
ತಾರೀಕು 03-02-2019. ನಮ್ಮ ಕೊಲಕೆ ಇರ್ವತ್ತೂರು ಭಂಡಾರಿ ಪದ್ಮನ ಬೊಟ್ಟುವಿನಲ್ಲಿ ಸಂಭ್ರಮವೋ ಸಂಭ್ರಮ. ಕಟೀಲು ಕ್ಷೇತ್ರ ಮಹಾತ್ಮೆ ಯಕ್ಷಗಾನ ಸೇವೆ ಆಟ. ಪೂರ್ತಿ ನಮ್ಮ ಊರು ಸಂಭ್ರಮದಲ್ಲಿ ತೇಲಾಡುತ್ತಿತ್ತು. ಸಂಭ್ರಮದ ತುಡಾರ್, ಬೊಲ್ಪು(ದೀಪ,ಬೆಳಕು) ಮೈಂದೂರು (ಜೈನರ ಗುತ್ತಿನ ಮನೆ ಹೆಸರು. ನಂತರ ಪದ್ಮ ಭಂಡಾರಿ ಹಿರಿಯರು ಗೇಣಿದಾರರು) ಭೂಮಿಯ ಸುತ್ತಲೂ ಉರಿಯುತ್ತಿತ್ತು. ಬೆಳಗುತ್ತಿತ್ತು. ಸಂಭ್ರಮದ ಪ್ರಕಾಶ ಎಲ್ಲೆಡೆ ಪಸರಿಸಿತ್ತು. ಸಂಭ್ರಮಕ್ಕೆ ಭೂಮಿ ತಾಯಿ ಕೆಡ್ಡಸದ ಗಾಳಿಯನ್ನು ಒಂದು ವಾರ ಮುಂಚಿತವಾಗಿ ಬೀಸುವಂತೆ ವಾಯು ದೇವನಿಗೆ ಹೇಳಿರುವಂತೆ ಇತ್ತು. ದೊಡ್ಡ ದೊಡ್ಡ ಪೆಂಡಾಲ್ಸ್ ,ಪ್ರಕಾಶಿಸುತ್ತಿದ್ದ ಗೂಡು ದೀಪಗಳೊಂದಿಗೆ ಅಲಂಕಾರದಿಂದ ಅರಮನೆಯಂತೆ ಕಂಗೊಳಿಸುತ್ತಿತ್ತು. ಸಂತೆ ಅಂಗಡಿಗಳು ಸಂಭ್ರಮದ ಪದ್ಮನೊಟ್ಟುಗೆ ಇನ್ನಷ್ಟು ಮೆರುಗು ಕೊಡುತ್ತಿತ್ತು. “ಕೋರಂಜೆ ಫ್ರಂಡ್ಸ್” ಇವರ ಸಮವಸ್ತ್ರ ಎಲ್ಲರ ಕಣ್ಣುಗಳನ್ನು ಸೂರೆಗೊಳಿಸುತ್ತಿತ್ತು. ಒಟ್ಟಾರೆ ಆ ದಿನ ಪದ್ಮನೊಟ್ಟು ಪದ್ಮನಾಭನ ವೈಕುಂಠದಂತಿತ್ತು.


