womensday (2)

ಮಹಿಳಾ ಹಕ್ಕುಗಳ ಹೋರಾಟಕ್ಕಾಗಿ ಮಾರ್ಚ್ 8 ನ್ನು ಮಹಿಳಾ ದಿನಾಚರಣೆಯೆಂದು ಘೋಷಿಸಿದ ಕ್ಲಾರ ಜೆಟ್ಕಿನ್ ರವರನು ನೆನಪಿಸಿಕೊಳ್ಳುತ್ತಾ ವಿಶ್ವದ ಎಲ್ಲಾ ಹೆಣ್ಣು ಮಕ್ಕಳು ತಮ್ಮ ಹಕ್ಕುಗಳ ಬಗ್ಗೆ ಜಾಗೃತಿ ಹೊಂದಬೇಕಿದೆ. ಈಗ ಹೆಚ್ಚಿನ ಎಲ್ಲಾ ಹೆಣ್ಣು ಮಕ್ಕಳು‌ ವಿದ್ಯಾವಂತರು, ಹಣಕಾಸು ಓಡಾಡುತ್ತಿದೆ ಸುಖ ಶಾಂತಿ ನೆಮ್ಮದಿಯಿಂದ ಇದ್ದಾರೆ. ಅವರಿಗೆ ಯಾವುದೇ ರೀತಿಯ ಸಮಸ್ಯೆ ಇಲ್ಲ ಎಂದು ಹೇಳುವವರೇ ಹೆಚ್ಚು.


ಮಹಿಳೆಯರಿಗೆ ಬಜೆಟಿನಲ್ಲಿ ಹಣ ಹಂಚಿಕೆ ಮಾಡುವುದರಿಂದ ಅಥವಾ ಕುಟುಂಬದಲ್ಲಿ ದುಡ್ಡು ಇರುವುದರಿಂದ ಮಹಿಳೆಯರು ಎದುರಿಸುತ್ತಿರುವ ವ್ಯವಸ್ಥೆಯ ಅಡ್ಡಿ ಆತಂಕಗಳು, ಶೋಷಣೆ, ಕೌಟುಂಬಿಕ ದೌರ್ಜನ್ಯಗಳು ನಿವಾರಣೆ ಆಗಬಹುದೇ?

ನಮ್ಮ ಸುತ್ತಲೂ ಕ್ರೂರ ವಿದ್ಯಮಾನಗಳು ನಡೆಯುತ್ತಲೇ ಇರುವುದು ನಿಜವಾದರೂ ಹೆಣ್ಣು ದುಡುಕಿದಳು ತಪ್ಪು ಮಾಡಿದಳು ಎಂದು ಮಹಿಳೆಯನ್ನೇ ಎಲ್ಲರೂ ಹೇಳುವುದು. ಎಳೆಯರ ಬದುಕಿನಲ್ಲಿ ಇತೀಚೆಗೆ ನಡೆಯುವ ವಿಪ್ಲವಗಳು ತೀವ್ರವಾಗಿ ಘಾಸಿಗೊಳ್ಳುತ್ತವೆ. ಪ್ರತಿಯೊಬ್ಬರೂ ಒಂದಲ್ಲ ಒಂದು ಸಮಸ್ಯೆಯನ್ನು ಎದುರಿಸುತ್ತಿದ್ದಾರೆ ನಮ್ಮ ಕಣ್ಣ ಮುಂದೆ ಬೆಳಕಾಗಬೇಕಾದ ಹೆಣ್ಣು ಮಕ್ಕಳು ಗಂಡಿನ ಕಾಮುಕ ಕ್ರೌರ್ಯಕ್ಕೆ ಬಲಿಯಾಗುತ್ತಿದ್ದಾರೆ. ನೊಂದವರು ನೋಯುತ್ತಲೇ ಇರಬೇಕಾದ ಪರಿಸ್ಥಿತಿಗೆ ಜೀವ ಕಂಪಿಸುತ್ತಿದೆ. ಪ್ರತಿದಿನ ನೂರಾರು ಹೊಸ ಹೊಸ ಸುದ್ದಿಗಳು ಘಟನೆಗಳು ನಡೆಯುತ್ತಿರುವುದರಿಂದ ನಾವು ನೆನಪಿಟ್ಟುಕೊಳ್ಳುವುದು ಅಸಾಧ್ಯ .

