ರೇಖಾ ಈ ಜಗತ್ತನ್ನು ಬಿಟ್ಟು ಹೋಗಿ ಇಂದಿಗೆ 21 ದಿನಗಳೇ ಕಳೆದು ಹೋಗಿದೆ.ಜನ ಬಾಯಿಗೆ ಒಂದರಂತೆ ಏನೇನೋ ಅಂತೇ ಕಂತೆಗಳನ್ನು ಹೇಳುತ್ತಿದ್ದರು. ರೇಖಾಳ ಸಂಬಂಧಿಕರು, ರೇಖಾಳ ಗಂಡ ರವಿಯ ಸಂಬಂಧಿಕರು ಮಾತ್ರ ಒಂದೇ ಹೇಳುತ್ತಿದ್ದರು. ರೇಖಾಳಿಗೆ ಸೊಕ್ಕು ಅಹಂಕಾರ, ಬೇಕಾದಷ್ಟು ತಿನ್ನಲು ಇತ್ತು, ಓಡಾಡಲು ಕಾರು ಇತ್ತು , ಇರಲು ಬಂಗಲೆಯಂತಹ ಮನೆ, ನೋಡಲು ಟಿ.ವಿ, ಮುದ್ದಾದ ಎರಡು ಹೆಣ್ಣು ಮಕ್ಕಳು ಇವಳಿಗೆ ಕಮ್ಮಿ ಏನಿತ್ತು?. ರವಿಯಲ್ಲೂ ಬೇಕಾದಷ್ಟು ದುಡ್ಡು ಇತ್ತು. ಅವಳಿಗೆ ಅದೃಷ್ಟ ಇಲ್ಲ ಗಂಡು ಬೀರಿ ತಾನೇ ಆತ್ಮಹತ್ಯೆ ಮಾಡಿಕೊಂಡಳು ಎನ್ನುತ್ತಿದ್ದರು. ರವಿ ತನ್ನ ದುಡ್ಡಿನ ಬಲದಿಂದ ಎಲ್ಲರ ಬಾಯಿ ಮುಚ್ಚಿಸಿದ್ದ. ಆದರೆ ಅವನಿಗೆ ರೇಖಾ ಯಾಕೆ ಆತ್ಮಹತ್ಯೆ ಮಾಡಿಕೊಂಡಳು ಎಂದು ತಿಳಿದಿರಲಿಲ್ಲ. ಅವಳು ಕೆಲಸಕ್ಕೆ ಹೋಗುತ್ತಿದ್ದುದನ್ನು ನಿಲ್ಲಿಸಿದ್ದೆ, ಆದರೆ ಅದಕ್ಕೆ ಕ್ಯಾರೇ ಅನ್ನದೆ ಬೇರೆ ಕೆಲಸದಲ್ಲಿ ತನ್ಮಯಳಾಗುತ್ತಿದ್ದಳು. ಆಗಾಗ ಏನಾದರೂ ಸಣ್ಣ ನೆಪ ತೆಗೆದು ಹೊಡೆಯುತ್ತಿದ್ದೆ. ಅದಕ್ಕೂ ಅವಳು ಬಗ್ಗುತ್ತಿರಲಿಲ್ಲ, ಅವಳ ಕೈಯಲ್ಲಿ ಹಣ ಇಲ್ಲದಂತೆ ನೋಡಿಕೊಳ್ಳುತ್ತಿದ್ದೆ ಆದರೆ ಅವಳು ಮಾತ್ರ ಏನೋ ಕೆಲಸ ಮಾಡುತ್ತಾ ಸದಾ ಖುಷಿಯಾಗಿ ಇರುತ್ತಿದ್ದಳು . ಮೀನು ಕಾಯಿಸಿದರೆ ದೊಡ್ಡ ಮೀನು ಇಟ್ಟಿಲ್ಲ , ಚಟ್ನಿ ದಪ್ಪ ಇಲ್ಲ , ಪಲಾವ್ ರುಚಿ ಇಲ್ಲ . ಹೀಗೆ ಸಣ್ಣ ಪುಟ್ಟ ವಿಷಯಕ್ಕೆ ಜಗಳ ತೆಗೆದರೂ ಅವಳು ಅಷ್ಟೇ ಜೋರಾಗಿ ಹಿಂದೆ ಮಾತನಾಡಿಬಿಡುತ್ತಿದ್ದಳು.
