November 22, 2024
4

ಎಚ್ಚರಿಕೆ ಯುವಕರೇ

ಸ್ವಾಮೀ ವಿವೇಕಾನಂದರು ಹೇಳಿದ ಮಾತು ನೆನಪಾಗುತ್ತದೆ. ಅವರ ಜನ್ಮ ದಿನವಾದ ಜನವರಿ 12 ನ್ನು ರಾಷ್ಟ್ರೀಯ ಯುವ ದಿನವನ್ನಾಗಿ ಆಚರಿಸಲಾಗುತ್ತಿದೆ.

ಏಳಿ ಎದ್ದೇಳಿ ಗುರಿ ಮುಟ್ಟುವವರೆಗೆ ನಿಲ್ಲದಿರಿ! ಎಂದು ಯುವಕರಿಗೆ ಕರೆ ಕೊಟ್ಟ ವಿವೇಕಾನಂದರಿಗೆ ಯುವ ಶಕ್ತಿಯ ಮೇಲೆ ಅಪಾರ ನಂಬಿಕೆ ಇತ್ತು. ಯುವ ಶಕ್ತಿಗಿಂತ ಮಿಗಿಲಾದದ್ದು ಯಾವುದೂ ಇಲ್ಲ.ನನಗೆ 100 ಜನ ಗಟ್ಟಿ ಮುಟ್ಟಾದ ಯುವಕರನ್ನು ಕೊಡಿ  ನಾನು ನವ ಭಾರತವನ್ನು ನಿರ್ಮಾಣ ಮಾಡುತ್ತೇನೆ ಎನ್ನುತ್ತಿದ್ದರು. ಯುವಕರು ಹೇಡಿಗಳಾಗಬಾರದು, ನೀವು ಎಂದಿಗೂ ಪರಾವಲಂಬಿಗಳಲ್ಲ ನಿಮ್ಮ
ಬದುಕಿನ ಶಿಲ್ಪಿಗಳು ನೀವೇ ಎಂಬ ಸ್ವಾಮೀಜಿಯ ಸಂದೇಶ ಎಂದೆಂದಿಗೂ ಯುವ ಮನಸ್ಸುಗಳನ್ನು ಎಚ್ಚರಿಸುವಂತದ್ದು.

