November 22, 2024
IMG-20180908-WA0034
ದಕ್ಷಿಣ ಕನ್ನಡ ಜಿಲ್ಲೆಯ ಜನಪ್ರಿಯ ಪತ್ರಿಕೆ ಸುಳ್ಯದ ಸುದ್ದಿ ಬಿಡುಗಡೆ ಯ ಪ್ರಧಾನ ವರದಿಗಾರರಾದ ಶ್ರೀ ಹರೀಶ್ ಬಂಟ್ವಾಳ ರಿಗೆ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಮಾನ್ಯತೆ ಪಡೆದ ಸಂಪಾದಕರ ಮತ್ತು ವರದಿಗಾರರ ಸಂಘ ದ 2018 ನೇ ಸಾಲಿನ ವಿಶೇಷ ಪತ್ರಿಕೋದ್ಯಮ ಪ್ರಶಸ್ತಿ ಲಭಿಸಿದೆ.
 
ಕಳೆದ ಮೂವತ್ತೊಂದು ವರ್ಷಗಳಿಂದ ಸುದ್ದಿ ಬಿಡುಗಡೆ ಪತ್ರಿಕೆಯ ವರದಿಗಾರರಾಗಿ,ಪ್ರಧಾನ ವರದಿಗಾರರಾಗಿ,ಹತ್ತು ವರ್ಷಗಳ ಕಾಲ ಪತ್ರಿಕೆಯ ಸಂಪಾದಕರಾಗಿ ಸೇವೆ ಸಲ್ಲಿಸಿ ಯಾವುದೇ ಸ್ಥಾನಮಾನಕ್ಕೆ ಹೆಚ್ಚು ಪ್ರಾಧಾನ್ಯತೆ ನೀಡದೆ ಕರ್ತವ್ಯವೇ ದೇವರೆಂದು ತಿಳಿದು ಮತ್ತದೇ ಪತ್ರಿಕೆಯಲ್ಲಿ ಪ್ರಧಾನ ವರದಿಗಾರರಾಗಿ ತಮ್ಮ ಸೇವೆಯನ್ನು ಮುಂದುವರಿಸಿ ಪತ್ರಿಕೋದ್ಯಮದ ಜೊತೆ ಜೊತೆಗೆ ಸಾಮಾಜಿಕ ಕ್ಷೇತ್ರದಲ್ಲಿ ಕ್ರಿಯಾಶೀಲರಾಗಿದ್ದು ಸಂಘ ಸಂಸ್ಥೆಗಳು,ಸಂಘಟನೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಜನಸ್ನೇಹಿಯಾಗಿ ಬದುಕು ಸಾಗಿಸುತ್ತಿರುವ ಹರೀಶ್ ಬಂಟ್ವಾಳರಿಗೆ ವಿಶೇಷ ಪತ್ರಿಕೋದ್ಯಮ ಪ್ರಶಸ್ತಿ ಒಲಿದು ಬಂದಿರುವುದು ಅವರ ಅಪಾರ ಅಭಿಮಾನಿಗಳಿಗೆ,ಸ್ನೇಹಿತರಿಗೆ,ಪತ್ರಿಕೆಯ ಓದುಗರಿಗೆ, ಪತ್ರಿಕೋದ್ಯಮ ಮಿತ್ರರಿಗೆ ಮತ್ತು ಅವರ ಕುಟುಂಬದವರಿಗೆ ಅತೀವ ಆನಂದವನ್ನುಂಟುಮಾಡಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ನರಿಕೊಂಬು