ಪ್ರಥಮವಾಗಿ ಹಿಂದಿನ ದಿನ ಪದ್ಮನೊಟ್ಟು ಸ್ಥಳದ ನಾಗಬೆರ್ಮ, ನಾಗ, ಲೆಕ್ಕೆಸಿರಿ ಇತರ ದೈವಗಳಿಗೆ ತಂಬಿಲ ನಡೆಸಿ ನಮ್ಮ ಎಲ್ಲಾ ಕಾರ್ಯಕ್ರಮಗಳು ಯಶಸ್ವಿಯಾಗಿ ನೆರವೇರಲಿ ಎಂದು ಪ್ರಾರ್ಥಿಸಲಾಯಿತು. ಆಟದ ದಿನ ಬೆಳಿಗ್ಗೆ ಆರಕ್ಕೆ ಕಟೀಲು ಮೇಳವು ಪದ್ಮನೊಟ್ಟು ಕ್ಷೇತ್ರಕ್ಕೆ ಆಗಮಿಸಿತು. ಅವರನ್ನು ಸ್ವಾಗತಿಸಲಾಯಿತು. ಅವರಿಗೆ ಇರಲು ಸರಿಯಾದ ವ್ಯವಸ್ಥೆ ರೆಡಿಯಾಗಿತ್ತು. ಅಂದು ಬೆಳಗ್ಗೆ ಎಂಟಕ್ಕೆ ಕುಟುಂಬದ ಯಜಮಾನ ಶ್ರೀ ಅಮ್ಮಣ್ಣ ಭಂಡಾರಿಯವರ ” ಕಾವೇರಿ ” ಮನೆಯಲ್ಲಿ ಗಣಹೋಮ, ಸತ್ಯನಾರಾಯಣ ಪೂಜೆ ನಡೆಸಲಾಯಿತು. ಮಧ್ಯಾಹ್ನ ಹನ್ನೆರೆಡುವರೆಗೆ ಸರಿಯಾಗಿ ನಮ್ಮ ಪೇಜಾವರ ಮಠದ ಹಿರಿಯ ಶ್ರೀಗಳ ಆಗಮನ. ಪದ್ಮನೊಟ್ಟು ಬಸ್ ತಂಗುದಾಣದ ಮುಖ್ಯ ದ್ವಾರದಲ್ಲಿ ನಮ್ಮ ಶ್ರೀಗಳಿಗೆ ಭವ್ಯ ಸ್ವಾಗತ. ಕೊಂಬು, ವಾದ್ಯ,ಬ್ಯಾಂಡ್ ಗಳ ಸ್ವರದ ಮುಂದೆ ಸಂಭ್ರಮದಿಂದ ಸಂಭ್ರಮಿಸುವ ಎಲ್ಲರಿಗೂ ಶ್ರೀಗಳ ಆಗಮನವು ತಾವೆಲ್ಲ ಮಥುರಾದಲ್ಲಿ ಇದ್ದಂತೆ ಭಾವಿಸುತ್ತಿತ್ತು. ಚೆಂಡೆಗಳ ಶಭ್ದಕ್ಕೆ ಶ್ರೀಗಳ ಆಗಮನವು ಎಲ್ಲರನ್ನೂ ರೋಮಾಂಚನಗೊಳಿಸುತ್ತಿತ್ತು. ಜೈನರ ತತ್ವವನ್ನು ಅಳವಡಿಸಿ ಕೊಂಡು ಜನಿಸಿದ ಪದ್ಮನೊಟ್ಟು ಈಗ ಪವಿತ್ರ ಕ್ಷೇತ್ರ ಆಗಿ ಬಿಟ್ಟಿತ್ತೇ ಎಂದೆನಿಸುತ್ತಿತ್ತು. ಕದೊನಿ, ಗರ್ನಾಲ್, ಪಟಾಕಿ, ಸುಡುಮದ್ದು ಶಭ್ದ ಕೊಲಕೆ ಇರ್ವತ್ತೂರು ಗ್ರಾಮವನ್ನು ದಾಟಿ ಇತರ ಗ್ರಾಮಗಳನ್ನು ಹಾಯ್ದು ಕಾರ್ಲ ತಲುಪಿತ್ತು. ಕಾವೇರಿಯಲ್ಲಿ ಶ್ರೀಗಳು ಎಲ್ಲರಿಗೂ ಅಕ್ಷತೆ ಕೊಟ್ಟು ಆಶೀರ್ವದಿಸಿದರು. ಆಟದ ಸೇವಾಕರ್ತ ಮುಂಬಾಯಿ ಉದ್ಯಮಿ ಇರ್ವತ್ತೂರು ಶಿವರಾಮ ಬಿ.