ಈ ಭಾರತಾಂಬೆಯ ಮಡಿಲಲ್ಲಿ ಹುಟ್ಟಿ ಬೆಳೆದ ಮಕ್ಕಳು ನಾವು. ಈ ಭಾರತ ಮಾತೆ ಅನೇಕ ಕಷ್ಟ, ಕೋಟಲೆಗಳನ್ನು ತಿಂದವಳು. ಆದರೂ ಸಹನೆ, ತಾಳ್ಮೆಯಿಂದ ಎಲ್ಲವನ್ನೂ ಸಹಿಸುವಳು. ಹಿಂದೆ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ ಮಹಾನ್ ವ್ಯಕ್ತಿಗಳು ಅದೆಷ್ಟೋ… ತ್ಯಾಗ ಮಾಡಿ ಮಡಿದವರ ಸಂಖ್ಯೆ ಎಷ್ಟೋ..,ಈ ಮಣ್ಣಿನಲ್ಲಿ ಬಿದ್ದ ನೆತ್ತರೆಷ್ಟೋ ..ಈ ಭೂಮಿಗೆ ಅದಕ್ಕೂ ಮೊದಲು ಬೇರೆ ಬೇರೆ ದೇಶದವರು , ಬ್ರಿಟಿಷರು, ಡಚ್ಚರು ಮೊಗಲರು ಹೀಗೆ ಅನೇಕ ಅನ್ಯ ಮತೀಯರ ಆಳ್ವಿಕೆಯಲ್ಲಿ, ದಬ್ಬಾಳಿಕೆಯಲ್ಲಿ ಸೆಟೆದು ನಿಂತವರು ಈ ನಮ್ಮ ಯುವಕರೇ ಅಲ್ಲವೇ ! ಹಿಂದಿನ ಯುವ ಜನಾಂಗವೂ ತಮ್ಮ ಸ್ವಾರ್ಥ ಬಿಟ್ಟು ಹೋರಾಟ ಮಾಡಿ ಶ್ರಮದಾನ, ಬಲಿದಾನ ಮಾಡಿಲ್ಲವೇ ? ಈ ಭೂಮಿಯಲ್ಲಿ ಬಂದು ಉಳಿದು ಆಳಿದ ಅದೆಷ್ಟೋ ಪುಣ್ಯವಂತರು ದಾರ್ಶನಿಕರು ಮಾಡಿದ ತ್ಯಾಗದ ಫಲದಿಂದ ನನ್ನನ್ನು ನಾನು ರಕ್ಷಿಸಿಕೊಳ್ಳುತ್ತಿರುವೆ. ಸಂತರು, ಧಾರ್ಮಿಕರು, ಯೋಗ ಪುರುಷರು, ಸತ್ಪುರುಷರು, ದೇಶ ಪ್ರೇಮಿಗಳು ಕನಸು ಕಂಡ ಈ ಭಾರತ. ಅದರಲ್ಲೂ ಸಂಸ್ಕೃತಿ, ಸದಾಚಾರ, ಸದ್ಭಾವನೆ, ಸತ್ವಿಚಾರ ,ಆಧ್ಯಾತ್ಮಿಕ ಚಿಂತನೆ ಇವೆಲ್ಲವೂ ಒಂದಕ್ಕೊಂದು ಬೆಸೆದುಕೊಂಡಿರುವ ಕೊಂಡಿಯಂತೆ ಇಲ್ಲಿಯ ಜನರ ಬದುಕು. ಆದರೆ ಇತ್ತೀಚಿನ ದಿನಗಳಲ್ಲಿ ಈ ಬಾಂಧವ್ಯವು ಹೊಂದಾಣಿಕೆಯಿಲ್ಲದೆ ಮರೀಚಿಕೆಯಾಗುತ್ತಿದೆ. ಒಂದು ಸಾರಿ ಸಾಮಾಜಿಕ ಚರಿತ್ರೆಯತ್ತ ಕಣ್ಣು ಹಾಯಿಸಿ ನೋಡಿ. ಅಂದಿನ ಯುವಕರು ಆಸೆ, ಆಕಾಂಕ್ಷೆ ಒತ್ತೆ ಇಟ್ಟುತಮ ಜೀವದ  ಹಂಗು ತೊರೆದು ಹೋರಾಟ ಮಾಡಿರದಿದ್ದರೆ ಇಂದು ನಾವು ಇಷ್ಟು ಚೆನ್ನಾಗಿ ನಿದ್ದೆ ಮಾಡಲು ಆಗುತ್ತಿರಲಿಲ್ಲ. ಅವರ ದೇಶ ಪ್ರೇಮ , ಭಕ್ತಿ ನಿಸ್ವಾರ್ಥ ಸೇವೆ ಅಂದಿನವರು ಮುಂದಿನ ಪೀಳಿಗೆಗೋಸ್ಕರ ಎಷ್ಟು ತ್ಯಾಗ ಮಾಡಿ ಶ್ರಮ ಪಟ್ಟರು! ಅವರಿಗೂ ಇಂದಿನ ದಿನಗಳಂತೆ ದಿನಕ್ಕೆ 24 ಗಂಟೆಯಷ್ಟೇ ಇತ್ತು ಅಲ್ಲವೇ ! ಹಗಲು ರಾತ್ರಿ ಹೀಗೆಯೇ ಇತ್ತು ಅಲ್ಲವೇ ? ಈಗ ನಮಗಿರುವಷ್ಟು ಸುಖ ಅವರಿಗೆ ಇರಲಿಲ್ಲ ಆದರೂ ಅವರಿಗೆ ಮನೆ, ಸಂಸಾರ ಇತ್ತಲ್ಲವೇ? ಈಗಿನಂತೆ ಆಗಿನ ದಿನಗಳೂ ಕೂಡ! ಅವರಿಗೂ ಯೌವನವಿತ್ತು ಆದರೆ ದೇಶಾಭಿಮಾನದ ಮುಂದೆ ಅವರಿಗೆ ಏನೂ ಕಂಡಿರಲಿಲ್ಲ. ದಾಳಿಗೆ ಬಂದವರನ್ನೆಲ್ಲ ಹೊಡೆದೋಡಿಸಿ ” ನಮ್ಮದು” ಎನ್ನುವುದನ್ನು ಉಳಿಸಿಕೊಟ್ಟರು. ಮುಂದಿನ ಪೀಳಿಗೆಗಾಗಿ ಹೋರಾಟ ಮಾಡಿದವರು. ಇಂದಿನ ಯುವ ಜನತೆ ಮುಂದಿನ ಪೀಳಿಗೆಗಾಗಿ ಏನು ಮಾಡುತ್ತಿದೆ ? ನಿಮ್ಮ ಮಾರ್ಗದರ್ಶನ ಮುಂದಿನವರಿಗೆ ಏನು?ಇದನ್ನು ನಿಮ್ಮಲ್ಲೇ ನೀವು ಕೇಳಿಕೊಳ್ಳಿ .