ಗ್ರಾಮದ ಕಲ್ಯಾರು ಮನೆ ದಿವಂಗತ ಆನಂದ ಭಂಡಾರಿ ಮತ್ತು ದಿವಂಗತ ಅಪ್ಪಿ ಆನಂದ ಭಂಡಾರಿ ದಂಪತಿಯ ಮಗನಾದ ಇವರು ಎಸ್ ಎಸ್ ಎಲ್ ಸಿ ಪೂರೈಸಿದವರು ಮಂಗಳೂರು ಮತ್ತು ಉಡುಪಿಯಲ್ಲಿ ಉದ್ಯೋಗ ಮಾಡಿಕೊಂಡಿದ್ದರು.ಮಂಗಳೂರಿನ
ಅಮೃತ ಪತ್ರಿಕೆ ಯ ಪ್ರೆಸ್ ನಲ್ಲಿ ಅಕ್ಷರಜೋಡಣೆ ವಿಭಾಗ,ಮುದ್ರಣ ವಿಭಾಗ ಮತ್ತು ಪತ್ರಿಕೆಯ ಮಾರಾಟ ವಿಭಾಗಗಳಲ್ಲಿ ಕೆಲಸ ಮಾಡುತ್ತಾ ಪತ್ರಿಕೋದ್ಯಮದ ಪ್ರಾಥಮಿಕ ಜ್ಞಾನವನ್ನು ಸಂಪಾದಿಸಿಕೊಂಡರು.ಆ ಸಮಯದಲ್ಲಿ ಮುಂಗಾರು ಪತ್ರಿಕೆ ಯ ವಾಚಕರವಾಣಿ ವಿಭಾಗಕ್ಕೆ ನಾಗರಿಕರ ಬೇಡಿಕೆಗಳ ಬಗ್ಗೆ,ಕುಂದು ಕೊರತೆಗಳ ಬಗ್ಗೆ ಬರೆಯುತ್ತಾ ಬರವಣಿಗೆಯೆಡೆಗೆ ಆಕರ್ಷಿತರಾದರು.ಉದ್ಯೋಗನಿಮಿತ್ತ ಉಡುಪಿಯಿಂದ ಬಂಟ್ವಾಳಕ್ಕೆ ಬಂದ ಹರೀಶ್ 1998 ರಲ್ಲಿ ಸುದ್ದಿ ಬಿಡುಗಡೆ ಪತ್ರಿಕೆಯ ಸುಳ್ಯ ತಾಲೂಕಿನ ವರದಿಗಾರರಾಗಿ ತಮ್ಮ ಪತ್ರಕರ್ತ ಜೀವನವನ್ನು ಅಧಿಕೃತವಾಗಿ ಆರಂಭಿಸಿದರು. 
ಎಂಬತ್ತರ ದಶಕದಲ್ಲಿ ವಸ್ತುನಿಷ್ಠ ಮತ್ತು ಮೊನಚಾದ ಬರಹಗಳಿಂದ ಪತ್ರಿಕೋದ್ಯಮದಲ್ಲಿ ಬಿರುಗಾಳಿ ಎಬ್ಬಿಸಿದ್ದ ಪಿ.ಲಂಕೇಶ್ ರ ಪ್ರಭಾವಕ್ಕೆ ಒಳಗಾಗಿ ಅವರ ಮತ್ತು ಲಂಕೇಶ್ ಪತ್ರಿಕೆಯ ಅಭಿಮಾನಿಯಾಗಿದ್ದ ಹರೀಶ್ ಬಂಟ್ವಾಳರು ಲಂಕೇಶರವರು ಸ್ಥಾಪಿಸಿದಕರ್ನಾಟಕ ಪ್ರಗತಿ ರಂಗ ದ ಸುಳ್ಯ ಮತ್ತು ಬಂಟ್ವಾಳ ತಾಲೂಕಿನ ಸಂಚಾಲಕರಾಗಿ 1989 ರಲ್ಲಿ ಸಾರ್ವಜನಿಕ ಸಭೆಗಳನ್ನು ಸಂಘಟಿಸಿದರು.

