January 18, 2025
rnsu
      ಕನ್ನಡ ಚಿತ್ರರಂಗದ ಹಿರಿಯ ನಟ ,ಪಂಚಭಾಷಾ ನಟ,ನಿರ್ಮಾಪಕ, ಗಾಯಕ ಮತ್ತು ಕಿರುತೆರೆ ನಟ ಆರ್.ಎನ್. ಸುದರ್ಶನ್ ಇಂದು ಮಧ್ಯಾಹ್ನ ನಮ್ಮನ್ನೆಲ್ಲಾ ಬಿಟ್ಟಗಲಿದ್ದಾರೆ. ಕೆಲವು ದಿನಗಳ ಹಿಂದೆ ಮನೆಯಲ್ಲಿ ಕಾಲುಜಾರಿ ಬಿದ್ದು ಬಲಗಾಲಿನ ಮೂಳೆಮುರಿತಕ್ಕೊಳಗಾಗಿ ಬೆಂಗಳೂರಿನ ಸಾಗರ್ ಆಸ್ಪತ್ರೆ ಸೇರಿದ್ದ ಹಿರಿಯ ಜೀವ, ಚಿಕಿತ್ಸೆಗೆ ಸ್ಪಂದಿಸದೆ ಇಂದು ಮಧ್ಯಾಹ್ನ ಕೊನೆಯುಸಿರೆಳೆದರು.ಅವರಿಗೆ 78 ವರ್ಷ ವಯಸ್ಸಾಗಿತ್ತು.
      ಇವರು ಡಾ||ರಾಜ್ ಕುಮಾರ್ ಕುಟುಂಬಕ್ಕೆ ತುಂಬಾ ಆತ್ಮೀಯರಾಗಿದ್ದ ಖ್ಯಾತ ಕನ್ನಡ ರಂಗಭೂಮಿ ಕಲಾವಿದ, ನಿರ್ದೇಶಕ, ನಟ,ಚಿತ್ರಸಾಹಿತಿ ಆರ್,ನಾಗೇಂದ್ರರಾಯರ ಪುತ್ರ ಹಾಗೂ ಕನ್ನಡ ಚಿತ್ರರಂಗದ ದಾಖಲೆಯ ಗೀತರಚನೆಕಾರ ಆರ್.ಎನ್. ಜಯಗೋಪಾಲ್ ರವರ ಸಹೋದರರಾಗಿದ್ದರು.
 
