ಸುಮಾರು ಎಂಟು ವರ್ಷಗಳ ನಂತರ, ಸ್ಮಿತಾ ಮಂಗಳೂರಿಗೆ ಬಂದಾಗ ಸಂಬಂಧಿಕರ ಮಿಶ್ರ ಪ್ರತಿಕ್ರಿಯೆಯನ್ನು ಎದುರಿಸಬೇಕಾಯಿತು. ಸಂಬಂಧಿಕರೆಲ್ಲಾ ಸುತ್ತ ಕುಳಿತು ವಿಚಾರಣೆ ನಡೆಸುತ್ತಿದ್ದರೆ ಆಕೆ ತನ್ನ ಕಳೆದ 8 ವರ್ಷಗಳ ಪರದಾಟವನ್ನು ನೆನೆಯುತ್ತಿದ್ದಳು. ಆಕೆಗೆ ಆಗ 21 ರ ಯೌವನ. ತನ್ನ ಡಿಗ್ರಿ ವಿಧ್ಯಾಭ್ಯಾಸ ಮುಗಿಸಿ ಮುಂಬಯಿನ ಖಾಸಗಿ ಬ್ಯಾಂಕ್ ಒಂದರಲ್ಲಿ ಕೆಲಸಕ್ಕೆ ಸೇರಿದ್ದಳು. ಆ ಸಮಯದಲ್ಲಿ ಅಲ್ಲೇ ಕೆಲಸ ಮಾಡುತ್ತಿದ್ದ ಮರಾಠಿ ಹುಡುಗನಿಗೂ ಈಕೆಗೂ ಪ್ರೇಮಾಂಕುರವಾಗಿತ್ತು.ಆಕೆಯ ತಾಯಿ ಜಾತಿ ವಿಷಯದಲ್ಲಿ ಕಟ್ಟು-ನಿಟ್ಟು ಮತ್ತು ಪ್ರೇಮ ವಿವಾಹದ ಕಟ್ಟಾ ವಿರೋಧಿ. ತನ್ನ ತಾಯಿಯಲ್ಲಿ ತನ್ನ ಅಂತರ್ಜಾತೀಯ ಪ್ರೀತಿಯ ಬಗ್ಗೆ ಹೇಳಿದರೆ ಖಂಡಿತ ಆಕೆಗೆ ನ್ಯಾಯ ಸಿಗುವುದಿಲ್ಲ ಎಂಬ ನಂಬಿಕೆ ಅವಳಿಗಿತ್ತು. ಅಜ್ಜಿಯ ಊರಿನಲ್ಲಿ ಪ್ರತಿ ವರ್ಷ ಜರುಗುವ ಜಾತ್ರಾ ಮಹೋತ್ಸವಕ್ಕೆ ಮುಂಬಯಿಂದ ಅವಳ ತಂದೆ ತಾಯಿ ಮತ್ತು ಅಣ್ಣ ಹೊರಟಿದ್ದರು. ಆಕೆಗೆ ಬ್ಯಾಂಕ್ ನಲ್ಲಿ ಮುಖ್ಯ ಕೆಲಸ ಇರುವ ಕಾರಣ ಆಕೆ ಮರುದಿನ ಬರುವುದಾಗಿ ತಿಳಿಸಿದ್ದಳು.
