈಂದನ್, ಮೆಂಡನ್, ನಾಯ್ಕ, ಪಾಂಗಾಳ್, ಪುತ್ರನ್, ರಾವ್, ಸಾಲಿಯಾನ್, ಸಫಳಿಗ, ಶ್ರೀಯಾನ್, ಸುವರ್ಣ, ತಿಂಗಳಾಯ ಮತ್ತು ತೋಳಾರ್. ಮೊಗವೀರರ ಕೆಲವು ಪ್ರಾಚೀನ ಸಾಂಪ್ರಾದಾಯಿಕ ಮನೆತನಗಳ ಕುಟುಂಬಗಳು ತುಳುವ ಎಂಬ ಬರಿ/ಗೋತ್ರ ವನ್ನು ಕೂಡ ಹೊಂದಿದೆ.

ಮೊಗವೀರರಲ್ಲಿ ಕರಾವಳಿಯ ಆದಿವಾಸಿಗಳು:

ತುಳುವ ಜನಾಂಗಗಳು ಕರ್ನಾಟಕದ ಕರಾವಳಿಗೆ ವಲಸೆ ಬಂದ ಸಂದರ್ಭದಲ್ಲಿ ಮುಂಡಾ ಎಂಬ ಭಾರತೀಯ ಆದಿವಾಸಿ ಜನಾಂಗ ಪ್ರಬಲವಾಗಿತ್ತು. ಈ ಸಮುದಾಯದ ಜನ ಕಾಲಕ್ರಮೇಣ ತುಳುವರಲ್ಲಿ ಲೀನವಾಗಿದ್ದು, ಮೊಗವೀರ ಸಮುದಾಯದ ತೋಳಾರ್ ಬರಿಯ ಜನ ಮೂಲತಃ ಮುಂಡಾ ಜನಾಂಗಕ್ಕೆ ಸೇರಿದವರಾಗಿದ್ದರು. ಮುಂಡಾ ಜನಾಂಗ ಸುಮಾರು 5000 ವರ್ಷಗಳಿಗಿಂತಲೂ ಹಿಂದೆ ತುಳುನಾಡಿನಲ್ಲಿ ವಾಸಿಸುತ್ತಿದ್ದರು.

2. ಆಳುಪರ ಪೂರ್ವಕಾಲ:

  • ಬಾರಕೂರು ಸಾಮ್ರಾಜ್ಯ: ಬಾರಕೂರು ತುಳುವ ವಲಸಿಗ ಮತ್ತು ವಿಶೇಷವಾಗಿ ಮೊಗವೀರರ ಪುರಾತನ ಸಾಮ್ರಾಜ್ಯವಾಗಿತ್ತು ಎಂಬುದು ಕಂಡುಬರುತ್ತದೆ. ಮೊಗವೀರ ಕುಟುಂಬಗಳ ಮೂಲಸ್ತಾನ ತಿಳಿಸುವ ಪ್ರದೇಶಗಳು ಹೆಚ್ಚಾಗಿ ಸಮುದ್ರ ತೀರದಲ್ಲಿದ್ದು ಬಾರಕೂರು, ಹೂಗದೆ, ಬೆಂಗೆರೆ ಸುತ್ತಮುತ್ತ ಕಂಡುಬರುತ್ತದೆ. ಬೆಣ್ಣೆಕುದ್ರು ಎಂಬ ಬಾರಕೂರಿನ ಸಮೀಪದಲ್ಲಿರುವ ದ್ವೀಪ ಮೊಗವೀರರ ಕೇಂದ್ರಸ್ಥಾನವಾಗಿತ್ತು. ಮೊಗವೀರರ ಕುಲದೇವತೆ ಮಾಸ್ತ್ರಿಯಮ್ಮ ದೇವಸ್ತಾನ ಬೆಣ್ಣೆಕುದ್ರುವಿನಲ್ಲಿದೆ. ಮೀನುಗಾರ ಸಮುದಾಯದ ಅರಸರು/ಪಾಳೆಗಾರರು/ಸಾಮಂತ ಅರಸರು ಬಾರಕೂರನ್ನು ರಾಜಧಾನಿಯನ್ನಾಗಿ ಮಾಡಿ ರಾಜ್ಯವಾಳಿದ್ದರು. ಆ ಕಾಲದ ಮೀನು ವ್ಯಾಪಾರಿಗಳು ಮತ್ತು ದೋಣಿಯ ಯಜಮಾನರು ಶ್ರೀಮಂತ ಮೊಗವೀರರಾಗಿದ್ದರು. ದೊಡ್ಡ ದೋಣಿ/ಹಡಗುಗಳಲ್ಲಿ ಸರಕು ಸಾಗಿಸುವ ಉದ್ಯಮವನ್ನು ಪಾಂಡಿ ಎನ್ನಲಾಗುತಿತ್ತು. ಪಾಂಡಿಯ ಯಜಮಾನನನ್ನು ಪಾಂಡ್ಯ ಅಥವಾ ಪಾಂಡಿಯ ಎನ್ನಲಾಗುತಿತ್ತು. ಅನೇಕ ಪಾಂಡ್ಯರು ಬಾರಕೂರು ಮತ್ತು ಮಂಗಳೂರನ್ನು 2ನೇ ಶತಮಾನದಿಂದ 14ನೇ ಶತಮಾನದ ಅವಧಿಯಲ್ಲಿ ಆಳಿದ್ದರು.
  • ಆಳುಪ ರಾಜರು:  ಹೆಸರೇ ಹೇಳುವಂತೆ ಆಳುವವರು ಆಳುಪರಾಗಿದ್ದರು. ಈ ಕಾಲದಲ್ಲಿ ಜಾತಿವ್ಯವಸ್ಥೆ ಇಲ್ಲದಿದ್ದ ಕಾರಣ ರಾಜವಂಶದ ಮೂಲಜಾತಿ ತಿಳಿಯಲು ಸಾಧ್ಯವಿಲ್ಲ. ಆಳುಪ ರಾಜರುಗಳೆಲ್ಲರೂ ಇಂದಿನ ಮೊಗವೀರರ ವಂಶ ಎಂದು ಜಾತಿ ಆಧಾರದಲ್ಲಿ ವಿಭಾಗಿಸಿ ಹೇಳಲು ಸಾಧ್ಯವಿಲ್ಲ. ಆಳುಪ ಒಂದು ಜನಾಂಗ ಎಂಬುದಕ್ಕೆ ಯಾವುದೇ ಇತಿಹಾಸವಿಲ್ಲ. ಇದು ಮಂಗಳೂರಿನ ಕಂಕನಾಡಿಯ ಆಳುಪೆ ಎಂಬಲ್ಲಿ ಆಳ್ವಿಕೆ ನಡೆಸುತ್ತಿದ್ದ ಬಗ್ಗೆ ಉಲ್ಲೇಖವಿದೆ. ಆಳ್ವ ಎಂಬ ಗೋತ್ರ/ಬರಿ ಈಗ ಇದ್ದು ಈ ಹೆಸರಿನ ಮೂಲ ಆಳುಪ. ಈ ಬರಿಯ ಜನ ಬಂಟ ಸಮುದಾಯದೊಂದಿಗೆ ಗುರುತಿಸಿಕೊಂಡಿದ್ದಾರೆ. ಈ ವಂಶದ ಬಗ್ಗೆ ಮಾಹಿತಿ ಲಭ್ಯವಿಲ್ಲ.   
  • ಮೊಗೇರ: ಮೊಗವೀರ ಸಮುದಾಯ ಜನಪದ ಕತೆಗಳ ಪ್ರಕಾರ ತುಳುನಾಡಿನ ಕರಾವಳಿಯ ಮೊಗವೀರರು ಮೂಲತಃ ಮೊಗೇರ ಎಂಬ ಹೆಸರಿನಿಂದ ಕರೆಯಲ್ಪಡುತ್ತಿದ್ದರು.

ಮಂಜೇಶ್ವರ ಗೋವಿಂದ ಪೈಯವರ ಸಂಶೋಧನೆಯಂತೆ ಮುದ್ಗರ ಎಂಬ ಸಂಸ್ಕ್ರತ ಪದದ ಮೂಲರೂಪ ಮೊಗೇರ, ಕದಂಬರ ಕಾಲದಲ್ಲಿ ಮೊಗೇರ ಪದವನ್ನು ಸಂಸ್ಕ್ರತದಲ್ಲಿ ಮುದ್ಗರ ಎಂದು ಕರೆಯಲಾಗಿತ್ತು.

