ಸಂಘ ಶಕ್ತಿ ಬಲಿಷ್ಟವಾಗಿದ್ದರೆ , ಅದಕ್ಕೊಬ್ಬ ಸಮರ್ಥ ನಾಯಕನಿದ್ದರೆ ಸಮಾಜ ಯಾವುದೇ ಕೆಟ್ಟ ಪರಿಸ್ಥಿತಿಯಲ್ಲೂ ಗೆಲ್ಲಬಹುದು ಎಂಬ ಮಾತಿದೆ. ಸ್ವಯಂ ಸೇವೆಯಿಂದ ವಿಶ್ವವನ್ನೇ ಗೆಲ್ಲಬಹುದು. ಹಾಗೆಯೇ ಕಷ್ಟ ಕಾಲದಲ್ಲಿ ನೊಂದವರ ಕಣ್ಣೀರು ಒರೆಸಿ ಸೇವೆಯೆಂಬ ಯಜ್ಞ ಮಾಡಿದರೆ ಜನರ ಹೃದಯ ಗೆಲ್ಲಬಹುದು ಎಂಬ ಹೆಮ್ಮೆಯ ಕಾರ್ಯವನ್ನು ಮೂಡಬಿದಿರೆಯ ಭಂಡಾರಿ ಸಮಾಜ ಸೇವಾ ಸಂಘ ತೋರಿಸಿಕೊಟ್ಟಿದೆ.
ಮೂಡಬಿದಿರೆ ತಾಲೂಕಿನಲ್ಲಿ ಸುಮಾರು 220ಕ್ಕೂ ಹೆಚ್ಚು ಭಂಡಾರಿ ಕುಟುಂಬಗಳಿದ್ದು ಇದರಲ್ಲಿ ಹೆಚ್ಚಿನ ಕುಟುಂಬಗಳು ಕ್ಷೌರಿಕ, ಕೂಲಿಕಾರ್ಮಿಕ ಮತ್ತು ಆಟೋ ಡ್ರೈವರ್ ಗಳಾಗಿ ಕೆಲಸ ಮಾಡುತ್ತಿದ್ದಾರೆ. ಕೋವಿಡ್ -19 ಲಾಕ್ ಡೌನ್ ಕಾರಣದಿಂದ ಈ ಕುಟುಂಬಗಳು ಕೆಲಸವಿಲ್ಲದೇ ದಿನ ನಿತ್ಯದ ಆಹಾರಕ್ಕೂ ಪರದಾಡುವ ಸ್ಥಿತಿ ಉಂಟಾಗಬಹುದು ಎಂಬುದನ್ನು ಮೊದಲೇ ಅರಿತ ಅಲ್ಲಿನ ಭಂಡಾರಿ ಸಮಾಜ ಸಂಘದ ಅಧ್ಯಕ್ಷ ಪ್ರಕಾಶ್ ಭಂಡಾರಿ ಕೆ. ಎನ್ ಇವರು ತ್ವರಿತವಾಗಿ 40 ಬಡ ಕುಟುಂಬಗಳನ್ನು ಗುರುತಿಸಿ ಸ್ವಂತ ಹಣದಿಂದ ಕಿಟ್ ನೀಡಿದ್ದರು.
ನಂತರ ಮೇ 4ರವರೆಗೆ ಲಾಕ್ ಡೌನ್ ವಿಸ್ತರಣೆಯಾದಾಗ ಸಮಾಜ ಸಂಘವು ಒಂದು ಮಹಾ ಸಂಕಲ್ಪಕ್ಕೆ ಕೈ ಹಾಕಿತು. ಸಂಘದ ವತಿಯಿಂದ ತಾಲೂಕಿನ ಎಲ್ಲ ಭಂಡಾರಿ ಕುಟುಂಬಗಳಿಗೂ ದೊಡ್ಡ ಪ್ರಮಾಣದಲ್ಲಿ ಎಲ್ಲ ಅಗತ್ಯ ದಿನಸಿ ವಸ್ತುಗಳಿರುವ ಕಿಟ್ ನೀಡಲು ನಿರ್ಧರಿಸಲಾಯಿತು. ಇದಕ್ಕಾಗಿ ಸಂಘದ ಕಚೇರಿಯಲ್ಲಿ 300 ಕಿಟ್ ನೀಡಲು ಬೇಕಾದಷ್ಟು ಆಹಾರ ಸಾಮಾಗ್ರಿಗಳನ್ನು ಖರೀದಿಸಿ ದಿನಂಪ್ರತಿ 70-80 ಕಿಟ್ ತಯಾರಿಸಿ ಅದೇ ದಿನ ಮನೆ ಮನೆಗೆ ತಲುಪಿಸುವ ಬಗ್ಗೆ ಯೋಜನೆ ರೂಪಿಸಲಾಯಿತು.
