January 18, 2025
IMG-20180917-WA0008

ಹಂಪಿಯ ಕಡಲೇಕಾಳು ಗಣಪತಿ,ಸಾಸಿವೆ ಗಣಪತಿ ನೀವು ನೋಡಿರಬಹುದು ಅಥವಾ ಅವುಗಳ ಬಗ್ಗೆ ಕೇಳಿರಬಹುದು.ಆದರೆ ನೀವು ರಾಗಿಕಾಳು ಗಣಪತಿ ಬಗ್ಗೆ ಕೇಳಿಲ್ಲವಾದರೆ ಈ ಸ್ಟೋರಿ ಓದಲೇಬೇಕು.ಇದು ಬಾಳೇಹೊನ್ನೂರಿನ ವೇದರಾಜ್ ಭಂಡಾರಿಯವರ ಮನೆಯಲ್ಲಿ ಪ್ರತಿಷ್ಠಾಪಿಸಲಾಗಿರುವ ಗಣಪತಿಯ ಕಥೆ.

ಹೌದು…. ಚಿಕ್ಕಮಗಳೂರು ಜಿಲ್ಲೆಯ ಬಾಳೇಹೊನ್ನೂರಿನ ವೀರಭದ್ರೇಶ್ವರ ನಗರದ ಶ್ರೀ ವೇದರಾಜ್ ಭಂಡಾರಿಯವರು ತಮ್ಮ ಮನೆಯಲ್ಲಿ ಸ್ವತಃ ತಾವೇ ರಾಗಿಯಿಂದ ತಯಾರಿಸಿದ ಗಣಪನನ್ನು ಪ್ರತಿಷ್ಠಾಪಿಸಿ ಪೂಜಿಸುತ್ತಿದ್ದಾರೆ.ರಾಸಾಯನಿಕ ಬಣ್ಣಗಳಿಂದ,ನೀರಿನಲ್ಲಿ ಸುಲಭವಾಗಿ ಕರಗದ ಗಣೇಶ ಮೂರ್ತಿಗಳನ್ನು ಸ್ಥಾಪಿಸಿ,ಪರಿಸರ ಹಾನಿ ಜೊತೆಗೆ ಜಲಚರಗಳ ಪ್ರಾಣಹಾನಿಯನ್ನು  ತಡೆಗಟ್ಟುವ ಸದುದ್ದೇಶದಿಂದ ಇವರು ಕಳೆದ ನಾಲ್ಕೈದು ವರ್ಷಗಳಿಂದ ಈ ರೀತಿಯ ಪರಿಸರಸ್ನೇಹಿ ಗಣಪತಿ ಮೂರ್ತಿಗಳನ್ನು ತಾವೇ ತಯಾರಿಸಿ ಪ್ರತಿಷ್ಠಾಪಿಸಿ ಪೂಜಿಸುತ್ತಾರೆ.