ಸುಳ್ಯದಿಂದ ವರ್ಗವಾಗಿ ಬೆಳ್ತಂಗಡಿಗೆ ಬಂದವರು ಅಲ್ಲಿದ್ದ ಎರಡು ವರ್ಷಗಳಲ್ಲಿ
ಬೆಳ್ತಂಗಡಿ ಪತ್ರಕರ್ತರ ಸಂಘ ಕ್ಕೆ ಚಾಲನೆ ನೀಡಿ,ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದರು.1991 ರಲ್ಲಿ ಪುನಃ ಸುಳ್ಯ ಕ್ಕೆ ವರ್ಗಾವಣೆಗೊಂಡು ಬಂದವರು ವರದಿಗಾರರಾಗಿ ಕೆಲಸ ಆರಂಭಿಸಿ,ಸುದ್ದಿ ಬಿಡುಗಡೆ ಪತ್ರಿಕೆಯ ಸಂಸ್ಥಾಪಕರೂ, ಸಂಪಾದಕರೂ ಆದ ಡಾ|| ಯು.ಪಿ.ಶಿವಾನಂದರ ಅನುಪಸ್ಥಿತಿಯಲ್ಲಿ 1994 ರಿಂದ 2004 ರ ಅವದಿಗೆ ಪತ್ರಿಕೆಯ ಸಂಪಾದಕರಾಗಿ ಯಶಸ್ವಿಯಾಗಿ ಕಾರ್ಯನಿರ್ವಹಿಸಿದರು.2004 ರಿಂದ ಯು.ಪಿ ಶಿವಾನಂದರಿಗೆ ಸಂಪಾದಕ ಹುದ್ದೆಯನ್ನು ಬಿಟ್ಟುಕೊಟ್ಟು ತಾವು ಪ್ರಧಾನ ವರದಿಗಾರರಾಗಿ ಮುಂದುವರೆದರು.
 1996 ರಲ್ಲಿ ಪತ್ರಿಕೆಯ ಮೇಲೆ ಮತ್ತು ತಮ್ಮ ಮೇಲೆ ವೈಯುಕ್ತಿಕ ಹಲ್ಲೆಗಳಾದಾಗಲೂ ಎದೆಗುಂದದೆ ಪತ್ರಿಕೆಯ ಪರವಾಗಿ ಮತ್ತು ಯು.ಪಿ.ಶಿವಾನಂದರ ಜನಪರ ಧ್ವನಿಗೆ ಬೆಂಬಲವಾಗಿ ನಿಂತರು.1996 ರ ಲೋಕಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸುಳ್ಯ ಕ್ಷೇತ್ರದ ಮೀಸಲಾತಿ ಬದಲಾವಣೆಗಾಗಿ ಮತ್ತು ರಾಜಕೀಯ ಗೂಂಡಾಗಿರಿಯ ವಿರುದ್ಧ ಜನಾಭಿಪ್ರಾಯ ರೂಪಿಸಲು ಪ್ರಯತ್ನಿಸಿದರು.

ಸುಳ್ಯದಲ್ಲಿ ಪತ್ರಕರ್ತರ ಸಂಘ ಸ್ಥಾಪಿಸಿ,ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಎರಡು ಅವದಿಗೆ ಕಾರ್ಯನಿರ್ವಹಿಸಿದರು.ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಗ್ರಾಮಾಂತರ ಕಾರ್ಯದರ್ಶಿಯಾಗಿ ಎರಡು ಅವದಿಗೆ ಸೇವೆ ಸಲ್ಲಿಸಿದರು.ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಒಂದು ಅವದಿಗೆ ಸೇವೆ ಸಲ್ಲಿಸಿದರು.

