January 18, 2025
calf

ನಮಗ್ಯಾಕೆ ಗೋವು ಅದ್ಭುತ ಮತ್ತು ಪೂಜ್ಯನೀಯ ? ಮನುಷ್ಯ ಒಂದು ಕಷ್ಟಕಾಲಕ್ಕೆ ಒದಗಿಬಂದರೆ ಆವರನ್ನ ದೇವರ ಸ್ಥಾನದಲ್ಲಿ ಕೂರಿಸುತ್ತೇವೆ ಮತ್ತು ಆವರಿಗಾಗಿ ಘನವಾದ ತ್ಯಾಗಕ್ಕೂ ಸಿದ್ಧರಿರುತ್ತೇವೆ ಎಂದಮೇಲೆ ಗೋವಿನ ಹುಟ್ಟಿನಿಂದ  ಸಾವಿನವರೆಗೂ ನಾವು ನಮ್ಮ ಜೀವನದುದ್ದಕ್ಕೂ ಇಂಚಿಂಚು ಫಲವನ್ನು ಪಡೆಯುತ್ತೇವೆ ಎಂದಮೇಲೆ ಅದನ್ನೊಂದು ಪೂಜ್ಯನೀಯ ಸ್ಥಾನದಲ್ಲಿರಿಸಿ ಗೌರವಿಸದೇ ಇರುವುಕ್ಕೆ ಹೇಗೆ ಸಾಧ್ಯ ಸ್ವಾಮಿ ? ಅದು ಈ ಭರತ ಖಂಡದ ಸಂಸ್ಕೃತಿ…. 