ಅವಳ ಮನೆಯವರೆಲ್ಲಾ ಮಂಗಳೂರಿಗೆ ತಲುಪಿದ ಮರುದಿನ ಸ್ಮಿತಾ ಊರಿಗೆ ಬರದಾಗ ಗಾಬರಿಗೊಂಡಿದ್ದರು. ಆಕೆಯನ್ನು ಸಂಪರ್ಕಿಸಲು ಯತ್ನಿಸಿದಾಗ ಮೊಬೈಲ್ ಸ್ವಿಚ್ಡ್ ಆಫ್ ಆಗಿತ್ತು. 2 ದಿನ ಕಳೆದು ಅವರಿಗೆ ಆಕೆಯ ಸುದ್ದಿ ತಲುಪುತ್ತದೆ..ಆಕೆ ತಾನು ಪ್ರೀತಿಸಿದ ಸಹೋದ್ಯೋಗಿಯ ಜೊತೆಗೆ ಓಡಿ ಹೋಗಿ ರಿಜಿಸ್ಟ್ರಾರ್ ಮದುವೆ ಆಗಿದ್ದಳು.ಈ ಸುದ್ದಿ ಅವಳ ಕುಟುಂಬದ ಪೂರ್ತಿ ಕಾಡ್ಗಿಚ್ಚಿನಂತೆ ಹಬ್ಬಿ ಗಲಭೆ ಎಬ್ಬಿಸಿತ್ತು..ಈ ಘಟನೆಯಿಂದ ಸಿಟ್ಟಿಗೆದ್ದ ತಾಯಿ ಮಗಳಿಗೆ ಶಾಪ ಹಾಕುತ್ತಾ ತನ್ನ ಸಂಬಂಧವನ್ನು ಕಡಿದುಕೊಂಡಳು.ತನ್ನ ನಿರ್ಧಾರದ ಬಗ್ಗೆ ಧೃಡವಾಗಿದ್ದ ಆಕೆ , ಆತನೊಂದಿಗೆ ಮುಂಬಯಿನಲ್ಲೇ ಬಾಡಿಗೆ ಮನೆಯಲ್ಲಿ ತನ್ನ ಜೀವನ ನಡೆಸುತ್ತಾಳೆ. ಮುಂದಿನ ವರ್ಷ ಒಂದು ಮುದ್ದಾದ ಗಂಡು ಮಗುವಿಗೆ ಜನ್ಮ ಕೊಡುತ್ತಾಳೆ. ಅವಳ ಜೀವನದಲ್ಲಿ ಎಲ್ಲವೂ ಚೆನ್ನಾಗಿದೆ ಎನ್ನುವ ಸಮಯದಲ್ಲಿ ಒಂದು ಆಘಾತ ಎದುರಾಗುತ್ತದೆ. ತನ್ನ ಗಂಡನಿಗೆ ಬ್ರೈನ್ ಟ್ಯೂಮರ್ ನ ಕೊನೆಯ ಹಂತ ಎಂಬ ಕಹಿ ಸತ್ಯ. ಇದೆಂತಹ ಹಾಳು ಹಣೆಬರಹ ಎಂದು ದುಃಖಿಸುತ್ತಾ ಆಕೆ ಕುಸಿದು ಹೋಗುತ್ತಾಳೆ.ಮುಂದಿನ ದಿನಗಳಲ್ಲಿ ತನ್ನ ಮಗು ಮತ್ತು ಅನಾರೋಗಿ ಗಂಡನ ಸೇವೆಗೆ ತನ್ನನ್ನು ಮುಡಿಪಾಗಿಡುತ್ತಾಳೆ. ಸಂಬಂಧಿಕರು, ಮನೆಯವರು ಯಾರೂ ಆಕೆಯ ಸಹಾಯಕ್ಕೆ ಹೋಗುವುದಿಲ್ಲ. ಒಂದು ದಿನ ತೀವ್ರ ಅನಾರೋಗ್ಯದಿಂದ ಆತ ಕೊನೆಯುಸಿರೆಳೆಯುತ್ತಾನೆ. “ಆಕೆ ಮಾಡಿದ ತಪ್ಪು ಕೆಲಸಕ್ಕೆ ಸರಿಯಾದ ಶಿಕ್ಷೆಯಾಗಿದೆ.” ಎಂದು ಸಂಬಂಧಿಕರೆಲ್ಲಾ ಮಾತಾಡಿಕೊಳ್ಳುತ್ತಾರೆ. ಜೀವನದಲ್ಲಿ ಆಗಲೇ ಎಷ್ಟೋ ಕಷ್ಟಗಳನ್ನು ಎದುರಿಸಿದ್ದ ಆಕೆ ಈಗ ಬಲಿಷ್ಟ ಶಕ್ತಿಯಾಗಿದ್ದಳು. ಇದೆಲ್ಲದರಿಂದ ಧೃತಿಗೆಡದೆ ತನ್ನ ಉನ್ನತ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಿ ಅದೇ ಬ್ಯಾಂಕ್ ನಲ್ಲಿ Asst. Manager ಆಗಿ ಭಡ್ತಿ ಪಡೆಯುತ್ತಾಳೆ.ಅಂದು ಹೀಯಾಳಿಸಿದ ಸಂಬಂಧಿಕರು ಇಂದು ಅವಳ ಸಾಧನೆಯನ್ನು ನೋಡಿ ದಂಗಾಗಿದ್ದರು.ಅಂದು ಅವಮಾನಗಳನ್ನು ಎದುರಿಸಿದ ಹೆಣ್ಣು ಮಗಳು ಇಂದು ಇತರ ಹೆಣ್ಣು ಮಕ್ಕಳಿಗೆ ಮಾದರಿಯಾಗುವಂತಹ ಕೆಲಸ ಮಾಡಿದ್ದಳು. ಆಕೆಯನ್ನು ದೂರ ಇಟ್ಟವರು ಈಗ ಒತ್ತಾಯ ಮಾಡಿ ಊರಿಗೆ ಕರೆದಿದ್ದರು.
ತನ್ನ ಭೂತಕಾಲದ ದಿನಗಳನ್ನೆಲ್ಲಾ ಒಮ್ಮೆ ನೆನೆದು ಆಕೆ ನಗುತ್ತಾ ಮೌನಿಯಾಗುತ್ತಾಳೆ. ಈಗ ಆಕೆಯ ಮನೆಯವರು ಮತ್ತು ಸಂಬಂಧಿಕರು ಆಕೆಗೆ ಮತ್ತೊಂದು ಮದುವೆಯಾಗುವಂತೆ ಸೂಚಿಸುತ್ತಿದ್ದರು. ಆಕೆಯ ತಾಯಿ ಹೇಳುತ್ತಾರೆ “ ಜಾತಿ ಯಾವುದಾದರೂ ಪರವಾಗಿಲ್ಲ ನಿನಗೆ ಇಷ್ಟ ಅನಿಸಿದರೆ ಮದುವೆಯಾಗಿಬಿಡು “ ಎಂದು. ಇದನೆಲ್ಲಾ ಕೇಳಿದ ಆಕೆ ತನ್ನ ಮನಸಲ್ಲೇ ಯೋಚಿಸುತ್ತಾಳೆ. ‘ ಅಂದು ಜಾತಿ-ಪ್ರೀತಿ ಎಂದು ವರ್ತಿಸದಿದ್ದರೆ , ಇಂದು ನಾನು ಇಷ್ಟೆಲ್ಲಾ ನೋವು ಒಬ್ಬಳೇ ಅನುಭವಿಸಬೇಕಾಗಿ ಬರುತ್ತಿರಲಿಲ್ಲ.” ಇದೆಲ್ಲಾ ಅವರ ಮುಂದೆ ಹೇಳಲಾಗದೆ ನೀಲಿ ಆಕಾಶ ನೋಡುತ್ತಾ ಸುಮ್ಮನೆ ಕುಳಿತಿದ್ದಳು.
✍️ ರಾಕೇಶ್ ಭಂಡಾರಿ ಕುಬೆವೂರು (ಆರ್.ಬಿ.ಕೆ)
ಲೇಖಕರ ಕಿರು ಪರಿಚಯ
“ಅನುಗೃಹ” ಮನೆ
ಕುಬೆವೂರು , ಮುಲ್ಕಿ
ಪ್ರಸ್ತುತ ಸಂತ ಅಲೋಶಿಯಸ್ ಡಿಗ್ರಿ ಕಾಲೇಜು ಮಂಗಳೂರಿನಲ್ಲಿ Asst Professor ಆಗಿ ಕೆಲಸ ಮಾಡುತ್ತಿದ್ದಾರೆ.