January 18, 2025
11

ತುಳುವರ ನಾಗಾರಾಧನೆಯಲ್ಲಿ‌ ಅಡ್ಡನಾಮ: 

      ಪ್ರಕೃತಿ ನಿರ್ಮಿತ ತುಳುನಾಡನ್ನು ಕುಡು-ಅರಿ‌ ಎಸೆದು ಸೃಷ್ಟಿಸಲಾಯಿತು. ಪ್ರಕೃತಿ‌ ಆರಾಧಕರಾದ ಶೂದ್ರರು‌ ಇಲ್ಲಿ ನಾಗಕುಲದ‌ ಆರಾಧನೆಗಾಗಿ, ನಾಗವಂಶಾಭಿವೃದ್ದಿಗಾಗಿ ಮತ್ತು ನಾಗದಫನಕ್ಕಾಗಿ ನಾಗಬನವನ್ನು ನಿರ್ಮಿಸಿದರು. ಹೊಲಗದ್ದೆಗಳನ್ನು ರಚಿಸುವಾಗ ನಾಗಬನಕ್ಕಾಗಿ‌ ಎಕ್ರೆಗಟ್ಟಲೆ ಭೂಮಿಯನ್ನು ಮೀಸಲಾಗಿಟ್ಟರು. ನಾಗಬನದ ಭೂಮಿಯ ನಕ್ಷೆಯನ್ನು ಕಲ್ಲುಮಣ್ಣಿನ ಗೋಡೆಯಿಂದ ತೋರಿಸಿದರು. ನಾಗರಾಧನೆಯನ್ನು ಪ್ರಕೃತಿ‌ ಆರಾಧನೆಯೊಂದಿಗೆ ಮಾಡುತ್ತಿದ್ದರು. ನಾಗದಫನ ಮಾಡಿ ನಾಗಪ್ರೇತಗಳಿಗೆ ಕಲ್ಲುಹಾಕಿ ನಂಬಿದರು. ಹಾಸಿದ ಕಲ್ಲುಗಳಿಗೆ ತಾಂಬೂಲ‌ ಇಟ್ಟು ನಾಗತಂಬಿಲ‌ ಎಂದು‌ ಆಚರಿಸಿದರು. ನಾಗಕಲ್ಲುಗಳಿಗೆಹಾಲು – ನೀರು ‌ಎರೆದು ನಾಗಪ್ರೇತಗಳನ್ನು ಶಾಂತಿಗೊಳಿಸಿದರು‌. ಮಾನವನ ಶರೀರಕ್ಕೆ ನಾಗಪ್ರೇತಗಳನ್ನು ‌ಆಹ್ವಾನಿಸಿ ‘ನಾಗೆದರ್ಪುನು’ ಅಥವಾ ‘ನಾಗವಸಾಯಿ’ ಎನ್ನುತ್ತಿದ್ದರು. ಈಗ‌ ಅದನ್ನೆ ನಾಗದರ್ಶನ‌ ಎನ್ನುತ್ತಾರೆ. ನಂತರದ ದಿನಗಳಲ್ಲಿ ವೇಷಧರಿಸಿ ‘ಮಾನಿಚ್ಚಿಲ್’ (ಮಾನವ ಶರೀರದಲ್ಲಿ ನಾಗಪ್ರೇತ‌ ಆಹ್ವಾನವಾಗುವುದು) ಭರಿಸಿ ‘ನಾಗಕೋಲ’ ನಾಗವೇಷ‌ ಎಂಬ‌ ಆರಾಧನಾ ಪದ್ದತಿಯೂ‌ ಆಚರಣೆಯಲ್ಲಿತ್ತು. ಈಗ ‘ನಾಗಮಂಡಲ’ ಎಂಬ ಹೆಸರಿನಲ್ಲಿ‌ ಅದ್ಧೂರಿಯಾಗಿ ನಡೆಯುತ್ತಿದೆ. ಈ ರೀತಿಯ‌ ಆರಾಧನೆಗಳನ್ನು‌ ಆರಂಭಿಸಿದ ತುಳುವರು ನಾಗಬನದ ಮಣ್ಣನ್ನೆ ಪ್ರಸಾದ‌ ಎಂದು ಹಣೆಗೆ‌ ಅಡ್ಡವಾಗಿ ಧರಿಸುತ್ತಿದ್ದರು. ನಾಗರಕಲ್ಲಿಗೆ ಧೂಪ ತೋರಿಸಿ ನಂತರ‌ ಅದರ ಭಸ್ಮವನ್ನು ಹಣೆಗೆ ‌ಅಡ್ಡವಾಗಿ ಧರಿಸುತ್ತಿದ್ದರು. ಧೂಪ ತೋರಿಸುವ‌ ಆರಾಧನೆಗೆ ‘ಪುಗೆಪತ್ತುನು’ ಎನ್ನಲಾಗುತ್ತಿತ್ತು. ಈಗಿನ‌ ಆರತಿ ಮತ್ತು ‌ಅರಿಶಿನ ಪ್ರಸಾದ ಹಿಂದೆ ‌ಆಚರಣೆಯಲ್ಲಿರಲಿಲ್ಲ, ಕೇವಲ ಧೂಪದ ವಿಭೂತಿಯೇ ಪ್ರಸಾದವಾಗಿತ್ತು.