ನಂತರ ಕಾರ್ಯ ಪ್ರವೃತ್ತರಾದ ಸಂಘದ ಎಲ್ಲ ಉತ್ಸಾಹಿ ಪದಾಧಿಕಾರಿಗಳು ಮತ್ತು ಸ್ವಯಂ ಸೇವಕರು ಸೇರಿ ವಾಹನ ವ್ಯವಸ್ಥೆ, ಉಗ್ರಾಣ ವ್ಯವಸ್ಥೆ ಮತ್ತು ಕಿಟ್ ತಯಾರಿ ವ್ಯವಸ್ಥೆ ಮುಂತಾದುವುಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿ ಯೋಜನೆಯಂತೆ ಪ್ರತಿ ಹಳ್ಳಿಗಳಿಗೂ ಸಂಚರಿಸಿ ಭಂಡಾರಿ ಕುಟುಂಬಗಳನ್ನು ಹುಡುಕಿ ಕಿಟ್ ನೀಡಲಾಯಿತು. ಹೀಗೆ ಒಟ್ಟು 2,86,000 ವೆಚ್ಚದಲ್ಲಿ 220 ಕಿಟ್ ನೀಡಲಾಯಿತು.
ಈ ಸೇವಾ ಕೈಂಕರ್ಯಕ್ಕೆ ಸಂಕಲ್ಪ ಮಾಡಿದ ಸಂಘದ ಅಧ್ಯಕ್ಷರಾದ ಶ್ರೀಯುತ ಪ್ರಕಾಶ್ ಭಂಡಾರಿ ಕೆ ಎನ್ . ಇವರ ಯಜ್ಞಕ್ಕೆ ಬೆನ್ನೆಲುಬಾಗಿ ನಿಂತವರು ಸಂಘದ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಸತೀಶ್ ಭಂಡಾರಿ ಕರಿಂಜೆ, ಉಪಾಧ್ಯಕ್ಷರುಗಳಾದ ಮಾಧವ ಭಂಡಾರಿ ಕಾನ, ಶ್ರೀ ಯೋಗಿಶ್ ಭಂಡಾರಿ ಮತ್ತು ಶ್ರೀಮತಿ ಸಂಧ್ಯಾ ಭಂಡಾರಿ. ನಿಕಟಪೂರ್ವ ಅಧ್ಯಕ್ಷರಾದ ಪ್ರಶಾಂತ್ ಭಂಡಾರಿ ಪುತ್ತಿಗೆ, ಸಂಘಟನಾ ಕಾರ್ಯದರ್ಶಿಗಳಾದ ಶ್ರೀ ದೇವಿ ಪ್ರಶಾಂತ್ ಭಂಡಾರಿ , ಶ್ರೀ ರಾಘು ಭಂಡಾರಿ ಪಾಲಡ್ಕ. ಗೌರವಾಧ್ಯಕ್ಷರಾದ ಶ್ರೀಮತಿ ಶಾಂತ ಕೆ ಭಂಡಾರಿ. ಕೋಶಾಧಿಕಾರಿಯಾದ ಶ್ರೀ ಗುರುಪ್ರಸಾದ್ ಭಂಡಾರಿ, ಕ್ರೀಡಾ ಕಾರ್ಯದರ್ಶಿ ಶ್ರೀ ಪ್ರಸಾದ್ ಕುಮಾರ್ ಭಂಡಾರಿ. ಪ್ರವಾಸ ಮೇಲ್ವಿಚಾರಕರಾದ ಶ್ರೀ ಗಣೇಶ್ ಭಂಡಾರಿ. ಸಕ್ರಿಯ ಕಾರ್ಯಕರ್ತರಾದ ಶ್ರೀ ಪ್ರಭಾಕರ ಭಂಡಾರಿ, ಶ್ರೀ ಸಂಜಯ್ ಭಂಡಾರಿ, ಶ್ರೀ ಪ್ರಣಂ ರಘು ಭಂಡಾರಿ ಕಾನ, ಕೀರ್ತನ್ ಉದಯ ಭಂಡಾರಿ ಮತ್ತು ಕಿರಿಯ ವಯಸ್ಸಿನ ಪುಟಾಣಿ ಮಾಸ್ಟರ್ ಲಿಖಿತ್ ಪ್ರಶಾಂತ್ ಭಂಡಾರಿ ಅತಿ ಉತ್ಸಾಹದಿಂದ ಪಾಲ್ಗೊಂಡು ಯೋಜನೆಯ ಯಶಸ್ಸಿಗೆ ಶ್ರಮಿಸಿದರು.