ಭಂಡಾರಿ ಇವರ ಜನ್ಮ ದಿನ ಈ ದಿನವಾಗಿತ್ತು. ಅವರನ್ನು ಮತ್ತು ಅವರ ಕುಟುಂಬದವರನ್ನು ಶ್ರೀಗಳು ವಿಶೇಷವಾಗಿ ಆಶೀರ್ವಾದಿಸಿದರು. ಸಂಜೆಯ ಸಮಯ. ಅತ್ತ ಸೂರ್ಯನನ್ನು ಸ್ವಾಗತಿಸಲು ಆಗಲೇ ಸಮುದ್ರ ರಾಜನು ತಯಾರಾಗಿದ್ದ. ಸೂರ್ಯನ ಕೆಂಪಾದ ಕಿರಣಗಳು ಸಮುದ್ರವನ್ನು ಆಕರ್ಷಿಸುತ್ತಿದ್ದ ನೀರೆಲ್ಲ ಕೆಂಪಾಗಿ ಪ್ರಕಾಶಮಾನವಾಗಿ ಹೊಳೆಯಲು ಆರಂಭಿಸಿತ್ತು.. ಇತ್ತ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವರ ಪೆಟ್ಟಿಗೆಯನ್ನು ನಮ್ಮೂರ ಪಿತ್ತಿಲ್ ಶ್ರೀನಿವಾಸ ಭಟ್ಟರ ಮನೆಯಿಂದ ಆಟದ ಚೌಕಿಗೆ ಬ್ಯಾಂಡ್, ವಾದ್ಯ, ಚೆಂಡೆ, ಕದೊನಿ, ಗರ್ನಾಲ್, ಸುಡುಮದ್ದು ಅಬ್ಬರದಿಂದ ಬ್ರಹತ್ ಮೆರವಣಿಗೆ ಮೂಲಕ ತರಲಾಯಿತು. ಆಗಲೇ ಸೂರ್ಯ ದೇವನು ಪಶ್ಚಿಮ ದಿಕ್ಕಿನಲ್ಲಿ ಸಮುದ್ರಕ್ಕೆ ತನ್ನ ಕೆಂಪಾದ ಕಿರಣಗಳನ್ನು ಚಾಚಿದಂತೆ ಒಂದಷ್ಟು ಕೆಂಪಾದ ಕಿರಣಗಳನ್ನು ಸಂಭ್ರಮದ ಪದ್ಮನೊಟ್ಟು ಕ್ಷೇತ್ರಕ್ಕೂ ಚೆಲ್ಲಿದ್ದನು. ದೇವರ ಪಟ್ಟಿಗೆಯನ್ನು ತನ್ನ ಕೆಂಪಾದ ಕಿರಣಗಳಿಂದ ಸ್ವಾಗತಿಸಿದ. ಅತ್ತ ಸಮುದ್ರ ಕೆಂಪಾದಂತೆ ಇತ್ತ ನೆರೆದ ಭಕ್ತ ಸಮೂಹ ಕೆಂಪಾಗಿ ಹೊಳೆಯುತ್ತಿದ್ದರು. ದೇವರ ಪೆಟ್ಟಿಗೆಯನ್ನು ಕಾರಿನಲ್ಲಿ ತರುವ ಬದಲಾಗಿ ಸ್ವತಃ ಶ್ರೀನಿವಾಸ ಭಟ್ಟರೇ ಹೊತ್ತು ತಂದಿರುವುದು ವಿಶೇಷವಾಗಿತ್ತು. ಕಟೀಲು ಅಸ್ರಣ್ಣರು ಸಂಭ್ರಮದ ಪದ್ಮನೊಟ್ಟು ಸೇವೆ ಆಟದಲ್ಲಿ ಭಾಗವಹಿಸಿ ಭಕ್ತರನ್ನೆಲ್ಲಾ ಆಶೀರ್ವಾದ ಮಾಡಿರುವುದು ಮತ್ತು ಆಸೀನದಲ್ಲಿ ಕೂತು ಆಟ ವೀಕ್ಷಿಸಿರುವುದು ಇನ್ನೊಂದು ಧಾರ್ಮಿಕತೆಯ ಪುಣ್ಯದ ತುಣುಕು ಸಂಭ್ರಮದ ಪದ್ಮನೊಟ್ಟು ಇಲ್ಲಿ ಬಿದ್ದಿರುವುದು ಸೌಭಾಗ್ಯವೇ ಸರಿ.