ನಾನು ನನ್ನದು ಎನ್ನುವ ಸ್ವಾರ್ಥದ  ಬದುಕು ಈಗಿನ ಜನರಲ್ಲಿ ಎದ್ದು ಕಾಣುತ್ತಿದೆ . ಇವರನ್ನು ನಾವು ದಾರಿ ತಪ್ಪಿಸದ್ದೆವೋ ಅಥವಾ ಇವರೇ ದಾರಿ ತಪ್ಪುತ್ತಿರುವರೋ ಗೊತ್ತಿಲ್ಲ. ಇತ್ತೀಚಿನ ದಿನಗಳಲ್ಲಿಯಂತೂ ಕೆಲವರು ಯುವಕರು ಬೇಡದ ಕೃತ್ಯಗಳಲ್ಲೇ  ಹೆಚ್ಚಿನವರು ತಮ್ಮನ್ನು ತೊಡಗಿಸಿಕೊಂಡಿರುವರು. ಯಾಕೆ ಹೀಗಾಗುತ್ತಿದೆ? ಮುಂದಿನ ದಿನಗಳಲ್ಲಿಅವರ  ಭವಿಷ್ಯದ ರೂಪು ರೇಷೆಗಳು ಹೇಗಿರಬಹುದು ಎಂಬುದನ್ನು ಎನಿಸಿಕೊಂಡರೆ ಭಯವಾಗುತ್ತದೆ. ಬೇಡದ ದಂಧೆಗಳಿಗೆ ಒಗ್ಗದಿರಿ. ಕುಡಿತ, ಜೂಜು,ಕೊಲೆ, ಸುಲಿಗೆ, ಕೋಮು ಗಲಭೆ, ಬೆಟ್ಟಿಂಗ್ ಅತ್ಯಾಚಾರ ಇಂತಹ ಕೃತ್ಯಗಳದ್ದೇ ಸುದ್ದಿ. ಕ್ಷಣಿಕ ಸುಖಕ್ಕಾಗಿ ನಿಮ್ಮ ಜೀವನದ ಭವಿಷ್ಯವನ್ನು ನಾಶಗೊಳಿಸದಿರಿ. ಮಾಡಿದ ಕೃತ್ಯಕ್ಕೆ ಜೇವನವಿಡೀ  ಹಿಂಸೆ, ಜೈಲು ಅಂತ ಪರದಾಡದಿರಿ. ಹೆತ್ತವರಿಗೆ ಕರುಣೆ ತೋರಿ. ಮೊದಲು ನಿಮ್ಮ ಕುಟುಂಬ, ಅಕ್ಕ, ತಂಗಿ,ತಂದೆ ತಾಯಿ , ಸಂಸಾರ, ಹೆತ್ತವರ ಪಾಲನೆ ಮಾಡಿ. ಅವರನ್ನು ನಿರ್ಗತಿಕರನ್ನಾಗಿ ಮಾಡಬೇಡಿ. ಇಂದಿನ ಯುವ ಜನಾಂಗ ಹೀಗಾದರೆ ಮುಂದಿನ ಪೀಳಿಗೆ ಹೇಗಿರಬೇಕು. ಒಮ್ಮೆ ನಿಮ್ಮನ್ನು ನೀವು ಪ್ರಶ್ನಿಸಿಕೊಳ್ಳಿ. ತಾನು ತಪ್ಪಿದರೆ ನನ್ನ ಇಡೀ ಕುಟುಂಬವೇ ಅನಾಥವಾಗಿ ಬಿಡುತ್ತದೆ. ಒಮ್ಮೆ ಯೋಚಿಸಿ.

