“ಯತ್ರ ನಾರ್ಯಸ್ತು ಪೂಜ್ಯಂತೆ ರಮಂತೇ ತತ್ರ ದೇವತಃ “ – ಅಂದರೆ ಎಲ್ಲಿ
ಮಹಿಳೆಯರನ್ನು ಗೌರವದಿಂದ ಕಾಣುತ್ತಾರೋ ಅಲ್ಲಿ ದೇವರು ನೆಲೆಸಿರುತ್ತಾರೆ
ಎಂಬುದಾಗಿರುತ್ತದೆ .
ಹೌದು ಗೆಳೆಯರೇ, “ಮಹಿಳೆ” ಎಂಬ ಪದವು ಎಲ್ಲರ ಮನಸ್ಸಿನ ಭಾವನೆಗಳ ಲೋಕದಲ್ಲಿ
ಹಾಸುಹೊಕ್ಕಾಗಿದೆ. ಪ್ರತಿಯೊಬ್ಬರ ಜೀವನದಲ್ಲೂ ಮಹಿಳೆಯು ಅತ್ಯಂತ ಮಹತ್ತರವಾದ
ಪಾತ್ರವನ್ನು ವಹಿಸುತ್ತಾಳೆ . ಅಪ್ಪ- ಅಮ್ಮನ ಮುದ್ದು ಮಗಳಾಗಿ , ಗಂಡನ ಪ್ರೀತಿಯ
ಮಡದಿಯಾಗಿ , ಅತ್ತೆ-ಮಾವಂದಿರ ಮುದ್ದಿನ ಸೊಸೆಯಾಗಿ , ಮಕ್ಕಳಿಗೆ ತಾಯಿಯಾಗಿ ,
ನಲ್ಮೆಯ ಗೆಳತಿಯಾಗಿ, ಅತ್ತಿಗೆ-ನಾದಿನಿಯಾಗಿ , ಬುದ್ಧಿ ಹೇಳೋ ಕಾಳಜಿಯ
ಅಕ್ಕನಾಗಿ,ತರಲೆ ಮಾಡೋ ತಂಗಿಯಾಗಿ , ತನ್ನ ಮುಂದಿನ ಪೀಳಿಗೆಯ ಮೊಮ್ಮಕ್ಕಳ ಮುದ್ದಿನ
ಅಜ್ಜಿಯಾಗಿ, ಮುತ್ತಜ್ಜಿಯಾಗಿ ಹೀಗೆ ಅನೇಕ ಮಜಲುಗಳಲ್ಲಿ ಮಹಿಳೆ ತನ್ನ
ಜವಾಬ್ದಾರಿಯನ್ನು ನಿಭಾಯಿಸುತ್ತಾಳೆ .
ತನ್ನ ಸಂಸಾರದ ಭಾರವನ್ನು ಸರಿದೂಗಿಸುವಲ್ಲಿ ಹಗಲೂ-ರಾತ್ರಿ ಶ್ರಮಿಸುತ್ತಾಳೆ .
ಗೃಹಿಣಿಯಾಗಿದ್ದರೆ ,ಮುಂಜಾನೆಯಿಂದ ಶುರುಮಾಡಿ ರಾತ್ರಿ ಮಲಗುವವರೆಗೆ ತನ್ನ ಸಂಸಾರದ
ನೊಗವನ್ನು ಹೂವೆತ್ತಿದಂತೆ ಸುಲಭವಾಗಿಸುತ್ತಾಳೆ . ಅದೇ ಹೊರಗೆ ದುಡಿಯುವ
ಮಹಿಳೆಯಾಗಿದ್ದಲ್ಲಿ ಮನೆ, ಉದ್ಯೋಗ ಎರಡನ್ನೂ ಸವಾಲಾಗಿ ಸ್ವೀಕರಿಸಿ ನಗು-ನಗುತ್ತಾ
ಸಂಭಾಳಿಸುತ್ತಾಳೆ . ಮನೆಯವರ ಬೇಕು ಬೇಡಗಳನ್ನು , ಅಮ್ಮ ನನ್ನ ಟಿಫಿನ್ ಬಾಕ್ಸ್ ಎಲ್ಲಿ
? ಚಿನ್ನಾ ನನ್ನ ಪರ್ಸ್ ಎಲ್ಲಿ? ಎಂಬ ವಸ್ತುಗಳ ಕಣ್ಣಾ ಮುಚ್ಚಾಲೆಯ ಹುಡುಕಾಟದಲ್ಲೂ
,ಅಮ್ಮ ಇಲ್ಲವೇ ಪತ್ನಿಯೇ ಬೇಕು.