ಭೂತರಾಧನೆಯಲ್ಲಿ‌ ಅಡ್ಡನಾಮ:

ತುಳುನಾಡಿನ ಭೂತರಾಧನೆ‌ ಆರಂಭವಾದ ಬಳಿಕ ನಾಗಕಲ್ಲಿಗೆ ಪೂಜೆ ಸಲ್ಲಿಸುವಂತೆ ಭೂತಕಲ್ಲುಗಳಿಗೂ ತಂಬಿಲ, ಪನಿಯಾರ, ಮಾನಿಚ್ಚಿಲ್, ಕೋಲಗಳ ರೀತಿಯಲ್ಲಿ‌ ಆರಾಧನೆ ನಡೆಯುತ್ತಾ ಬಂದಿತು. ಇಲ್ಲಿ ಭೂತರಾಧನೆ ಮತ್ತು ನಾಗರಾಧನೆಗೆ‌ ಒಂದಕ್ಕೊಂದು ಸಾಮ್ಯತೆಯಿತ್ತು. ಇಂದು ಭೂತರಾಧನೆಯಲ್ಲಿ ಪಾಲಿಸುವ ಚರ್ವ (ಅನ್ನ) ಮತ್ತು ಕುರಿನೀರ್ (ಅರಿಶಿನ ಮತ್ತು ಸುಣ್ಣ ಬೆರೆತ ನೀರು) ಇಟ್ಟು ಪೂಜಿಲಾಗುತ್ತಿತ್ತು. ಬತ್ತಿ ‌ಆರತಿ ಕೂಡಾ‌ ಇರಲಿಲ್ಲ. ಕೇವಲ ಧೂಪದಾರತಿ ಮತ್ತು ಧೂಪದ ಭಸ್ಮಪ್ರಸಾದವಾಗಿತ್ತು. ಇಲ್ಲೂ ಕೂಡಾ‌ ಆದಿತುಳುವರು‌ ಅಡ್ಡನಾಮ ಧರಿಸುತ್ತಿದ್ದರು.

ತುಳುನಾಡಿನ ಜೈನರ‌ ಆರಾಧನೆಯಲ್ಲಿ‌ ಅಡ್ಡನಾಮ: 