ಮಹಿಳೆಯರ ಹೆಣ್ಣು ಮಕ್ಕಳ ಮೇಲೆ ಬಸ್ಸಿನಲ್ಲಿ, ರೈಲಿನಲ್ಲಿ, ಕೆಲಸದ ಸ್ಥಳದಲ್ಲಿ, ಎಲ್ಲೆಲ್ಲೂ ಸಾಮೂಹಿಕ ಅತ್ಯಾಚಾರ ಎಂಬುದು ನಾಗರಿಕ ಸಮಾಜ ತಲೆ ತಗ್ಗಿಸುವಂತೆ ಆಗಿದೆ. ಹೆಣ್ಣೆಂದರೆ ದೇಹ ಎಂಬ ಪುರುಷನ ಕ್ರೂರ ಚಿಂತನೆ ಇನ್ನೂ ಹೋಗಿಲ್ಲ ಮಹಿಳೆಯರು ತಮ್ಮ ಸ್ಥಿತಿಯನ್ನು ಸ್ಪಷ್ಟವಾಗಿ ಹೊರಗೆ ಹಾಕಲಾರದ ಸ್ಥಿತಿಗೆ ಪುರುಷ ಪ್ರಧಾನ ಸಮಾಜ ದೂಡಿದೆ. ಇಂದಿನ ಧಾವಂತದ ಬದುಕಿನಲ್ಲಿ ಎಲ್ಲರಿಗೂ ದುಡಿಮೆಯ ಹುಡುಕಾಟ ಎಲ್ಲರೂ ದುಡಿಯುವವರೇ ಆದರೆ ಆ ದುಡಿಮೆಯಲ್ಲಿ ಶಾಂತಿ ಪ್ರೀತಿ, ನೆಮ್ಮದಿ ಇಲ್ಲವಾಗಿದೆ ಇತ್ತೀಚಿಗೆ ಸಂಬಂಧಗಳು ಕೊಳೆತು ನಾರುತಿದೆ! ಮನುಷ್ಯ ಸಂಬಂಧಗಳ ಬಗ್ಗೆ ರೋಸಿ ಹೋಗುವಷ್ಟು ಜಿಗುಪ್ಸೆ ಇತ್ತೀಚಿನ ಹೆಣ್ಣು ಮಕ್ಕಳಿಗೆ ಆಗುತ್ತಿದೆ. ನಂಬಿಕೆ ಸತ್ತಿದೆ ಉಳಿಯುವುದಾದರೂ ಏನು?

ಹಿಂಸೆಯನ್ನು ಅರ್ಥ ಮಾಡಿಕೊಳ್ಳುವ ಸೂಕ್ಷ್ಮ ಸಂವೇದನೆಯ ಗಂಡಸಿಗೂ ಇದು ಒದ್ದಾಟ ಸಂಕಟ ಉಂಟುಮಾಡುತ್ತದೆ. ಹೆಣ್ಣಿನ ಕೊಲೆ ಅತ್ಯಾಚಾರ ಲೈಂಗಿಕವಾಗಿ ಬಳೆಸಿಕೊಳ್ಳುವುದು ಇದೆಲ್ಲವೂ ಆರೋಪಿಯ ರಾಜಕೀಯ ಒಡನಾಟ, ಕುಟುಂಬ, ಜಾತಿಯ ಹಿನ್ನೆಲೆ, ಹಣ, ಅಧಿಕಾರ, ಧರ್ಮ, ಜನಪ್ರತಿನಿಧಿ ಇತ್ಯಾದಿ ಎಲ್ಲಾ ಕಣ್ಣಿಗೆ ಕಾಣುತ್ತಿದೆ. ಅದರಲ್ಲೂ ಹೆಣ್ತನದ ಕಟ್ಟುಪಾಡುಗಳು ಹೆಣ್ಣಿಗೆ ಅವಳ ಬುದ್ಧಿವಂತಿಕೆ ಕೆಲಸ ಎಲ್ಲದಕ್ಕೂ ತಡೆ ನೀಡುತ್ತಿದೆ. ಮಹಿಳೆಯರಿಗೆ ಯಾವಾಗಲೂ ಎರಡನೆಯ ದರ್ಜೆಯ ಸ್ಥಾನಮಾನ ಅವಳು ಪುರುಷನಿಗೆ ಸರಿ ಸಮಾನವಾಗಿ ಬೆಳೆಯಬಾರದು ಸ್ವಾತಂತ್ರವನ್ನು ಅನುಭವಿಸಬಾರದು ಶಿಕ್ಷಣ ಮೊದಲಾದ ಕ್ಷೇತ್ರದಲ್ಲಿ ಆಕೆ ಗಂಡಿಗಿಂತ ಅಥವಾ ಗಂಡನಿಗಿಂತ ಮುಂದಿರಬಾರದು ಎನ್ನುವ ಗಂಡಾಳಿಕೆಯ ಆಲೋಚನೆ ನಿನ್ನೆ ಮೊನ್ನೆಯದಲ್ಲ ಇದು ಕಾಲಾತೀತ ದೇಶಾತೀತವಾದದ್ದು.
ಗಂಡನನ್ನು ಪ್ರಶ್ನಿಸುವ ಹೆಣ್ಣು ಸಭ್ಯಳಲ್ಲ ಎನ್ನುವ ಧೋರಣೆ ಈಗ ಕೂಡ ಮುಂದುವರಿದಿದೆ.