ತನ್ನ ಸಂಸಾರಕ್ಕಾಗಿ ರಸ್ತೆ ಬದಿಯಲ್ಲಿ ಮಣ್ಣು ಹೊರುವ ಕೆಲಸ ಮಾಡುವ ಹೆಂಗಸರು,
ತನಗಿಂತ ಭಾರವಾದ ಗುಜುರಿ ಸಾಮಾನುಗಳ ದೊಡ್ಡ ಕಟ್ಟನ್ನು ಹಿಡಿದುಕೊಂಡು ಹೋಗುವ
ಮಹಿಳೆಯರು, ಆಕಾಶವೇ ಚಪ್ಪರ ಭೂಮಿಯೇ ಹಾಸಿಗೆ ಎಂದು ವಾಸಿಸುತ್ತಿರುವ ಸಂಸಾರದಲ್ಲಿ ಹಠ
ಮಾಡುತ್ತಿರುವ ತನ್ನ ಪುಟ್ಟ ಕಂದಮ್ಮನಿಗೆ ಕೈತುತ್ತು ಕೊಡುತ್ತಿರುವ ಅಮ್ಮಂದಿರು,
ತನ್ನ ಕಣ್ಣು ಕಾಣದ ಗಂಡನನ್ನು ಕರೆದುಕೊಂಡು ಬಂದು ಏನಾದರು ತಿನ್ನಲು ಕೊಡಿ ಅಮ್ಮ,
ಕಣ್ಣು ಕಾಣಲ್ಲ ಇವರಿಗೆ ಎಂದು ಬೇಡುತ್ತಿರುವ ಹೆಣ್ಣುಮಗಳು, ಮಾರ್ಕೆಟ್ ಗೆ ಹೋದರೆ
ತರಕಾರಿ ರಾಶಿ ಹಾಕಿ ಮಾರಾಟ ಮಾಡುತ್ತಿರುವ ಅಜ್ಜಿಯಂದಿರು ,ಇನ್ನು ರಸ್ತೆ ಬದಿಯಲ್ಲಿ
ಹಣಕ್ಕೋಸ್ಕರ ಹೆಂಗಳೆಯರನ್ನು ಮಾರಾಟ ಮಾಡಲು ಸಂಚು ಹಾಕುತ್ತಿರುವ ಧಡೂತಿ ದೇಹದ
ಮಹಿಳೆಯರು, ಹೀಗೆ ಇವರೊಂದಿಗೆ ಇನ್ನೂ ಅನೇಕ ಸನ್ನಿವೇಶಗಳೆಲ್ಲಾ ಒಂದು ರೀತಿಯಲ್ಲಿ,
ಸಕಾರಾತ್ಮಕವಾಗಿ ಹಾಗೂ ನಕಾರಾತ್ಮಕವಾಗಿ ನನ್ನ ಮನಸ್ಸಲ್ಲಿ ಮಹಿಳೆಯ ಬಗೆಗಿನ
ಅನುಕಂಪ,ಹೆಮ್ಮೆ, ಭಯ,ಸಿಟ್ಟು ಹೀಗೆ ನಾನಾ ತರಹದ ಆಲೋಚನೆಗಳ ಪ್ರಶ್ನೋತ್ತರಗಳನ್ನು
ಹುಟ್ಟು ಹಾಕಿದೆ.
ಇವತ್ತು ಮಹಿಳೆಯು ಹಿಂದಿನ ಕಾಲದಲ್ಲಿ ಇದ್ದಂತೆ ಮನೆಯ ನಾಲ್ಕು ಗೋಡೆಯೊಳಗೆ
ಬಂಧಿಯಾಗಿಲ್ಲ . ಎಲ್ಲ ಕ್ಷೇತ್ರಗಳಲ್ಲೂ ಕಾರ್ಯನಿರ್ವಹಿಸುತ್ತಿದ್ದಾಳೆ .