ತುಳುನಾಡಿನಲ್ಲಿ ಜೈನ ಧರ್ಮ‌ ಉಗಮವಾದ ನಂತರ ಮುಡಾಂಬಿ‌ ಊರುಗಳಲ್ಲಿ ಪ್ರಥಮವಾಗಿ ಜೈನಬಸದಿಗಳು ನಿರ್ಮಾಣವಾಯಿತು. ಜೈನರು ಬಸದಿ ದೇವರುಗಳ ಜೊತೆಗೆ ತಮ್ಮಮೂಲ‌ ಆಚರಣೆಗಳಾದ ಪ್ರಕೃತಿ‌ ಆರಾಧನೆ, ನಾಗ-ಭೂತರಾಧನೆಯನ್ನು ಮುಂದುವರೆಸಿದರು. ಜೈನ ಧರ್ಮದ ಸಂಸ್ಥಾಪಕ ವೃಷಭದೇವ(ಆಧಿನಾಥ)ನು ಶಿವನಂತೆ ಮಹಾಯೋಗಿ‌ಯಾಗಿದ್ದನು. ಶಿವನಂತೆ‌ ಆಧಿನಾಥನು ಕೈಲಾಸದಲ್ಲಿ ತಪಸ್ಸು ಮಾಡಿದವನು. ಇವನಿಗೂ ಕೈಲಾಸದಲ್ಲೇ ಜ್ಞಾನೋದಯವಾಗಿತ್ತು. ನಂದಿ‌ ಇವರಿಬ್ಬರ ಚಿಹ್ನೆಯಾಗಿತ್ತು. ಇವರಿಬ್ಬರ ತಪಸ್ಸಿನ ಭಂಗಿ, ಭೋದಿಸಿದ ತತ್ವಗಳು‌ ಒಂದೇ ರೀತಿಯಲ್ಲಿತ್ತು ‌ಎಂಬುದು ಗಮನಾರ್ಹ. ಜೈನರೂ ‌ಅಡ್ಡನಾಮದಾರಿಗಳಾಗಿದ್ದರು.

ಶಿವಶರಣರ‌ ಅಡ್ಡನಾಮ:

ತುಳುನಾಡಿಗೆ ‌ಆಗಮಿಸಿದ ಶಿವಶರಣರು (ಶೈವರು) ಶಿವಾಲಯವನ್ನು ಕಟ್ಟಿ ‘ಆಲಡೆ’ ಯನ್ನು‌ ಆರಂಭಿಸಿದರು. ತುಳುನಾಡಿನಲ್ಲಿ ದೇವರ‌ ಆರಾಧನೆಯನ್ನು ಪ್ರಾರಂಭಿಸಿದರು. ಈ ಶಿವಶರಣರು ಕೂಡಾ‌ ಅಡ್ಡನಾಮ ಧರಿಸುತ್ತಿದ್ದರು. ತುಳುವರು ನಾಗ-ಭೂತರಾಧನೆಯೊಂದಿಗೆ ಶಿವರಾಧನೆಯನ್ನೂ ಮಾಡಲು‌ ಆರಂಭಿಸಿದರು. ಜೈನ ತುಳುವರು ಕೂಡಾ ಜೈನಧರ್ಮದೊಂದಿಗೆ ನಾಗ , ಭೂತ ಮತ್ತು ಶಿವರಾಧನೆಯನ್ನುಮಾಡುತ್ತಾರೆ. ಜೈನ ರಾಜರು‌ ಎಲ್ಲ ಜನಾಂಗದ‌ ಆಚರಣೆಗಳನ್ನು ಸಮಾನಾಗಿ ಗೌರವಿಸಿ ತಾವೂ ‌ಆರಾಧಿಸಿಕೊಂಡು ಬಂದರು. ಹೀಗಾಗಿ‌ ಇಲ್ಲಿ ಯಾವೊಬ್ಬನ ಧಾರ್ಮಿಕತೆಗೂ ತೊಡಕಾಗಲಿಲ್ಲ.

