November 23, 2024
WhatsApp Image 2021-11-12 at 23.39.33

ತುಲು ಭಾಷೆಯಲ್ಲಿ ಸಮಾನ ಸಂಖ್ಯೆಯನ್ನು ಸರಿ ಸಂಖ್ಯೆಎನ್ನುವರು.ಉದಾಹರಣೆಗೆ 2, 4 ,6….ಹೀಗೆ. ಅದೇ ರೀತಿ ಬೆಸ ಸಂಖ್ಯೆಯನ್ನು ಮುಗುಳಿ ಸಂಖ್ಯೆ ಎನ್ನುವರು.ಉದಾಹರಣೆಗೆ 1, 3, 5….ಹೀಗೆ.

ಅಂದಿನ ಕಾಲ ಅದಾಗಿತ್ತು.ಇನ್ನೂ ತುಲುನಾಡಿಗೆ ಯಾವುದೇ ಧರ್ಮಗಳು ಪ್ರವೇಶಿರಲಿಲ್ಲ.ಕುಡು ಅರಿ ಎಸೆದು ತುಲುನಾಡು ಸೃಷ್ಟಿ ಆಗಿತ್ತು.ನಾಗರಾಧನೆ,ಬೂತರಾಧನೆಗಳು ಪೃಕೃತಿ ಆರಾಧನೆಯಡಿಯಲ್ಲಿ ಆರಾಧಿಸುತ್ತಿದ್ದಕಾಲವದು.
ಈ ಕಾಲದಲ್ಲಿ ನಾಗ ಕೋಲ ಮತ್ತು ಬೂತ ಕೋಲಗಳು ನಡೆಯುತ್ತಿತ್ತು.ಈ ಕೋಲದ ಕಾರ್ಯಕ್ರಮ ಎಲ್ಲಾ ನಿಯಮ ಬದ್ಧವಾಗಿ ನಡೆದಿದೆಯೇ ಇಲ್ಲವೇ ಎಂಬುದನ್ನು ಅರಿಯಲು ಬೂತಗಳು ವೀಳ್ಯದೆಲೆಯನ್ನು ಆಕಾಶ ನೋಡಿ(ಸೂರ್ಯನ ಸಾಕ್ಷಿಯಾಗಿ)ಮೇಲೆ ಹಾರಿಸುವ (ಬಚ್ಚಿರೆ ಪಾರಾವುನು) ಪದ್ಧತಿ ಇತ್ತು.ಮೇಲೆ ಹಾರಿಸಿದ ಎಲೆ ಮೇಲ್ಮುಖವಾಗಿ ನೆಲಕ್ಕೆ ಬಿದ್ದರೆ ಅದು ಶುಭ ಮತ್ತು ಯಶಸ್ಸು ಎಂದು ಪರಿಗಣಿಸುವ ಕ್ರಮ ಇತ್ತು.ಅಂದರೆ ಕೋಲವು ನಿಯಮ ಪಾಲನೆಯಂತೆ ನಡೆದಿದೆ ಎಂದು ತಿಳಿಯುತ್ತಿದ್ದರು.ಒಂದು ವೇಳೆ ಆ ವೀಳ್ಯದೆಲೆಯು ಅಡಿಮುಖವಾಗಿ ಬಿದ್ದರೆ ಕೋಲ ದಲ್ಲಿ ಏನೋ ತಪ್ಪು ಆಗಿದೆ ಎಂದು ಅರಿತು ಅಲ್ಲೇ ಬೂತವೇಷ ಹಾಕಿದವರಲ್ಲಿ ತಪ್ಪನ್ನು ಮನ್ನಿಸಲು ವಿನಂತಿಸುವರು.