ಸಾಣೂರು ದೇಂದ ಬೆಟ್ಟು ಮಹಾಲಿಂಗೇಶ್ವರ ದೇವಾಲಯದ ಧರ್ಮದರ್ಶಿ ಶ್ರೀರಾಮ ಭಟ್ಟರು, ಇರ್ವತ್ತೂರು ವೇಣುಗೋಪಾಲ ಕ್ರಷ್ಣ ದೇವಾಲಯದ ಧರ್ಮದರ್ಶಿ ನಾರಾಯಣ ಭಟ್ಟರು ಸಂಭ್ರಮದ ಪದ್ಮನೊಟ್ಟು ಆಟದಲ್ಲಿ ಭಾಗವಹಿಸಿದ್ದರು. ಅಲ್ಲದೆ ಹಲವು ದೇವಾಲಯಗಳ ಅಧ್ಯಕ್ಷರು ,ಕಾರ್ಯದರ್ಶಿಗಳು ಆಗಮಿಸಿದ್ದರು. ಅದೇ ರೀತಿಯಲ್ಲಿ ರಾಜಕಾರಣಿಗಳು ತಮ್ಮ ಒತ್ತಡದ ಕೆಲಸದಲ್ಲಿದ್ದರೂ ಸಂಭ್ರಮದ ಆಟದಲ್ಲಿ ಕಾಣುತ್ತಿದ್ದರು. ಕೆಲವು ಉದ್ಯಮಿಗಳೂ ಬಂದು ಸಂಭ್ರಮಿಸಿದ್ದರು. ತಾರೀಕು 2/2/2019 ರಿಂದ 4/2/2019 ರ ವರೆಗೆ ಸಂಭ್ರಮದ ಪದ್ಮನೊಟ್ಟು ಇಲ್ಲಿ ಅನ್ನ ಸಂತರ್ಪಣೆ ನಡೆದಿದೆ. ತಿಂಡಿ ಪಾನೀಯ ವಿತರಿಸಲಾಗಿದೆ . ಹೆಸರಾಂತ“ಕೂಷ್ಪಾಂಡಿನಿ ಕೆಟರರ್ಸ್” ನಲ್ಲೂರು ಇವರ ರುಚಿ ರುಚಿಯಾದ ಊಟ, ಪಾಯಸ, ಪಾನೀಯ, ತಿಂಡಿಗಳು ಅಧ್ಭುತ. ಇಲ್ಲಿಯ ಪ್ರಸಿದ್ಧ ವಿ.ಕೆ.ಡೆಕೋರೇಟರ್ಸ್ ಇವರಿಂದ ಸಂಭ್ರಮದ ಪದ್ಮನೊಟ್ಟು ಇನ್ನಷ್ಟು ವಿವಿಧ ಅಲಂಕಾರಗಳಿಂದ ಕಂಗೊಳಿಸುತ್ತಿತ್ತು. ವ್ಯವಸ್ಥೆ ಅಚ್ಚುಕಟ್ಟಾಗಿತ್ತು. ಆಸನಗಳು ಶುಭ್ರವಾಗಿತ್ತು. ಕೋರಂಜೆ ಶಾಲೆ, ಕೋರಂಜೆ ಫ್ರಂಡ್ಸ್ ಯುವಕರ ಸಹಕಾರ, ಪ್ರೋತ್ಸಾಹವು ಆರಂಭದಿಂದ ಕೊನೆಯವರೆಗೂ ಕಂಡು ಬಂದಿತ್ತು.