ಆದರೆ ಆತ್ಮಹತ್ಯೆ ಮಾಡಿಕೊಳ್ಳುವಷ್ಟು ಹೇಡಿಯಾಗಿರಲಿಲ್ಲ. ಯಾಕೆ? ಯಾಕೆ? ರವಿ ಯೋಚಿಸುತ್ತಲೇ ಇದ್ದ. ರವಿಯ ಅಪ್ಪ ಬಂದು “ಯಾಕೋ ರವಿ ತುಂಬಾ ಚಿಂತೆ ಮಾಡುತಿದ್ದೀಯಾ ಅವಳಿಗೆ ನಿನ್ನ ಜೊತೆ ಬದುಕುವ ಅದೃಷ್ಟ ಇಲ್ಲ ಬಿಡು” ಎನ್ನುತ್ತಿದ್ದರು. ರವಿಗೆ ಏನೋ ನೆನಪಾಗಿ ತಕ್ಷಣ ಎದ್ದು ಅವಳ ಕಪಾಟು ತೆಗೆದು ಸೀರೆ ಜಾಲಾಡಿದ ಸೀರೆಯ ಬದಿಯಿಂದ ಹಾಳೆಯೊಂದು ಕೆಳಗೆ ಬಿತ್ತು. ಅದನ್ನು ತೆಗೆದುಕೊಂಡು ಕೋಣೆಯ ಚಿಲಕ ಹಾಕಿ ಓದಲು ಕುಳಿತ.
” ಈ ಪತ್ರವನ್ನುಯಾರು ಓದುತ್ತಾರೋ ನನಗೆ ಗೊತ್ತಿಲ್ಲ. ನೀವು ಈ ಪತ್ರವನ್ನು ಓದುವಾಗ ನಾನು ಈ ಲೋಕದಲ್ಲಿ ಖಂಡಿತಾ ಇರಲಾರೆ.ನಾನು ಬಡ ಕುಟುಂಬದಿಂದ ಬಂದ ಹೆಣ್ಣು ಮಗಳಾದರೂ ಸ್ವಾಭಿಮಾನಿ, ನನ್ನತನವನ್ನೂ ಯಾರಿಗೂ ಬಿಟ್ಟು ಕೊಟ್ಟಿಲ್ಲ. ನಾನು ಮದುವೆ ಆಗುವಾಗ ಎಲ್ಲಾ ಹೆಣ್ಣು ಮಕ್ಕಳಂತೆ ತುಂಬಾ ಖುಷಿ ಪಟ್ಟೆ ನನಗೂ ಒಬ್ಬ ಜೊತೆಗಾರ, ರಕ್ಷಕ ಸಿಕ್ಕ ಎಂದು, ನಂತರ ತಿಳಿಯಿತು ಅವನು ಜೊತೆಗಾರ ಅಲ್ಲ ನನ್ನ ಭಾವನೆಗಳ ನನ್ನ ಜೊತೆಗಿರುವ ಕಲೆಯ ಕೊಲೆಗಾರನೆಂದು. ನಾನು ಕಥೆ ಬರೆಯುತ್ತಿದ್ದೆ, ಅಂಕಣ ಬರೆಯುತ್ತಿದ್ದೆ , ನಾಟಕದಲ್ಲಿ ಅಭಿನಯಿಸುತ್ತಿದ್ದೆ , ಭಾಷಣ ಮಾಡುತ್ತಿದ್ದೆ, ಮಕ್ಕಳಿಗೆ ಶಿಬಿರಗಳನ್ನೂ ನಡೆಸುತ್ತಿದ್ದೆ , ಮಹಿಳೆಯರಿಗೆ ಮಹಿಳಾಪರ ಮಾಹಿತಿಗಳನ್ನು ನೀಡುತ್ತಿದ್ದೆ. ಆದರೆ ನನ್ನ ಮದುವೆ ಆದ ಮೇಲೆ ನನ್ನ ಜೊತೆಗಾರನೇ ಅದನ್ನೆಲ್ಲ ಕೊಂದುಬಿಟ್ಟ. ಆದರೆ ಅದನ್ನೇ ನೆಪ ಮಾಡಿಕೊಂಡು ಅಳುತ್ತಾ ಕೂರಲಿಲ್ಲ. ಬದಲಾಗಿ ನನ್ನ ದಿನಚರಿಯನ್ನೇ ಬದಲಾಯಿಸಿದೆ.