ಪ್ರಾನ್ಸಿಸ್ ಬಚನಾನ್ (1807) ಮೊಗೆಯರ್ ಎಂಬ ಶಬ್ದವನ್ನು ಮೊಗವೀರ ಸಮುದಾಯಕ್ಕೆ ಬಳಸಿದ್ದು ದಕ್ಷಿಣ ಭಾರತದ ಪ್ರಮುಖ ಸಮುದಾಯ ಎಂಬುದಾಗಿ ತಿಳಿಸಿದ್ದಾರೆ. ಬ್ರಿಟಿಷ್ ಸಾಹಿತ್ಯದಲ್ಲಿ ಮುಖ್ಯವಾಗಿ ಕರಾವಳಿ ಮೀನುಗಾರರ ಬಗ್ಗೆ ಉಲ್ಲೇಖವಿದ್ದು ತುಳುನಾಡು ಕರಾವಳಿ, ಮಲಬಾರ್ ನ ಮೀನುಗಾರರನ್ನು ಮೊಗೆಯರ್ ಎಂಬುದಾಗಿ ಉಲ್ಲೇಖಿಸಿದ್ದಾರೆ. ಹಾಗೆಯೇ ಮೊಗೆಯರ್ ಸಮುದಾಯ ಶಿವ, ವಿಷ್ಣು ಮತ್ತು ಮಾಸ್ತ್ರೀಯಮ್ಮ (ಮಹಾಸ್ತ್ರೀ ಅಮ್ಮ) ಮೊದಲಾದ ದೇವರನ್ನು ಆರಾಧಿಸುತ್ತಿದ್ದರು ಎಂಬ ಉಲ್ಲೇಖವಿದೆ.
ತುಳು ಪದ ಮೊಗೆರ್ ಎಂಬುದು ಪ್ರವಾಹದ ಕಾರಣದಿಂದ ಉಂಟಾದ ದಿಬ್ಬ ಅಥವಾ ಬಯಲು ಪ್ರದೇಶ ಎಂಬ ಅರ್ಥ ನೀಡುತ್ತದೆ. ಇಂತಹ ದಿಬ್ಬಗಳು ಮತ್ತು ಬಯಲುಗಳು ಮೊಗೆರರ ಮೂಲಸ್ಥಾನವಾಗಿರುವುದು ಗಮನಾರ್ಹ ಅಂಶ.

ಇದೇ ರೀತಿ ಮೊಗೆಪು ಎಂಬ ಕ್ರಿಯಾಪದ ತುಳುವಿನಲ್ಲಿ ಮೊಗೆರ್ ಎಂಬ ನಾಮಪದಕ್ಕೆ ಸಂಬಂಧಿಸಿದ್ದಾಗಿದೆ. ತುಳುವಿನಲ್ಲಿ ಮೊಗೆಪು ಎಂದರೆ ದೋಣಿ ನಡೆಸಲು ಅಂಬಿಗ ತನ್ನ ಹುಟ್ಟು ಬಳಸಿ ನೀರನ್ನು ಬಗೆದು ಸಾಗುವ ಕ್ರಿಯೆ.

ಮೊಗೆಯರ್ ಎಂಬ ಪದ ಕನ್ನಡ ಬಾಷೆಯ ಪದವಾಗಿದ್ದು ತುಳುವಿನ ಮೊಗೆರ್ ಎಂಬುದಕ್ಕೆ ಪರ್ಯಾಯ ಪದವೆನ್ನಬಹುದು. ಈ ಪದದ ಬಳಕೆ ವಿಜಯನಗರ ಅರಸರ ಕಾಲದಲ್ಲಿ ಬಾರಕೂರು ಪ್ರಾಂತ್ಯದಲ್ಲಿ ಬಳಕೆಗೆ ಬಂದಿರಬಹುದು. ಉತ್ತರಕನ್ನಡ ಭಾಗದಲ್ಲಿ ಕದಂಬರ ಆಳ್ವಿಕೆಯಿದ್ದ ಕಾರಣ ತುಳು ನಶಿಸಿತು. ಇದರ ಪರಿಣಾಮ ಕನ್ನಡ ಪದ ಮೊಗೆಯರ್ ಎಂಬುದೇ ಬಳಕೆಯಲ್ಲಿತ್ತು.

ಮೊಗೆಯರ್ ಪದ ಕೂಡಾ ಕನ್ನಡದ ಅಂಬಿಗ ಪದಕ್ಕೆ ಪರ್ಯಾಯ ಪದವಾಗಿದೆ.

ಕೇರಳದಲ್ಲಿ ಮುಕ್ಕವನ್/ಮುರುಕ್ಕನ್ ಎಂಬ ಮೀನುಗಾರ ಸಮುದಾಯ ಕೂಡಾ ಅಂಬಿಗ ಎಂಬ ಅರ್ಥವನ್ನೇ ಹೊಂದಿದೆ.

ಕನ್ನಡ ರಾಜರುಗಳ ಆಳ್ವಿಕೆಯಿಂದಾಗಿ ಮೊಗವೀರರಲ್ಲಿ ಕನ್ನಡ ಮಾತೃಭಾಷೆಯಿರುವ ಕುಟುಂಬಗಳು ಇವೆ. ಸಾಮಾಜಿಕ ಮತ್ತು ರಾಜಕೀಯ ಬದಲಾವಣೆಗಳಿಂದಾಗಿ ಹಲವಾರು ಭಿನ್ನತೆಗಳನ್ನು ತುಳುವ ಮತ್ತು ಕನ್ನಡಿಗ ಮೊಗವೀರರಲ್ಲಿ ಕಾಣಬಹುದು.

3. ಕದಂಬರ ಕಾಲ:
4ನೇ ಶತಮಾನದ ಅವಧಿಯಲ್ಲಿ ಕನ್ನಡ ರಾಜವಂಶ ಕದಂಬರ ಪ್ರಭುತ್ವವಿತ್ತು. ತುಳುನಾಡಿನ ಭಾಗವಾಗಿದ್ದ ಕಾರವಾರ (ಬನವಾಸಿ) ದಲ್ಲಿ ರಾಜ ಮಯೂರವರ್ಮನ ಆಡಳಿತ ಪ್ರಾರಂಭವಾಗಿತ್ತು. ಮಯೂರವರ್ಮನು ತುಳುನಾಡಿನಲ್ಲಿ ಹೊಸದಾಗಿ ಶಿವ ದೇವಾಲಯ ಮತ್ತು ಗಣಪತಿ ದೇವಾಲಯವನ್ನು ನಿರ್ಮಿಸಿದ. ಇದು ತುಳುನಾಡಿನಲ್ಲಿ ಹೊಸ ಧಾರ್ಮಿಕ ಆಚರಣೆಗಳು ಪ್ರಾರಂಭವಾಯಿತು. ಅಲ್ಲಿಯವರೆಗೆ ಬೌಧ್ದ ಸ್ತೂಪಗಳಲ್ಲಿ ಮಾತ್ರ ಸಂಸ್ಕ್ರತ ಮಂತ್ರಗಳ ಪಠಣ ನಡೆಯುತ್ತಿತ್ತು. ಆಳುಪ ರಾಜರು ಕದಂಬರ ಸಾಮಂತರಾಗಿದ್ದ ಕಾರಣ ಮಂಗಳೂರು ಪ್ರದೇಶದಲ್ಲೂ ಶಿವ ಮಂದಿರಗಳ ನಿರ್ಮಾಣವಾಯಿತು.
ಈ ಹೊಸ ದೇವಾಲಯಗಳ ಧಾರ್ಮಿಕ ಆಚರಣೆ ಮತ್ತು ಪೂಜೆಗಾಗಿ ವೈದಿಕ ಪುರೋಹಿತರ ಅಗತ್ಯವಿತ್ತು. ಈ ಕಾರಣಕ್ಕೆ ಉತ್ತರ ಪ್ರದೇಶದ ಬರೇಲಿಯ ಗೋದಾವರಿ ನದಿ ದಂಡೆಯ ಅಹಿಚತ್ರ ಎಂಬಲ್ಲಿಂದ ವೈದಿಕ ಪುರೋಹಿರನ್ನು ಕರೆ ತರಲಾಯಿತು.
ಸಫಳಿಗರು – ದೇವಾಲಯದಲ್ಲಿ ಪೂಜೆ, ಬಲಿ ಮತ್ತು ಉತ್ಸವದ ಸಂದರ್ಭದಲ್ಲಿ ಪಂಚ ವಾದ್ಯ ಮತ್ತು ಡೋಲು ಗಂಟೆ ಮುಂತಾದ ಸಂಗೀತವಾದ್ಯ ಪರಿಕರಗಲನ್ನು ನುಡಿಸಲು ಮೊಗವೀರ ತರುಣರ ತಂಡ ರಚಿಸಿ ತರಬೇತುಗೊಳಿಸಲಾಗಿತ್ತು. ಈಗಲೂ ಅತಿ ಪುರಾತನ ಶಿವ ದೇವಸ್ಥಾನಗಳಲ್ಲಿ ಅಂದರೆ ತಮಿಳುನಾಡಿನ ಕಂಚಿ ಮತ್ತು ಮಧುರೈನ ದೇವಾಲಯಗಳಲ್ಲಿ ನಾದಸ್ವರ, ಡೋಲು ಮತ್ತು ಇತರ ವಾದ್ಯಗಳನ್ನು ಸಫಳಿಗರೆಂಬ ಮೊಗವೀರ ಸಮುದಾಯದವರು ನುಡಿಸುತ್ತಾರೆ.
ಸಪಲ್ಯ ಪದ ಸಪ್ಪಳ ಎಂಬ ಕನ್ನಡ ಪದದಿಂದ ಹುಟ್ಟಿಕೊಂಡಿದೆ. ಸಂಗೀತ ವಾದ್ಯ ನುಡಿಸುವ ತಂಡವನ್ನು ಸಪ್ಪಳಿಗ ಎಂಬ ನಾಮಪದದಿಂದ ಕರೆಯುತ್ತಿದ್ದರು. ಈ ಕುಟುಂಬಗಳು ಅಗ್ರಹಾರದ ಸುತ್ತಮುತ್ತ ಹೆಚ್ಚಾಗಿ ಕಂಡುಬರುತ್ತವೆ.