 

ಒಳ್ಳೆಯವರ ಸಂಗ ಮಾಡಿ. ಕಷ್ಟದಲ್ಲೋ ಸುಖದಲ್ಲೋ ನಿಮ್ಮನ್ನು ಬೆಳೆಸಿ, ಓದಿಸಿ ನಾಳೆ ನಮ್ಮ ಜೇವನಕ್ಕೆ ಆಧಾರ ಎನ್ನುವಷ್ಟರಲ್ಲಿ ನಿಮ್ಮ ಯೌವನದ ಆಮಿಷಗಳಿಗೆ ಬಲಿಯಾದರೆ ಮುಂದೇನು ಉಳಿಯಿತು?. ನಾವು ಹುಟ್ಟಿರುವುದು ಅನ್ಯಾಯ ಮಾಡಿ ಈ ನಾಡು, ರಾಷ್ಟ್ರ, ದೇಶ ಹಾಳು ಮಾಡಿ ಹೋಗಲಿಕ್ಕಲ್ಲ ಅಥವಾ ತಮ್ಮ ಸ್ವಾರ್ಥಕ್ಕಾಗಿ ಈ ಜೀವನ ಉಪಯೋಗಿಸಿಕೊಳ್ಳಲು ಅಲ್ಲ. ಜೀವ ನಿಮ್ಮದೇ ಆದರೂ ಅದಕ್ಕೆ ಮನೆಯವರು ಅನಿಸಿದವರ ಹಕ್ಕಿದೆ. ನ್ಯಾಯ, ಅನ್ಯಾಯವೂ ಇದೆ. ಇಂದಿನ ಯುವ ಜನತೆಗೊಂದು ಕಿವಿ ಮಾತು, ಹಿರಿಯರು ಯಾವ ರೀತಿಯಿಂದಲಾದರೂ ಕೂಡಿಟ್ಟ ಒಂದಿಷ್ಟು ಹಣಕ್ಕೆ ದಾಸರಾಗದಿರಿ. ಅದರ ಪರಿಣಾಮ    ಬೇರೆಯೆ ಆಗುತ್ತದೆ. ಮಕ್ಕಳನ್ನು ಬೆಳೆಸಿದರೆ ಸಾಲದು ಅವರು ಕಲಿತು ಒಂದು ಉದ್ಯೋಗ ಗಿಟ್ಟಿಸಿಕೊಂಡರೆ ಸಾಲದು, ತನ್ನ ಭವಿಷ್ಯದ ಜೊತೆಗೆ ದೇಶದ ಬಗ್ಗೆಯೂ ಚಿಂತನೆ ಇರಬೇಕು. ಗುರಿ ಮುಟ್ಟುವ ತನಕ ನಿಲ್ಲದಿರಿ.ಸಾಧನೆಗೆ ಗುರಿ ಎನ್ನುವುದೇ ಮುಖ್ಯ. ನಿಮ್ಮ ಬದುಕಿನ ಶಿಲ್ಪಿ ನೀವೇ ಎಂಬ ಅರ್ಥಕ್ಕೆ ಅನುಗುಣವಾಗಿ ನೀವು ಒಳ್ಳೆಯದನ್ನೇ ಮಾಡಿದರೂ ಅಥವಾ ಕೆಟ್ಟದ್ದನ್ನೇ ಮಾಡಿದರೂ ಅದರ ಪರಿಣಾಮ ನೀವೇ ಉಣ್ಣುವಿರಿ!!!.