ಆದರೆ ನನ್ನ ಬಾಳಸಂಗಾತಿಯಾದವನು ನನ್ನನ್ನೇ ಬೇರೆಯವರ ಜೊತೆ ಹಂಚಿಕೊಳ್ಳಲು ಬಯಸಿದ. ಆದಕ್ಕೆ ನಾನು ಸುತಾರಾಂ ಒಪ್ಪಲಿಲ್ಲ.ತುಂಬಾ ಗಲಾಟೆ ಮಾಡಿದ. ಬೇರೆಯವರ ಜೊತೆ ನನ್ನ ಬಗ್ಗೆ ಕೆಟ್ಟದಾಗಿ ಹೇಳಿಕೊಂಡು ಬಂದ. ನಾನು ಅದಕ್ಕೂ ಜಗ್ಗಲಿಲ್ಲ. ಸಂಬಂಧಿಕರೆಲ್ಲ ನಾನು ಮಹಾರಾಣಿಯಾಗಿ ಇರುತ್ತೇನೆಂದು ಅಂದುಕೊಳ್ಳುತ್ತಿದ್ದರು.ನನ್ನ ರಕ್ಷಕನೇ ನನ್ನ ಬಗ್ಗೆ ತನ್ನ ಅಪ್ಪನ ಬಳಿ ತೀರಾ ವೈಯಕ್ತಿಕವಾದ ಚರ್ಚೆಯನ್ನು ಮಾಡುತ್ತಿದ್ದ. ಹಾಗಾಗಿ ನನಗೆ ನನ್ನ ಮಾವ ಅನ್ನಿಸಿಕೊಂಡವರೇ ಕೆಲವು ಸಲ ನನ್ನ ಮೇಲೆ ಕೆಟ್ಟದ್ದಾಗಿ ವರ್ತಿಸಲು ಪ್ರಾರಂಭ ಮಾಡಿದರು. ಇದನ್ನು ನಾನು ನನ್ನ ಗಂಡನ ಬಳಿ ಹೇಳಿಕೊಂಡಾಗ ಒಹೋ ನೀನೇನು ಬಾರೀ ಪತಿವೃತೆಯಾ ಅಂದುಬಿಟ್ಟರು. ನನಗೋ ಯಾರಲ್ಲೂ ಹೇಳಿಕೊಳ್ಳಲಾಗದ , ಹಂಚಿಕೊಳ್ಳಲಾಗದ ನೋವು ಆಯಿತು . ನಾನು ಹುಟ್ಟಿದಾಗ ತಾಯಿಯನ್ನು ಕಳೆದುಕೊಂಡವಳು . ನಾನು ಪತಿವೃತೆ ಅಲ್ಲದಿದ್ದರೂ ಪರವಾಗಿಲ್ಲ , ನನ್ನ ಮಾವ ಅನ್ನಿಸಿಕೊಂಡವರು ಅಥವಾ ನನಗೆ ಇಷ್ಟ ಇಲ್ಲದವರು ನನ್ನ ಮೈ ಮುಟ್ಟುವ ಅಧಿಕಾರ ಇಲ್ಲ ಎಂದು ಗಂಡನಲ್ಲಿ ಸ್ಪಷ್ಟವಾಗಿ ಹೇಳಿದೆ. ತುಂಬಾ ದಿನ, ತಿಂಗಳುಗಳೇ ನಮ್ಮ ಮಧ್ಯೆ ಮಾತುಕತೆ ನಿಂತು ಹೋಗುತಿತ್ತು . ಹೊರ ಜಗತ್ತಿಗೆ ಇದೆಲ್ಲ ತಿಳಿಯುತ್ತಿರಲಿಲ್ಲ.