ವೈಷ್ಣವರ‌ ಆಗಮನ ಮತ್ತು ‌ಅಡ್ಡನಾಮದ ಪತನ:

ತುಳುನಾಡಿಗೆ‌ ಆಗಮಿಸಿದ ವಿಷ್ಣು ‌ಆರಾಧಕರಾದ ವೈಷ್ಣವರು ಬುದ್ದಿವಂತರು ಮತ್ತು ಮಡಿವಂತರು. ಅವರ ಧರ್ಮ ಪ್ರಚಾರ ತುಳುನಾಡಿನಲ್ಲಿ ವ್ಯಾಪಕವಾಯಿತು. ಜೈನಧರ್ಮದ ಸಂಸ್ಥಾಪಕ ವೃಷಭದೇವನು ವಿಷ್ಣುವಿನ‌ ಅವತಾರವೆಂದು ವರ್ಣಿಸಿ ಪ್ರಚಾರ ಮಾಡಿ, ಶಿವಾಲಯಗಳು ಜೈನರ‌ ಅಧೀನಕ್ಕೆ ಬರುವಂತೆ ಮಾಡಿದರು. ಕ್ರಮೇಣ ಜೈನರು ವೈಷ್ಣವರ‌ ಆಚರಣೆಗಳನ್ನು ರೂಢಿಸಿಕೊಂಡು‌ ಉದ್ದ ನಾಮಧಾರಿಗಳಾಗುತ್ತಾರೆ. ಹೀಗಾದಾಗ ಶಿವಶರಣರು ವೈಷ್ಣವರಿಂದ ತೊಂದರೆಗೊಳಪಟ್ಟು ತುಳುನಾಡನ್ನು ಬಿಟ್ಟು ಹೋದರು. ಆಲಡೆಗಳ ಪೂಜಾದಿ ಕಾರ್ಯಕ್ರಮಗಳು ವೈಷ್ಣವರ ವಶಕ್ಕೆ ಹೋಯಿತು. ತುಳುವರು ವೈಷ್ಣವರ ಮಡಿವಂತಿಕೆಗೆ ಬಲಿಯಾಗಿ ಶೂದ್ರರೆನಿಸಿಕೊಂಡರು. ಹೀಗಾಗಿ‌ ಆಲಡೆಗಳಿಗೆ ತುಳುವರು ಹೋಗುವುದನ್ನು ನಿಲ್ಲಿಸಿದರು. ತಮ್ಮ ನಾಗ ಮತ್ತು ಭೂತರಾಧನೆಯನ್ನು ಮಾಡುತ್ತಾ ‌ಅಡ್ಡನಾಮದಾರಿಗಳಾಗಿ‌ ಉಳಿದರು. ಆದರೆ ಕ್ರಮೇಣ‌ ವೈಷ್ಣವರು ನಾಗರಾಧನೆ, ಭೂತರಾಧನೆ ಮುಂತಾದ‌ ಎಲ್ಲಾ ತುಳುವರ‌ ಆಚರಣೆಯನ್ನು‌ ಆಲಡೆಯಲ್ಲಿ ಸ್ಥಾಪಿಸಿದರು. ಹೀಗಾಗಿ ಶೂದ್ರರೆನಿಸಿಕೊಂಡ ತುಳುವರಿಗೆ‌ ಆಲಡೆಗೆ ಹೋಗುವುದು‌ ಅನಿವಾರ್ಯವಾಯಿತು. ಕ್ರಮೇಣ‌ ಆಚರಣೆಗಳು ಬೆರೆತು ಮೂಲನಾಗಬನ, ನಾಗಬನ ಮತ್ತು ಭೂತಾಲಯಗಳಿಗೂ ವೈಷ್ಣವರೇ ‌ಅರ್ಚಕರಾಗುತ್ತಾರೆ. ವಿವಿಧ ನಂಬಿಕೆಯಿಂದ ತುಳುವರನ್ನು ಭಯಪಡಿಸಿ ತಮ್ಮ ವಶದಲ್ಲಿ‌ ಇರಿಸಿಕೊಳ್ಳುತ್ತಾರೆ. ಕ್ರಮೇಣ ತುಳುವ ನಾಗರಾಧನೆ ಮತ್ತು ಭೂತರಾಧನೆ ಪದ್ದತಿ ವೈಷ್ಣವರ‌ ಆರಾಧನಾ ಪದ್ದತಿಯಂತೆ ಬದಲಾಗುತ್ತದೆ. ಇದೇ ರೀತಿ‌ ಅಡ್ಡನಾಮದ ತುಳುವರು ವೈಷ್ಣವರ‌ ಆಚರಣೆಗಳಿಗೆ ಬಲಿಯಾಗಿ‌ ಉದ್ದನಾಮದಾರಿಗಳಾಗುತ್ತಾರೆ.             