ಬಾಳೇಹೊನ್ನೂರಿನಲ್ಲಿ ಕ್ಷೌರಿಕ ವೃತ್ತಿಯನ್ನು ಮಾಡಿಕೊಂಡಿರುವ ವೇದರಾಜ್ ಐದು ವರ್ಷದ ಹಿಂದೆ ತಮ್ಮ ಮಗ ವೈಷ್ಣವ್ ನ ಇಚ್ಛೆಯಂತೆ ತರಕಾರಿಯಿಂದ ಗಣಪತಿ ಮೂರ್ತಿಯನ್ನು ಯಾಕೆ ತಯಾರಿಸಬಾರದು ಎಂದು ಆಲೋಚಿಸಿ ಕೇವಲ ಹತ್ತು ನಿಮಿಷದಲ್ಲಿ ಬೀಟ್ ರೂಟ್ ನಿಂದ ಗಣಪನನ್ನು ತಯಾರಿಸಿ ಮನೆಯಲ್ಲಿಯೇ ಪ್ರತಿಷ್ಠಾಪಿಸಿದರು.ಅವರ ಈ ಪ್ರಯತ್ನಕ್ಕೆ ಮನೆಯವರಿಂದ,ಸ್ನೇಹಿತರಿಂದ ಅಭೂತಪೂರ್ವ ಸ್ಪಂದನೆ ದೊರಕಿತು.ಅದರಿಂದ ಸ್ಫೂರ್ತಿಗೊಂಡ ವೇದರಾಜ್ ಮರುವರ್ಷ ಕ್ಯಾರೆಟ್ ನಿಂದ ಗಣಪತಿ ಮೂರ್ತಿ ತಯಾರಿಸಿದರು.ಮೂರನೇ ವರ್ಷ ಕೊಬ್ಬರಿ-ಬೆಲ್ಲ ಬಳಸಿ ವಿಘ್ನೇಶ್ವರನನ್ನು ಮೂಡಿಸಿದರು.ನಾಲ್ಕನೇ ವರ್ಷ ಪೇಪರ್ ಬಳಸಿ ವಿನಾಯಕನನ್ನು ಮೂರ್ತಗೊಳಿಸಿದರು.ಈ ವರ್ಷ ರಾಗಿಕಾಳು ಗಣಪತಿ ತಯಾರಿಸಿ ಪೂಜಿಸುತ್ತಿದ್ದಾರೆ.ಪರಿಸರಸ್ನೇಹಿ ಗಣಪನನ್ನು ತಯಾರಿಸುವುದರ ಜೊತೆಗೆ ಮೋದೀಜೀಯವರ ಸ್ವಚ್ಛ್ ಭಾರತ್ ಅಭಿಯಾನಕ್ಕೆ ಬೆಂಬಲ ಸೂಚಕವಾಗಿ ಗಣಪತಿಯ ಕೈಯಲ್ಲಿ ಸ್ವಚ್ಛ ಭಾರತ್ ನ ಬಾವುಟವನ್ನು ನೀಡಿ ಸಾರ್ವಜನಿಕರಿಗೆ ಒಂದು ಉತ್ತಮ ಸಂದೇಶವನ್ನು ನೀಡುವ ಪ್ರಯತ್ನವನ್ನೂ ಮಾಡುತ್ತಿದ್ದಾರೆ.

ಮೂಲತಃ ಉಡುಪಿಯವರಾದ ದೇವರಾಜ್ ಭಂಡಾರಿ ಮತ್ತು ಸುಶೀಲಾ ಭಂಡಾರಿ ದಂಪತಿಯ ಪುತ್ರರಾದ ಇವರಿಗೆ ಬಾಲ್ಯದಿಂದಲೂ ಕರಕುಶಲ ಕಲೆಯಲ್ಲಿ ತುಂಬಾ ಆಸಕ್ತಿ.ಆದರೆ ಅದಕ್ಕೆ ಬೇಕಾದ ವಸ್ತುಗಳನ್ನು ಖರೀದಿಸಲು ಮನೆಯಲ್ಲಿ ಕಾಲುಮುರಿದುಕೊಂಡು ಬಿದ್ದಿದ್ದ ಬಡತನ ಅಡ್ಡಿಯಾಗಿತ್ತು.ಹಾಗಾಗಿ ಶಾಲೆಯಿಂದ ಬರುವಾಗ ದಾರಿಯಲ್ಲಿ ಸಿಗುವ ಕಾಗದಗಳು,ಖಾಲಿ ಸಿಗರೇಟ್ ಪ್ಯಾಕೆಟ್ ಗಳು,ಅದರೊಳಗಿನ ಜರಿಗಳು,ಬಣ್ಣ ಬಣ್ಣದ ಪಾಲಿಥೀನ್ ಕವರ್ ಗಳು ಇವುಗಳನ್ನೆಲ್ಲಾ ಹೆಕ್ಕಿ ತಂದು,ರಾತ್ರಿಯೆಲ್ಲಾ ಕುಳಿತು ಅವುಗಳಲ್ಲಿ ಏನಾದರೂ ಕಲೆ ಅರಳಿಸಿ,ಪೆನ್ನಿನ ರಿಫೀಲ್ ನಿಂದ ಇಂಕು ತೆಗೆದು ಅದನ್ನೇ ಬಣ್ಣವಾಗಿ ಬಳಸಿ ಚಂದದ ಚಿತ್ತಾರ ರಚಿಸಿ ಮಲಗಿರುವ ಅಮ್ಮನನ್ನು ಎಬ್ಬಿಸಿ ಅವರಿಗೆ ತೋರಿಸಿ ಅವರಿಂದ ಮೆಚ್ಚುಗೆ ಪಡೆದಾಗಲೇ ಇವರಿಗೆ ಸಮಾಧಾನ.ಅಂತಹ ಬಡತನದಲ್ಲೂ ತಂದೆ ತಾಯಿ ನನ್ನಲ್ಲಿದ್ದ ಕಲೆಗೆ ನೀಡಿದ ಪ್ರೋತ್ಸಾಹವೇ ನನ್ನ ಈ ಕ್ರಿಯಾಶೀಲತೆಗೆ ಮೂಲ ಕಾರಣ ಎಂದು ಈಗ ಸ್ವರ್ಗಸ್ಥರಾಗಿರುವ ತಂದೆ ತಾಯಿಯವರನ್ನು ವೇದರಾಜ್ ಭಾವುಕರಾಗಿ ನೆನೆಯುತ್ತಾರೆ.