ಭಾರತದಲ್ಲಿ  ಕೃಷಿ ಮುಖ್ಯ ಕಸುಬಾಗಿದ್ದು ರೈತರಿಗೆ ಒಡನಾಡಿಯಾದ ಗೋವು ಮುಖ್ಯಪಾತ್ರವನ್ನು ವಹಿಸುತಿತ್ತು ಇಂದಿಗೂ ಪರಿಸರ ಸ್ನೇಹಿಯಾದ ಸಾವಯವ ಗೊಬ್ಬರದ ಮುಂದೆ ಯಾವ ಗೊಬ್ಬರವು ಅಲ್ಲ ಎಂದು ತಿಳಿದಿದ್ದರೂ ಕಾಂಚಾಣದ ದಾಸನಾದ ಮನುಷ್ಯ ಅದನ್ನು ಹಳಿಯುತ್ತಿರುವುದು ವಿಪರ್ಯಾಸವೇ ಸರಿ… ಇನ್ನು ಮಣ್ಣನ್ನು ಹೂಳಿ ಹದಗೊಳಿಸಿ ಬೆಳೆ ಬೆಳಿಯಬೇಕಾದರೆ ಅಂದಿನ ನೇಗಿಲಿಗೆ ಗೋವಿನ ಹೆಗಲೇ ಆಧಾರವಾಗಿತ್ತು ಇಂದು ಆಧುನಿಕ ಕೃಷಿಯಲ್ಲಿ ನೇಗಿಲು ಕಣ್ಮರೆಯಾಗುತ್ತಿದೆ ಹಾಗೆಯೇ ಹೊರೆಯಾದ ರೈತನ ಹಟ್ಟಿಯಿಂದ ಗೋವುಗಳು ಕಣ್ಮರೆಯಾಗುತ್ತಿವೆ.ಇಂದು ಪರಿಸರನಾಶದ ಬಗ್ಗೆ ಮಾತನಾಡುತ್ತಾರೆ ಆದರೆ ಅಂದೇ ಸಗಣಿಯನ್ನು ಬೆರಣಿಯಾಗಿ ತಟ್ಟಿ ಒಣಗಿಸಿ ಕಟ್ಟಿಗೆಯ ರೂಪದಲ್ಲಿ ಉರುವಲಾಗಿ ಬಳಸುತಿದ್ದರು ಇಂದಿನ ಅವಿಶ್ರಾಂತ ಜೀವನದಲ್ಲಿ ಅದು ಮರೆಯಾಗಿದೆ ಆದರೆ ಅಂದು ಅದರಿಂದ ಸಂಪೂರ್ಣವಲ್ಲದಿದ್ದರೂ ಒಂದು ಭಾಗದಷ್ಟಾದರೂ ಪರಿಸರದ ಉಳಿವಿಗೆ ನೆರವಾಗಿದ್ದಂತೂ ಸತ್ಯ. ಹಸಿವನ್ನು ತಣಿಸಲು ಇಷ್ಟು ಸಹಾಯವಾದ ಹಸುವನ್ನು ಜೀವನಪೂರ್ತಿ ನೆನೆಯದೇ ಇರಲು ಹೇಗೆ ಸಾಧ್ಯ ? 
ಬಹುಶಃ ಕುಡಿಯಲು ಯೋಗ್ಯವಾದ ಪ್ರಾಣಿಯ ಮೂತ್ರವೆಂದರೆ ಪ್ರಪಂಚದಲ್ಲಿಯೇ ಆದು ಗೋವಿನದ್ದು ಮಾತ್ರ ಅಷ್ಟಲ್ಲದೇ ಎಷ್ಟೋ ರೋಗರುಜಿನಗಳಿಗೆ ಅದು ರಾಮಬಾಣವಾಗಿದೆ. ಪಂಚಗವ್ಯ ಅನೇಕ ಸೂಕ್ಷ್ಮಾಣು ಜೀವಿಗಳ ನಾಶಕ್ಕೆ ಇಂದಿಗೂ ಪ್ರಸ್ತುತ. ಇಂದಿಗೆ ಅನೇಕ ರಾಸಾಯನಿಕ ಬಳಸಿದ ಊದುಬತ್ತಿಗೂ ಅಂದಿನ ಆರೋಗ್ಯಕರ ಊದುಬತ್ತಿಗೂ ಹೋಲಿಕೆಯೆಲ್ಲಿ ?  ಗೊಬ್ಬರಕ್ಕಾಗಿ ಬೇರೆ ಪ್ರಾಣಿಪಕ್ಷಿಗಳ ಸಗಣಿ ಬಳಸಿರಬಹುದು ಆದರೆ ಮನೆಯಂಗಳವ ಸಾರುವುದಕ್ಕೆ ಬಳಸುವುದು ಕೇವಲ  ಗೋವಿನದ್ದು ಮಾತ್ರ ಅಂಗಳವನ್ನ ಧೂಳಿನಿಂದ ಶುಭ್ರಗೊಳಿಸಿ ಅಂದಗಾಣಿಸುತ್ತದೆ ಮತ್ತು ಆರೋಗ್ಯದ ದೃಷ್ಟಿಯಿಂದ ವಿಜ್ಞಾನಕ್ಕೂ ಸಮೀಪ. ಗೋ ಮೂತ್ರವನ್ನು ಒಂದು ಶಕ್ತಿಯಾಗಿ ಬಳಸಿಕೊಂಡು ಗಡಿಯಾರವನ್ನು ತಯಾರಿಸಬಹುದು. ವೈದ್ಯೋ ನಾರಾಯಣ ಹರಿಃ ಎನ್ನುತ್ತಾರೆ  ಇಷ್ಟು ಆರೋಗ್ಯವನ್ನು ನೀಡುವ ಗೋವನ್ನು ಪೂಜಿಸದೇ ಹೇಗೆ ಸಾಧ್ಯ ?