ಪತ್ರಕರ್ತರಾಗಿ ಪತ್ರಿಕೋದ್ಯಮದಲ್ಲಿ ಬಿಡುವಿಲ್ಲದ ಕಾರ್ಯಕ್ರಮಗಳ ನಡುವೆಯೂ ಭಂಡಾರಿ ಸಮಾಜದವರಾಗಿ ತಮ್ಮ ಸಮಾಜಕ್ಕೂ ಕಿಂಚಿತ್ ಸೇವೆ ಸಲ್ಲಿಸುವ ಉದ್ದೇಶದಿಂದ ಸುಳ್ಯ ತಾಲೂಕು ಸವಿತಾ ಸಮಾಜದೊಂದಿಗೆ ನಿಕಟ ಸಂಪರ್ಕದಲ್ಲಿದ್ದು ಸುಳ್ಯ ತಾಲೂಕು ಸವಿತಾ ಸಮಾಜದ ಅಧ್ಯಕ್ಷರಾಗಿ ಮೂರು ವರ್ಷಗಳ ಕಾಲ ದುಡಿದು,ನಂತರದ ಮೂರು ವರ್ಷಗಳ ಕಾಲ ಗೌರವಾಧ್ಯಕ್ಷರಾಗಿ ಸಮಾಜಕ್ಕೆ ಅಮೂಲ್ಯ ಸಲಹೆ ಸೂಚನೆಗಳನ್ನು ನೀಡುತ್ತಾ ಬಂದರು.ದಕ್ಷಿಣ ಕನ್ನಡ ಜಿಲ್ಲಾ ಸವಿತಾ ಸಮಾಜದ ಪ್ರಧಾನ ಕಾರ್ಯದರ್ಶಿಯಾಗಿ ಕಳೆದ ಎಂಟು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. 
ಜಿಲ್ಲಾ ಮಟ್ಟದಲ್ಲಿ ಸವಿತಾ ಸೌಹಾರ್ದ ಸಹಕಾರಿ ಬ್ಯಾಂಕ್ ನ್ನು ಐದು ವರ್ಷಗಳ ಹಿಂದೆ ಸ್ಥಾಪಿಸಿ, ಅದರ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

2016 ರ ಡಿಸೆಂಬರ್ 13 ರಂದು ಸುಳ್ಯ,ಪುತ್ತೂರು,ಕಾಸರಗೋಡು ಮತ್ತು ಮಡಿಕೇರಿ ತಾಲೂಕುಗಳನ್ನೊಳಗೊಂಡ ಸುಳ್ಯ ವಿಭಾಗ ಮಟ್ಟದ ಸವಿತಾ ಸಮಾವೇಶವನ್ನು ಯಶಸ್ವಿಯಾಗಿ ಮತ್ತು ಅದ್ಧೂರಿಯಾಗಿ ತಮ್ಮ ಅಧ್ಯಕ್ಷತೆಯಲ್ಲಿ ಆಚರಿಸಿ,ಸಮಾಜದ ಕೀರ್ತಿ ಪತಾಕೆಯನ್ನು ಹಾರಿಸಿರುವುದು ಅವರ ಸಂಘಟನಾ ಚತುರತೆಗೆ ಹಿಡಿದ ಕೈಗನ್ನಡಿಯಾಗಿದೆ.

 

ಹೀಗೆ ಪತ್ರಕರ್ತರಾಗಿ,ಸಮಾಜ ಸೇವಕರಾಗಿ ಸಮಾಜಮುಖಿ ಕಾರ್ಯಗಳನ್ನು ಮಾಡಿಕೊಂಡಿರುವ ಶ್ರೀ ಹರೀಶ್ ಬಂಟ್ವಾಳರಿಗೆ ಹಲವಾರು ಪ್ರಶಸ್ತಿ ಪುರಸ್ಕಾರಗಳು ಒಲಿದು ಬಂದಿವೆ.ಅವುಗಳಲ್ಲಿ ಪ್ರಮುಖವಾದವುಗಳೆಂದರೆ…

