ಪುತ್ತೂರು : ಕವಿ, ಪತ್ರಕರ್ತ ವಿಜಯಕುಮಾರ್ ಭಂಡಾರಿ ಹೆಬ್ಬಾರಬೈಲು ಅವರ ಸಂಪಾದಕತ್ವದ “ಪೂವರಿ” ತುಳು ಪತ್ರಿಕಾ ಕ್ಷೇತ್ರದಲ್ಲಿ ನಾಡಿಗೆ ಸಲ್ಲಿಸಿದ ಅನುಪಮ ಸಾಧನೆಗಾಗಿ ಆರನೇ ಕರ್ನಾಟಕ ಗಡಿನಾಡ ಸಮ್ಮೇಳನ – 2023ರ “ಗಡಿನಾಡ ಧ್ವನಿ ಮಾಧ್ಯಮ ರಾಜ್ಯ ಪ್ರಶಸ್ತಿ“ಯನ್ನು ಒಡ್ಯ ಸರಕಾರಿ ಶಾಲಾ ವಠಾರದಲ್ಲಿ ಜರಗಿದ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಪಡಕೊಂಡಿದೆ.
ತುಳುನಾಡಿನಲ್ಲಿ ಕಳೆದ ಎಂಟು ವರ್ಷಗಳಿಂದ ಸದ್ದು ಮಾಡುತ್ತಿರುವ ತುಳು ಭಾಷೆಯ ಏಕೈಕ ತುಳು ಮಾಸಿಕ “ಪೂವರಿ” ಇತ್ತೀಚೆಗೆ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಒಡಿಯೂರು ತುಳು ಸಾಹಿತ್ಯ ಸಮ್ಮೇಳನದ ಪ್ರಶಸ್ತಿ ಸಹಿತ ಅನೇಕ ಮಾಧ್ಯಮ ಪ್ರಶಸ್ತಿಗಳ ಸರಮಾಲೆಯನ್ನೇ ಹೆಗಲಿಗೆ ಹಾಕಿಕೊಂಡಿದೆ.
ಗಡಿನಾಡ ಶ್ರೇಯೋಭಿವೃದ್ಧಿ ಟ್ರಸ್ಟ್ (ರಿ.), ಗಡಿನಾಡ ಧ್ವನಿ ಮಾಸಿಕ ಹಾಗೂ ವಿವಿಧ ಸಂಘ ಸಂಸ್ಥೆಗಳ ಜಂಟಿ ಸರಕಾರದಲ್ಲಿ ಆಯೋಜಿಸಿದ ಸಮಾರಂಭದಲ್ಲಿ ಸಮ್ಮೇಳನಾಧ್ಯಕ್ಷ ಮಲಾರ್ ಜಯರಾಮ ರೈ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮಿತ್ರಂಪಾಡಿ ಜಯರಾಮ ರೈ ಅಬುಧಾಬಿ, ಸಮ್ಮೇಳನದ ರೂವಾರಿ ಡಾ. ಎಸ್. ಅಬೂಬಕ್ಕರ್ ಆರ್ಲಪದವು, ಕಸಾಪ ಪುತ್ತೂರು ತಾಲೂಕು ಅಧ್ಯಕ್ಷ ಉಮೇಶ್ ನಾಯಕ್, ಡಾ. ಹರ್ಷ ರೈ ಮಾಡಾವು ,ಕೆ. ಈಶ್ಯರ ಭಟ್ ಕಡಂದೇಲು ಸಹಿತ ಅನೇಕ ಗಣ್ಯರು ಉಪಸ್ಥಿತರಿದ್ದರು.