ಸಾಮಾಜಿಕ ಜಾಲತಾಣಗಳಲ್ಲಿ,ಸುದ್ದಿ ವಾಹಿನಿಗಳಲ್ಲಿ,ಪತ್ರಿಕೆಗಳಲ್ಲಿ ಎಲ್ಲಾ ಕಡೆಗಳಲ್ಲಿಯೂ ಈಗ ವೇದರಾಜ್ ಭಂಡಾರಿಯವರ ಪರಿಸರಸ್ನೇಹಿ ಗಣಪನದೇ ಸದ್ದು.ಹಾಗಾಗಿ ಭಂಡಾರಿವಾರ್ತೆ ಅವರನ್ನು ಮಾತಿಗೆಳೆದಾಗ….

“ನಾವು ಚಿಕ್ಕವರಿದ್ದಾಗ ಗಣಪತಿ ಮೂರ್ತಿಗಳನ್ನು ಅವುಗಳ ರಾಸಾಯನಿಕ ಬಣ್ಣ ಕುಡಿಯುವ ನೀರನ್ನು ಮಲಿನಗೊಳಿಸುತ್ತದೆ ಎಂಬ ಕಾರಣ ನೀಡಿ ಬಾವಿಗಳಲ್ಲಿ ವಿಸರ್ಜಿಸಲು ಅಡ್ಡಿಪಡಿಸುತ್ತಿದ್ದರು.ಹಾಗಾಗಿ ಮೊದಲಿನಿಂದಲೂ ಈ ರೀತಿಯ ಪರಿಸರಕ್ಕೆ ಮಾರಕವಲ್ಲದ ಗಣಪತಿಯ ವಿಗ್ರಹ ತಯಾರಿಯ ಚಿಂತನೆ ಇತ್ತು.ಕಳೆದ ಐದು ವರ್ಷಗಳಿಂದ ಆ ನಿಟ್ಟಿನಲ್ಲಿ ಹೆಜ್ಜೆಯಿಡುತ್ತಿದ್ದೇನೆ.ಇದನ್ನು ನೋಡಿ ಹಲವರು,ಹಲವು ಸಂಘ ಸಂಸ್ಥೆಗಳು ಬದಲಾಗಿ ಪರಿಸರಸ್ನೇಹಿ ಗಣಪನನ್ನು ಪ್ರತಿಷ್ಠಾಪಿಸುತ್ತಿದ್ದಾರೆ.ಅದೇ ನನಗೆ ಸಮಾಧಾನ.ಕಸದಿಂದ ರಸ ಕಲ್ಪನೆಯಲ್ಲಿ ಉಪಯೋಗಕ್ಕೆ ಬಾರದ ವಸ್ತುಗಳನ್ನು ಬಳಸಿ ಏನಾದರೂ ಕ್ರಿಯೇಟಿವ್ ಆಗಿ ತಯಾರಿಸುವುದು ಹೇಗೆ,ಹಣ್ಣು ತರಕಾರಿಯಿಂದ ವಿವಿಧ ಕಲಾತ್ಮಕ ರಚನೆಗಳನ್ನು ಅರಳಿಸುವುದು ಹೇಗೆ ಎಂಬ ಬಗ್ಗೆ ಮಕ್ಕಳಿಗೆ ತರಬೇತಿ ನೀಡುತ್ತಿದ್ದೇನೆ.ಬಾಳೇಹೊನ್ನೂರಿನ ಅನಂತ್ಯ ಸ್ಕೂಲ್ ನಲ್ಲಿ ಬೇಸಿಗೆ ಶಿಬಿರದಲ್ಲಿ ಇದೇ ವಿಷಯದ ಕುರಿತು ಮಕ್ಕಳಿಗೆ ಕಾರ್ಯಾಗಾರ ನಡೆಸಿಕೊಂಡು ಬಂದಿದ್ದೇನೆ.
ಔಷದೀಯ ಸಸ್ಯಗಳ ಆರೈಕೆ,ಸಂಗ್ರಹ ಮಾಡುವುದರ ಜೊತೆಗೆ ಅವುಗಳ ಬಗ್ಗೆ ಮಾಹಿತಿಯನ್ನು ಕಲೆ ಹಾಕುವ ಹವ್ಯಾಸವಿದೆ.
ಹಳೆಯ ಕಾಲದ ನಾಣ್ಯಗಳನ್ನು ಸಂಗ್ರಹಿಸುವ ಹವ್ಯಾಸವೂ ಇದೆ.ಈಗಾಗಲೇ ನನ್ನ ಸಂಗ್ರಹದಲ್ಲಿ ಎರಡು ಸಾವಿರಕ್ಕೂ ಹೆಚ್ಚಿನ ಹಳೆಯ ನಾಣ್ಯಗಳು ಇವೆ.
ಪ್ರಾಚೀನ ಕಾಲದ ವಸ್ತುಗಳನ್ನು,ಪಾತ್ರೆಗಳನ್ನು ಸಂಗ್ರಹಿಸುವ ಹವ್ಯಾಸವೂ ಸಹಾ ಇದೆ.ನನ್ನ ಈ ಹವ್ಯಾಸ ಅರಿತ ಮಿತ್ರರು,ಬಂಧುಗಳು ತಮ್ಮ ಬಳಿಯಿರುವ ಪ್ರಾಚೀನ ವಸ್ತುಗಳನ್ನು,ಪಾತ್ರೆಗಳನ್ನು,ದಿನಬಳಕೆಯ ಸಾಮಗ್ರಿಗಳನ್ನು ತಂದುಕೊಟ್ಟು ನನ್ನನ್ನು ಪ್ರೋತ್ಸಾಹಿಸುತ್ತಿದ್ದಾರೆ.ಇತಿಹಾಸದ ಬಗ್ಗೆ ಆಸಕ್ತಿ ಇರುವವರಿಗೆ,ಸಂಶೋದಕರಿಗೆ,ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತಹ ಒಂದು ಮ್ಯೂಸಿಯಂ ಮಾಡುವ ಉದ್ದೇಶವೂ ನನಗಿದೆ.” ಎಂದು ತಮ್ಮ ಆಸಕ್ತಿಯನ್ನು,ಹವ್ಯಾಸವನ್ನು ಹೊರಹಾಕಿದರು.