ಪ್ರಧಾನಿಯಾಗಿ , ಗಗನಯಾತ್ರಿಯಾಗಿ , ಐ ಎ ಎಸ್ ಅಧಿಕಾರಿಯಾಗಿ, ಐ ಪಿ ಸ್ ಅಧಿಕಾರಿಯಾಗಿ
, ರಕ್ಷಣಾ ಸಚಿವರಾಗಿ, ಇಂತಹ ವ್ಯಕ್ತಿತ್ವಗಳನ್ನು ರೂಪಿಸುವ ಶಿಕ್ಷಕಿಯಾಗಿ, ಹೀಗೆ
ಅತ್ಯುನ್ನತ ಹುದ್ದೆಗಳಲ್ಲಿ ಮಹಿಳೆಯರು ತನ್ನ ಛಾಪನ್ನು ಮೂಡಿಸಿದ್ದಾರೆ. ಹೆಣ್ಣು ತಾನು
ಸ್ವಾವಲಂಬಿಯಾಗಿ ಬದುಕಬಹುದು, ಸಾಧಿಸಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾಳೆ .
ಆದರೂ ಹೆಣ್ಣಿನ ಮೇಲಿನ ಶೋಷಣೆ ಇನ್ನೂ ಕಡಿಮೆಯಾಗಿಲ್ಲ. ಕೆಲವು ಕಡೆಗಳಲ್ಲಿ ಅವಳ
ಮೇಲೆ ನಿರಂತರ ಅತ್ಯಾಚಾರ , ವರದಕ್ಷಿಣೆ ಕಿರುಕುಳಗಳು , ಹೆಣ್ಣು ಶಿಶುಗಳ ಭ್ರೂಣಹತ್ಯೆ
ಮುಂತಾದ ಹಿಂಸೆಗಳು ನಡೆಯುತ್ತಲೇ ಇದೆ . ಇದನ್ನು ಮಾಡುವಂತಹ ಅಪರಾಧಿಗಳಿಗೆ ಕಠಿಣ
ಶಿಕ್ಷೆ ಜಾರಿಯಾಗಬೇಕು .ಆಗ ಮಾತ್ರ ಇಂತಹ ಶೋಷಣೆಗಳು ತಕ್ಕ ಮಟ್ಟಿಗೆ ಹತೋಟಿಗೆ
ಬರಬಲ್ಲದು.
‘ಹೀಗೆ ಸ್ವಾವಲಂಬಿಯಾಗಿ , ಕ್ಷಮಯಾಧರಿತ್ರಿಯಾಗಿ ಜೀವನದ ಶಕ್ತಿಯಾಗಿರುವ ಹೆಣ್ಣು
ಮಗಳು ಪ್ರಪಂಚದಲ್ಲಿ ಇರದೇ ಇರುತ್ತಿದ್ದರೆ ? ಈ
ಪ್ರಶ್ನೆಯನ್ನು ಹಾಗೂ ಅದಕ್ಕೆ ಉತ್ತರಗಳನ್ನು ಊಹಿಸುವುದೂ ಕೂಡ ಅಸಾಧ್ಯ .
ಹೆಣ್ಣನ್ನು ದೇವಿಯಾಗಿ ಪೂಜಿಸುವಂಥಾ ಈ ಭಾರತಾಂಬೆಯ ಮಡಿಲಲ್ಲಿ ಹುಟ್ಟಿರುವ
ಪ್ರತಿಯೊಬ್ಬ ಹೆಣ್ಣುಮಗಳೂ ತಾನು ಧನ್ಯ ಎಂದು ಭಾವಿಸುತ್ತಾಳೆ .’
ಸಹ್ಯಾದ್ರಿ ರೋಹಿತ್ ಕಡಬ
ಮಹಿಳಾ ದಿನಾಚರಣೆಯ ಶುಭಾಶಯಗಳು
ಧನ್ಯವಾದಗಳು