• ಬ್ರಾಹ್ಮಣರು- ( ಪ್ರಾಚೀನ ಬ್ರಾಹ್ಮಣರು)
ಕದಂಬರ ಕಾಲದಲ್ಲಿ ಹೊಸದಾಗಿ ನಿರ್ಮಿಸಿದ ದೇವಾಲಯಗಳಿಗೆ ಉತ್ತರ ಪ್ರದೇಶದಿಂದ ಬಂದಿದ್ದ ವೈದಿಕ ಪುರೋಹಿತರಿಗೆ ಇಲ್ಲಿನ ವಾತಾವರಣ ಮತ್ತು ಪರವೂರಿನ ಏಕಾಂತ ಜೀವನ ಹಿಡಿಸಲಿಲ್ಲ. ತುಂಬಾ ದೂರದ ಉತ್ತರ ಪ್ರದೇಶದ ತಮ್ಮ ಕುಟುಂಬದೊಂದಿಗೆ ಸಂಪರ್ಕದಲ್ಲಿರುವುದು ಕಷ್ಟವಾಯಿತು. ಯುವ ಪುರೋಹಿತರಿಗೆ ಮದುವೆ ಸಂಬಂಧ ಸಿಗುವುದೇ ಕಷ್ಟವಾಯಿತು. ಈ ಎಲ್ಲ ಕಾರಣಕ್ಕೆ ತಾಯ್ನಾಡಿಗೆ ಮರಳುವ ಯೋಚನೆಯಲ್ಲಿದ್ದರು. ಈ ಸಂದರ್ಭ ಪುರೋಹಿತರ ಕಷ್ಟವನ್ನು ಅರಿತ ರಾಜ ಮನವೊಲಿಸಿ ಅವರು ಇಲ್ಲೇ ನೆಲೆಸುವಂತೆ ಮಾಡಲು ತುಳುನಾಡಿನ ತುಳುವ ಯುವತಿಯರನ್ನು ಮದುವೆಯಾಗಲು ಒಪ್ಪಿಗೆ ನೀಡಿದ. ಅಲ್ಲದೇ ಈ ಕುಟುಂಬಗಳಿಗೆ ಸೂಕ್ತ ನೆಲೆ ಕಲ್ಪಿಸಿ ಅಗ್ರಹಾರದ ಸುತ್ತಮುತ್ತ ನೆಲೆಸುವಂತೆ ಮಾಡಿದ. ಮೊಗವೀರರ ಜನಪದ ಕತೆಗಳ ಪ್ರಕಾರ ಕೂಡಾ ವಿಚಾರ ಪ್ರಸ್ತಾಪವಾಗಿದ್ದು, ಪುರೋಹಿತ ಯುವಕರು ಮೊಗವೀರ ಯುವತಿಯರನ್ನು ಮದುವೆಯಾಗಿರುವ ಬಗ್ಗೆ ಉಲ್ಲೇಖವಿದೆ. ಜೀನ್ ಮತ್ತು ತಲೆಮಾರುಗಳ ಅಧ್ಯಯನ ಪ್ರಕಾರ ತುಳುನಾಡಿನ ಬ್ರಾಹ್ಮಣರು ಮತ್ತು ತುಳುನಾಡಿನ ಇತರ ಜನಾಂಗಗಳು ಸಮ್ಮೀಳಿತವಾಗಿರುವುದು ಸಾಬೀತಾಗಿದೆ. ತುಳುನಾಡಿನ ಸಾಹಿತ್ಯ ಚರಿತ್ರೆಯಲ್ಲಿ ಹೇಳಿರುವಂತೆ ಬಂಟ ಸಮುದಾಯದ ಯುವತಿಯರನ್ನು ಕೂಡಾ ಬ್ರಾಹ್ಮಣರು ಮದುವೆಯಾಗಿರುವ ಬಗ್ಗೆ ಉಲ್ಲೇಖವಿದೆ. ಬ್ರಾಹ್ಮಣ ಕುಟುಂಬಗಳು ಕೂಡಾ ತುಳು ಬರಿ ಪದ್ಧತಿಯನ್ನು ಹೊಂದಿದ್ದು ಈ ವಾದವನ್ನು ಪುಷ್ಟಿಕರಿಸುತ್ತದೆ.

ಗಾಣಿಗ – ಕರಾವಳಿ ತೆಂಗು ಬೆಳೆಗೆ ಸೂಕ್ತವಾದ ಪ್ರದೇಶ ಇಲ್ಲಿ ತೆಂಗು ಬೆಳೆ ಪ್ರಮುಖ ಆದಾಯದ ಬೆಳೆಯಾಗಿದೆ. ಗಾಣದ ಮೂಲಕ ತೆಂಗಿನ ಎಣ್ಣೆ ಹಿಂಡುವ ವೃತ್ತಿ ಅಲ್ಲಲ್ಲಿ ಕಂಡುಬರುತಿತ್ತು. ಮೊಗವೀರರಲ್ಲಿ ಗಾಣಿಗರೆಂದು ಕರೆಸಿಕೊಳ್ಳುತಿದ್ದ ಕುಟುಂಬಗಳು ಕ್ರಮೇಣ ಬೇರ್ಪಟ್ಟು ಸ್ವತಂತ್ರ ಜಾತಿಯಾಗಿದೆ. ಆದರೆ ಈ ಜಾತಿಯವರು ಮೊಗವೀರರ ಸಫಳಿಗ ಉಪಜಾತಿಯವರನ್ನು ತಮ್ಮ ಸಮಾನ ಕುಲವೆಂದು ಗಾಣಿಗರು ಪರಿಗಣಿಸುತ್ತಾರೆ.