  • 2010 ರಲ್ಲಿ ಸುದ್ದಿ ಬಿಡುಗಡೆ ಪತ್ರಿಕೆಗೆ ಇಪ್ಪತ್ತೈದು ವರ್ಷ ತುಂಬಿದ ಸಂದರ್ಭದಲ್ಲಿ “ಸುದ್ದಿ 25 ಸುಳ್ಯ ಹಬ್ಬ” ವನ್ನು ಸಂಘಟಿಸಿ ಸತತ ಒಂದು ತಿಂಗಳುಗಳ ಕಾಲ ನಿರಂತರವಾಗಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿ ಅದ್ಧೂರಿಯಾಗಿ ಬೆಳ್ಳಿಹಬ್ಬದ ಆಚರಣೆಗಾಗಿ ಅಹರ್ನಿಶಿ ದುಡಿದ ಇವರ ಶ್ರಮವನ್ನು ಗುರುತಿಸಿ ಬೆಳ್ಳಿಹಬ್ಬ ಸಂಘಟನಾ ಸಮಿತಿಯಿಂದ ಇವರಿಗೆ ಸನ್ಮಾನ ಮಾಡಲಾಯಿತು.
  • 2005 ರಲ್ಲಿ ಸುಳ್ಯ ಪಯಸ್ವಿನಿ ಜೇಸಿಸ್ ನವರು “ಪಯಸ್ವಿನಿ ಶ್ರೀ” ಪ್ರಶಸ್ತಿ ನೀಡಿ ಸನ್ಮಾನಿಸಿದರು.
  • 2006 ರಲ್ಲಿ ಮರ್ಕಂಜ ಮಿನಂಗೂರು ದೇವಸ್ಥಾನದ ವಸಂತೋತ್ಸವ ಸಮಿತಿಯವರು “ವಸಂತೋತ್ಸವ ಸನ್ಮಾನ” ನೀಡಿ ಗೌರವಿಸಿದರು.
  • 2007 ರಲ್ಲಿ ಕೋಟೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಡೆದ ಗಡಿನಾಡ ಸಾಹಿತ್ಯ ಸಮ್ಮೇಳನದಲ್ಲಿ “ಗಡಿನಾಡ ಸಿರಿ” ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
  • 2008 ರಲ್ಲಿ ಬೆಳ್ಳಾರೆಯಲ್ಲಿ ನಡೆದ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ “ಕನ್ನಡ ಸಿರಿ” ಪ್ರಶಸ್ತಿ ಪ್ರದಾನ ಮಾಡಲಾಯಿತು.
  • 2012 ರಲ್ಲಿ ಗುತ್ತಿಗಾರು ಲಯನ್ಸ್ ಕ್ಲಬ್ ನವರಿಂದ ಸನ್ಮಾನ.
  • 2013 ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಅತ್ಯುತ್ತಮ ಗ್ರಾಮೀಣ ಪತ್ರಕರ್ತನೆಂದು ಗುರುತಿಸಿ ದಕ್ಷಿಣ ಕನ್ನಡ ಜಿಲ್ಲಾಡಳಿತದ ವತಿಯಿಂದ ” ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ” ನೀಡಿ ಗೌರವಿಸಲಾಯಿತು.
  • 2013 ರಲ್ಲಿ KVG ಸುಳ್ಯ ಹಬ್ಬ ಸಮಿತಿಯಿಂದ “ನಾಗರಿಕ ಸಮ್ಮಾನ” ಪ್ರಶಸ್ತಿ ನೀಡಲಾಯಿತು.

 