ಭಂಡಾರಿ ಸಮಾಜದ ಅಪರೂಪದ ವ್ಯಕ್ತಿತ್ವದ ಇವರ ಕುಟುಂಬದ ಹಿನ್ನೆಲೆ ಬಗ್ಗೆ  ಕೇಳಿದಾಗ… “ನನ್ನ ತಂದೆ ದೇವರಾಜ್ ಭಂಡಾರಿ ಮೂಲತಃ ಉಡುಪಿಯವರು.ತಾಯಿ ಸುಶೀಲಾ ತೀರ್ಥಹಳ್ಳಿ ತಾಲೂಕಿನ ನಾಬಳ ಗ್ರಾಮದವರು.ಈಗ ಇಬ್ಬರೂ ದೈವಾಧೀನರಾಗಿದ್ದಾರೆ. ನನ್ನ ಅಕ್ಕ ಶ್ರೀಮತಿ ನವೀನಿ ಸುರೇಶ್ ಭಂಡಾರಿ ಕೊಟ್ಟಿಗೆಹಾರದ ನಿಡುವಾಳೆಯಲ್ಲಿ ನೆಲೆಸಿದ್ದರೆ,ತಮ್ಮ ಶ್ರೀ ಸುನಿಲ್ ರಾಜ್ ಭಂಡಾರಿ ಬಾಳೇಹೊನ್ನೂರಿನಲ್ಲಿಯೇ ನೆಲೆಸಿದ್ದಾರೆ.ಮತ್ತು ನನ್ನ ಪತ್ನಿ ಶ್ರೀಮತಿ ಪ್ರಿಯಾಂಕ ಭಂಡಾರಿ ತೀರ್ಥಹಳ್ಳಿ ತಾಲೂಕಿನ ತೀರ್ಥಮತ್ತೂರು ಗ್ರಾಮದವರು.ನನಗಿಬ್ಬರು ಮಕ್ಕಳು ಹಿರಿಯವನು ವೈಷ್ಣವ್ ರಾಜ್ ಭಂಡಾರಿ,ಕಿರಿಯವನು ವಿಹಾನ್ ವಿಷ್ಣು ರಾಜ್ ಭಂಡಾರಿ.” ಹೀಗೆಂದು ತಮ್ಮ ಕುಟುಂಬದ ಪರಿಚಯ ಮಾಡಿಕೊಟ್ಟರು.