ಬೋವಿ– ಪ್ರಾಚೀನ ಅರಸರ ಕಾಲ ಮತ್ತು ಸಾಮಂತ ಅರಸರ ಆಳ್ವಿಕೆಯ ಕಾಲದಲ್ಲಿ ರಾಜ ಮಹಾರಾಜರ ಮತ್ತು ಗಣ್ಯರು ಕೂರುತ್ತಿದ್ದ ಪಲ್ಲಕ್ಕಿ ಹೊರುವ ವೃತ್ತಿಯಲ್ಲಿ ತೊಡಗಿದ್ದ ಮೀನುಗಾರ ಸಮುದಾಯವರು . ಈಗ ಬೋವಿ ಜನಾಂಗೀಯರು ಕರಾವಳಿಯ ಭಾಗವಾದ ಉಲ್ಲಾಳದಿಂದ ಮಂಜೇಶ್ವರದವರೆಗೆ ಮೊಗವೀರರ ಉಪಜಾತಿಯಾಗಿ ಪರಿಗಣಿಸಲ್ಪಟ್ಟಿದ್ದಾರೆ. ಹಾಗೆಯೇ ಉತ್ತರ ಕನ್ನಡದಲ್ಲಿ ಕನ್ನಡ ಮತ್ತು ಕೊಂಕಣಿ ಮಾತನಾಡುವ ಬೋವಿ, ಹರಿಕಂಪು ಮತ್ತು ಖಾರ್ವಿ ಜನಾಂಗ ಮೊಗವೀರರ ಉಪಜಾತಿಯಾಗಿ ಪರಿಗಣಿಸಲ್ಪಟ್ಟಿದೆ.

4. ವಿಜಯನಗರ ಸಾಮ್ರಾಜ್ಯ ಕಾಲ:
ಮರಕಲರು: ಉಡುಪಿ ಸುತ್ತಮುತ್ತಲ ಪ್ರದೇಶಗಳಲ್ಲಿ ಮರಕಲ ಎಂಬ ಮೊಗವೀರ ಪಂಗಡ ಕಂಡುಬರುತ್ತದೆ. ಈ ಹೆಸರು ಬರಲು ವಿಶೇಷವಾದ ಇತಿಹಾಸವಿದೆ. ವಿಜಯನಗರ ಅರಸರ ಕಾಲದಲ್ಲಿ ಶಕ್ತಿ ಸಾಮರ್ಥ್ಯ ಕ್ಕೆ ಹೆಸರಾಗಿದ್ದ ಮೊಗವೀರ ಯುವಕರು ವಿಜಯನಗರದ ಅತ್ಯಾಧುನಿಕ ಶಕ್ತಿಶಾಲಿ ಸೇನೆಯಲ್ಲಿ ಸ್ಥಾನ ಪಡೆದಿದ್ದರು. ಶತ್ರು ರಾಜ್ಯದ ಕೋಟೆಯ ಮುಖ್ಯ ಬಾಗಿಲು ಕೀಳುವ ವಿಶೇಷ ಪರಿಣಿತಿಯ ಸೇನೆಯಾಗಿತ್ತು. ಮರಕೀಳುವವ (ಮರ+ಕೀಳ), ಮರ ಎಂದರೆ ಕೋಟೆಯ ಮರದ ಬಾಗಿಲು. ಈ ಸೇನಾಪಡೆಗೆ ಮರಕೀಳ ಎಂಬ ಹೆಸರಿತ್ತು. ಉಡುಪಿ ಭಾಗದಲ್ಲಿ ತುಳುಬಾಷೆಯ ಬಳಕೆಯಿದ್ದ ಕಾರಣ ಮರಕೀಳುವುದು ಎಂಬ ಕ್ರಿಯಾಪದ ಮರ ಕಲೆಪಿನಿ ಎಂಬುದಾಗಿ ನಾಮಪದ ಮರಕಲ ಎಂಬುದಾಗಿ ಮಾರ್ಪಡಾಗಿರಬಹುದು. ಈ ಬಗ್ಗೆ ವಿಜಯನಗರ ಸಾಮ್ರಾಜ್ಯ (14ನೇ ಶತಮಾನ) ದ ಇತಿಹಾಸದಲ್ಲಿ ಕೂಡಾ ಉಲ್ಲೇಖವಿದೆ. ಈ ವಿಶೇಷ ವೃತ್ತಿ ಆಳುಪ ಅರಸರ ಕಾಲದಲ್ಲೂ ಇದ್ದಿರಬಹುದು ಆದರೆ ಎಲ್ಲೂ ಉಲ್ಲೇಖವಿಲ್ಲ.

ಮಟ್ಟಿ ಬ್ರಾಹ್ಮಣರು:

ವಾದಿರಾಜ ಆಚಾರ್ಯ ಅವರು ಹೇಳಿರುವಂತೆ 14ನೇ ಶತಮಾನದ ಅವಧಿಯಲ್ಲಿ ಮಟ್ಟು ಗ್ರಾಮದ ಮೊಗವೀರರು ಬ್ರಾಹ್ಮಣ ಜಾತಿಗೆ ಮತಾಂತರಗೊಂಡರು. ಆದರೆ ಮತಾಂತರವಾದ ಮೊಗವೀರ ಮಟ್ಟಿ ಬ್ರಾಹ್ಮಣರು ತಮ್ಮ ಹಿಂದಿನ ಆಚರಣೆಗಳನ್ನು ಮುಂದುವರೆಸಿಕೊಂಡು ಬಂದಿದ್ದಾರೆ. ಬಚನಾನ್ ನ ಪ್ರಬಂಧದಲ್ಲಿರುವಂತೆ ಮಟ್ಟಿ ಬ್ರಾಹ್ಮಣರು ಇಂದಿಗೂ ಇತರ ಮೊಗವೀರರ ಆಚರಣೆಯಂತೆ ಬೊಬ್ಬರ್ಯ ಗುಂಡ ಎಂಬ ಆಲಯವನ್ನು ಹೊಂದಿದ್ದಾರೆ.

ಮೊಗವೀರ ಪದದ ಉತ್ಪತ್ತಿ:
ಸ್ವಾತಂತ್ರ್ಯ ಹೋರಾಟಗಾರರಾದ ಹೊಯ್ಗೆ ಬಜಾರ್ ಮೋಹನಪ್ಪ ತಿಂಗಳಾಯ ಮೊತ್ತ ಮೊದಲ ಬಾರಿಗೆ 20 ಶತಮಾನದ ಆರಂಭದಲ್ಲಿ ಮೊಗವೀರ ಎಂಬ ಜಾತಿಸೂಚಕ ಪದವನ್ನು ಪರಿಚಯಿಸಿದರು. ಹಿಂದೆ ಮೊಗೆರ್/ ಮೊಗೆಯರ್ ಎಂದು ಬಳಕೆಯಲ್ಲಿದ್ದ ಪದಕ್ಕೆ ಪರ್ಯಾಯವಾಗಿ ಮೊಗವೀರ ಪದ ಬಳಕೆಯಲ್ಲಿದೆ. ಹಾಗೆಯೇ 1929 ರಲ್ಲಿ ಮುಂಬೈಯಲ್ಲಿದ್ದ ಮೊಗೆರ ಸಂಘ ಮೊಗವೀರ ವ್ಯವಸ್ತಾಪಕ ಮಂಡಳಿ (MVM) ಎಂಬುದಾಗಿ ನೋಂದಾಯಿಸಲ್ಪಟ್ಟಿತು. ಈ ಸಂಘದಿಂದ ಮಾಸಿಕ ಕನ್ನಡ ಪತ್ರಿಕೆಯೊಂದು ಪ್ರಕಾಶಿಸಲ್ಪಡುತಿತ್ತು. ಈಗ ಬಹುತೇಕ ಎಲ್ಲ ಮೀನುಗಾರ ಉಪಜಾತಿಗಳು ಮೊಗವೀರ ಎಂಬ ಜಾತಿಸೂಚಕ ಬಳಸುವ ಮೂಲಕ ಸಂಘಟಿತರಾಗಿದ್ದಾರೆ.

