ಮಾರ್ಚ್ 8 ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ದೇಶದಾದ್ಯಂತ ಆಚರಿಸಲಾಗುತ್ತಿದೆ. ಆಚರಣೆಯ ಮುಖ್ಯ ಉದ್ದೇಶ. ಆ ದಿನ ಮಹಿಳೆಯರ ಸ್ಥಾನಮಾನ ಪ್ರಸ್ತುತ ಸ್ಥಿತಿಗತಿಗಳ ಬಗ್ಗೆ ಚರ್ಚಿಸಿ ಮಹಿಳೆಯರ ಸಮಗ್ರ ಬೆಳವಣಿಗೆಗೆ ಬೇಕಾದ ಕ್ರಮ ಕೈಗೊಂಡು ಅದನ್ನು ವರ್ಷವಿಡಿ ಅನುಷ್ಠಾನಗೊಳಿಸುವ ಮೂಲಕ ಮಹಿಳೆಯರ ರಕ್ಷಣೆ, ಬೆಳವಣಿಗೆಗೆ ಪೂರಕವಾದ ವಾತಾವರಣ ಕಲ್ಪಿಸುವುದಾಗಿದೆ.
ಮಹಿಳಾ ದಿನಾಚರಣೆ ಎಂಬುದು ನಮಗೆ ಸುಲಭವಾಗಿ ದಕ್ಕಿದ ದಿನ ಅಲ್ಲ, 1914 ನ್ಯೂಯಾರ್ಕ್‌ನಲ್ಲಿ ಕ್ಲಾರಾ ಜೆಟ್‌ಶಿನ್ ಎಂಬ ಕಾರ್ಮಿಕ ಮಹಿಳೆ ಕೆಲಸಕ್ಕಾಗಿ, ಸಮಾನ ವೇತನಕ್ಕಾಗಿ, ಹೆರಿಗೆ ಸೌಲಭ್ಯಕ್ಕಾಗಿ ತಿಂಗಳುಗಟ್ಟಲೆ ಹೋರಾಟ ನಡೆಸಿ ಗೆಲುವು ಸಾಧಿಸಿದ ದಿನ. ಹುಟ್ಟಿನಿಂದ ಸಾಯುವವರೆಗೂ ದಿನನಿತ್ಯ ಒಂದಿಲ್ಲೊಂದು ಸಂಘರ್ಷದಲ್ಲಿ ಬಿದ್ದು ಅಲ್ಲಿಂದ ಮೇಲೆ ಬರಲು ಪ್ರಯತ್ನ ಪಡುತ್ತಿರುವ, ಸಂಘರ್ಷದಿಂದ ಸಾಧಿಸಿದ ಒಂದು ಸ್ಮರಣೆಯ ದಿನವೇ ಇದು. ವಿಶ್ವಸಂಸ್ಥೆ 1975ರಲ್ಲಿ ಈ ದಿನವನ್ನು ವಿಶ್ವ ಮಹಿಳಾ ದಿನ ಎಂದು ಘೋಷಿಸಿತು.
ಇಂದಿನ ಮಹಿಳೆಗೆ “ಆಧುನಿಕ ಮಹಿಳೆ” ಎಂಬ ಹೆಗ್ಗಳಿಕೆಯೇನೋ ದೊರೆತಿದೆ. ಆದರೆ, ಅದರ ಹಿಂದೆ ಆಕೆ ಅದೆಷ್ಟು ನೋವನುಭವಿಸುತ್ತಾಳೆ ಎಂಬುದು ಹಲವರ ಅರಿವಿಗೇ ಬರುವುದಿಲ್ಲ. ಬೆಳಗಾಯಿತೆಂದರೆ ಅದೇ ಗಡಿಬಿಡಿ, ಆತುರದಲ್ಲಿ ತಿಂಡಿ ಅಡುಗೆ ಮುಗಿಸಿ, ಮಕ್ಕಳಿಗೆ ಸ್ನಾನ ಮಾಡಿಸಿ, ತರಾತುರಿಯಲ್ಲಿ ತಯಾರಾಗಿ, ಅರ್ಧಂಬರ್ಧ ತಿಂಡಿ ತಿಂದು, ಹೆಗಲಮೇಲೊಂದು ಬ್ಯಾಗು ಏರಿಸಿಕೊಂಡು ಹೊರಟರೆ ಮತ್ತೆ ನಿಲ್ಲುವುದು ಕಚೇರಿಯಲ್ಲೇ. ಮತ್ತದೇ ಕಚೇರಿ ವ್ಯವಹಾರ, ನಗುಮೊಗ, ಸಹೋದ್ಯೋಗಿಗಳೊಂದಿಗೆ ಮಾತುಕತೆ, ಸಂಜೆಯಾಯಿತೆಂದರೆ ಕೆಲಸ ಮುಗಿಸಿ ಮನೆಗೆ ಹೊರಡುವ ಧಾವಂತ…. ಮತ್ತೆ ಮನೆ ಸೇರಿ ಮಕ್ಕಳ ಆರೈಕೆ, ಅವರಿಗೆ ತಿಂಡಿ ತಯಾರಿ, ಗಂಡನಿಗೆ ಕಾಫಿ-ಟೀ…..