ಈ ಬಗ್ಗೆ ಮೂಡಬಿದಿರೆ ಭಂಡಾರಿ ಸಮಾಜದ ಅಧ್ಯಕ್ಷರಾದ ಪ್ರಕಾಶ್ ಭಂಡಾರಿ ಕೆ. ಎನ್ ಇವರು ಮಾತಾನಾಡುತ್ತಾ – ” ಲಾಕ್ ಡೌನ್ ಆದ ಕೂಡಲೇ ದುಡಿಯುವ ವರ್ಗಗಳ ಪರಿಸ್ಥಿತಿ ಬಗ್ಗೆ ಅಲೋಚಿಸುತ್ತಿದ್ದೆ. ಕೂಡಲೇ ನನಗೆ ಅರಿವಿಗೆ ಬಂದ ಕುಟುಂಬಗಳಿಗೆ ಸಹಾಯ ಮಾಡಿದೆ. ನಮ್ಮ ತಾಲೂಕಿನಲ್ಲಿ ಬಂಧುಗಳು ಸಹಾಯಕ್ಕಾಗಿ ಮನವಿ ಮಾಡುವ ಮೊದಲೇ ಸಹಾಯ ಮಾಡಬೇಕೆಂಬುದು ನಮ್ಮ ಸಂಘದ ಆಶಯವಾಗಿತ್ತು. ಹಾಗಾಗಿ ಈ ಕೆಟ್ಟ ಪರಿಸ್ಥಿತಿಯಲ್ಲಿ ಎಲ್ಲರೂ ಕಷ್ಟದಲ್ಲಿರುವ ಕಾರಣ ಎಲ್ಲ ಭಂಡಾರಿ ಬಂಧುಗಳ ಮನೆಗೂ ದಿನಸಿ ಒದಗಿಸಲಾಯಿತು. ಸಂಘ ಸಹಾಯಕ್ಕೆ ಧಾವಿಸಿದಾಗ ಸಂಘದ ಅನಿವಾರ್ಯತೆ ಬಗ್ಗೆ ಜನರಿಗೆ ಅರಿವಾಗಿದೆ. ಮುಂದಿನ ದಿನಗಳಲ್ಲಿ ಸಂಘದ ಶಕ್ತಿ ಇನ್ನಷ್ಟು ಬಲಷ್ಠವಾಗುತ್ತದೆ ಎಂಬುದು ನಮ್ಮ ನಂಬಿಕೆ. ನಮ್ಮ ಸಂಘ ಪ್ರಾರಂಭದಿಂದಲೂ ಜನರ ಸೇವೆಗೆ ಮುಡಿಪಾಗಿದೆ. ನಮ್ಮ ಈ ಸೇವೆಗೆ ಎಲ್ಲ ಕಡೆಯಿಂದಲೂ ಪ್ರಶಂಸೆ ವ್ಯಕ್ತವಾಗಿದೆ. ನಮಗೂ ಮನೆ ಮನೆ ಬೇಟಿಯಾಗಿ ಅವರ ಸಮಸ್ಯೆಗಳನ್ನು ಆಲಿಸುವ ಅವಕಾಶ ಸಿಕ್ಕಿದೆ. ಹಳ್ಳಿಗಳಲ್ಲೂ ಜನ ಮುಂದಿನ ದಿನಗಳಲ್ಲಿ ಸಂಘಕ್ಕೆ ಸಂಪೂರ್ಣ ಬೆಂಬಲ ನೀಡುವುದಾಗಿ ಹೇಳಿದ್ದಾರೆ.” ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.
ನಂತರ ಎಲ್ಲ ಪದಾಧಿಕಾರಿಗಳು ಮತ್ತು ಸ್ವಯಂ ಸೇವಕರ ನಿಸ್ವಾರ್ಥ ಸೇವೆಗೆ ಧನ್ಯವಾದ ಅರ್ಪಿಸುತ್ತಾ, ಸ್ವಂತ ವಾಹನವನ್ನು ನೀಡಿದ ಮಾಧವ ಭಂಡಾರಿ ಕಾನ ಮತ್ತು ದಿನಸಿ ಸಂಗ್ರಹಿಸಲು ಮತ್ತು ಕಿಟ್ ತಯಾರಿಗೆ ಉಗ್ರಾಣ ವ್ಯವಸ್ಥೆ ಮಾಡಿಕೊಟ್ಟ ಶ್ರೀಯುತ ಪ್ರಸಾದ್ ಕೆ ಭಂಡಾರಿ ಕಾನ ಇವರುಗಳ ಕೊಡುಗೆಯನ್ನು ಭಂಡಾರಿ ವಾರ್ತೆ ಜೊತೆ ಮಾತಾನಾಡುತ್ತಾ ಸ್ಮರಿಸಿದರು.
ಭಂಡಾರಿ ಸಮಾಜ ಸೇವಾ ಸಂಘ ಮೂಡಬಿದ್ರೆಯ ಈ ಅಮೋಘ ಸೇವಾ ಕಾರ್ಯವನ್ನು ಶ್ಲಾಘಿಸುತ್ತಾ, ಈ ಸಂಘವು ಎಲ್ಲ ಸಂಘಗಳಿಗೂ ಮಾದರಿಯಾಗಲಿ ಮತ್ತು ಶ್ರೀ ಪ್ರಕಾಶ್ ಭಂಡಾರಿ ಕೆ ಎನ್ ಇವರಂತಹ ಕ್ರಿಯಾಶೀಲ, ನಿಸ್ವಾರ್ಥಿ, ಹೃದಯವಂತ ನಾಯಕರು ನಮ್ಮ ಸಮಾಜದಲ್ಲಿ ಹೆಚ್ಚಲಿ ಎಂದು ಭಂಡಾರಿ ಕುಟುಂಬಗಳ ಮನೆ ಮನದ ಮಾತು ಭಂಡಾರಿ ವಾರ್ತೆ ಶುಭ ಹಾರೈಸುತ್ತದೆ.
-ಭಂಡಾರಿ ವಾರ್ತೆ