5. ಅಬ್ಬಕ್ಕ – ಬ್ರಿಟಿಷರ ಕಾಲ:
14ನೇ ಶತಮಾನದಲ್ಲಿ ಉಲ್ಲಾಳದ ರಾಣಿಯಾಗಿ ಅಬ್ಬಕ್ಕ ಆಳುತ್ತಿದ್ದಳು. ಒಮ್ಮೆ ಸುರತ್ಕಲ್ ನ ಸಮುದ್ರ ತೀರದಲ್ಲಿರುವ ಸದಾಶಿವ ದೇವಸ್ಥಾನಕ್ಕೆ ಪೂಜೆಗೆಂದು ತೆರಳಿದ್ದ ಸಂದರ್ಭದಲ್ಲಿ ಪೂಜೆ ಮುಗಿಸಿ ಸಮುದ್ರ ತೀರಕ್ಕೆ ಹೋದಾಗ ಭೀಕರ ಅಲೆಯೊಂದು ಅಬ್ಬಕ್ಕನನ್ನು ಎಳೆದೊಯ್ದಿತ್ತು. ಈ ಸಂದರ್ಭದಲ್ಲಿ ಮೊಗವೀರ ಯುವಕರು ರಾಣಿಯನ್ನು ರಕ್ಷಿಸಿದ್ದರು. ಮೊಗವೀರ ಯುವಕರ ಧೈರ್ಯ ಮತ್ತು ಸಾಹಸಗಳಿಗೆ ಮೆಚ್ಚಿದ ಅಬ್ಬಕ್ಕ ತನ್ನನ್ನು ಕಾಪಾಡಿದ ಯುವಕರು ಮತ್ತು ಇತರ ಮೊಗವೀರ ಯುವಕರನ್ನು ಉಲ್ಲಾಳಕ್ಕೆ ಕರೆಸಿಕೊಂಡು ತನ್ನ ರಾಜ್ಯದ ಭೂಸೇನೆ ಮತ್ತು ನೌಕಾಸೇನೆಯಲ್ಲಿ ನೇಮಿಸಿಕೊಂಡಳು. ಪೋರ್ಚುಗೀಸರು ಉಲ್ಲಾಳಕ್ಕೆ ದಾಳಿ ಮಾಡಿದ ಸಂದರ್ಭ ಮೊಗವೀರ ಯುವಕರ ಸೇನೆಯ ಸಾಹಸದಿಂದ ರಾಣಿ ಅಬ್ಬಕ್ಕ ಜಯ ಸಾಧಿಸಿದಳು.

ಸಮುದಾಯದ ಸಾಮಾಜಿಕ ವ್ಯವಸ್ಥೆ :
ತುಳು ಜನಪದರ ಮಾತಿನಂತೆ ತುಳುವರು ಸಪ್ತಸಾಗರಗಳ ಪತ್ತೆಹಚ್ಚಿದವರು, ಸಪ್ತ ಸಾಗರಗಳ ಈಜಿ ಬಂದವರು, ಪ್ರಪಂಚದಾದ್ಯಂತ ಹರಡಿರುವ ಸಮುದಾಯದವರು ಎಂಬುದಾಗಿದೆ.
ಸಮುದ್ರದಲ್ಲಿ ಮೀನುಗಾರಿಕೆ ಮಾಡಬೇಕಾದರೆ ದೈರ್ಯದಿಂದ ಮುನ್ನುಗ್ಗುವ ಗುಣ ಅವಶ್ಯಕ. ಹಿಂದೆ ಸಮುದ್ರ ಮೀನುಗಾರಿಕೆ ಇಂದಿನಂತೆ ಸುಲಭವಿರಲಿಲ್ಲ. ತೀರಾ ಅಪಾಯದ ವೃತ್ತಿಯಾಗಿತ್ತು. ಧೈರ್ಯ ಮತ್ತು ವೃತ್ತಿ ಕೌಶಲ್ಯವೇ ಸಮುದ್ರ ಮೀನುಗಾರಿಕೆಯ ಅರ್ಹತೆಯಾಗಿತ್ತು. ಸಮುದ್ರ ಮೀನುಗಾರಿಕೆ ಸಾಂಪ್ರಾದಾಯಿಕ, ಧೈರ್ಯ ಮತ್ತು ಸಾಹಸವುಳ್ಳ ವೃತ್ತಿಯಾಗಿದ್ದು, ವಿಶ್ವದಾದ್ಯಂತ ಹರಡಿರುವ ವೃತ್ತಿಯಾಗಿದೆ. ಮೊಗವೀರ ಸಮುದಾಯ ಧೈರ್ಯ ಮತ್ತು ಸಾಹಸಗಳಿಗೆ ಹೆಸರಾಗಿದ್ದು ಸಮುದಾಯಕ್ಕೆ ವಿಶೇಷ ಗೌರವವಿದೆ. ಸಹೋದರತೆ ಮತ್ತು ಸಹಬಾಳ್ವೆಯ ಗುಣದಿಂದ ಈ ಸಮುದಾಯ ಉತ್ತಮ ಬೆಳವಣಿಗೆ ಹೊಂದಿದೆ.

ಪಟ್ಟಣ: ಪಟ್ಟಣ ಎಂಬ ಪದ ದ್ರಾವಿಡ ಭಾಷೆಯ ಪದವಾಗಿದ್ದು ತಮಿಳುನಾಡಿನಲ್ಲೂ ಹಿಂದಿನ ನಗರಗಳು ಪಟ್ಟಣ ಎಂಬುದಾಗಿ ಕರೆಯಲ್ಪಡುತ್ತವೆ. ಮೊಗವೀರರಲ್ಲಿನ ಮೀನುಗಾರ ಜನಾಂಗ ಹೆಚ್ಚಾಗಿ ಪಟ್ಟಣಗಳಲ್ಲಿ ವಾಸವಾಗಿದ್ದರು. ಮೀನು ಮಾರಾಟ ಪಟ್ಟಣಗಳಲ್ಲಿ ನಡೆಯುತಿತ್ತು. ಮೊರಾಕ್ಕೊದ Ibn Baltuta ಎಂಬ ಪ್ರವಾಸಿಗ ಹೇಳುವಂತೆ ಕೋಟೆಗಳಿರುವ ಪ್ರದೇಶಗಳು ಪಟ್ಟಣ ಎಂಬುದಾಗಿ ಕರೆಯಲ್ಪಡುತಿತ್ತು. ಬೊಕ್ಕ ಪಟ್ನಾ ಎಂಬ ಮೀನುಗಾರಿಕಾ ಗ್ರಾಮ ಮತ್ತು ಮಂಗಳೂರು ಬಂದರು 14ನೇ ಶತಮಾನದಲ್ಲಿ ಮೀನುಗಾರರ ಪ್ರಮುಖ ಪಟ್ಟಣವಾಗಿತ್ತು ಎಂದು ತಿಳಿಸಿದ್ದಾನೆ.

ಗ್ರಾಮ ಸಭಾ: ಮೀನುಗಾರ ಸಮುದಾಯದ ಪಟ್ಟಣದಲ್ಲಿ ಗ್ರಾಮಸಭಾಗಳೆಂಬ ಗ್ರಾಮಮಟ್ಟದ ಸರ್ಕಾರಗಳಿತ್ತು. ಪ್ರತಿ ಗ್ರಾಮಸಭಾಕ್ಕೆ ಒಬ್ಬ ಗುರಿಕಾರ ಇರುತ್ತಿದ್ದ. ಗುರಿಕಾರ ಪದ್ಧತಿ ವಂಶ-ಪಾರಂಪರ್ಯವಾಗಿತ್ತು. ಗುರಿಕಾರರು ಕಬ್ಬಿಣ ಅಥವಾ ಬಂಗಾರದ ಬಳೆಗಳನ್ನು ಕೈಗೆ ತೊಡುತ್ತಿದ್ದರು. ಜೊತೆಗೆ ಒಂದು ಕಿವಿಗೆ ಓಲೆ ಧರಿಸುತ್ತಿದ್ದರು. ಇದು ಗುರಿಕಾರರನ್ನು ಪ್ರತಿನಿಧಿಸುವ ಆಭರಣವಾಗಿತ್ತು. ಗುರಿಕಾರರ ಕರ್ತವ್ಯಗಳು ಮತ್ತು ಅಧಿಕಾರಗಳು ಪ್ರಜಾಪ್ರಭುತ್ವ ಮಾದರಿಯಂತೆ ಇತ್ತು. ಎಲ್ಲಾ ಗ್ರಾಮಸಭಾದ ಗುರಿಕಾರರು ಸೇರಿ ಒಬ್ಬ ನಾಯಕನನ್ನು ಆರಿಸುತ್ತಿದ್ದರು. ತಮ್ಮ ನಾಯಕನನ್ನು ತಂಡೇಲ ಎಂಬುದಾಗಿ ಕರೆಯುತಿದ್ದರು.