ವಿಕುಭ ಹೆಬ್ಬಾರಬೈಲು ಎಂದೇ ಪ್ರಸಿದ್ಧರಾಗಿರುವ ವಿಜಯಕುಮಾರ ಭಂಡಾರಿ ಹೆಬ್ಬಾರಬೈಲು ದ.ಕ.ಜಿಲ್ಲೆಯ ಪುತ್ತೂರು ತಾಲೂಕಿನ ಹೆಬ್ಬಾರಬೈಲು ನಿವಾಸಿ ಕೃಷಿಕ ದಿ.ಈಶ್ವರ ಭಂಡಾರಿ ಮತ್ತು ನಾಗಮ್ಮ ದಂಪತಿಯ ಪುತ್ರರಾಗಿ ಜನಿಸಿ ಪ್ರಾಥಮಿಕ ಶಿಕ್ಷಣ ಮುಗಿಸಿದ ಬಳಿಕ ಬಾಲಕಾರ್ಮಿಕನಾಗಿ ಗ್ಯಾರೇಜೊಂದರಲ್ಲಿ ತನ್ನ ದುಡಿಮೆ ಆರಂಭಿಸಿದರು. ಬಳಿಕ ಪುತ್ತೂರು, ಮುಂಬಯಿಗಳಲ್ಲಿ ಮೆಕ್ಯಾನಿಕ್ ವೃತ್ತಿ ನಿರ್ವಹಿಸಿದ್ದರು. 1987 ರಲ್ಲಿ ವಿಟ್ಲದಲ್ಲಿ ವಿಜಯಾ ಮೋಟಾರ್ ಸರ್ವೀಸ್ ಗ್ಯಾರೇಜೊಂದನ್ನು ಪ್ರಾರಂಭಿಸಿದರು. ಪುತ್ತೂರಿನಲ್ಲಿ ದಾಸ್ತವೇಜು ಬರಹಗಾರರಾಗಿಯೂ ಕಾರ್ಯ ನಿರ್ವಹಿಸುತ್ತಿರುವ ಇವರು ಪ್ರಸ್ತುತ ಪೂವರಿ ಮಾಸ ಪತ್ರಿಕೆಯನ್ನು ನಡೆಸುತ್ತಿದ್ದಾರೆ. ಬಾಲ್ಯದಿಂದಲೇ ಸಾಹಿತ್ಯ ಕ್ಷೇತ್ರದ ಕುರಿತು ವಿಶೇಷ ಒಲವು ಹೊಂದಿದ್ದ ಇವರು ಇಂದು ಪತ್ರಿಕೋದ್ಯಮ, ತುಳು ಸಾಹಿತ್ಯ ಕ್ಷೇತ್ರದ ಮೂಲಕ ನಾಡಿನಾದ್ಯಂತ ಚಿರಪರಿಚಿತರೆನಿಸಿಕೊಂಡಿದ್ದಾರೆ.
ಆಪ್ಪೆಗ್ ಬಾಲೆದ ಓಲೆ ಎಂಬ ಕೃತಿಗೆ ತುಳು ಸಾಹಿತ್ಯ ಆಕಾಡೆಮಿ ಪ್ರಶಸ್ತಿ, ಮೈಸೂರಿನಲ್ಲಿ ನಡೆದ ರಾಜ್ಯಮಟ್ಟದ 10ನೇ ಚುಟುಕು ಸಾಹಿತ್ಯ ಸಮ್ಮೇಳನದಲ್ಲಿ ಗೌರವ, ಸೋಮವಾರಪೇಟೆಯಲ್ಲಿ ನುಡಿಮುತ್ತು ಸಂಗ್ರಹ ಪ್ರಶಸ್ತಿ, ತುಳು ಲಿಪಿ ಹಾಗೂ ಹಸ್ತಪ್ರತಿಗಳ ಸಂರಕ್ಷಣಾ ತರಬೇತಿ ಪ್ರಮಾಣ ಪತ್ರ, ತುಳು ಸಾಹಿತ್ಯ ಅಕಾಡೆಮಿಯ ತುಳು ಶಿಕ್ಷಕರ ಕಾರ್ಯಗಾರ ತರಬೇತಿ ಪ್ರಮಾಣ ಪತ್ರ, ಬಂಟ್ವಾಳ ಚುಟುಕು ಸಾಹಿತ್ಯ ಪರಿಷತ್ ಚುಟುಕು ಕವಿಗೋಷ್ಠಿ ಪ್ರಮಾಣ ಪತ್ರ, ಸಾಹಿತ್ಯ ಕ್ಷೇತ್ರಕ್ಕೆ ಕಚ್ಚೂರು ಶ್ರೀ ನಾಗೇಶ್ವರ ದೇವಳದ ಉತ್ಸವದ ಸಂದರ್ಭದಲ್ಲಿ ಸಮ್ಮಾನ, ಬಂಟ್ವಾಳ ಪತ್ರಕರ್ತರ ಸಂಘದಿಂದ ಸಮ್ಮಾನ, ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಗೌರವ, ಪುತ್ತೂರು ಗ್ಯಾರೇಜ್ ಮಾಲಕರಿಂದ ಗೌರವ, ಬೆಂಗಳೂರು ಭಂಡಾರಿ ಸಂಘದಿಂದ ಗೌರವ, ಬಾಂಬಿಲ ದೇವಳದಿಂದ ಶ್ರೀ ಅಗ್ನಿದುರ್ಗಾ ಪುರಸ್ಕಾರ, ಸಾಂಗ್ಲಿ-ಮೀರಜ್ ತುಳುನಾಡ್ ಸಂಘದಿಂದ ಸನ್ಮಾನ, ಅಡ್ಯಾರ್ ಹಾಗೂ ಬದಿಯಡ್ಕ ತುಳು ಸಮ್ಮೇಳನಗಳಲ್ಲಿ ಗೌರವ ಹೀಗೆ ಹತ್ತು ಹಲವು ಸಂಘ-ಸಂಸ್ಥೆಗಳು ಪ್ರಶಸ್ತಿ ಸನ್ಮಾನಗಳನ್ನು ನೀಡಿ ಗೌರವಿಸಿದೆ.
ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಸೇವಾ ಸಮಿತಿ ಸದಸ್ಯನಾಗಿ, ತುಳುವೆರೆಂಕ್ಲು ಕುಡಲದ ಸದಸ್ಯನಾಗಿ, ಅವಿಭಜಿತ ದ.ಕ.ಜಿಲ್ಲಾ ಗ್ಯಾರೇಜ್ ಮಾಲಕರ ಸಂಘದ ವಿಟ್ಲ ವಲಯದ ಅಧ್ಯಕ್ಷನಾಗಿ, ರಾಜ್ಯ ಮಂಗಳ ಕಲಾ ಸಾಹಿತ್ಯ ವೇದಿಕೆಯ ಜಿಲ್ಲಾ ಸಂಘಟನಾ ಕಾರ್ಯದರ್ಶಿಯಾಗಿ ವಿಟ್ಲ ಜೇಸಿಸ್ ಎಜ್ಯುಕೇಶನ್ ಸೊಸೈಟಿಯ ಸದಸ್ಯನಾಗಿ, ದ.ಕ.ಜಿಲ್ಲಾ ಮಕ್ಕಳ ಸಾಹಿತ್ಯ ಸಂಗಮದ ಸದಸ್ಯನಾಗಿ, ಬಂಟ್ವಾಳ ಹಾಗೂ ಪುತ್ತೂರು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯನಾಗಿ, ಕಚ್ಚೂರು ದೇವಳದ ಉತ್ಸವ ಸಮಿತಿಯ ಪುತ್ತೂರು ಕಾರ್ಯದರ್ಶಿಯಾಗಿ, ದ.ಕ.ಜಿಲ್ಲಾ 14ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸದಸ್ಯನಾಗಿ, ದ.ಕ.ಹಾಗೂ ಉಡುಪಿ ಜಿಲ್ಲಾ ಹಿಂದುಳಿದ ಜಾತಿಗಳ ಒಕ್ಕೂಟದ ಸದಸ್ಯನಾಗಿ ಹೀಗೆ ಹತ್ತು ಹಲವು ಸಂಘ ಸಂಸ್ಥೆಗಳಲ್ಲಿ ಪದಾಧಿಕಾರಿಯಾಗಿ ಕೆಲಸ ಮಾಡಿದ್ದಾರೆ ಜತೆಗೆ “ಧರ್ಮಯೋಧರು” ಕನ್ನಡ ಚಲನಚಿತ್ರದಲ್ಲಿಯೂ ನಟನೆ ಮಾಡಿದ್ದಾರೆ.
ಇವರ ಸಾಮಾಜಿಕ, ಸಾಹಿತ್ಯ ಕ್ಷೇತ್ರದ ದುಡಿಮೆಗೆ ತಂದೆ, ತಾಯಿ, ಪತ್ನಿ, ಮಕ್ಕಳು ಉತ್ತಮ ಸಹಕಾರ ನೀಡಿದ್ದಾರೆ. ಕೌಟುಂಬಿಕ ಜೀವನದ ಕುರಿತು ಹೇಳುವುದಾದರೆ ಗಾಯತ್ರಿ ವಿ. ಅವರನ್ನು ವಿವಾಹವಾಗಿದ್ದು, ಯಶಸ್ ಹಾಗೂ ಅಮೃತ್ ಎಂಬ ಇಬ್ಬರು ಮಕ್ಕಳಿದ್ದಾರೆ.
ಇವರ ಸಾಧನೆ ತುಳು ಭಾಷೆಯ ಮೇಲಿನ ಅಭಿಮಾನ ಎಲ್ಲರಿಗೂ ಮಾದರಿಯಾಗಲಿ, ಇವರಿಗೆ ಇನ್ನಷ್ಟು ಯಶಸ್ಸು ಸಿಗಲಿ ಎಂಬುದು ಭಂಡಾರಿ ವಾರ್ತಾ ತಂಡದ ಹಾರೈಕೆ.