 
      ಇವರು 1961 ರಲ್ಲಿ ತೆರೆಕಂಡ ವಿಜಯನಗರದ ವೀರಪುತ್ರ ಚಿತ್ರದ ಮೂಲಕ ನಾಯಕ ನಟರಾಗಿ ಚಿತ್ರರಂಗ ಪ್ರವೇಶಿಸಿ, ಸರಿಸುಮಾರು 60 ಚಿತ್ರಗಳಲ್ಲಿ ನಾಯಕನಟರಾಗಿ ಅಭಿನಯಿಸಿ, ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಯ ಸುಮಾರು 200 ಕ್ಕೂ ಹೆಚ್ಚು ಚಿತ್ರಗಳಲ್ಲಿ ಖಳನಾಯಕ ಹಾಗು ಪೋಷಕ ಪಾತ್ರಗಳಲ್ಲಿ ಅಭಿನಯಿಸಿ ಚಿತ್ರರಸಿಕರಿಂದ ಅಪಾರ ಮನ್ನಣೆಯನ್ನು ಗಳಿಸಿದ್ದರು.ನಟನೆಯ ಜೊತೆಜೊತೆಗೆ ಗಾಯನವನ್ನು ಹವ್ಯಾಸವಾಗಿಸಿಕೊಂಡಿದ್ದ ಅವರು ಹಲವಾರು ಸುಮಧುರ ಗೀತೆಗಳನ್ನು ಹಾಡಿದ್ದರು. 1975ರಲ್ಲಿ ತೆರೆಕಂಡ ಶುಭಮಂಗಳ ಚಿತ್ರದ ಹೂವೊಂದು ಬಳಿಬಂದು ತಾಕಿತು ಎನ್ನೆದೆಯಾ... ಗೀತೆ ಅವರ ಸುಶ್ರಾವ್ಯ ಕಂಠಸಿರಿಗೆ ಸಾಕ್ಷಿಯಾಗಿದೆ.
      80ರ ದಶಕದಲ್ಲಿ ಕನ್ನಡ ಚಿತ್ರರಂಗ ತನ್ನ ಕಾರ್ಯವ್ಯಾಪ್ತಿಯನ್ನು ಮದ್ರಾಸಿನಿಂದ ಬೆಂಗಳೂರಿಗೆ ಸ್ಥಳಾಂತರಿಸಿಕೊಂಡಾಗ ಯಾರ ಬುದ್ದಿಮಾತಿಗೂ ಕಿವಿಗೊಡದೇ ತನ್ನ ಹುಟ್ಟೂರು ಎಂಬ ಕಾರಣ ನೀಡಿ ಮದ್ರಾಸ್ ತೊರೆದು ಅವರು ಬೆಂಗಳೂರಿಗೆ ಬರಲೊಪ್ಪಲಿಲ್ಲ.ಅಪಾರ ಪ್ರತಿಭಾವಂತರಾಗಿದ್ದ ಅವರು ಈ ಕಾರಣದಿಂದಾಗಿ ಹಲವಾರು ಅವಕಾಶಗಳನ್ನು ಕಳೆದುಕೊಳ್ಳಬೇಕಾಯಿತು. ಆ ಅವದಿಯಲ್ಲಿ ಅವರು ದಕ್ಷಿಣ ಭಾರತದ ಬೇರೆ ಬೇರೆ ಭಾಷೆಯ ಚಿತ್ರಗಳಲ್ಲಿ ಅಭಿನಯಿಸಿದರೂ ,ಹೇಳಿಕೊಳ್ಳುವಂತಹ ಹೆಸರನ್ನೇನೂ ಅವರು ಗಳಿಸಲಿಲ್ಲ.ಕೆಲವೇ ವರ್ಷಗಳ ಹಿಂದೆ ಆತ್ಮೀಯರ ಕರೆಗೆ ಓಗೊಟ್ಟು ಅನಿವಾರ್ಯವಾಗಿ ಬೆಂಗಳೂರಿಗೆ ಬಂದು ನೆಲೆಸಿದರು.ಬಂದವರೇ ಸೂಪರ್, ಪುಂಗಿದಾಸ,ಮಠ ಮುಂತಾದ ಚಿತ್ರಗಳಲ್ಲಿ ನಟಿಸಿ ತಮ್ಮ ಸೆಕೆಂಡ್ ಇನ್ನಿಂಗ್ಸ್ ಆರಂಬಿಸಿದ್ದರು.ಕಿರುತೆರೆಯ ಜನಪ್ರಿಯ ಧಾರಾವಾಹಿ ಅಗ್ನಿಸಾಕ್ಷಿ ಯಲ್ಲಿ ಸ್ವಾಮೀಜಿಯಾಗಿ ನಟಿಸಿ ಮನೆಮನೆಮಾತಾಗಿದ್ದರು.
      ಆರೂವರೆ ಅಡಿಯ ಅಜಾನುಬಾಹು ವ್ಯಕ್ತಿ ಚಕ್ರವರ್ತಿ, ಖಳನಾಯಕ, ಪೋಲಿಸ್ ಅಧಿಕಾರಿ, ಲಾಯರ್,ಡಾಕ್ಟರ್ ಹೀಗೆ ಹಲವಾರು ಪಾತ್ರಗಳಲ್ಲಿ ಚಿತ್ರರಸಿಕರನ್ನು ರಂಜಿಸಿದ ನಮ್ಮೆಲ್ಲರ ಮೆಚ್ಚಿನ ಸ್ಪುರದ್ರೂಪಿ ನಟ ಆರ್.ಎನ್. ಸುದರ್ಶನ್ ಇನ್ನು ನೆನಪು ಮಾತ್ರ. ಭಗವಂತನು ಅವರ ಆತ್ಮಕ್ಕೆ ಸಧ್ಗತಿ ನೀಡಲಿ. ಅವರ ಕುಟುಂಬಕ್ಕೆ, ಅವರ ಆತ್ಮೀಯರಿಗೆ ಅವರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತನು ದಯಪಾಲಿಸಲಿ.
ಇದು ಭಂಡಾರಿವಾರ್ತೆ ತಂಡದ ಅಶ್ರುತರ್ಪಣ…
 
ಭಾಸ್ಕರ್ ಭಂಡಾರಿ.ಸಿ.ಆರ್. ಶಿರಾಳಕೊಪ್ಪ

1 thought on “ವಿರಮಿಸಿದ ವಿಜಯನಗರದ ವೀರಪುತ್ರ

Leave a Reply

Your email address will not be published. Required fields are marked *