ಗೋವಿನಿಂದ ಮನುಷ್ಯ ಪಡೆಯುವ ಉತ್ಪನ್ನ ಹಾಲು, ಮೊಸರು, ಮಜ್ಜಿಗೆ, ಬೆಣ್ಣೆ, ತುಪ್ಪ ಇವುಗಳು ಆರೋಗ್ಯದಾಯಕವಲ್ಲದೇ ಮನುಷ್ಯನನ್ನು ವ್ಯೆವಹಾರಿಕವಾಗಿಯೂ ಉತ್ತುಂಗಕ್ಕೆ ಏರಿಸುವಂತಹವು. ಅಳಿದ ನಂತರದ ಚರ್ಮವೂ ಉಪಯುಕ್ತ. ಹುಟ್ಟಿದ ಮಗು ತಾಯಿಯ ಎದೆಹಾಲನ್ನು ಎಷ್ಟು ಸಮಯದವರೆಗೆ ಕುಡಿಯಬಲ್ಲದು ಮತ್ತು ಮುಂದೆ ಎದೆಹಾಲನಿತ್ತು ಪೋಷಿಸುವ ತಾಯಿಯನ್ನು ಎಷ್ಟು ಗೌರವದಿಂದ ನೋಡುತ್ತದೆ ಆದರೆ ಮನುಷ್ಯ ಹುಟ್ಟಿದಂದಿನಿಂದ ಸಾಯುವವರೆಗೆ ಹಾಲನ್ನಿತ್ತು ವ್ಯಾವಹಾರಿಕವಾಗಿ ಒಂದು ಜೀವನವನ್ನು ಕಲ್ಪಿಸುವ ಗೋವಿಗೆ ಜೀವನಪರ್ಯಂತ ಗೌರವಯುತವಾಗಿ ನೋಡದೇ ಹೇಗೆ ಬಾಳುವುದು ? 
ಇಷ್ಟೆಲ್ಲಾ ಉಪಯೋಗ ಪಡೆದ ನಾವು ಮತ್ತು ಅದು ನಮ್ಮಿಂದ ಬಯಸುವುದು ನಾವು ಹೆಚ್ಚಾಗಿ ಉಳಿದುಬಿಟ್ಟ ತಂಗಳು ಅನ್ನ.. ನಮಗೆ ಬೇಡವಾದ ಒಣಹುಲ್ಲು…  ಅಕ್ಕಿ ಮಾಡಲು ಹೊರಟಾಗ ಉಳಿದ  ನಮಗೆ ಬೇಡವಾದ ಹುಡಿ.. ಹೀಗೆ ನಮಗೇ ಯಾವುದು ಉಪಯುಕ್ತವಲ್ಲವೋ ಅದನ್ನೇ ಅದು ಪಡೆಯುವುದು ಆದರೆ ನೀಡುವುದು ಮಾತ್ರ ನಮಗೆ ಯಾವುದು ಉಪಯುಕ್ತವೋ ಅದನ್ನೇ. ಮನೆಯೊಡಯನಿಗೆ ನೋವಾದರೆ ಅದು ತ್ಯಜಿಸುವ ಆಹಾರ ಹಾಕುವ ಕಣ್ಣೀರು ಹೀಗೇ ಜೀವನದುದ್ದಕ್ಕೂ ತ್ಯಾಗಮಯಿಯಾದ ಈ ಗೋವನ್ನು ಪೂಜ್ಯನೀಯ ದೃಷ್ಟಿಯಿಂದ ನೋಡದೇ ಇರಲು ಹೇಗೆ ಸಾಧ್ಯ ?
ಹೀಗೆ ಮನುಷ್ಯ ಜೀವನದಲ್ಲಿ ಇಷ್ಟು ಹತ್ತಿರವಾಗಿ ಮನುಷ್ಯನ ಒಡನಾಡಿಯಾಗಿ ಜೀವನದುದ್ದಕ್ಕೂ ನೆರವಾಗಿ ನಿಲ್ಲಬಲ್ಲ ಇನ್ನೂಂದು ಪ್ರಾಣಿ ಇನ್ನೆಲ್ಲೂ ಸಿಗಲೂ ಸಾಧ್ಯವಿಲ್ಲದೆ ಇರುವಾಗ ಮನುಷ್ಯನಾಗಿ ಗೋವನ್ನು ಜೀವನದುದ್ದಕ್ಕೂ ನೆನೆಯುತ್ತಾ ಗೌರವಯುತವಾಗಿ ಪೂಜ್ಯನೀಯ ದೃಷ್ಟಿಯಿಂದ ದೇವರಾಗಿ ಪೂಜಿಸದೇ ಇರಲು ಹೇಗೆ ಸಾಧ್ಯ  ???? 
                                                                                                                                                                                                                                                                       
ವಿಜಯ್ ವಿಜಿ…….

 

Leave a Reply

Your email address will not be published. Required fields are marked *