ತುಳುವ‌ ಅಡ್ಡನಾಮದಾರಿಗಳು ವೈಷ್ಣವರಿಗೆ ತಲೆಬಾಗಿ ವೈಷ್ಣವರ‌ ಆರಾಧನೆಗೆ ಭಯದಿಂದಲೇ ಬೆಂಬಲಿಸಿದರು. ಪ್ರತೀ ಮನೆಯಲ್ಲಿ ತುಳಸಿಕಟ್ಟೆ, ಮುಡಿಪು ಕಟ್ಟುವ ಪದ್ದತಿ‌ ಆರಂಭವಾಗುತ್ತದೆ. ‘ಮುಡಿಪು’ ಎಂದರೆ ‘ತರೆತುರಪುನು’ ( ನಾಣ್ಯದಿಂದ ತಲೆಯನ್ನು ಪ್ರದಕ್ಷಣೆ ಮಾಡಿ ಹುಂಡಿ ಸಂಗ್ರಹಿಸುವುದು) ಎಂದರ್ಥ. ಸಂಗ್ರಹಿಸಿದ ಹುಂಡಿಯನ್ನು ತಿರುಪತಿಗೆ ಸಮರ್ಪಿಸುವ ಕ್ರಮವಿದು. ನಾಗ, ಭೂತರಾಧನೆಯಲ್ಲಿ ವಿವಿಧಹೋಮ, ಪೂಜಾ ಪದ್ದತಿಗಳ ಸೇರ್ಪಡೆಯಾಗುತ್ತದೆ. ಅಷ್ಟಮಂಗಲ, ನಾಗದರ್ಶನ, ನಾಗಮಂಡಲ, ಬ್ರಹ್ಮಕಲಶ‌ ಇತ್ಯಾದಿ ಕಾರ್ಯಕ್ರಮಗಳು ವೃದ್ಧಿಯಾಗುತ್ತಾ ಬಂತು. ಭೂತಗಳ ಹೆಸರು ಬದಲಾಯಿಸುತ್ತಾ ದೇವರ ಹೆಸರಿನಲ್ಲಿ ಆಚರಿಸಲಾಗುತ್ತದೆ. ಆರಾಧನೆ ಕ್ರಮ ಬದಲಾಗುತ್ತಾ ಹಳೆಯ ಭೂತರಾಧನೆಯ ಪದ್ದತಿ ನಾಶವಾಗಿ ತುಳು ಸಂಸ್ಕೃತಿಯ ಶಕ್ತಿ ಕುಂದುತ್ತಾ ಸಾಗಿದೆ. ನಾಗಬನ, ಭೂತಾಲಯಗಳಲ್ಲಿ ತದ್ವಿರುದ್ದ‌ ಎಂಬಂತೆ ಶನಿಪೂಜೆ , ಗಣಹೋಮ, ಸತ್ಯನಾರಾಯಣಪೂಜೆಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆಯೇ ಹೊರತು ಹಳೆಯ‌ ಆಚರಣೆಗಳು ವರ್ಷದ‌ ಒಂದು ದಿನವೂ ನಡೆಯುವುದಿಲ್ಲ. ನಾಗಬ್ರಹ್ಮನ ಕಲ್ಲಲ್ಲಿ ಶಿವಮೂರ್ತಿ ಪ್ರತಿಷ್ಠೆ ನಡೆಯುತ್ತದೆ. ಆದಿಮೂಲದಲ್ಲಿ ಹಾಕಿದ ಕಲ್ಲುಗಳನ್ನು ನಾಶಮಾಡಿ ಬನಗಳಲ್ಲಿ ಕಟ್ಟೆ ಕಟ್ಟುವ ಹುಚ್ಚು ಸಮೂಹಸನ್ನಿಯಾಗಿ ಬೆಳೆಯುತ್ತಿದೆ. ಪ್ರಕೃತಿ ಆರಾಧನೆಗಾಗಿ ಪ್ರಾರಂಭವಾದ ನಾಗಬನ, ಬೂತಾಲಯಗಳು ಕೇವಲ ಕಾಂಕ್ರೀಟ್ ದೇವಾಲಯವಾಗಿ‌ ಪ್ರಕೃತಿ ನಾಶ ಹೆಚ್ಚಾದ ಕಾರಣ, ಮಳೆಯೂ ಕಡಿಮೆಯಾಗಿದ್ದು ಬರಗಾಲ‌ ಎದುರಿಸುವ ಕಾಲ ಬಂದೊದಗಿದೆ. ಹೊಲಗದ್ದೆಗಳು ಬೆಳೆ ಬೆಳೆಯದೆ ಹಡೀಲು ‌ಬಿದ್ದಿದೆ..ಪ್ರಕೃತಿ ‌ಆರಾಧನೆಯ ತುಳು ಸಂಸ್ಕೃತಿ ಬಿಟ್ಟು ‌ಆಡಂಬರದ‌ ಆಚರಣೆಗಳಿಗೆ ಮಾರು ಹೋಗಿರುವುದು ‌ಇದಕ್ಕೆ ಕಾರಣ. ಒಟ್ಟಾರೆ, ವೈಷ್ಣವ ಪಂಥದ‌ ಆಗಮನ ತುಳುವರ ಸಂಸ್ಕೃತಿಯನ್ನು ನಾಶಮಾಡಿತು. ನಾಗರಾಧನೆ , ಭೂತರಾಧನೆಯಲ್ಲಿ ಮೂಗು ತೂರಿಸಿ ಜ್ಯೋತಿಷ್ಯವನ್ನು‌ ಅವರ‌ ಅನುಕೂಲಕ್ಕೆ ತಕ್ಕಂತೆ ಹೇರಿ ತಮ್ಮ ಹಿಡಿತದಲ್ಲಿರಿಸಿಕೊಂಡರು. ತುಳುನಾಡಿನ ಮೂಲ‌ ಅರ್ಚಕರು ಮೂಲೆಗುಂಪಾದರು. ಸರಳ, ಕೃಷಿಪ್ರಧಾನ ಮತ್ತು ಪ್ರಕೃತಿ‌ ಆರಾಧಕರನ್ನು ಕೇವಲ ಮೂರ್ತಿ ಪೂಜಕರಾಗಲು ಕಾರಣಕರ್ತರಾದರು. ಜೈನರಂತೆ ‌ಆದಿತುಳುವರಲ್ಲೂ ಪ್ರತ್ಯೇಕ ಬಲಿಷ್ಠಪಂಥವಿದ್ದಿದ್ದರೆ‌ ಇಂತಹ ಸ್ಥಿತಿಗೆ ತುಳುವರು ಬರುತ್ತಿರಲಿಲ್ಲ. ಪೂಜಾದಿ ಕ್ರಮಗಳಿಗೆ ವೈಷ್ಣವ‌ ಅರ್ಚಕರನ್ನು ‌ಅವಲಂಬಿಸಬೇಕಾಗಿ ಬರುತ್ತಿರಲಿಲ್ಲ. ಈಗ ಚಿಂತಿಸಿ ಫಲವಿಲ್ಲ.

: ಇರ್ವತ್ತೂರು ಗೋವಿಂದ ಭಂಡಾರಿ

4 thoughts on “ತುಳುವರು‌ ಅಡ್ಡನಾಮದಾರಿಗಳು

  1. Thank you very much for publishing my scripts.My forthcoming article is “Tulunadu sristisida ‘Kudari’Parashuramanadalla”. Sending shortly.

Leave a Reply

Your email address will not be published. Required fields are marked *