ದಕ್ಷಿಣಕನ್ನಡ ಮೊಗವೀರ ಮಹಾಸಭಾ (1923) ರ ಅಡಿಯಲ್ಲಿ 146 ಗ್ರಾಮಸಭಾಗಳಿದ್ದು, ಇದರಲ್ಲಿ 10 ಸಂಯುಕ್ತ ಸಭಾಗಳಿವೆ. ಹಿಂದಿನ ಕಾಲದಲ್ಲಿ ಬಾರಕೂರು, ಬಾಗ್ವಾಡಿ ಮತ್ತು ಮಂಗಳೂರು ಎಂಬ ಮೂರು ಪಟ್ಟಣಗಳು ಮೊಗವೀರರ ಹಳೆ ಕೇಂದ್ರಗಳಾಗಿದ್ದವು.

ಗ್ರಾಮಸಭಾಗಳಲ್ಲಿ ಮಂಗಳೂರು, ಉಡುಪಿ ಮತ್ತು ಉಪ್ಪಳದಿಂದ ಕೋಟದವರೆಗೆ ದಕ್ಷಿಣ ಕನ್ನಡ ಮೊಗವೀರ ಸಭಾದಲ್ಲಿ ಸೇರಿಕೊಂಡಿವೆ. ಅದೇ ರೀತಿ ಕನ್ನಡ ಭಾಷಿಗ ಬಾಗ್ವಾಡಿ ಪ್ರದೇಶದ ಮೊಗವೀರರು ಮೊಗವೀರ ಮಹಾಜನಸಭಾ ಎಂಬ ಪ್ರತ್ಯೇಕ ಸಂಘ ರಚಿಸಿಕೊಂಡಿದ್ದಾರೆ.

ಕುಲಗುರು:
ಮೊಗವೀರರು ಕುಲಗುರುಗಳನ್ನು ಹೊಂದಿದ್ದರು. ಇವರನ್ನು ಮಂಗಲ ಪೂಜಾರಿ ಎಂಬುದಾಗಿ ಕೂಡ ಕರೆಯಲಾಗುತಿತ್ತು. ಮಂಗಲಪೂಜಾರಿ ಮೊಗವೀರರ ಸಾಂಪ್ರಾದಾಯಿಕ ಪುರೋಹಿತನಾಗಿದ್ದು, ಬೆಣ್ಣೆ ಕುದ್ರು ಮಾಸ್ತ್ರೀಯಮ್ಮ ದೇವಾಲಯದಲ್ಲಿ ಮುಖ್ಯಪುರೋಹಿತರಾಗಿದ್ದರು. ಇತ್ತೀಚಿನ ವರ್ಷಗಳಲ್ಲಿ ಕುಲಗುರುಗಳ ಪದ್ಧತಿಯನ್ನು ಮತ್ತೆ ಪೂರ್ಣ ಪ್ರಮಾಣದಲ್ಲಿ ಆಚರಣೆಗೆ ತರಲು ಸಮುದಾಯದ ಪ್ರಮುಖ ನಾಯಕರು ಪ್ರಯತ್ನಿಸುತ್ತಿದ್ದಾರೆ.

ಇತರ ಸಂಗತಿಗಳು:
ಬಚನಾನ್ ಹೇಳುವಂತೆ ಹಿಂದೆ ಸಾಮಾನ್ಯ ಕ್ಷೌರಿಕ (ಕೆಲಸಿ) ಮೊಗವೀರರ ಕ್ಷೌರ ಮಾಡುತ್ತಿರಲಿಲ್ಲ. ಮೊಗವೀರರು ತಮ್ಮ ಸಮುದಾಯದ ಕ್ಷೌರಕ್ಕಾಗಿ ಮೆಲಂಟವಮ್ ಅಥವಾ ಮಿಲಂಟ ಎಂಬ ಕ್ಷೌರಿಕರನ್ನು ಹೊಂದಿದ್ದರು. ಮೀನುಗಾರರು ಹಿಡಿದ ಮೀನಿನಲ್ಲಿ ಒಂದು ಪಾಲು ಈ ಕ್ಷೌರಿಕರಿಗೆ ಮೀಸಲಾಗಿತ್ತು.

ಧಾರ್ಮಿಕ ನಂಬಿಕೆಗಳು:
ಸುಮಾರು 2700 ವರ್ಷಗಳಿಂದ ತುಳುನಾಡಿನಲ್ಲಿ ಪ್ರಭುತ್ವ ಹೊಂದಿರುವ ಮೊಗವೀರರು ಧಾರ್ಮಿಕತೆಯಲ್ಲಿ ಕಾಲಕಾಲಕ್ಕೆ ಹಲವಾರು ಬದಲಾವಣೆಯೊಂದಿಗೆ ಧಾರ್ಮಿಕತೆ ಸುಧಾರಣೆಗಳನ್ನು ಮಾಡಿಕೊಂಡಿದ್ದಾರೆ.
ಮೂಲತಃ ಮೊಗವೀರರು ಬಿರ್ಮೆರ್ ಮತ್ತು ಪಂಜುರ್ಲಿ ಎಂಬ ಶಕ್ತಿಗಳನ್ನು ಪೂಜಿಸುತ್ತಿದ್ದರು. ನಂತರ ಬೊಬರ್ಯ, ಕೊರತಿ ಮತ್ತು ಹೈಗುಲಿ ಎಂಬ ಶಕ್ತಿಗಳು ಇವರ ಆರಾಧನೆಯಲ್ಲಿ ಸೇರಿಕೊಂಡವು.

ಶಕ್ತಿಗಳ ಆರಾಧನೆ:
ಬಿರ್ಮೆರ್, ಪಂಜುರ್ಲಿ, ಬೊಬರ್ಯ, ಕೊರತಿ ಮತ್ತು ಹೈಗುಲಿ ಶಕ್ತಿಗಳ ಜೊತೆ ಕೆಲವು ಪೂಜಾ ಸ್ಥಳಗಳಲ್ಲಿ ವೇದವ್ಯಾಸ ಮತ್ತು ಅಥರ್ವ ಮುನಿಗಳ ಮೂರ್ತಿಯನ್ನಿಟ್ಟು ಪೂಜೆ ನಡೆಯುತಿತ್ತು.

ಬೊಬರ್ಯ:
ಬೊಬರ್ಯ ಶಕ್ತಿ ಪುರುಷ ಒಬ್ಬ ಹೃದಯವಂತ ಅರಬ್ ವ್ಯಾಪಾರಿಯಾಗಿದ್ದು ಮೀನುಗಾರರೊಂದಿಗೆ ಸಹಬಾಳ್ವೆಯಿಂದ ಇದ್ದ ವ್ಯಕ್ತಿ. ಜನಪದ ಕಾವ್ಯಗಳ ಪ್ರಕಾರ ಬೊಬ್ಬರ್ ಎಂಬಾತ ಅಸಾಮಾನ್ಯ ಮತ್ತು ಜನಪ್ರಿಯ ಮೀನು ವ್ಯಾಪಾರಿಯಾಗಿದ್ದು ಕಮಿಷನ್ ಆಧಾರದಲ್ಲಿ ಪಶ್ಚಿಮ ಕರಾವಳಿಯ ಬಂದರಿನಲ್ಲಿ ಬೋಟ್ ನಡೆಸುತ್ತಿದ್ದ. ನಂತರ ಬಂಟ ಯುವತಿಯನ್ನು ಮದುವೆಯಾಗಿ ಕಾಪು ಮೊಗವೀರ ಪಟ್ಟನದಲ್ಲಿ ಚಿರಪರಿಚಿತನಾಗಿದ್ದ. ಮೊಗವೀರರ ಜನಪದರ ನಂಬಿಕೆಯಂತೆ ಮೊಗವೀರರ ಪರಮಾಪ್ತನಾಗಿದ್ದ.
ಒಮ್ಮೆ ಕಡಲ್ಗಳರನ್ನು ಬೆನ್ನತ್ತಿ ಹೋರಾಡುವ ಸಂದರ್ಭದಲ್ಲಿ ವೀರಮರಣವನ್ನಪ್ಪಿದ. ತುಳುನಾಡಿನಲ್ಲಿ ತುಳುವರೊಳಗೊಂದಾಗಿ ತುಳುವರ ಪ್ರಾಣರಕ್ಷಣೆ ಮಾಡಿದ್ದ ಬೊಬರ್ಯನನ್ನು ಮೊಗವೀರರು ಪ್ರಾಣರಕ್ಷಕ ಶಕ್ತಿ ದೇವರಾಗಿ ಮತ್ತು ಅದೃಷ್ಟ ದೇವರಾಗಿ ಆರಾಧಿಸುತ್ತಾರೆ.