ಹೀಗಿರುವಾಗ ನನ್ನ ಗಂಡ ಒಂದು ಸಲ ಉದ್ಯೋಗದ ನಿಮಿತ್ತ ಬೇರೆ ಊರಿಗೆ ಹೋಗಿದ್ದರು. ನಾನು ನನ್ನ ಮಕ್ಕಳು ಮಾವ ಮಾತ್ರ ಮನೆಯಲ್ಲಿ ಇದ್ದೆವು. ಮಕ್ಕಳು ಮಲಗಿದ ಸಂದರ್ಭದಲ್ಲಿ ನನಗೂ ಮಾವನಿಗೂ ತುಂಬಾ ಜಗಳವಾಯಿತು. ಬೇರೆ ಯಾವ ವಿಷಯಕ್ಕೂ ಅಲ್ಲ ನಾನು ನಿನ್ನ ಜೊತೆ ಮಲಗುತ್ತೇನೆ ಎನ್ನುತ್ತಿದ್ದಾರೆ . ಎಚ್ಚರವಾಗಿಯೇ ಇದ್ದೆ . ಇದಕ್ಕೂ ಮುಂಚೆ ಎರಡು ಮೂರು ಸಲ ನಾನು ಸ್ನಾನಕ್ಕೆ ಹೋದಾಗ, ಮಗುವಿಗೆ ಹಾಲು ಕುಡಿಸುವಾಗ ಇಣುಕಿ ನನಗೆ ಮಾನಸಿಕವಾಗಿ ತುಂಬಾ ಹಿಂಸೆ ಮಾಡಿದ್ದರು. ಯಾರಲ್ಲಿ ಹೇಳುವುದು ತಾಯಿ ಇಲ್ಲ ಸಂಬಂಧಿಕರಲ್ಲಿ ಯಾರಲ್ಲಿ ಹೇಳಿದರೂ ನಂಬುವವರು ಯಾರು? ಎಲ್ಲದಕ್ಕೂ ಹೆಣ್ಣೇ ಕಾರಣ ಎನ್ನುವ ಸಮಾಜದಲ್ಲಿ ಏನು ಮಾಡಲಿ ? ಗಂಡನೇ ನಂಬುವುದಿಲ್ಲ ಎಂದ ಮೇಲೆ ಯಾರಲ್ಲಿ ಹೇಳಲಿ? ಒಂದು ರಾತ್ರಿ ಹೇಗೋ ಕಳೆಯಿತು ಮರುದಿನವೂ ಕೂಡಾ ಅದೇ ರೀತಿ ಆಯಿತು. ರಾತ್ರಿ ಎರಡು ಗಂಟೆಯ ವರೆಗೆ ಎಚ್ಚರವಾಗಿಯೇ ಇದ್ದೆ. ನಂತರ ಹಗಲಿಡೀ ಕೆಲಸದ ದಣಿವು ಸುಸ್ತಾಗಿ ನಿದ್ದೆ ಆವರಿಸಿತು. ಸುಮಾರು 2:30 ಗಂಟೆ ರಾತ್ರಿ ಆಗಿರಬಹುದು. ಈ ಮಾವ ಎನ್ನಿಸಿಕೊಂಡ ನರ ರಾಕ್ಸಸ ನನ್ನ ಮೇಲೆರಗಿದ.ನಾನು ಕಿರುಚಿದರೂ ಹೊರಗಡೆ ಕೇಳದಂತೆ ತಡೆದ. ಅವನ ರಾಕ್ಸಸ ಬಲದ ಮುಂದೆ ನಾನು ಸೋತೆ ಅಲ್ಲ ,ಅಲ್ಲ ನಾನು ಸತ್ತೇ ಹೋದೆ. ನನ್ನ ಸ್ವಾಭಿಮಾನದ ಬದುಕನ್ನು ಚಿಂದಿ ಚಿಂದಿ ಮಾಡಿ ಬಿಟ್ಟ ಆ ಮನುಷ್ಯ ರೂಪದ ರಾಕ್ಸಸ. ನನ್ನ ದೇಹದ ಬಗ್ಗೆಯೇ ನನಗೆ ಅಸಹ್ಯ ಹುಟ್ಟಿತು. ತುಂಬಾ ಹೊತ್ತು ಸ್ನಾನ ಮಾಡಿದೆ . ಇಲ್ಲ ಖಂಡಿತಾ ಇಲ್ಲ ಈ ಕೊಳಕು