ಶ್ರೀ ಹರೀಶ್ ಬಂಟ್ವಾಳರವರು ಪತ್ರಕರ್ತರಾಗಿ ಮಾತ್ರವಲ್ಲದೆ ತುಳು ಸಾಹಿತ್ಯದಲ್ಲಿಯೂ ಕೈಯಾಡಿಸಿದ್ದಾರೆ.ಹಲವಾರು ತುಳು ಭಾಷೆಯ ಕವನಗಳನ್ನು ರಚಿಸಿದ್ದಾರೆ.ಬೆಳ್ಳಾರೆಯಲ್ಲಿ ತುಳು ಸಾಹಿತ್ಯ ಅಕಾಡೆಮಿ ವತಿಯಿಂದ ನಡೆದ ತುಳು ಮಿನದನ ದಲ್ಲಿ ಸ್ವರಚಿತ ತುಳು ಕವಿತೆಗಳನ್ನು ವಾಚಿಸಿದ್ದಾರೆ.ಸವಣೂರಿನಲ್ಲಿ ನಡೆದ ಅಖಿಲ ಭಾರತ ತುಳು ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯಲ್ಲಿ ತುಳು ಕವಿತೆಗಳನ್ನು ವಾಚಿಸಿ ಸೈ ಎನಿಸಿಕೊಂಡಿದ್ದಾರೆ.

2010 ರ ಡಿಸೆಂಬರ್ 26 ರಂದು ಸುಳ್ಯದ ಶೈಕ್ಷಣಿಕ ಹರಿಕಾರ ಶ್ರೀ ಕುರುಂಜಿ ವೆಂಕಟರಮಣ ಗೌಡರ ಹುಟ್ಟು ಹಬ್ಬವನ್ನು
ಭವ್ಯ ಸುಳ್ಯ ಸಂಕಲ್ಪ ದಿನಾಚರಣೆ ಹೆಸರಿನಲ್ಲಿ ಸಾರ್ವಜನಿಕವಾಗಿ ಆಚರಿಸಲಾರಂಭಿಸಿ 2011 ರಿಂದ ನಿರಂತರವಾಗಿ ಪ್ರತೀವರ್ಷ KVG ಸುಳ್ಯ ಹಬ್ಬ ಹೆಸರಿನಲ್ಲಿ ಆಚರಿಸುವಂತಾಗಲು ಕಾರಣೀಭೂತರಾದವರು ನಮ್ಮ ಶ್ರೀ ಹರೀಶ್ ಬಂಟ್ವಾಳರು.

