ಕೋವಿಡ್ ಸಂಕಷ್ಟದಿಂದ ತೊಂದರೆಗೀಡಾದ ಸಮಾಜದ ಅರ್ಹ ಫಲಾನುಭವಿಗಳಿಗೆ ಪರಿಹಾರ ವಿತರಿಸಿದ ನಂತರ ಭಂಡಾರಿ ವಾರ್ತೆಯು ಗಮನಹರಿಸಿದ್ದು ದೀಪಾವಳಿಯ ಪ್ರಯುಕ್ತ ಏನಾದರೂ ಕಾರ್ಯಕ್ರಮ ಮಾಡಬೇಕೆಂಬುದರ ಬಗ್ಗೆ, ಈ ಬಗ್ಗೆ ತಂಡವು ಹಲವು ಸುತ್ತಿನ ಮಾತುಕತೆಯನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆಸಿ ಕಥಾ ಸ್ಪರ್ಧೆ ಯನ್ನು ಹಮ್ಮಿಕೊಳ್ಳುವುದರ ಬಗ್ಗೆ ತೀರ್ಮಾನಿಸಿತು.
ಕೂಡಲೇ ಆ ಬಗ್ಗೆ ಕಾರ್ಯಪ್ರವೃತ್ತರಾಗಿ ಸ್ಪರ್ಧೆಯ ಬಗ್ಗೆ ಸಾಮಾಜಿಕ ಜಾಲತಾಣಗಳ ಮೂಲಕ ಸಂದೇಶ ಕಳುಹಿಸಿತು.
ಆಶ್ಚರ್ಯದ ಸಂಗತಿಯೇನೆದರೆ ಅತೀ ಕಡಿಮೆ ಅವಧಿಯಲ್ಲಿ100 ಕ್ಕೂ ಅಧಿಕ ಕಥೆಗಳು ಸ್ಪರ್ಧೆಯಲ್ಲಿ ಪಾಲ್ಗೊಂಡಿತು.
ಸಮಾಜದ ಲೇಖಕರೇ ಬರೆದಂತಹ 35 ಕಥೆಗಳನ್ನು ಆಯ್ದುಕೊಂಡಿತು. ಸಾಹಿತ್ಯದಲ್ಲಿ ಹೆಚ್ಚು ನೈಪುಣ್ಯತೆ ಹೊಂದಿರುವ ತಂಡದ ಇಬ್ಬರು ಪ್ರಾಥಮಿಕವಾಗಿ ತೀರ್ಪುಗಾರರಾಗಿ ನೇಮಿಸಿ ಅತ್ಯುತ್ತಮ 10 ಕಥೆಗಳನ್ನು ಕೊನೆಯ ಸುತ್ತಿಗೆ ಆಯ್ಕೆ ಮಾಡಿತು. ಅಂತಿಮ ಸುತ್ತಿನ ತೀರ್ಪುಗಾರರಾಗಿ ಕಥೆ ಕಾದಂಬರಿಗಳಲ್ಲಿ ಪರಿಣತಿ ಹೊಂದಿರುವ ಹೊರಗಡೆಯ ಅನ್ಯ ಸಮಾಜದ ಇಬ್ಬರನ್ನು ನೇಮಿಸಲಾಗಿತ್ತು .
4 ಅತೀ ಉತ್ತಮ ಕಥೆಗಳನ್ನು ಆಯ್ಕೆ ಮಾಡಲಾಗಿತ್ತು. ಎರಡನೇ ಸ್ಥಾನದಲ್ಲಿ ಇಬ್ಬರ ಕಥೆಯನ್ನು ಆಯ್ಕೆ ಮಾಡಲಾಗಿತ್ತು. ಅದರಲ್ಲಿಒಂದು ಕಥೆ ಭಂಡಾರಿ ವಾರ್ತೆಯ ತಂಡದ ಭಾಸ್ಕರ ಭಂಡಾರಿಯವರು ಬರೆದ ” ಮೂಕ ವೇದನೆ “.
ನಮ್ಮ ತಂಡದಲ್ಲಿ ಇರುವವರಿಗೆ ಬಹುಮಾನ ಘೋಷಿಸುವುದು ಸರಿಯಲ್ಲವೆಂದು ನಿರ್ಧರಿಸಿ ತಂಡವು ಸರ್ವಾನುಮತದಿಂದ ಭಾಸ್ಕರ ಭಂಡಾರಿಯವರ ಕಥೆಯನ್ನು ಕೈ ಬಿಟ್ಟಿತು .