ನಿಜಕ್ಕೂ ವೇದರಾಜ್ ಭಂಡಾರಿಯವರು ಒಬ್ಬ ಆಸಕ್ತಿ ಕೆರಳಿಸುವ ವ್ಯಕ್ತಿ.ಹಲವಾರು ಸೃಜನಶೀಲ ಹವ್ಯಾಸಗಳ ಆಗರ.ವಿದ್ಯಾರ್ಥಿಗಳಿಗೆ ಮಾಹಿತಿಯ ಖಣಜ.ಸದಾ ಸಾಮಾಜಿಕ ಚಟುವಟಿಕೆಗಳಲ್ಲಿ ಕ್ರಿಯಾಶೀಲವಾಗಿರುವ ಸ್ನೇಹಜೀವಿ.ಇವರೊಂದಿಗೆ ಮಾತನಾಡಲು,ಅವರ ಹವ್ಯಾಸಗಳ ಬಗ್ಗೆ ಆಸಕ್ತಿ ಇರುವವರು,ನಾಣ್ಯಗಳ,ಪ್ರಾಚೀನ ವಸ್ತುಗಳ ಬಗ್ಗೆ ಮಾಹಿತಿಗಾಗಿ ಅಥವಾ ನಿಮ್ಮ ಊರಿನಲ್ಲಿ ಅವರಿಂದ ಒಂದು ಕರಕುಶಲ ಕಲೆಯ ಕಾರ್ಯಾಗಾರ ಆಯೋಜಿಸಲು ಇಚ್ಚಿಸುವವರು ಈ ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದು.
ಮೊಬೈಲ್ : 94496 10581

ಸುಮಾರು ಇಪ್ಪತ್ತೆರಡು ಸಂಘ ಸಂಸ್ಥೆಗಳಲ್ಲಿ ಸಕ್ರಿಯರಾಗಿರುವ ಇವರು ಈವರೆಗೆ ಇಪ್ಪತ್ತಾರು ಬಾರಿ ರಕ್ತದಾನ ಮಾಡಿ ರಕ್ತದಾನದ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುವ ಪ್ರಯತ್ನ ಮಾಡಿದ್ದಾರೆ.ಇವರ ಕ್ರಿಯಾಶೀಲತೆ ಮತ್ತು ಸಾಮಾಜಿಕ ಬದ್ಧತೆಯನ್ನು ಗುರುತಿಸಿ ಹಲವಾರು ಸಂಘ ಸಂಸ್ಥೆಗಳು ಇವರನ್ನು ಸನ್ಮಾನಿಸಿ ಗೌರವಿಸಿವೆ.ಇಂತಹ ಅಪ್ರತಿಮ ಪ್ರತಿಭಾವಂತ,ಸೃಜನಾತ್ಮಕ ವ್ಯಕ್ತಿ ಶ್ರೀ ವೇದರಾಜ್ ಭಂಡಾರಿಯವರ ಎಲ್ಲಾ ಯೋಜನೆಗಳು ಯಶಸ್ವಿಯಾಗಲಿ.ಅವರ ಹವ್ಯಾಸಗಳ ಅನಾವರಣಕ್ಕೆ ಸೂಕ್ತ ವೇದಿಕೆಗಳು ಸೃಷ್ಠಿಯಾಗಲಿ.ಶ್ರೀ ದೇವರು ಅವರಿಗೆ ಆಯುರಾರೋಗ್ಯವನ್ನು, ಐಶ್ವರ್ಯವನ್ನು ದಯಪಾಲಿಸಿ ಆಶೀರ್ವದಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು ಭಂಡಾರಿವಾರ್ತೆ ಹೃತ್ಪೂರ್ವಕವಾಗಿ ಶುಭ ಹಾರೈಸುತ್ತದೆ.

ನಿರೂಪಣೆ : ಭಾಸ್ಕರ್ ಭಂಡಾರಿ ಶಿರಾಳಕೊಪ್ಪ.

Leave a Reply

Your email address will not be published. Required fields are marked *