ಹೆತ್ತವರು ತಾವು ವಿದ್ಯಾವಂತರಾಗಿ ತಾವು  ದುಡಿದರೆ ಸಾಲದು! ನಿಮ್ಮ ಮಕ್ಕಳನ್ನು  ಮುಂದೆ ಸಮಾಜಕ್ಕೆ ಒಂದು ಒಳ್ಳೆಯ ವ್ಯಕ್ತಿತ್ವವುಳ್ಳ ವ್ಯಕ್ತಿಯಾಗಿಸಲು ಪಣ ತೊಡಿ. ಎಲರೂ ಕೆಟ್ಟವರೇ ಅಲ್ಲ ಅಥವಾ ಬಾಲ್ಯದಲ್ಲಿ ಯಾರೂ ಕೆಟ್ಟವರಾಗಿರುವುದಿಲ್ಲ ಮುಂದೆ ಬೆಳೆಯುತ್ತಾ ಬೆಳೆಯುತ್ತಾ ಮನೆಯ ವಾತಾವರಣಕ್ಕೆ ಸರಿಯಾಗಿ ಸಮಾಜದಲ್ಲಿ ಸೇರಿ ಸಂಘ ದೋಷದಿಂದ ಕುಡಿತ, ಡ್ರಗ್ಸ್ ಹೀಗೆ ನಾನಾ ತರಹದ ದಂಧೆಯಲ್ಲಿ, ಚಟದಲ್ಲಿ ಹೊಂದಿಕೊಂಡರೆ ಹಿಂದೆ ಬರುವುದು ತುಂಬಾ ಕಷ್ಟ . ವಿವೇಕಾನಂದರು ಅಂದಂತೆ ಜೀವ ನಿಮ್ಮ ಮಾತನ್ನು ಕೇಳುವುದಿಲ್ಲ ಯಾವಾಗ ಬೇಕಾದರೂ ಹೋಗಬಹುದು ಆದರೆ ಜೀವನ ನಿಮ್ಮ ಮಾತನ್ನು ಕೇಳುತ್ತದೆ ಹೇಗೆ ಬೇಕಾದರೂ ರೂಪಿಸಿಕೊಳ್ಳಬಹುದು.

ಪ್ರಕ್ರತಿಯಲ್ಲಿ ಆಟವಾಡಬೇಡಿ ಅದು ಒಂದು ದಿನ ನಮ್ಮ ಸಂಪೂರ್ಣ ನಾಶಕ್ಕೆ ಕಾರಣವಾಗಬಹುದು. ಈಗಿನ ವಾತಾವರಣದಲ್ಲೂ ಕಾಣ ಸಿಗಬಹುದು. ಅಲಲ್ಲಿ ಧ್ವಂಸ, ಕೊಚ್ಚಿ ಹೋಗುತ್ತಿರುವ ಭೂಮಿ, ಮಳೆ, ಬೆಳೆ, ಬೆಂಕಿ ಅವಘಡ, ಅಪಘಾತ, ಬಿರುಗಾಳಿ ಹೀಗೆ ಪ್ರಕೃತಿ ಮಾತೆ ಮುನಿದರೆ ಏನುಂಟು? ಈ ಭೂಮಿಯಲ್ಲಿ ಅವಳು ಇನ್ನೆಷ್ಟು ಶಾಂತಿಯಿಂದ ಇರಬಲ್ಲಳು?.