ನಿರ್ಣಾಯಕರ ಆಯ್ಕೆಯಂತೆ “ತನ್ನೂರಿಗೆ ಸರಿಯಾದ ರಸ್ತೆ ಸಂಪರ್ಕ ಇರದುದರಿಂದ ತನ್ನ ತಾಯಿ ಸಾಯಬೇಕಾಗಿ ಬಂತು,ನನಗಾದ ಅನ್ಯಾಯ ಇನ್ನಾರಿಗೂ ಆಗದಿರಲೆಂದು ಸರ್ಕಾರಕ್ಕೆ ಸಡ್ಡು ಹೊಡೆದು ರಸ್ತೆ ನಿರ್ಮಿಸಿಕೊಂಡು, ತನ್ನೂರಿನವರಿಗೆ ಪ್ರತಿಭಟಿಸುವ,ತಮ್ಮ ಹಕ್ಕನ್ನು ಧಕ್ಕಿಸಿಕೊಳ್ಳುವ ನಿಟ್ಟಿನಲ್ಲಿ ಸ್ಪೂರ್ತಿ ತುಂಬುವ ಪುಟ್ಟ ಬಾಲಕಿಯೊಬ್ಬಳ ಕಥಾಹಂದರ” ಹೊಂದಿರುವ ರಂಜಿತ್ ಭಂಡಾರಿ ಸಸಿಹಿತ್ಲು ರವರ “ಸ್ಫೂರ್ತಿ” ಕಥೆ ಪ್ರಥಮ ಸ್ಥಾನವನ್ನು ಗಳಿಸಿದರೆ,
“ತನ್ನ ಮನದಿನಿಯ ನನ್ನ ಪ್ರತಿಭೆಗೆ ನೀರೆಯಬಹುದೆಂದು ಭಾವಿಸಿ ಮದುವೆಯಾದ ಹೆಣ್ಣೊಬ್ಬಳು ಗಂಡನ ಅಸಡ್ಡೆ,ಮೂದಲಿಕೆ ಮಾತುಗಳಿಗೆ ಅರೆಜೀವವಾಗಿ,ತನ್ನ ಮಾವನೆಂಬ ಮಾನಗೇಡಿಯಿಂದ ಲೈಂಗಿಕ ಶೋಷಣೆಗೊಳಗಾಗಿ ಭ್ರಮನಿರಸನಗೊಂಡು ಬದುಕಿಗೆ ಅಂತಿಮ ವಿದಾಯ ಹೇಳುವ ಹೆಣ್ಣೊಬ್ಬಳ” ಕಥಾಹಂದರದ ಹೊಂದಿರುವ ಬಜಪೆಯ ಶ್ರೀಮತಿ ವನಿತಾ ಅರುಣ್ ಭಂಡಾರಿಯವರ “ಜೊತೆಗಾರ” ಕಥೆ ದ್ವಿತೀಯ ಸ್ಥಾನವನ್ನು,
“ಬೆಟ್ಟದೂರಿನ ಜನರ ದೀಪವನ್ನು ತಂದು ದೇವರದೀಪವೆಂದು ತನ್ನೂರಿನ ಜನರನ್ನು ನಂಬಿಸಿ ಅವರ ಮೌಡ್ಯತೆಯ ಅಂಧಕಾರವನ್ನು ತೊಲಗಿಸುವ,ತನ್ಮೂಲಕ ತಾನೂ ಊರವರ ದೃಷ್ಟಿಯಲ್ಲಿ ಶ್ರೇಷ್ಠನೆನಿಸಿಕೊಳ್ಳುವ ಕ್ಷೌರಿಕರ ದ್ಯಾವಪ್ಪನ” ಕಥಾವಸ್ತು ಹೊಂದಿರುವ ವಿಜಯ ಭಂಡಾರಿ ನಿಟ್ಟೂರು ರವರ “ದೇವರ ದೀಪ” ಕಥೆ ತೃತೀಯ ಸ್ಥಾನವನ್ನು ಗಳಿಸಿಕೊಂಡಿತು.
ವಿಜೇತರಾದ ನಮ್ಮ ಸಮಾಜದ ಹೆಮ್ಮೆಯ ಮೂರು ಲೇಖಕರಿಗೆ ಅಭಿನಂದನೆ ಸಲ್ಲಿಸುತ್ತದೆ.
ಭಂಡಾರಿ ಸಮಾಜದ ಯುವ ಪ್ರತಿಭೆಗಳಿಗೆ ವೇದಿಕೆಯಾಗಬೇಕೆಂಬ ಸದುದ್ಧೇಶದಿಂದ ಶ್ರೀ ಪ್ರಕಾಶ್ ಭಂಡಾರಿ ಕಟ್ಲರ ಸಾರಥ್ಯದಲ್ಲಿ ಹೊರಟ “ಭಂಡಾರಿವಾರ್ತೆ” ಯ ತಂಡಕ್ಕೆ ಈ ಸ್ಪರ್ಧೆಯ ಅದ್ಭುತವಾದ ಯಶಸ್ಸು ಆನೆಬಲವನ್ನು ತಂದುಕೊಟ್ಟಿರುವುದು ಸುಳ್ಳಲ್ಲ.
ಅದಲ್ಲದೆ ಕಳೆದ ಕೆಲವು ಸಮಯದಿಂದ ವಿವಿಧ ದಿನಾನಚರಣೆಗಳಿಗೆ ವಿಶೇಷಾಂಕ ಎಂಬ ಹೆಸರಿನಲ್ಲಿ ಲೇಖನವನ್ನು ಆಹ್ವಾನಿಸಿದಾಗ ನಮ್ಮ ಎಲ್ಲ ಬರಹಗಾರರು ಉತ್ತಮವಾಗಿ ಸ್ಪಂದಿಸಿ ಲೇಖನ ಬರೆದು ಕಳುಹಿಸುತ್ತಿರುವುದು ಭಂಡಾರಿ ವಾರ್ತೆಯು ಯಾವ ರೀತಿ ಸಮಾಜದ ಬಂಧುಗಳ ಮನೆ ಮನದಲ್ಲಿ ನೆಲೆ ನಿಂತಿದೆ ಎಂಬುದರ ಸ್ಪಷ್ಟ ಸಂದೇಶವಾಗಿದೆ