2012 ರಲ್ಲಿ ನಡೆದ ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ತಿನ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿ ತಾಲೂಕಿನಲ್ಲಿ ಅಭೂತಪೂರ್ವ ಬೆಂಬಲ ಪಡೆದರು.ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಪ್ರಜಾತಾಂತ್ರಿಕ ಮೌಲ್ಯಗಳಿಗೆ ಬೆಲೆ ಸಿಗುವಂತಾಗಬೇಕು ಮತ್ತು ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಘಟಕಗಳಿಗೂ ಚುನಾವಣೆ ಮೂಲಕ ಪದಾಧಿಕಾರಿಗಳ ಆಯ್ಕೆ ನಡೆಯಬೇಕು ಎಂದು ಆಗ್ರಹಿಸಿ 2012 ಆಗಸ್ಟ್ 14 ರಂದು ಒಂದು ದಿನದ ಉಪವಾಸ ಸತ್ಯಾಗ್ರಹ ಕೈಗೊಂಡು ರಾಜ್ಯದ ಗಮನ ಸೆಳೆದರು.
ಪ್ರಸ್ತುತ ಸುಳ್ಯ ತಾಲೂಕು ಬರಹಗಾರರ ಮತ್ತು ಕಲಾವಿದರ ಒಕ್ಕೂಟದ ಸಂಚಾಲಕರಾಗಿ,ಸುಳ್ಯ ತಾಲೂಕು “ಗಾಂಧಿ ಚಿಂತನಾ ವೇದಿಕೆ” ಯ ಸಂಚಾಲಕರಾಗಿ ಹಲವಾರು ಕಾರ್ಯಕ್ರಮಗಳನ್ನು ಸಂಘಟಿಸುತ್ತಿದ್ದಾರೆ.
2017 ರ ನವೆಂಬರ್ 16 ರಂದು ರಾಜ್ಯ ಮಟ್ಟದ ರಾಷ್ಟ್ರೀಯ ಪತ್ರಿಕಾ ದಿನಾಚರಣೆಯನ್ನು ಪತ್ರಿಕಾ ಅಕಾಡೆಮಿ ಮತ್ತು ಪತ್ರಕರ್ತರ ಸಂಘದ ಸಹಯೋಗದಲ್ಲಿ ತಮ್ಮದೇ ಅಧ್ಯಕ್ಷತೆಯಲ್ಲಿ ಯಶಸ್ವಿಯಾಗಿ ಸಂಘಟಿಸಿದ್ದಾರೆ.
ಸುದ್ದಿ ಬಿಡುಗಡೆ ಪತ್ರಿಕೆಯ ಉನ್ನತಿಗಾಗಿ ಅವಿರತವಾಗಿ ಮೂವತ್ತೊಂದು ವರ್ಷಗಳಿಂದ ದುಡಿಯುತ್ತಿರುವ ಶ್ರೀ ಹರೀಶ್ ಬಂಟ್ವಾಳರು ಪತ್ರಿಕೆಯ ಏಳಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.ಸುಳ್ಯ,ಪುತ್ತೂರು,ಬೆಳ್ತಂಗಡಿಗಳಿಂದ ಪ್ರತ್ಯೇಕ ಪ್ರತ್ಯೇಕವಾಗಿ ಪ್ರಕಟಗೊಳ್ಳುವ ಪತ್ರಿಕೆ ಕರಾರುವಾಕ್ಕು ಸುದ್ದಿಗಳಿಂದ ಮತ್ತು ಸವಿವರ ವರದಿಗಳಿಂದ ಜನಮೆಚ್ಚುಗೆ ಗಳಿಸಿದೆ.ಸುಳ್ಯದ ಅವತರಣಿಕೆ ಪ್ರತೀ ಸೋಮವಾರ ಹದಿನೆಂಟು ಅಥವಾ ಇಪ್ಪತ್ತು ಪುಟಗಳಿಂದ  ವರ್ಣರಂಜಿತವಾಗಿ ದಿನಪತ್ರಿಕೆಯ ರೂಪದಲ್ಲಿ ವಾರಕ್ಕೊಮ್ಮೆ ಹೊರಬರುತ್ತದೆ.ಸುಳ್ಯ ತಾಲೂಕೊಂದರಲ್ಲೇ ಪ್ರತಿ ವಾರ ಇಪ್ಪತ್ತು ಸಾವಿರಕ್ಕೂ ಹೆಚ್ಚು ಪ್ರತಿಗಳು ಮಾರಾಟವಾಗಿ ಅತೀ ಹೆಚ್ಚು ಮಾರಾಟವಾಗುವ ಗ್ರಾಮೀಣ ಪತ್ರಿಕೆ ಎಂಬ ಹೆಸರು  ಗಳಿಸಿದೆ. ಪತ್ರಿಕೆಗೆ 2011 ರಲ್ಲಿ ಕರ್ನಾಟಕ ಮಾಧ್ಯಮ ಅಕಾಡೆಮಿಯಿಂದ ಆಂದೋಲನ ಪ್ರಶಸ್ತಿ ಲಭಿಸಿದ್ದು,ಪತ್ರಿಕೆಯ ಸಂಸ್ಥಾಪಕರೂ,ಸಂಪಾದಕರೂ ಆಗಿರುವ ಡಾ||ಯು.ಪಿ.ಶಿವಾನಂದರವರು ಸನ್ಮಾನಿತರಾಗಿರುವುದು ಪತ್ರಿಕೆಯ ಹೆಗ್ಗಳಿಕೆ.ಪತ್ರಿಕೆಯ ಮೂವತ್ತಮೂರು ವರ್ಷದಲ್ಲಿ ಇವರು ಸತತ ಮೂವತ್ತೊಂದು ವರ್ಷಗಳಿಂದ ಪತ್ರಿಕೆಗಾಗಿ ಕೆಲಸ ಮಾಡಿ ಪತ್ರಿಕೆಯ ಅಭಿವೃದ್ಧಿಯಲ್ಲಿ ಸಮಭಾಗಿಗಳಾಗಿದ್ದಾರೆ.ತಮ್ಮ ವೃತ್ತಿ ಬದುಕಿನಲ್ಲಿ ಹಲವಾರು ಯುವ ಪತ್ರಕರ್ತರಿಗೆ ಮಾರ್ಗದರ್ಶನ ನೀಡಿದ್ದಾರೆ.ಅವರಲ್ಲಿ ಕೆಲವರು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ,ಬೆಂಗಳೂರಿನಲ್ಲಿ ಪತ್ರಕರ್ತರಾಗಿ ಗುರುತಿಸಿಕೊಂಡಿದ್ದಾರೆ.