50-55 ವರ್ಷಗಳ ಹಿಂದಿನ ನೆನಪು. ಇಂದು ನಡೆದ “ಸಂಭ್ರಮದ ಪದ್ಮನೊಟ್ಟು” ಇಲ್ಲಿ ನಡೆದ “ಶ್ರೀ ಕಟೀಲು ಕ್ಷೇತ್ರ ಮಹಾತ್ಮೆ” ಎಂಬ ಪ್ರಸಂಗದ ರಂಗಸ್ಥಳದ ಅಡಿಯಲ್ಲಿ ಅಂದು “ಶ್ರೀ ದೇವಿ ಮಹಾತ್ಮೆ” ಎಂಬ ಪ್ರಸಂಗವನ್ನು ಆಡಿದ್ದರು. ರಮೇಶ,ಹಿರಿಯಣ್ಣ, ಗೋವಿಂದ, ಶ್ಯಾಮ, ಪಾಂಡು, ಶೇಖರ ಇವರೇ ಅಂದಿನ ಕಲಾವಿದರಾಗಿದ್ದರು. ಅವರೆಲ್ಲರೂ ಆಗ ಪ್ರೈಮರಿ ಶಾಲೆಯ ಪುಟಾಣಿಗಳಾಗಿದ್ದರು. ಈಗ ಎಲ್ಲರಿಗೂ 60 ದಾಟಿದೆ. ಇವರಲ್ಲಿ ಶ್ಯಾಮ ಶೆಟ್ಟಿಯವರು ನಂತರದ ವರ್ಷಗಳ ಲ್ಲಿ ಪ್ರಸಿದ್ಧ ಯಕ್ಷಗಾನದ ಕಲಾವಿದರಾಗಿ ಮೆರೆದರು. ಕಟೀಲು ಮೇಳದಲ್ಲೇ ದೇವಿ ಪಾತ್ರ ವಹಿಸಿದ್ದರು. ಹಾಗೂ ಇತರ ಮೇಳದಲ್ಲೂ ಮಿಂಚಿದ್ದರು. ಅವರ ಅಂದಿನ ಪ್ರಥಮ ಆಟದ ಕುಣಿತದ ಹೆಜ್ಜೆ ಇಂದಿನ “ಸಂಭ್ರಮದ ಪದ್ಮನೊಟ್ಟು” ಆಗಿತ್ತು ಎಂದು ನೆನೆದು ನಗುತ್ತಾ ಹೇಳುವರು. ಇಲ್ಲೊಂದು ಖಂಡಿತ ಸತ್ಯದ ಶಕ್ತಿ ಇದೆ ಎನ್ನುವರು ನೀಲ ಶ್ಯಾಮ ಶೆಟ್ರು.ಅಂದಿನ ಎಲ್ಲಾ ಪುಟಾಣಿ ಕಲಾವಿದರು ಅಂದಿನ ದಿನವನ್ನು ನೆನಪಿಸುತ್ತಲೇ ಪೂರ್ತಿ ಆಟವನ್ನು ವೀಕ್ಷಿಸಿದರು. ಅಂಬಿದ ಬೊಞ (ಬೆರಣಿ ಭಸ್ಮ), ಕನಕ್ ದ ಮಜ್ಜಿ (ಕಟ್ಟಿಗೆ ಇದ್ದಿಲು) ಇಲ್ಲಿಯ ನಯವಾದ ಹಳದಿ ಮಣ್ಣು ಇವುಗಳೇ ಅಂದಿನ ಪುಟಾಣಿಗಳ ವೇಷದ ಪೌಡರ್ ಆಗಿತ್ತು. ಹೆಣ್ಣು ಗೆರಟೆಯೇ ಅವರ ಮೈಕಾ ಆಗಿತ್ತು. ಕುಂಟಲ್ ಸೊಪ್ಪುಗಳೇ ಹಣವಾಗಿತ್ತು. ಎಣ್ಣೆಯ ಡಬ್ಬಗಳೇ ಚೆಂಡೆ ಆಗಿತ್ತು. ಅಡಿಕೆ ಹಾಳೆಗಳು ಕಿರೀಟ ಆಗಿತ್ತು. ಕಾಟು ಹೂವುಗಳೇ ಅಲಂಕಾರದ ಶೃಂಗಾರ ಆಗಿತ್ತು. ಪದ್ಮ ಭಂಡಾರಿ ಇವರ ಅಂದಿನ ವಿಶಾಲವಾದ ಬ್ರಹತ್ ಬೊಟ್ಟು ಕಂಡಗಳನ್ನೇ ಕ್ರಮೇಣ ಪದ್ಮನ ಬೊಟ್ಟು , ಪದ್ಮನೊಟ್ಟು ಎಂದರು .

ವರದಿ: ಇಗೋ ಭಂಡಾರಿ, ಕಾರ್ಕಳ.