ಈ ಎಲೆ ಹಾರಿಸುವ ಕ್ರಮ ಮೂರು ಬಾರಿ ನಡೆಯಬೇಕು. ಮೂರು ಬಾರಿಯೂ ಮೇಲ್ಮೈಗೆ ಬಿದ್ದರೆ ಅದು ಆತ್ತ್ಯುತ್ತಮ .ಮೂರು ಬಾರಿಯೂ ಅಡಿಮುಖವಾಗಿ ಬಿದ್ದರೆ ಅದು ಅತಿಕೆಟ್ಟದ್ದನ್ನು ಸೂಚಿಸುತ್ತದೆ ಎಂಬ ನಂಬಿಕೆ .ಇಲ್ಲೂ ಇದಕ್ಕೆ ಪ್ರಾಯಶ್ಚಿತ್ತ ಬೂತವೇ ಕೊಡುವುದು.ಈಗಲೂ ಈ ಕ್ರಮ ಇದೆ.ತುಲುನಾಡಲ್ಲಿ ಜೈನ ಧರ್ಮ ಬಂದ ನಂತರವೂ ನಾಗ, ಬೂತ ಕೋಲಗಳಲ್ಲಿ “ಬಚ್ಚಿರೆ ಪಾರಾವುನ” ಕ್ರಮವು ಮುಂದುವರಿಯುತ್ತದೆ.ಇಲ್ಲಿ ದೇವರಾಧನೆ ಆರಂಭವಾದ ಬಳಿಕವೂ ಕೋಲಗಳಲ್ಲಿ ವೀಳ್ಯದೆಲೆ ಹಾರಿಸುವ ಕ್ರಮವು ಬೂತಾಲಯಗಳಲ್ಲಿ ನಿರಂತರವಾಗಿ ಮುಂದುವರಿದಿದೆ. ಈಗಲೂ ಇದನ್ನು ಕೋಲಗಳಲ್ಲಿ ಕಾಣಬಹುದಾಗಿದೆ.
ದೇವರಾಧನೆ ಸ್ಥಾಪನೆ ಆದ ಬಳಿಕ ತುಲುನಾಡಿನಲ್ಲಿ“ಸರಿ – ಮುಗುಲಿ” ನೋಡಿ ಕಾರ್ಯಕ್ರಮವನ್ನು ಆರಂಭಿಸುವ ಮೊದಲೇ ದಿನವನ್ನು ನಿಗದಿಪಡಿಸುವುದು.ಇದು ದೈವರಾಧನೆಯಲ್ಲಿ ಆದಿ ಆರಂಭದಲ್ಲಿ ಇರಲಿಲ್ಲ.ಅಕ್ಕಿ ಕಾಳು ಅಕ್ಷತೆಗಳಲ್ಲಿ ಸರಿ-ಮುಗುಲಿ ನೋಡಿ ಯಶಸ್ಸು ಕೆಡುಕುಗಳ
ನ್ನು ಹೇಳುವುದು.ದೇವಾಲಯ ದೈವರಾಧನೆಗಳಲ್ಲಿ ಹಿಂಗಾರ ಹೂವಿನ ಬಳಕೆಯು ಬರುತ್ತದೆ.ಹಿಂಗಾರದ ಬಿಡಿಗಳಲ್ಲೂ ಸರಿ-ಮುಗುಲಿ ನೋಡಿ ಬೂತಗಳು ಯಶಸ್ಸುಕೆಡುಕುಗಳನ್ನು ಹೇಳುವ ಪದ್ಧತಿ ಬರುತ್ತದೆ.


.ಈ “ಸರಿ-ಮುಗುಲಿ” ಲೆಕ್ಕಾಚಾರದಲ್ಲಿ ಮುಗುಲಿ ಬಂದರೆ ಶುಭ ಮತ್ತು ಸರಿ ಬಂದರೆ ಅಶುಭ ಎಂಬ ನಂಬಿಕೆ.ಅದೃಷ್ಟ- ದುರಾದೃಷ್ಟಗಳ ತುಲನೆ ಆಗುತ್ತದೆ.ಇಲ್ಲಿ “ಮುಗುಲಿ”ಏಕೆ ಶುಭ ಆಗಿರುತ್ತದೆ?ಏಕೆಂದರೆ ಮುಗುಲಿಯಲ್ಲಿ ಎರಡು ಕೈಗಳು ಸೇರಿರುತ್ತದೆ.ಎರಡು ಕೈಗಳು ಸೇರಿದರೆ ಮಾತ್ರ
“ಮುಗುಲಿ” ಆಗುತ್ತದೆ.ಮುಗುಲಿ ಎಂದರೆ ಕೈ ಮುಗಿಯುವುದು.ಕೈ “ಮುಗ್ಗಿಲೆ” ಎಂಬ ತುಲು ಭಾಷೆಯ ಪದದಿಂದಲೇ “ಮುಗುಲಿ”ಎಂಬ ಪದ ಹುಟ್ಟಿದೆ.ಎರಡು ಕೈಗಳು ಸತಿ ಪತ್ನಿಯರಂತೆ.ಬಲಗೈ ಪತಿ ಆದರೆ ಎಡಗೈ ಸತಿ ಆಗಿರುತ್ತದೆ. ಸತಿಪತಿಯರು ಅನ್ಯೋನ್ಯತೆಯಿಂದ ಒಂದಾಗಿ ಇದ್ದರೇನೆ
ಬಾಳು ಬದುಕು ಬಂಗಾರವಾಗುವುದು.ಒಂದು ಕೈಯಿಂದ ಕೈ ಮುಗಿಯಲು ಆಗದು.ಅಲ್ಲದೆ ಚಪ್ಪಾಳೆ ತಟ್ಟಲೂ ಆಗದು.
ಕರಜೋಡಿಸುವ ಚಿತ್ರಣವೇ “ಮುಗುಳಿ”ಎಂಬುದು ಸತ್ಯ.ಇದು ದೇವರನ್ನು ಸ್ಮರಿಸಿ ಪ್ರಾರ್ಥಿಸುವ ಭಂಗಿಯೂ ಆಗಿದೆ.ಎಲ್ಲಾ ದೇವಾಲಯಗಳಲ್ಲಿ ಕಂಡು ಬರುವ ಶಿಖರದ ಮುಗುಳಿಯ ವಿನ್ಯಾಸವೂ ಕರ ಜೋಡಿಸಿರುವುದು ಆಗಿದೆ. ಈ ಕಾರಣದಿಂದಲೇ ತುಲುನಾಡಲ್ಲಿ ಬೆಸ ಸಂಖ್ಯೆ ಅಂದರೆ
“ಮುಗುಲಿ” ಸಂಖ್ಯೆ ಶುಭಕರ ಶ್ರೇಯಸ್ಕರ.ಸತಿಪತಿಯರಂತೆ ಇರುವ ಎರಡು ಕೈಗಳು ಒಂದಕ್ಕೊಂದು ಸ್ಪರ್ಶಸಿ ದೇವರನ್ನು ಪ್ರಾರ್ಥನೆ ಮಾಡುವುದು ಎಂದರೆ ಸತಿಪತಿಯರು ಸೇರಿ ಪ್ರಾರ್ಥಿಸಿದಂತೆ.
ಹೆಚ್ಚಿನ ಭಕ್ತರು ತುಲುನಾಡಲ್ಲಿ ದೈವಗಳು ಕೊಡುವ ಪಿಂಗಾರ ಹೂವಿನ ಎಸಳುಗಳನ್ನು ಲೆಕ್ಕ ಮಾಡುವುದು ಇದೆ.ಇಲ್ಲಿ ಮುಗುಲಿ ಬಂದರೆ ಎಡ್ಡೆ ಬೈದ್ಂಡ್(ಒಳ್ಳೆಯದು ಬಂದಿದೆ)ಎನ್ನುವರು.ಸರಿ ಬಂದರೆ ಕಟ್ಟ್ ದ್ ಬೈದ್ಂಡ್ (ಕೆಟ್ಟದಾಗಿ ಬಂದಿದೆ)ಎನ್ನುವರು.ಕೆಟ್ಟದಾಗಿ ಬಂದರೆ ಭಕ್ತರು
ಬೇಸರ ಪಡುವುರು ಇದೆ.ಈ ರೀತಿಯಾಗಿ ಸಮ ಸಂಖ್ಯೆ ಬಂದರೆ ಭಕ್ತರು ಭಯದಿಂದ ಇರುವುದು ಬೇಡ.ದೈವ ಕೊಟ್ಟ ಹಿಃಗಾರದ ಎಸಳುಗಳಿಂದ ಒಂದನ್ನು ತೆಗೆದು ಭಕ್ತರ ಕಾಲಿನ ಅಡಿಗೆ ಸಿಗದ ಹಾಗೆ ಅಲ್ಲಿಯೇ ಕೆಳಗೆ ಹಾಕಿದರೆ ಆಯಿತು.ಆಗ ಕೈಯಲ್ಲಿ ಮುಗುಳಿ ಪಿಂಗಾರದ ಬಿಡಿಗಳು ಉಳಿಯುತ್ತದೆ.