ವಿಜ್ಞಾನ ತುಂಬಾ ಮುಂದುವರಿದಿದೆ ನಿಜ ಅದರಿಂದ ಉಪಯೋಗ ದುರುಪಯೋಗ ಎರಡೂ ಇದೆ. ಅದನ್ನು ಒಳ್ಳೆಯದಕ್ಕೆ ಉಪಯೋಗಿಸಿಕೊಳ್ಳುವವರೂ ಇದ್ದಾರೆ, ಕೆಟ್ಟದಕ್ಕೆ ಬಳಸಿಕೊಳ್ಳುವವರೂ ಇದ್ದಾರೆ. ಈಗಿನ ಕೆಲ ಯುವ ಜನರಿಗೆ ದುಡಿದು ತಿನ್ನುವು ಪ್ರವೃತ್ತಿಗಿಂತ ಹೆಚ್ಚಾಗಿ ಐಷಾರಾಮಿ ಜೀವನ ಸಾಗಿಸಬೇಕು. ಇದಕ್ಕಾಗಿ ಏನೂ ಮಾಡಲು ಸಿದ್ಧರಿದ್ದಾರೆ.ಹಣ ಸುಲಭ ದಾರಿಯಲ್ಲಿ ತಟ್ಟನೆ ಗಳಿಸಬೇಕು. ಕುಡಿತ,ಮೋಜು,ಮಸ್ತಿಇದಕ್ಕೆಲ್ಲ ಸಮಯ ಮತ್ತು  ಹಣ ಎರಡೂ ಬೇಕು   ..

ಅವರಿಗೆ ,ಗೊತ್ತು ಗುರಿ  ಇಲ್ಲದ ನಿಮ್ಮ ಮುಂದಿನ ಬದುಕು ಏನನಾಗಬಹುದು ಎಂದು ಒಂದು ನಿಮಿಷ ಯೋಚಿಸಿ. ಇಲ್ಲ ಸಲ್ಲದ ಆಮಿಷಕ್ಕೆ ಒಳಗಾಗಿ ಕೆಟ್ಟದ್ದನ್ನು ಮಾಡಿ ಜೀವನದ ಮೌಲ್ಯಗಳನ್ನು ವ್ಯರ್ಥ ಮಾಡಿಕೊಳ್ಳದೆ ನಿಮ್ಮ ಬದುಕಿನ ಶಿಲ್ಪಿಗಳು ನೀವೇ ಎಂಬ ಸ್ವಾಮೀಜಿಯ ಮಾತಿನಂತೆ, ಸಾಧನೆ ಇಲ್ಲದೆ ಸತ್ತರೆ ಸಾವಿಗೇ ಅವಮಾನ. ಆದರ್ಶವಿಲ್ಲದೆ ಬದುಕಿದರೆ ಬದುಕಿಗೇ ಅವಮಾನ. ಅದು ಎಂದಿಗೂ ಆಗಬಾರದು ಎಂದಾದರೆ ಒಳ್ಳೆಯ ಆದರ್ಶಗಳನ್ನು ಬೆಳೆಸಿಕೊಳ್ಳಿ. ಮುಂದಿನ ಯುವ ಜನತೆಗೆ ಉಳಿಸಿ, ಬೆಳೆಸಿ… ನಿಮ್ಮನ್ನು ನೀವೇ ಕಾಪಾಡಿಕೊಳ್ಳಿ.

✍️   ನಿರ್ಮಲಾ ಶೇಷಗಿರಿ ಕುಂಜಿಬೆಟ್ಟು ಉಡುಪಿ

Mob: 7975308434

1 thought on “ಎಚ್ಚರಿಕೆ ಯುವಕರೇ -ನಿರ್ಮಲಾ ಶೇಷಗಿರಿ ಕುಂಜಿಬೆಟ್ಟು ಉಡುಪಿ

Leave a Reply

Your email address will not be published. Required fields are marked *