ವೇದವ್ಯಾಸ ಮತ್ತು ಅಥರ್ವ ಮುನಿ:
ಕೆಲವು ಮೊಗವೀರರ ಆರಾಧನಾ ಸ್ಥಳಗಳಲ್ಲಿ ವೇದವ್ಯಾಸ ಮತ್ತು ಅಥರ್ವಮುನಿಗಳ ಮೂರ್ತಿಗಳು ಕಂಡುಬರುತ್ತದೆ. ಐತಿಹಾಸಿಕ ಕುತೂಹಲಕಾರಿಯಾದ ಕತೆಗಳಲ್ಲಿ ಬರುವ ಋಷಿಮುನಿಯಾದ ವೇದವ್ಯಾಸರು ಸತ್ಯವತಿ/ಮತ್ಸ್ಯಗಂಧಿಯ ಮಗನಾಗಿದ್ದು ಸತ್ಯವತಿ ಮೀನುಗಾರ ಸಮುದಾಯದವಳು. ಆದ್ದರಿಂದ ವೇದವ್ಯಾಸರನ್ನು ಮೊಗವೀರರು ಆರಾಧಿಸುತ್ತಾರೆ. ಆದರೆ ಅಥರ್ವಮುನಿ ಮೀನುಗಾರ ಸಮುದಾಯದವರೇ, ಅಲ್ಲವೇ, ಎಂಬುದರಲ್ಲಿ ಗೊಂದಲವಿದ್ದು, ಅಥರ್ವ ವೇದ ಅಂಗೀರಸ ಮತ್ತು ಬೃಗು ಮಹರ್ಷಿಗಳಿಂದ ರಚಿತವಾಗಿದ್ದು ಅಥರ್ವಮುನಿಗಳ ಅನುಯಾಯಿಗಳು ಉತ್ತರಭಾರತದಿಂದ ವಲಸೆ ಬಂದ ಸಂದರ್ಭ ಈ ಮುನಿಗಳ ಆರಾಧನೆ ಮೊಗವೀರರಲ್ಲಿ ಆರಂಭವಾಗಿರಬಹುದು.

ವಿಷ್ಣು ಮತ್ತು ಶಿವರ ಆರಾಧನೆ:
ಹಿಂದೂಗಳ ಪ್ರಮುಖ ದೇವರಾಗಿರುವ ವಿಷ್ಣು ಮತ್ತು ಶಿವ ದೇವರು ತುಳುನಾಡಿನಲ್ಲಿ ಸುಮಾರು 4ನೇ ಶತಮಾನ (ಕದಂಬರ ಕಾಲ) ದಲ್ಲಿ ಪೂಜಿಸಲ್ಪಟ್ಟರು. ನಂತರ ತುಳುನಾಡಿನಲ್ಲಿ ವ್ಯಾಪಕವಾಗಿ ಈ ಶಕ್ತಿಗಳು ಪೂಜಿಸಲ್ಪಟ್ಟರು.

ಮಂಗಲ ಪೂಜಾರಿ:
ಮೊಗವೀರ ಸಮುದಾಯದ ಮೂಲ ಅರ್ಚಕರನ್ನು ಮಂಗಲ ಪೂಜಾರಿ ಎನ್ನುತ್ತಿದ್ದರು. ಅಮ್ಮನೊರು ದೇವಸ್ಥಾನದ ಪೂಜೆ ಮತ್ತು ಇತರ ಖರ್ಚು ವೆಚ್ಚಕ್ಕಾಗಿ ಮಂಗಲ ಪುಜಾರಿಯವರಿಗೆ ಮೊಗವೀರ ಕುಟುಂಬಗಳು ಇಂತಿಷ್ಟು ವಂತಿಗೆಯನ್ನು ನೀಡಬೇಕಿತ್ತು. ಮೊಗವೀರರ ಕುಲಗುರು ಅಥವಾ ಮಂಗಲಪೂಜಾರಿ ತುಳುನಾಡಿನಲ್ಲಿದ್ದ ಪ್ರಾಚೀನ ಪುರೋಹಿತ ವ್ಯವಸ್ಥೆಯ ಬಗ್ಗೆ ತಿಳಿಯಲು ಸಹಾಯ ಮಾಡುತ್ತದೆ. ಪೂಜಾರಿ ಎಂದರೆ ಅರ್ಚಕ ಎಂಬ ಅರ್ಥವಿದೆ. ಆದರೆ ಈ ಪದ ತುಳು ಪದವಲ್ಲ. ಈ ಪದ ತುಳುನಾಡಿಗೆ ಆಗಮಿಸಿದ ವಲಸಿಗರಿಂದ ಎರವಲು ಪಡೆಯಲಾಗಿದೆ. ಹಿಂದೆ ಕುಲಪುರೋಹಿತರಾಗಿದ್ದ ವರ್ಗಗಳೇ ಪೂಜಾರಿ ಹೆಸರಿನಿಂದ ಕರೆಯಲ್ಪಟ್ಟವು. ಈ ಹೆಸರು ಅರ್ಚಕರಿಗೆ ಪೂಜಾರಿ ಎಂಬ ಹೊಸ ವರ್ಗ ಸೃಷ್ಟಿಯಾಗಲು ಸಹಾಯ ಮಾಡಿತು. ತಮ್ಮ ಕುಟುಂಬಗಳು ವಿಸ್ತಾರವಾದಂತೆ ಮೊಗವೀರ ಸಮುದಾಯದಿಂದ ವಿವಿಧ ಕಾರಣಗಳಿಂದ ಪ್ರತ್ಯೇಕವಾಗಿ ಬಿಲ್ಲವ ಸಮುದಾಯದ ಭಾಗವಾಗಿ ಸೇರ್ಪಡೆಯಾದರು. ಈ ಸಂದರ್ಭದಲ್ಲಿ ಮೊಗವೀರ ಸಮುದಾಯದ ಜನ ತಮ್ಮಲ್ಲೆ ಹೊಸ ಅರ್ಚಕರನ್ನು ನೇಮಿಸಿಕೊಂಡರು.
ಮಂಗಲ ಪದ ಬೌದ್ಧರು ಸಾಮಾನ್ಯವಾಗಿ ಉಪಯೋಗಿಸುತ್ತಿದ್ದ ಪಾಲಿಭಾಷೆಯ ಪದವಾಗಿದ್ದು ಮಂಗಲಪದದ ಉತ್ಪತ್ತಿ ಬೌದ್ಧ ಪಾಲಿ ಭಾಷೆಯ ಪ್ರಭಾವದಿಂದ ಬಂದಿದೆ. 2ನೇ ಶತಮಾನದಿಂದ 8ನೇ ಶತಮಾನದವರೆಗೆ ಬೌದ್ಧ ಧರ್ಮ ಭಾರತದಲ್ಲಿ ತನ್ನ ಪ್ರಭಾವ ಹೊಂದಿತ್ತು ಎಂಬುದು ಗಮನಾರ್ಹ.