ದೇವಾಲಯದಲ್ಲೂ ಈ ರೀತಿ ಅನುಸರಿಸಿದರೆ ಆಯಿತು. ಅದು ಹಿಂಗಾರ ಇರಬಹುದು ಅಥವಾ ಅಕ್ಷತೆ ಆಗಿರಬಹುದು.
ಹಿಂದೆಲ್ಲಾ ತುಲುನಾಡಲ್ಲಿ ಹಳ್ಳಿಯ ಮಕ್ಕಳು“ಸರಿ-ಮುಗುಲಿ” ಆಟ ಆಡುವುದು ಇತ್ತು.ಈ ಆಟಕ್ಕೆ ಅಂದು ಬಳಸುತ್ತಿದ್ದ ಆಟಿಕೆಗಳು ಎಂದರೆ ಹಲಸಿನ ಬೀಜ,ಹುಣಸೆ ಬೀಜ, ಹೆಬ್ಬಲಸು ಬೀಜ,ಗೇರು ಬೀಜಗಳು,ಕುಂಟಲ ಹಣ್ಣುತಂಪೇ ಹಣ್ಣುಗಳು ಇತ್ಯಾದಿ ಆಗಿದ್ದವು.
ಮುಗುಲಿ-ಮುಗುಳಿ ಎಂದರೆ ದೇವರನ್ನು ಕೈ ಮುಗಿದು ಪ್ರಾರ್ಥಿಸುವ ಮತ್ತು ಹಿರಿಯರನ್ನು ಕೈಮುಗಿದು  ಗೌರವಿಸುವ ಭಂಗಿ ಆಗಿದೆ.ಈ ಕಾರಣಕ್ಕಾಗಿ ಮುಗುಲಿ ಸಂಖ್ಯೆ ತುಲು ನಾಡಲ್ಲಿ ಶುಭಕರ ಮತ್ತು ಶ್ರೇಯಸ್ಕರ.

ಐ.ಕೆ.ಗೋವಿಂದ ಭಂಡಾರಿ. (ನಿವೃತ್ತ ಬ್ಯಾಂಕ್ ಮ್ಯಾನೇಜರ್) ಕಾರ್ಕಳ.

Leave a Reply

Your email address will not be published. Required fields are marked *