January 18, 2025
world barbers day (1)
ಪ್ರತಿ ವರ್ಷ ಸೆಪ್ಟೆಂಬರ್ ತಿಂಗಳ ಹದಿನಾರನೇ ತಾರೀಖನ್ನು ವಿಶ್ವ ಕ್ಷೌರಿಕರ ದಿನಾಚರಣೆ” ಯ ದಿನವನ್ನಾಗಿ ಆಚರಿಸಲಾಗುತ್ತದೆ.ಈ ದಿನದಂದು ವಿಶ್ವದಾದ್ಯಂತ ಕ್ಷೌರಿಕರು ತಮ್ಮ ಒಗ್ಗಟ್ಟು ಪ್ರದರ್ಶಿಸುವುದರ ಜೊತೆಗೆ ಅಶಕ್ತರ, ಅಸಹಾಯಕರ ನೆರವಿಗೆ ಸ್ಪಂದಿಸಲು ದೇಣಿಗೆ ಸಂಗ್ರಹಿಸುವ ಮೂಲಕ ಆದರ್ಶಪ್ರಾಯರಾಗಿ ಆಚರಿಸುವ ಉದ್ದೇಶವನ್ನು ಹೊಂದಿದ್ದಾರೆ.
 
ಯುರೋಪ್ ಖಂಡದಲ್ಲಿ ರೋಮನ್ನರ ಚಕ್ರಾಧಿಪತ್ಯ ಮುಗಿದು ಆಧುನಿಕ ಯುರೋಪ್ ನಾಗರೀಕತೆಯ ಉಗಮವಾಗುವ ಮಧ್ಯಯುಗದ ಕಾಲಘಟ್ಟದಲ್ಲಿ ಕ್ಷೌರಿಕರು ಕೇವಲ ಕೂದಲು ಕತ್ತರಿಸುವ, ಪುರುಷರ ದಾಡಿ ತೆಗೆಯುವ ವೃತ್ತಿಯನ್ನಲ್ಲದೆ ದಂತ ವೈದ್ಯರಾಗಿಯೂ, ಗಾಯಗೊಂಡ ಭಾಗಗಳನ್ನು ಶುದ್ಧೀಕರಿಸಿ ಉಪಚರಿಸುವ ಮತ್ತು ಸಣ್ಣಪುಟ್ಟ ಶಸ್ತ್ರಚಿಕಿತ್ಸೆಗಳನ್ನು ಮಾಡುವ ಕಾರ್ಯಗಳನ್ನು ಮಾಡುತ್ತಾ ಶಸ್ತ್ರ ಚಿಕಿತ್ಸಕರೆಂದೂ ಗುರುತಿಸಿಕೊಂಡಿದ್ದರು. ಇವರೆಲ್ಲ ಒಗ್ಗೂಡಿ ಒಂದು ಸಂಘಟನೆಯ ಅವಶ್ಯಕತೆಯನ್ನು ಮನಗಂಡು 1096 ರಲ್ಲಿ  “ಕ್ಷೌರಿಕರ-ಶಸ್ತ್ರ ಚಿಕಿತ್ಸಕರ ಸಂಘಟನೆ” ಯನ್ನು ಆರಂಭಿಸಿದರು.ಇಸ್ವಿ 1096 ರ ಸವಿನೆನಪಿಗಾಗಿ ಸೆಪ್ಟೆಂಬರ್ ತಿಂಗಳ 16 ನೇ ತಾರೀಖನ್ನು ಸಂಯೋಜಿಸಿ 16/09  ರ ಪ್ರತಿ ವರ್ಷ “ಅಂತಾರಾಷ್ಟ್ರೀಯ ಕ್ಷೌರಿಕರ ದಿನಾಚರಣೆ” ಯನ್ನು ಆಚರಿಸುವುದು ಎಂದು ತೀರ್ಮಾನಿಸಲಾಗಿದೆ.
 
 
“ಅಂತರರಾಷ್ಟ್ರೀಯ ಕ್ಷೌರಿಕರ ಸಂಘಟನೆ” ಯು ಒಂದು ಲಾಭ ಗಳಿಸುವ ಸಂಘಟನೆಯಾಗಿ ಗುರುತಿಸಿಕೊಳ್ಳದೇ,ಸಾಮಾಜಿಕ ಸೇವೆ,ದಾನಧರ್ಮ ಮುಂತಾದ ಜನಪರ ಕಾಳಜಿಯನ್ನು ಹೊಂದಿದೆ.
 