ಮಹಿಳೆಯ ಶಿಕ್ಷಣ, ದಿಟ್ಟತನ, ಸ್ವಾತಂತ್ರ್ಯ ಅವಳ ಯಶಸ್ಸು ಎಲ್ಲವೂ ಕೂಡ ಕುಟುಂಬಕ್ಕೆ ಮೀಸಲು ಅವಳು ಏನಿದ್ದರೂ ಮನೆ ಗಂಡ ಮಕ್ಕಳು ಈ ಚೌಕಟ್ಟಿನ ಒಳಗೆ ಇರಬೇಕು ಎಂಬುದೇ ಆಗಿರುತ್ತದೆ. ಮಹಿಳೆ ಅನ್ಯಾಯದ ವಿರುದ್ಧ ಶೋಷಣೆಯ ವಿರುದ್ಧ ಮಾತನಾಡಿದರೆ ಅಂತ ಮಹಿಳೆಯರನ್ನು ಬಜಾರಿ ಎಂದು ಕರೆಯುವ ಮೂಲಕ ಅಥವಾ ಅವಳ ಶೀಲದ ನಡತೆಯ ಬಗ್ಗೆ ಶಂಕಿಸಿ ಮಾತನಾಡಿ ಮಾಧ್ಯಮಗಳಲ್ಲಿ ಹಂಚುವ ಸಾಮಾಜಿಕ ಜಾಲ ತಾಣಗಳಲ್ಲಿ ಅವಳ ತೇಜೋವಧೆ ಮಾಡಿ ಅವಳ ಧೈರ್ಯವನ್ನು ಕುಗ್ಗಿಸುವ ಕೆಲಸ ಪುರುಷ ಪ್ರಧಾನ ಸಮಾಜದಲ್ಲಿ ವ್ಯವಸ್ಥಿತವಾಗಿ ಆಗುತ್ತಿದೆ. ಇದಕ್ಕೆ ಒಳ ಹೊರಗೆಂಬ ವ್ಯತ್ಯಾಸವಿಲ್ಲ. ಇಲ್ಲಿ ನ್ಯಾಯದ ಪರವಾಗಿ ನಿಂತ ಮಹಿಳೆಯನ್ನು ಇತರ ಹೆಣ್ಣು ಮಕ್ಕಳ ದೃಷ್ಟಿಯಲ್ಲಿ ಕೆಟ್ಟವಳಂತೆ ಬಿಂಬಿಸುವ ಚಾಳಿ ಇತ್ತೀಚಿಗಂತೂ ಜಾಸ್ತಿಯಾಗಿದೆ ಪ್ರಸ್ತುತ ಹೆಣ್ಣಿನ ಅತ್ಯಾಚಾರ ಕೊಲೆ ನಡೆದಾಗ ಅವಳ ಜಾತಿ ಧರ್ಮ ನೋಡಿ ಆರೋಪಿಯ ಜಾತಿ ಧರ್ಮ ರಾಜಕೀಯ ಹಿನ್ನೆಲೆ ನೋಡಿ ವಿರೋಧಿಸುವ ಮಟ್ಟಕ್ಕೆ ಬಂದಿದೆ. ಒಬ್ಬ ಹೆಣ್ಣು ಮಗಳ ಕೊಲೆ ಅತ್ಯಾಚಾರ ಆದಾಗ ಅವಳ ಜಾತಿಯವನೇ ಅಥವಾ ಅವಳ ಧರ್ಮದವನೇ ಆರೋಪಿಯಾಗಿದ್ದರೆ ಎಲ್ಲರೂ ವಿರೋಧಿಸುವ ಬದಲು ನಮಗೆಕ್ಕೆ ಅವಳದ್ದೇ ಜಾತಿ ಧರ್ಮ ಎಂದು ಸುಮ್ಮನಾಗಿರುತ್ತೇವೆ. ಅಥವಾ ಬೇರೆಯವರು ನ್ಯಾಯ ಕೇಳಿದರೆ ನಿನಗೆ ಯಾಕೆ ಅದು ನಮ್ಮ ಜಾತಿ ಧರ್ಮ ಎಂದು ನ್ಯಾಯ ಕೇಳುವವರನ್ನೇ ಬಾಯಿ ಮುಚ್ಚಿಸುವ ಕೆಲಸ ನಿರಂತರವಾಗಿರುತ್ತದೆ. ಅನ್ಯಾಯಕ್ಕೆ ಒಳಗಾದ ಹೆಣ್ಣಿನ ಬಗ್ಗೆ ಆ ಮನೆಯವರ ನೋವಿನ ಮನಸ್ಥಿತಿ ಅವರ ದುಃಖಕ್ಕೆ ನೋವಿಗೆ ಬೆಲೆಯೇ ನೀಡದೆ ಇರುವ ಸ್ಥಿತಿ ನಿರ್ಮಾಣ ಆಗುತ್ತಿರುವುದು ಇಂದಿನ ದುರಂತ. ಇದಕ್ಕೆ ಪುರುಷ ಪ್ರಧಾನ ವ್ಯವಸ್ಥೆ ಮಹಿಳೆಯರನ್ನೇ ಬಲಿಪಶು ಮಾಡುತ್ತಿದೆ.