ಹೀಗೆ ತನ್ನ ಬಗ್ಗೆ ಒಂದು ನಿಮಿಷವೂ ಆಲೋಚನೆ ಮಾಡಲಾಗದಷ್ಟು ಒತ್ತಡ ಇದ್ದರೂ ಮನೆಯ ಯಾವ ಸದಸ್ಯರಿಗೂ ರೇಗಬಾರದು, ಯಾರ ಮೇಲೂ ಸಿಟ್ಟಾಗ ಬಾರದು ಯಾರಿಗೂ ನೋವುಂಟು ಮಾಡಬಾರದು……..
ಇದೇನಿದು? ಯಾರ ಬಗ್ಗೆ ಹೇಳಲಾಗುತ್ತಿದೆ ಎಂಬ ಗೊಂದಲ ಉಂಟಾಗುತ್ತಿದೆಯಲ್ಲವೇ? ಇದು ನಮ್ಮ ಇಂದಿನ ಮಹಿಳೆಯ ದಿನಚರಿ. ಅಂದಿನ ಮಹಿಳೆಯಂತೆ ನಾಲ್ಕು ಗೋಡೆಗಳ ನಡುವೆ, ಗಂಡ, ಮನೆ, ಮಕ್ಕಳು, ಸಂಸಾರ ಎನ್ನುತ್ತಾ ಗಂಡ ಹೇಳಿದ್ದನ್ನು ಕೇಳಿಕೊಂಡು, ಹೊಡೆದರೆ ಹೊಡೆಸಿಕೊಂಡು, ಒದ್ದರೆ ಒದೆಸಿಕೊಂಡು, ತಮ್ಮಲ್ಲಿ ಮಡುಗಟ್ಟಿಹೋಗಿರುವ ಮತ್ತು ಒತ್ತಾಯಪೂರ್ವಕವಾಗಿ ಹತ್ತಿಕ್ಕಿಕೊಂಡಿರುವ ನೋವು ನರಳಿಕೆ, ಯಾತನೆಗಳನ್ನು ಅನುಭವಿಸಿ ಜೀವನ ಸಾಗಿಸಬೇಕಾದ ಒಂದು ಪರಿಸ್ಥಿತಿ ಈಗಿಲ್ಲ(ಬಹುತೇಕ ಕಡಿಮೆಯಾಗಿದೆ. ಎಲ್ಲ ಮಹಿಳೆಯರಿಗೆ ಈ ಅವಕಾಶ ಇನ್ನೂ ಸಿಕ್ಕಿಲ್ಲ)
ದಿನ ಬೆಳಗಾಯಿತೆಂದರೆ ಮನೆ, ಗಂಡ-ಮಕ್ಕಳು, ಕೆಲಸ, ಹಬ್ಬ ಹರಿದಿನಗಳು ಬಂತೆಂದರೆ ಪೂಜೆ-ಪುನಸ್ಕಾರ, ರಜಾ ದಿನಗಳು ಬಂತೆಂದರೆ ಮಕ್ಕಳಿಗಾಗಿ ಸಿಹಿತಿಂಡಿ ತಯಾರಿ, ಪ್ರವಾಸ, ಈ ಮಧ್ಯೆ ಬಿಡುವು ಸಿಕ್ಕಾಗಲೆಲ್ಲಾ ಸಮಾಜಸೇವೆಗೆ ತನ್ನನ್ನು ತೊಡಗಿಸಿಕೊಳ್ಳುತ್ತಾ ಎಲ್ಲವನ್ನೂ ಬಹಳ ಜಾಣ್ಮೆಯಿಂದ ನಿಭಾಯಿಸುವ ಚಾಕಚಕ್ಯತೆ ಹೊಂದಿದ್ದಾಳೆ. ಕ್ರೀಡೆ, ರಾಜಕೀಯ, ಕಲೆ, ಸಾಹಿತ್ಯ, ರಂಗಭೂಮಿ, ಸೇನೆ- ಪೋಲೀಸ್, ವೈದ್ಯಕೀಯ, ವಿಜ್ಞಾನ-ತಂತ್ರಜ್ಞಾನ, ಶಿಕ್ಷಣ…ಹೀಗೆ ಪ್ರತಿಯೊಂದು ಕ್ಷೇತ್ರದಲ್ಲೂ ಮಹಿಳೆ ತನ್ನದೇ ಆದ ಛಾಪು ಮೂಡಿಸಿದ್ದಾಳೆ.
ಕೇವಲ ಮನೆ ಕೆಲಸಕ್ಕೆ, ಸಂಸಾರ ನೌಕೆ ಸಾಗಿಸುವ ಕಾರ್ಯಕ್ಕೆ ಮಾತ್ರ ಸೀಮಿತವಾಗಿದ್ದ ಮಹಿಳೆ, ಇಂದು ಪುರುಷರಿಗೆ ಸರಿಸಾಟಿಯಾಗಿ ಸ್ವಸಾಮರ್ಥ್ಯದಿಂದಲೇ ಲಿಂಗಸಮಾನತೆ ಸಾಧಿಸುವತ್ತ ದೃಢ ಹೆಜ್ಜೆಯಿಟ್ಟಿದ್ದಾಳೆ. ಹಿಂದೆಲ್ಲಾ ಗಂಡು ಹೇಳಿದ ಮಾತುಗಳಿಗೆ ತಲೆಯಾಡಿಸಿ ಅದು ಸರಿಯಿರಲಿ, ತಪ್ಪಿರಲಿ ಅದನ್ನು ಚಾಚೂ ತಪ್ಪದೆ ಪಾಲಿಸುತ್ತಿದ್ದ ಹೆಣ್ಣು ಇಂದು ಅದನ್ನು ಪ್ರಶ್ನಿಸುವಂತಹ ಹಂತಕ್ಕೆ ತಲುಪಿದ್ದಾಳೆ. ಇದಕ್ಕೆ ಮುಖ್ಯ ಕಾರಣ, ಇಂದು ಮಹಿಳೆ ಸುಶಿಕ್ಷಕಿತಳಾಗಿದ್ದಾಳೆ. ಕೇವಲ ಮನೆಯ ಆಗುಹೋಗುಗಳಷ್ಟೇ ಅಲ್ಲ, ಹೊರ ಜಗತ್ತಿನ ಅರಿವು, ಸಂದರ್ಭವನ್ನು ನಿಭಾಯಿಸುವ ಶಕ್ತಿ, ವಹಿಸಿದ ಕಾರ್ಯವನ್ನು ಪ್ರಾಮಾಣಿಕವಾಗಿ ಅಚ್ಚುಕಟ್ಟಾಗಿ ನಿಭಾಯಿಸುವ ಚಾಕಚಕ್ಯತೆ, ಜಾಣ್ಮೆ ಅವಳಲ್ಲಿದೆ. ಈ ಅಂಶಗಳು ಆಕೆಯ ರಕ್ತದಲ್ಲೇ ಕರಗತವಾಗಿವೆಯಾದರೂ ಅದನ್ನು ಮುಕ್ತವಾಗಿ ಬಹಿರಂಗಪಡಿಸಲು ಈ ಸಮಾಜ ಆಕೆಗೆ ಹಿಂದೆದೂ ಅವಕಾಶವನ್ನೇ ನೀಡಿರಲಿಲ್ಲವೇನೋ? ಅದಕ್ಕಾಗಿಯೇ ಇಂದು ಬಹುತೇಕ ಕ್ಷೇತ್ರಗಳಲ್ಲಿ ಮಹಿಳೆಯರಿಗೇ ಹೆಚ್ಚಿನ ಆದ್ಯತೆ ಸಿಗುತ್ತಿದೆ ಎಂದರೆ ತಪ್ಪಾಗಲಾರದು.