ಹೋಗುವುದೇ ಇಲ್ಲ. ಒಬ್ಬ ಹೆಣ್ಣಿಗೆ ತಾನು ಇಷ್ಟ ಪಟ್ಟ ತನ್ನ ಮನಸ್ಸಿನ ಭಾವನೆಯನ್ನು ಹಂಚಿಕೊಳ್ಳಬಲ್ಲ ಗಂಡಸಿನ ಜೊತೆ ತನ್ನ ಮೈಯನ್ನು ಹಂಚಿಕೊಂಡಾಗ ಆಗುವ ಖುಷಿ ಸಂತೋಷ, ಭಾವ ಪರವಶತೆ, ತಲ್ಲೀನತೆ,ತನ್ಮಯತೆ ತನ್ನ ದೇಹವನ್ನು ಬೇರೆಯಾರೋ ರಾಕ್ಸಸ ವಶಪಡಿಸಿಕೊಂಡಾಗ ಆಗುವ ನೋವು ಅವಳ ಸಾವಿಗಿಂತಲೂ ದೊಡ್ಡದು. ಅದಕ್ಕೆ ಅವಳಿಗೆ ಪದವಿಲ್ಲ, ಅಕ್ಷರವಿಲ್ಲ .ಮರುದಿನ ಏನೂ ವಿಶೇಷತೆ ಇಲ್ಲದೆ ಹಗಲು ಕಳೆಯಿತು. ರಾತ್ರಿ ಪುನಃ ತನ್ನ ಆಟವನ್ನು ಪ್ರಾರಂಭಿಸಿದ. ನನಗೇಕೋ ಹೋರಾಟ ಮಾಡಲು ಶಕ್ತಿ ಇಲ್ವಾ ಅಥವಾ ನನ್ನ ದೇಹ, ಮನಸ್ಸಿನ ಮೇಲೆಯೇ ಜಿಗುಪ್ಸೆಯೂ ಗೊತ್ತಿಲ್ಲ. ನಾನು ಶವದಂತೆ ಬಿದ್ದುಕೊಂಡೆ. ರವಿಯಲ್ಲಿ ಇದನ್ನು ಹೇಳಿದರೆ ಏನು ಪ್ರಯೋಜನ! ಎಂದುಕೊಂಡೆ.
ರವಿ ಕೆಲಸ ಮುಗಿಸಿ ಬರುವಾಗ ಬರೋಬ್ಬರಿ 1 ವಾರ ಕಳೆಯಿತು. ಮಾವ ಎನಿಸಿಕೊಂಡ ಹೃದಯಹೀನ ಮನುಷ್ಯ ಬಾರೀ ಜೋರಾಗಿ ಖುಷಿಯಾಗಿ ಮಕ್ಕಳೊಂದಿಗೆ ಮಾತನಾಡುತ್ತಿದ್ದ. ಆರು ದಿನವೂ ನನ್ನನ್ನು ಹರಿದು ತಿಂದು ಮುಕ್ಕಿದ. ನನಗೆ ಮಾತ್ರ ನನ್ನ ದೇಹದ ಮೇಲೆಯೇ ತುಂಬಾ ಹೇಸಿಗೆ ಹುಟ್ಟಿತು. ನಾನು ಬದುಕಿ ಏನು ಸಾಧಿಸಲಿದೆ. ಇದು ಹೊರ ಜಗತ್ತಿಗೆ ತಿಳಿದರೆ ಗಂಡನಾದವ, ಹೀನ ಜಾತಿಯ ಮಾವ, ಕೆಟ್ಟ ಸಮಾಜ, ಕುಹಕ ಸಂಬಂಧಿಕರು ಬಿಡಲಾರರು. ಇಲ್ಲ ನಾನು ಬದುಕಿ ಉಳಿಯ ಬಾರದು, ಬದುಕಿದರೆ ಇದೇ ರೀತಿ ರವಿ ಕೆಲಸ ಎಂದು ಹೇಳಿ ತಿಂಗಳಿಗೆ ಎರಡು ಸಲ ಬೇರೆ ಊರಿಗೆ ಹೋಗುವುದು ,ನಾನು ಮತಿಗೆಟ್ಟ ಮನುಷ್ಯನ ಜೊತೆ ದೇಹ ಹಂಚಿಕೊಳ್ಳುವುದು ಬೇಡ ಎಂದು ಕೊನೆಯ ತೀರ್ಮಾನಕ್ಕೆ ಬಂದೆ.