ಮಹಿಳೆ ಮನೆ ಗಂಡ ಮಕ್ಕಳು ಹಿರಿಯರನ್ನು ಸಂಭಾಳಿಸಿ, ಬೇರೆ ಕೆಲಸ ಅಥವಾ ಅವಳ ಇಷ್ಟವಾದ ಬರವಣಿಗೆ ಇತ್ಯಾದಿ ಯಾವುದೇ ಕೆಲಸ ಕಾರ್ಯಗಳನ್ನು ಮಾಡುವಾಗ ಕೂಡ ಗಂಡೆಂಬ ವ್ಯಕ್ತಿಯಿಂದ ನಿರಂತರ ಶೋಷಣೆ ಎದುರಿಸಬೇಕಾಗುತ್ತದೆ. ಬೇಕು ಅಂತಲೇ ಕೈ ಸನ್ನೇ ಕಣ್ಣು ಸನ್ನೆ ಮಾಡೋದು ಕೆಟ್ಟ ಶಬ್ದದಿಂದ ಸಂದೇಶ ಕಳಿಸುವುದು‌ ಹಲವಾರು ರೀತಿಯಲ್ಲಿ ಕಿರುಕುಳ ನೀಡುತ್ತಿದ್ದಾರೆ. ಅದಕ್ಕೆ ಮಹಿಳೆ ಪ್ರತ್ಯುತ್ತರ ನೀಡದಿದ್ದರೆ ಕೆಲಸದ ಸಮಯದಲ್ಲಿ ಅವಳ ಕೆಲಸಕ್ಕೆ ಸಹಕಾರ ನೀಡುವುದಿಲ್ಲ ಎಂದೋ,ನೀನು ಬರೆದ ಲೇಖನವನ್ನು ಪ್ರಕಟಿಸುವುದಿಲ್ಲ ಎಂದೋ ಬೆದರಿಕೆಯನ್ನು ಕೇಳಬೇಕಾಗುತ್ತದೆ. ಎಷ್ಟೋ ಮಹಿಳೆಯರು ಈ ರೀತಿಯ ಹಿಂಸೆ ತಾಳಲಾರದೆ ಕೆಲಸ ಬಿಟ್ಟಿರೋದು, ಅಥವಾ ತಮ್ಮ ಇಷ್ಟವಾದ ಸಾಮಾಜಿಕ ಕೆಲಸವನ್ನು ಮಾಡದೆ ತಟಸ್ಥರಾಗಿ ಇರುವುದು ಕಾಣಬಹುದು. ಇಂತಹ ಗಂಡಸರು ಸಮಾಜದ ದೃಷ್ಟಿಯಲ್ಲಿ ಸಭ್ಯ ಮುಖವಾಡವನ್ನು ಧರಿಸಿರುತ್ತಾರೆ .ಅವಳಲ್ಲಿ ವೈಯಕ್ತಿಕವಾಗಿ ಕೆಟ್ಟ ರೀತಿಯಲ್ಲಿ ವರ್ತಿಸುತ್ತಾರೆ. ಆದರೆ ಇದೆಲ್ಲದಕ್ಕೂ ಮಹಿಳೆಯೆ ಹೊಣೆಗಾರಲಾಗುತ್ತಾಳೆ. ತನ್ನ ಮನೆಯಲ್ಲೂ ಸಮಾಜದ ಕಣ್ಣಲ್ಲು ಕೆಟ್ಟ ಹೆಂಗಸಾಗಿ ಉಳಿಯುತ್ತಾಳೆ.
ಎಲ್ಲಾ ರಂಗಗಳಲ್ಲೂ ಮಹಿಳೆಯರನ್ನು ದಾಳದಂತೆ ಬಳಸಿಕೊಳ್ಳುತ್ತಿದೆ. ಮಹಿಳೆಯರಿಗೆ ಮೌನ ಮುರಿದು ದೌರ್ಜನ್ಯದ ವಿರುದ್ಧ ಎದ್ದು ನಿಲ್ಲುವ ಶಕ್ತಿಯನ್ನು ಯಾವುದೇ ಜಾತಿ ಧರ್ಮ ಕೊಡುತ್ತಿಲ್ಲ. ಸಂಪ್ರದಾಯವಾದಿ ಪುರುಷರ ನೆರಳಿನಲ್ಲಿ ಅರಳುವ ಧಾರ್ಮಿಕ ಸಂಘಟನೆಗಳ ಮಹಿಳೆಯರು ಪುರುಷರ ಭಾಷೆಯನ್ನೇ ಮಾತಾಡುತ್ತಾರೆ ಬೇರೆ ಯೋಚನೆಗಳು ಅವರಿಗೆ ಬರುವುದಿಲ್ಲ ಸ್ವತಂತ್ರವಾಗಿ ಮಾತನಾಡುವಷ್ಟೇ ತಮ್ಮದೇ ಅಭಿಪ್ರಾಯ ಹೇಳುವಷ್ಟು ಪ್ರಶ್ನಿಸುವಷ್ಟು ಅವರಿಗೆ ಅವಕಾಶ ಸಿಗುವುದೇ ಇಲ್ಲ. ಸೂಕ್ಷ್ಮ ಸಂವೇದನೆ, ಅನುಭೂತಿ, ಬಾವುಕತೆ, ಸೋದರಿತ್ವಗಳನ್ನು ಅನುಭವಿಸಲು ಸಾಧ್ಯವಾಗುವುದಿಲ್ಲ ಮೌನವಾಗಿ ಹೌದಮ್ಮಗಳಾಗಿ ಉತ್ತಮ ಮಹಿಳೆಯರಾಗಿದ್ದಾರೆ .