“ಆಧುನಿಕ ಮಹಿಳೆ” ಎಂಬ ಹೆಗ್ಗಳಿಕೆಯೇನೋ ಇದೆ. ಆದರೆ ಅದರ ಹಿಂದೆ ಆಕೆ ಅದೆಷ್ಟು ನೋವನ್ನು ಅನುಭವಿಸುತ್ತಾಳೆ ಎಂಬುದು ನೋಡುಗರಿಗೆ ಅರಿವಿಗಿಲ್ಲ. ದುಡಿಯುವ, ತಿಂಗಳಾರಂಭದಲ್ಲಿ ಸಂಬಳ ಎಣಿಸುವ, ಗಂಡಸರಂತೆ ಆಫೀಸಿಗೆ ಹೋಗುವ ಸ್ವಾತಂತ್ರವಿದ್ದರೂ ಮನೆಯ ಕೆಲಸದ ಜತೆಗೆ ದುಡಿಮೆಯ ಕೆಲಸದ ಹೊರೆಯೂ ಆಕೆಯನ್ನು ಬಳಲಿ ಬೆಂಡಾಗಿಸುತ್ತಿದೆ. ಈ ಹಿಂದೆ ಮನೆಯ ಜವಾಬ್ದಾರಿಯನ್ನಷ್ಟೇ ಹೊರುತ್ತಿದ್ದ ಆಕೆಯ ಕಾರ್ಯ ದ್ವಿಗುಣಗೊಂಡಿದೆ. ಇವೆಲ್ಲದರೊಂದಿಗೆ ಹೋಗುವಾಗ, ಬರುವಾಗ ದಾರಿಯಲ್ಲಿನ ಕಿರುಕುಳ, ಗಂಡನ ಅನುಮಾನ, ಅತ್ತೆಯ ಕೊಂಕು ನುಡಿಗಳು, ಕಚೇರಿಗಳಲ್ಲಿ ಮೇಲಾಧಿಕಾರಿಗಳು, ಸಹೋದ್ಯೋಗಿಗಳ ಕಿರುಕುಳವೂ ಆಕೆಯನ್ನು ಬಾಧಿಸುತ್ತಿದೆ. ಒಬ್ಬ ಮಹಿಳಾ ಪ್ರತಿಭೆ ಚಿಗುರೊಡೆಯುತ್ತಿದೆ ಎಂದು ಕಾಣುತ್ತಿದಂತೆಯೇ ಅದನ್ನು ಹೊಸಕಿಹಾಕುವುದು ಹೇಗೆಂದು ಆಲೋಚಿಸುವ ಪಾತಕಿಗಳ ನಡುವೆ ಹೆಣ್ಣು “ಆಧುನಿಕ ಮಹಿಳೆ, ಸ್ವತಂತ್ರ ಮಹಿಳೆ” ಎಂಬ ಹೆಗ್ಗಳಿಕೆಗಷ್ಟೇ ಸೀಮಿತವಾಗಿದ್ದಾಳೆಯೇ ಹೊರತು ನೈಜಸ್ಥಿತಿಯಲ್ಲಿ ಆಕೆಯಿನ್ನೂ ಶೋಷಿತಳೇ!!
ಸಮಾಜದ ಎಲ್ಲಾ ಕ್ಷೇತ್ರಗಳಲ್ಲೂ ಇಂದು ಮಹಿಳೆ ಮುಂದೆ ಬಂದಿದ್ದರೂ ಸಮಾಜ ಆಕೆಯನ್ನು “ಅಸಮರ್ಥೆ'”, “ಪರಾವಲಂಬಿ” ಎಂದೇ ಹೇಳುತ್ತದೆ. ಸ್ವಲ್ಪ ಹೆಚ್ಚಾಗಿ ಮಾತನಾಡಿದರೆ ‘ಬಜಾರಿ’ ಎಂತಲೂ, ಅಂಜಿ ಅಳುಕಿ ನಡೆದರೆ ‘ಅಳುಮುಂಜಿ’ ಎಂತಲೂ, ಪರಿಚಯಸ್ಥ ಪುರುಷನೊಂದಿಗೆ ಮಾತನಾಡಿದರೆ ‘ಅಕ್ರಮ ಸಂಬಂಧ’ ಕಲ್ಪಿಸಿ ಮಾತನಾಡುವ ನೀಚ ಮನೋಭಾವ ಹೊಂದಿರುವ ಬಹುತೇಕರು ಒಂದು ಹೆಣ್ಣಿನ ವ್ಯಕ್ತಿತ್ವವನ್ನು ಹೇಗೆಲ್ಲಾ ಹೀಗಳೆಯಬಹುದೋ ಅಷ್ಟೆಲ್ಲಾ ಪ್ರಯತ್ನಗಳ ಮೂಲಕ ಆಕೆಯನ್ನು ಅಣಕಿಸುವುದು ನಿರಂತರವಾಗಿದೆ.