ಇಷ್ಟೆಲ್ಲಾ ಸಾಧನೆಗೆ ಬೆನ್ನೆಲುಬಾಗಿ ನಿಂತಿರುವ ಇವರ ಕುಟುಂಬವನ್ನು ಪರಿಚಯಿಸದಿದ್ದರೆ ಈ ವರದಿ ಅಪೂರ್ಣವೆನಿಸಿಕೊಳ್ಳುತ್ತದೆ.ಇವರ ಧರ್ಮಪತ್ನಿ ಶ್ರೀಮತಿ ಭಾರತಿ ಹರೀಶ್ ಬಂಟ್ವಾಳರು ಸಹಾ ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದಾರೆ.ಇವರು ಸುಳ್ಯದ ಸುವರ್ಣ ಜಯಂತಿ ಮಹಿಳಾ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.ಇವರ ಮಗಳು ಕುಮಾರಿ ಸ್ವಾತಿ ಬಂಟ್ವಾಳ ಉಜಿರೆಯ ಎಸ್.ಡಿ.ಎಂ ಸ್ನಾತಕೋತ್ತರ ಕಾಲೇಜಿನಲ್ಲಿ ಎಂ.ಎ(ಇಂಗ್ಲೀಷ್) ವ್ಯಾಸಂಗ ಮಾಡುತ್ತಿದ್ದು,ಇನ್ನೊಬ್ಬ ಮಗಳು ಕುಮಾರಿ ಸ್ಮಿತಾ ಬಂಟ್ವಾಳ ಕೆ.ವಿ.ಜಿ ಇಂಜಿನಿಯರಿಂಗ್ ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿನಿ.ಮತ್ತು ಇವರ ಮಗ  ಚಿತ್ತಾರ ಬಂಟ್ವಾಳ ಪಿಯುಸಿ ವಿದ್ಯಾರ್ಥಿಯಾಗಿದ್ದಾರೆ.

ನಮ್ಮ ಭಂಡಾರಿ ಸಮಾಜದ ಬಹುಮುಖ ವ್ಯಕ್ತಿತ್ವದ ಶ್ರೀ ಹರೀಶ್ ಬಂಟ್ವಾಳರವರಿಗೆ
ವಿಶೇಷ ಪತ್ರಿಕೋದ್ಯಮ ಪ್ರಶಸ್ತಿ ಒಲಿದು ಬಂದಿರುವ ಈ ಶುಭ ಸಂದರ್ಭದಲ್ಲಿ ಭಂಡಾರಿ ಕುಟುಂಬದ ಮನೆ ಮನದ ಮಾತು ಭಂಡಾರಿವಾರ್ತೆ ಅವರನ್ನು ಹೃತ್ಪೂರ್ವಕವಾಗಿ ಅಭಿನಂದಿಸುತ್ತದೆ.                                                                                                          
ವರದಿ : ಭಾಸ್ಕರ್ ಭಂಡಾರಿ ಶಿರಾಳಕೊಪ್ಪ.

Leave a Reply

Your email address will not be published. Required fields are marked *