2018 ರಲ್ಲಿ ಮೊದಲ ಬಾರಿಗೆ ಅಂತರರಾಷ್ಟ್ರೀಯ ಕ್ಷೌರಿಕರ ದಿನಾಚರಣೆಯನ್ನು ಆರಂಭಿಸಲಾಯಿತು. ಇದೀಗ ಎರಡನೇ ಅಂತಾರಾಷ್ಟ್ರೀಯ ಕ್ಷೌರಿಕರ ದಿನಾಚರಣೆಯನ್ನು 2019 ರಲ್ಲಿ ಆಚರಿಸುತ್ತಿದ್ದೇವೆ. ಈ ವರ್ಷ ವಿಶ್ವ ಕ್ಷೌರಿಕರ ದಿನಾಚರಣೆಯ ವಿಶೇಷವೇನೆಂದರೆ ಅಂತಾರಾಷ್ಟ್ರೀಯ ಕ್ಷೌರಿಕರ ಸಂಘಟನೆಯು ವಿಶ್ವಸಂಸ್ಥೆಯೊಂದಿಗೆ ಕೈಜೋಡಿಸಿ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳಿಗೆ ನೆರವಾಗುವ ಉದ್ದೇಶದಿಂದ ದೇಣಿಗೆ ಸಂಗ್ರಹಿಸಿ “ಸಂಯುಕ್ತ ರಾಷ್ಟ್ರಗಳ ಅಂತರರಾಷ್ಟ್ರೀಯ ಮಕ್ಕಳ ತುರ್ತುನಿಧಿ.” (UNICEF- United Nations International Children’s Emergency Fund.) ಗೆ ತಲುಪಿಸುವ ಸದುದ್ಧೇಶವನ್ನು ಹೊಂದಿದೆ.
 
ವಿಶ್ವಾದ್ಯಂತ ಈ ಮೇಲಿನ ಚಿತ್ರದಲ್ಲಿ ಕಾಣಿಸಿದಂತೆ “ಬಿಳಿ,ನೀಲಿ ಮತ್ತು ಕೆಂಪು ಬಣ್ಣದ ತಿರುಗುವ ಕೋಲು” ಹೊಂದಿರುವ ಲಾಂಛನವನ್ನು ಪ್ರದರ್ಶಿಸಿರುವ ಕ್ಷೌರಿಕರ ಅಂಗಡಿಗಳಲ್ಲಿ ಸೇವೆ ಪಡೆದ ಗ್ರಾಹಕರು ನೀಡುವ ಶುಲ್ಕದ ಸ್ವಲ್ಪ ಭಾಗವನ್ನು ನೇರವಾಗಿ UNICEF ಗೆ ಕಳಿಸಿಕೊಡುವ ವ್ಯವಸ್ಥೆಯನ್ನು ಮಾಡಲಾಗಿದೆ.ಈಗಾಗಲೇ ಈ ಅಭಿಯಾನದಲ್ಲಿ ಪಾಲ್ಗೊಳ್ಳಲು ಸಾಮಾಜಿಕ ಜಾಲತಾಣಗಳಲ್ಲಿ ಸಾವಿರಾರು ಕ್ಷೌರಿಕರು ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ.
 
 
ನೋಡಿದರಲ್ಲಾ ಬಂಧುಗಳೇ….ಕ್ಷೌರಿಕರೆಂದು ಹೀಗಳೆಯುತ್ತಿದ್ದ ಕಾಲ ಹೇಗೆ ಬದಲಾಗಿದೆ ಎಂದು? ಅಂತರರಾಷ್ಟ್ರೀಯ ಮಟ್ಟದಲ್ಲಿಯೂ ಸಹ ಕ್ಷೌರಿಕರು ಅನುಕರಣೀಯ ಕಾರ್ಯಗಳನ್ನು ಮಾಡುತ್ತಾ ವಿಶ್ವಮಾನ್ಯರಾಗಿದ್ದಾರೆ.ನಾನೂ ಒಬ್ಬ ಕ್ಷೌರಿಕ ಎಂದು ಹೆಮ್ಮೆಯಿಂದ, ಎದೆತಟ್ಟಿ ಹೇಳಿಕೊಳ್ಳಬಹುದಾದ ಕಾಲವೀಗ ಬಂದಿದೆ.
 
 
ಜೈ ಕ್ಷೌರಿಕ್…ಜೈ ಜೈ ಕ್ಷೌರಿಕ್…!!!
 
ಮತ್ತೊಮ್ಮೆ “ಅಂತರರಾಷ್ಟ್ರೀಯ ಕ್ಷೌರಿಕ ದಿನ” ದ ಹಾರ್ದಿಕ ಶುಭಾಶಯಗಳು.
 
“ಭಂಡಾರಿವಾರ್ತೆ.”
 
ವರದಿ :
ಭಾಸ್ಕರ್ ಭಂಡಾರಿ ಶಿರಾಳಕೊಪ್ಪ.

Leave a Reply

Your email address will not be published. Required fields are marked *