ಅದನ್ನೆಲ್ಲಾ ಆಕೆ ಪ್ರತಿರೋಧಿಸಿದಳೋ, ಅವಳ ಮೇಲೆ ಲೈಂಗಿಕ ದೌರ್ಜನ್ಯವೋ, ಕೆಲಸದಿಂದ ವಜಾಗೊಳಿಸುವುದೋ ಅಥವಾ ಆಕೆಯ ವ್ಯಕ್ತಿತ್ವದ ತೇಜೋವಧೆಗೆ ಅಗತ್ಯವಾದ ಎಲ್ಲಾ ಕ್ರಮಗಳನ್ನೂ ಈ ಮುಂದುವರಿದ ಸಮಾಜ ನಿರ್ವಹಿಸುತ್ತದೆ. ಈ ಹಂತದಲ್ಲಿ ಇಂತಹ ನೀಚರ ಕೈಗೆ ಸಿಕ್ಕಿ ಬಲಿಯಾದ ಅದೆಷ್ಟೋ ಮಹಿಳೆಯರ ನಿದರ್ಶನಗಳಿವೆ.
ಈ ಎಲ್ಲದರ ಮಧ್ಯೆಯೂ ತಮಗೆ ಒದಗಿರುವಷ್ಟು ಸ್ವಾತಂತ್ರ್ಯದಲ್ಲಿ ತಮಗೆ ದೊರೆತಿರುವ ಅವಕಾಶವನ್ನು ಸದುಪಯೋಗಪಡಿಸಿಕೊಂಡು, ಸುತ್ತಲಿನ ವಾತಾವರಣವನ್ನು ಕಷ್ಟವೋ ಸುಖವೋ ಒಗ್ಗಿಸಿಕೊಂಡು ಅದೆಷ್ಟೋ ಮಹಿಳೆಯರು ಸ್ವಾಭಿಮಾನದಿಂದ ಬದುಕುತ್ತಿದ್ದಾರೆ. ಇಂತಹ ಅಲ್ಪಸಂಖ್ಯಾತ ಮಹಿಳೆಯರನ್ನು ಬಹುಸಂಖ್ಯಾತ ಮಹಿಳೆಯರು ಅನುಸರಿಸಬೇಕಿದೆ. ಹಾಗಿದ್ದಾಗ ಮಾತ್ರ ಸ್ತ್ರೀ ಸ್ವಾತಂತ್ರ್ಯಕ್ಕೆ ಹೆಚ್ಚಿನ ಅರ್ಥ, ಶಕ್ತಿ, ಬಲ ಬರುತ್ತದೆ.
ಬನ್ನಿ, ಎಲ್ಲರೂ ಒಗ್ಗಟ್ಟಾಗಿ ಮುಂದುವರಿಯೋಣ. ನಾವು ಪುರುಷರಿಗೆ ಪ್ರತಿಸ್ಪರ್ಧಿಗಳಲ್ಲ, ಸಮಾನರು ಎಂದು ಸಾಬೀತುಪಡಿಸೋಣ. ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಂದು ದೃಢ ನಿರ್ಧಾರ ಕೈಗೊಳ್ಳೋಣ. ಇದಕ್ಕೆ ನಾವು ಮಹಿಳೆಯರು ನಮ್ಮಲ್ಲಿರುವ ಆಂತರಿಕ ಶಕ್ತಿಯನ್ನು ಬಡಿದೆಬ್ಬಿಸಿ, ಕಾರ್ಯಶೀಲರಾಗಬೇಕಿದೆ ಅಷ್ಟೇ…!
ಲೇಖಕರು: ಶ್ರೀಮತಿ ವನಿತಾ ಅರುಣ್ ಭಂಡಾರಿ ಬಜಪೆ