ನಾನು ಎಲ್ಲರಿಗೂ ಹೇಳುವುದು ಒಂದೇ , ಹೆಣ್ಣು ಮಕ್ಕಳನ್ನು ಸಾಕಿ ವಿದ್ಯಾಭ್ಯಾಸ ನೀಡಿ ಆತ್ಮವಿಶ್ವಾಸ ತುಂಬಿ ಮದುವೆ ಮಾಡಿ ಕೊಟ್ಟಾಗ ಗಂಡನ ಮನೆಯಲ್ಲಿ ಮಾನಸಿಕವಾಗಿ ದೈಹಿಕವಾಗಿ ಹಿಂಸೆಯಾದಾಗ ತವರು ಮನೆಗೆ ಹಿಂತಿರುಗಿ ಬನ್ನಿ ಎಂದು ಹೇಳಿ ಕಳುಹಿಸಿ. ನನ್ನ ಸಾವಿನ ನಂತರ ಎಲ್ಲರೂ ಇವಳು ಸಾಯ ಬೇಕು ಅಂತ ಇರಲಿಲ್ಲ ಅನ್ನುತ್ತಾರೆ. ಆದರೆ ಪ್ರತೀ ನಿಮಿಷಕ್ಕೆ 27 ಜನ ಹೆಣ್ಣು ಮಕ್ಕಳು ಅತ್ಯಾಚಾರಕ್ಕೆ ಒಳಗಾಗುತ್ತಾರೆ ಎನ್ನುತ್ತದೆ ಒಂದು ವರದಿ. ಅದು ಹೊರ ಜಗತ್ತಿಗೆ ತಿಳಿಯುವುದೇ ಇಲ್ಲ.ಅಕಸ್ಮಾತ್ ಒಂದೋ ಎರಡೋ ತಿಳಿದರೂ ಈ ಸಮಾಜ ಹೆಣ್ಣೇ ಸರಿ ಇಲ್ಲ , ಅವಳ ಬಟ್ಟೆ ಸರಿ ಇಲ್ಲ ಅವಳ ನಡತೆ ಸರಿ ಇಲ್ಲ ಎಂದು ಬಿಂಬಿಸುತ್ತಾರೆ. ಅತ್ಯಾಚಾರ ಮಾಡಿದ ಗಂಡಸು ಯಾವುದೇ ಶಿಕ್ಷೆ ಇಲ್ಲದೆ ಪಾರಾಗುತ್ತಾನೆ. ಇಂತಹ ಸಮಾಜದಲ್ಲಿ ನನ್ನ ಮಾವನೇ ನನ್ನನ್ನು ಬಳಸಿಕೊಂಡ ಎಂದರೆ ನನ್ನ ಪರ ಮಾತನಾಡುವವರು ಯಾರಿದ್ದಾರೆ. ಅದಕ್ಕಾಗಿ ಈ ತೀರ್ಮಾನಕ್ಕೆ ಬಂದೆ. ನನ್ನ ಮಕ್ಕಳಾದ ಇನಿ ಮತ್ತು ಇಂದು ನನ್ನನ್ನು ಕ್ಷಮಿಸಿ”
ಅಪ್ಪ ಅಪ್ಪ ಎಂದು ಬಾಗಿಲು ಬಡಿದ ಶಬ್ದಕ್ಕೆ ರವಿ ತಕ್ಷಣ ಕಾಗದ ಮುಚ್ಚಿ ಬಾಗಿಲು ತೆಗೆದು ತನ್ನ ಇಬ್ಬರು ಮಕ್ಕಳನ್ನು ಅಪ್ಪಿಕೊಂಡು, ಇವರಿಬ್ಬರನ್ನು ಆತ್ಮ ವಿಶ್ವಾಸದ ಪ್ರತೀಕದಂತೆ ಬೆಳೆಸಬೇಕು ಅದುವೆ ನಾನು ರೇಖಾಳಿಗೆ ಮಾಡುವ ಸಹಾಯ ಎಂದು ಕೊಂಡನು.
– ✍🏻 ವನಿತಾ ಅರುಣ್ ಭಂಡಾರಿ ಬಜ್ಪೆ