ಕುಲಮಹಾಸ್ತ್ರೀ ಅಮ್ಮ (ಮಹಾಸತಿಯಮ್ಮ):
ಕ್ರೈಸ್ತ ವರ್ಷ ಆರಂಭಕ್ಕೆ ಮೊದಲು ಬೌದ್ಧ ಧರ್ಮದ ಉದಯವಾಗಿ ದೇಶದೆಲ್ಲೆಡೆ ಹಬ್ಬಿ ತುಳುನಾಡಿಗೂ ವ್ಯಾಪಿಸಿತ್ತು. ಈ ಕಾಲದ ಬದಲಾದ ಆಚರಣೆಯಂತೆ ತಾರಾ ಭಗವತಿ ಎಂಬ ದೇವಿಯನ್ನು ಆರಾಧಿಸುತ್ತಿದ್ದರು. ಸ್ತ್ರೀ ಶಕ್ತಿಗಳ ಆರಾಧನೆಗೆ ಪ್ರಮುಖ ಆಸಕ್ತಿ ತೋರಿಸುತ್ತಿದ್ದ ಜನ ಸಾಹಸಿ ಮತ್ತು ಸಮುದಾಯ ರಕ್ಷಕ ಸ್ತ್ರೀಯರನ್ನು ದೇವರೆಂದು ಪೂಜಿಸಲು ಆರಂಭಿಸಿದರು. ಹೀಗೆಯೇ ಮೊಗವೀರರ ಪ್ರಮುಖ ಪವಾಡ ಸ್ತ್ರೀಯಾದ ಮಹಾಸ್ತ್ರೀಯಮ್ಮರನ್ನು ಮೊಗವೀರರು ಗುಡಿ ನಿರ್ಮಿಸಿ ಪೂಜಿಸಲಾರಂಭಿಸಿದರು. ಈ ದೇವಸ್ಥಾನ ಬಾರಕೂರಿನ ಬೆಣ್ಣೆಕುದ್ರು ಎಂಬಲ್ಲಿ ಇದೆ. ಈ ದೇವಸ್ಥಾನ ಜೀರ್ಣೋದ್ಧಾರವಾಗಿದ್ದು ಮೊಗವೀರರ ಪ್ರಮುಖ ದೇವಾಲಯವಾಗಿ ರೂಪುಗೊಂಡಿದೆ. ಬಚನಾನ್ ಹೇಳುವಂತೆ ಮಹಾಸ್ತ್ರೀಯಮ್ಮ ಒಬ್ಬ ದೇವತೆಯಾಗಿದ್ದು ಕೆಲವು ಪಂಗಡಗಳು ಈ ದೇವತೆಯನ್ನು ಮಾರಿಯಮ್ಮ ಎಂಬ ಹೆಸರಿನಿಂದ ಪೂಜಿಸುತ್ತಾರೆ. ಅದೇ ರೀತಿ ಇನ್ನೂ ಕೆಲವು ಪಂಗಡಗಳು ಈ ಶಕ್ತಿಯನ್ನು ಮೋಹಿನಿ ಎಂಬ ಹೆಸರಿನಿಂದ ಪೂಜಿಸುತ್ತಾರೆ.

ಮಹಿಷ ಮರ್ದಿನಿ ಮತ್ತು ಮಹಾಲಕ್ಷ್ಮಿ:
ಶಂಕರಾಚಾರ್ಯರು ಹಿಂದೂ ಧರ್ಮದ ಸುಧಾರಣೆ ಮಾಡುವ ಸಂದರ್ಭದಲ್ಲಿ ತುಳುನಾಡಿನಲ್ಲಿ ಆಚರಣೆಯಲ್ಲಿದ್ದ ತಾರಾ ಭಗವತಿ ದೇವಸ್ಥಾನಗಳನ್ನು ಆಧಿಶಕ್ತಿ ದೇವಸ್ಥಾನಗಳನ್ನಾಗಿ ಪರಿವರ್ತಿಸಿದರು. ಶಕ್ತಿ ಆರಾಧನೆಯ ಕರಾವಳಿಯ ದೇವಸ್ಥಾನಗಳ ಪೂಜಾ ಪದ್ಧತಿಗಳ ಮೇಲೆ ಇದು ಪ್ರಭಾವ ಬೀರಿತ್ತು. ಮಹಿಷ ಮರ್ಧಿನಿ ದೇವಸ್ಥಾನ ಕುಂದಾಪುರ ಮತ್ತು ಮಹಾಲಕ್ಷ್ಮೀ ದೇವಸ್ಥಾನ ಉಚ್ಚಿಲ ಆ ಕಾಲದಲ್ಲಿ ನಿರ್ಮಾಣವಾದ ಶಕ್ತಿ ದೇವತೆಗಳ ಪ್ರಮುಖ ದೇವಾಲಯಗಳು.

  • ಕದ್ರಿ ದೇವಾಲಯ:
    ಕದ್ರಿ ದೇವಾಲಯ ಬೌದ್ಧ ಪರಂಪರೆಯಿಂದ ಶೈವ ನಾಥ ಪರಂಪರೆಗೆ ಬದಲಾದ ಸಮಯದಲ್ಲಿ ಮಚ್ಚೇಂದ್ರನಾಥ ಎಂಬ ಮೂಲತಃ ಬಂಗಾಳಿ ಮೀನುಗಾರ ಸಮುದಾಯದವನ್ನು ಸ್ಥಾಪನೆ ಮಾಡಿದ್ದ. ಕದ್ರಿ ದೇವಾಲಯಕ್ಕೂ ಮೊಗವೀರರಿಗೂ ಅವಿನಾಭಾವ ಸಂಬಂಧವಿದ್ದು ಹಿಂದಿನ ಕಾಲದಿಂದಲೂ ಮೊಗವೀರ ಸಮುದಾಯದ ಪ್ರಮುಖರಿಗೆ ಉತ್ಸವದ ಧ್ವಜಾರೋಹಣಕ್ಕೆ ಆಹ್ವಾನವಿರುತ್ತದೆ. ಅದೇ ರೀತಿ ಹಿಂದಿನ ಕಾಲದಿಂದಲೂ ಪ್ರತಿವರ್ಷ ಮೀನುಗಾರಿಕೆ ಆರಂಭಿಸುವ ದಿನ ಸಮುದ್ರಪೂಜೆಗೆ ನಾಥ ಪಂಥೀಯ ಮಠದ ಮಠಾಧೀಪತಿಯವರನ್ನು ಆಹ್ವಾನಿಸಲಾಗುತ್ತದೆ.

***************************

ಮೂಲ ಲೇಖನ : ರವೀಂದ್ರ ಶೆಟ್ಟಿ ಮುಂಡ್ಕೂರು ಮತ್ತು ಹೊಸಬೆಟ್ಟು ವಿಶ್ವನಾಥ ಶೆಟ್ಟಿ (ಇಂಗ್ಲಿಷ್) source: www. tuluresearch.com

ಕನ್ನಡ ಅನುವಾದ: ಪ್ರಶಾಂತ ಭಂಡಾರಿ ಕಾರ್ಕಳ

References
Buchanan, Francis (1807) A Journey from Madras through the Countries of Mysore, Canara and Malabar . T. Cadell and W. Davies, London.
Gururaja Bhat.P. Reprinted in ‘Tulu Sahitya Charitre’, Kannada University, Vidyaranya, Hampe.2007.
Gururaja Budhya and SolomonBenjamin(2000 )The politics of sustainable cities: The case of Bengare, Mangalore,in coastal India. Environment and Urbanization, vol.12, No2.
Narayana A Bangera, Mitrapatna, 2007 ‘Mogaveera’ Mumbai ,2007, 
Ramachandra Baikampadi. (2006).’Tulunadina Adi Brahmanaru moolata Mogaveerare?’ ‘Mogaveera’,(monthly) Mumbai, November 2006, Mumbai.pp.23-25
Shriyan,T.C. ( 2005) The Mogaveeras. ‘Mogaveera’, Mumbai, March 2005. pp 19-23
Sturrock,J:(1894) South Canara District Manual, vol. I. Madras .
Thurston, Edgar and K. Rangachari (2001) Castes and Tribes of Southern India. Asian Educational Services. p.3366. Original Edition published in 1909.
Venkataraja Punimchattaya.(1993)“Mogaveerara Sanskriti”. Karnataka Sahitya Academy, Bangalore, 157p
Uchila, S.K (2004) ‘Mogaveera Kulaguru’. Mogaveera. Mumbai, November, 2004. pp.17-43.
Uchila, S.K (2005) ‘Mogaveera Institutions’. Mogaveera. Mumbai, December, 2004.pp.37.

3 thoughts on “ತುಳುನಾಡ ವೀರರಿರವರು; ಮೊಗವೀರರು- ತುಳುನಾಡ ಇತಿಹಾಸ

  1. ನಿಮ್ಮ ಲೇಖನ ಚೆನ್ನಾಗಿದೆ.
    ಆದರೆ ಮೊಗವೀರರನ್ನು ಖಾರ್ವಿ ಅಂತ ಕರೆಯಲ್ಲ….
    ಮೊಗವೀರರು ಕರ್ನಾಟಕದ ಮೂಲನಿವಾಸಿಗಳು..
    ಕೊಂಕಣ ಖಾರ್ವಿಗಳ ಮೂಲ ಗೋವಾ…

Leave a Reply

Your email address will not be published. Required fields are marked *