ಎಲ್ಲಾ ಧರ್ಮಗಳ ವ್ಯವಸ್ಥೆ ಒಳಗೆ ಸಂಘಟಿತರಾದ ಮಹಿಳೆಯರ ಸ್ಥಿತಿ ಹೀಗೆ ಇದೆ. ಇಲ್ಲಿನ ಶೋಷಣೆ ಕೌಟುಂಬಿಕ ದೌರ್ಜನ್ಯ ಸಹಿಸಿ ಮೌನವಾಗಿ ಇರುವುದರಿಂದ ಅವಳು ಉತ್ತಮ ಮಹಿಳೆ ಒಳ್ಳೆಯ ಮಹಿಳೆ ಆದರ್ಶ ಮಹಿಳೆ ಎನಿಸಿಕೊಳ್ಳಲು ಹಾತೊರೆಯುತ್ತಿದ್ದಾಳೆ. ಇದು ಇಂದಿನ ಮಹಿಳೆಯರ ಪ್ರಸ್ತುತ ಸ್ಥಿತಿ ಆಗಿದೆ. ಶೋಷಣೆ ದೌರ್ಜನ್ಯ ಎಲ್ಲೋ ಯಾರ ಮೇಲೋ ನಡೆಯಲಿ ನಾವೆಲ್ಲರೂ ಮಹಿಳೆಯರು ಒಗ್ಗಟ್ಟಾಗಿ ಅದನು ಎದುರಿಸೋಣ ಸಮ ಸಮಾಜವನ್ನು ಕಟ್ಟೋಣ .

ಎಲ್ಲಾರಿಗೂ ಮಹಿಳಾ ದಿನಾಚರಣೆಯ ಶುಭಾಶಯಗಳು.

• ವನಿತಾ ಅರುಣ್ ಭಂಡಾರಿ ಬಜಪೆ

Leave a Reply

Your email address will not be published. Required fields are marked *