ಮೊಸರು ಅಥವಾ ಮಜ್ಜಿಗೆಯನ್ನು ಚಳಿಗಾಲದಲ್ಲಿ ಸೇವಿಸಬೇಕಾ ಅಥವಾ ಬೇಡ್ವಾ?
ಚಳಿಗಾಲದಲ್ಲಿ ಮೊಸರು ಮಜ್ಜಿಗೆ ಬೇಡ ಎನ್ನುವವರು ಇನ್ನೊಮ್ಮೆ ಆಲೋಚನೆ ಮಾಡಿ. ಪೌಷ್ಟಿಕಾಂಶ ರೋಗ ನಿರೋಧಕ ಶಕ್ತಿ ಮತ್ತು ನಿಮ್ಮ ಆರೋಗ್ಯ ಎಲ್ಲವೂ ಮೊಸರಿನಲ್ಲಿ ಸೇರಿದೆ.
ಊಟ ಆದ ಮೇಲೆ ಒಂದು ಲೋಟ ಮಜ್ಜಿಗೆ ಕುಡಿದರೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎನ್ನುವ ಮಾತಿದೆ. ಮಧ್ಯಾಹ್ನ ಊಟದ ಸಮಯದಲ್ಲಿ ಮೊಸರು ಅನ್ನ ತಿನ್ನುವುದು ಕೂಡ ಆರೋಗ್ಯಕ್ಕೆ ಹಿತಕರ.
ಏಕೆಂದರೆ ಮಜ್ಜಿಗೆ ಅಥವಾ ಮೊಸರು ಪ್ರೊ ಬಯೋಟಿಕ್ ಆಹಾರವಾಗಿದ್ದು, ಕರುಳಿನ ಭಾಗದಲ್ಲಿ ಆರೋಗ್ಯಕರವಾದ ಬ್ಯಾಕ್ಟೀರಿಯಾಗಳು ಬೆಳವಣಿಗೆ ಹೊಂದಲು ಪೂರಕ ವಾತಾವರಣ ನಿರ್ಮಾಣ ಮಾಡಿಕೊಡುತ್ತವೆ. ಇದರಿಂದ ಜೀರ್ಣಶಕ್ತಿ ಹೆಚ್ಚಾಗುತ್ತದೆ ಮತ್ತು ವಿಶೇಷವಾಗಿ ಚಳಿಗಾಲದಲ್ಲೂ ಸಹ ರೋಗ ನಿರೋಧಕ ಶಕ್ತಿ ಬಲಗೊಳ್ಳುತ್ತದೆ. ಬನ್ನಿ ಇಂದಿನ ಈ ಲೇಖನದಲ್ಲಿ ಮಜ್ಜಿಗೆಯ ವಿಶೇಷ ಆರೋಗ್ಯ ಪ್ರಯೋಜನಗಳನ್ನು ನೋಡುವುದರೆ…
ಮಜ್ಜಿಗೆಯ ವಿಶೇಷ ಆರೋಗ್ಯ ಪ್ರಯೋಜನಗಳು
ವಿಟಮಿನ್ ಅಂಶ ಹೆಚ್ಚಾಗಿದ್ದರೆ, ಕೊಬ್ಬಿನಾಂಶ ಕಡಿಮೆ ಇದೆ
ಹೌದು, ಮಜ್ಜಿಗೆ ತನ್ನಲ್ಲಿ ಅಪಾರವಾದ ಕ್ಯಾಲ್ಸಿಯಂ ಮತ್ತು ವಿಟಮಿನ್ ಅಂಶಗಳನ್ನು ಹೊಂದಿದೆ. ಹಾಗಾಗಿ ಮಜ್ಜಿಗೆಯನ್ನು ನಿಯಮಿತವಾಗಿ ನಿಮ್ಮ ಆಹಾರ ಪದ್ಧತಿಯಲ್ಲಿ ಸೇರಿಸಿಕೊಂಡರೆ ದೇಹಕ್ಕೆ ಉತ್ತಮ ಕ್ಯಾಲ್ಸಿಯಂ ಸಿಗುತ್ತದೆ ಮತ್ತು ಪ್ರೋಟಿನ್ ಹಾಗೂ ಕಾರ್ಬೋಹೈಡ್ರೇಟ್ ಅಂಶಗಳು ಸಹ ಹೆಚ್ಚಾಗಿ ಸಿಗುತ್ತವೆ. ಹಾಗಾಗಿ ಇದೊಂದು ಆರೋಗ್ಯಕರವಾದ ಪಾನೀಯ ಎಂದು ಹೇಳಬಹುದು.
ಮಸಾಲೆ ಆಹಾರ ತಿಂದ ನಂತರ ಒಳ್ಳೆಯದು
- ನೀವು ಪಲಾವ್, ಬಿರಿಯಾನಿ ಇತ್ಯಾದಿ ಮಸಾಲೆಯುಕ್ತ ಆಹಾರಗಳನ್ನು ಸೇವನೆ ಮಾಡಿದ ನಂತರ ದಲ್ಲಿ ಒಂದು ಲೋಟ ಮಜ್ಜಿಗೆ ಕುಡಿಯುವುದು ನಿಮ್ಮನ್ನು ಗ್ಯಾಸ್ಟ್ರಿಕ್ ಅಥವಾ ಅಸಿಡಿಟಿ ಸಮಸ್ಯೆ ಯಿಂದ ಪಾರು ಮಾಡುತ್ತದೆ.
- ಆರೋಗ್ಯಕರವಾದ ಮೊಸರು ಸೇವನೆ ನಿಮ್ಮನ್ನು ದೀರ್ಘಕಾಲ ಆರೋಗ್ಯವಂತರನ್ನಾಗಿ ಮಾಡುತ್ತದೆ. ನಿಮ್ಮ ಹೊಟ್ಟೆಯನ್ನು ತಣ್ಣಗೆ ಇರಿಸಲು ಇದು ಹೆಚ್ಚು ಸಹಾಯ ಮಾಡುತ್ತದೆ.
ದೇಹ ಸ್ವಚ್ಛ ಮಾಡುತ್ತದೆ
- ಮಜ್ಜಿಗೆ ಕುಡಿಯುವುದರಿಂದ ಕರುಳು ಸೇರಿದಂತೆ ಇಡೀ ದೇಹ ಸ್ವಚ್ಛವಾಗುತ್ತದೆ ಎಂದು ಕೇಳಿದ್ದೇವೆ. ಇದು ಮಲಬದ್ಧತೆ ಸಮಸ್ಯೆಯನ್ನು ನಿವಾರಣೆ ಮಾಡುವ ಜೊತೆಗೆ ಕರುಳಿನ ಭಾಗದಲ್ಲಿ ಉತ್ತಮ ಬ್ಯಾಕ್ಟೀರಿಯಾಗಳನ್ನು ಬೆಳವಣಿಗೆ ಆಗುವಂತೆ ನೋಡಿಕೊಂಡು ದೇಹದಿಂದ ವಿಷಕಾರಿ ಅಂಶಗಳನ್ನು ತೆಗೆದುಹಾಕುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
- ಇದರಲ್ಲಿ ಕ್ಯಾಲ್ಸಿಯಂ, ಪೊಟ್ಯಾಶಿಯಂ ಮತ್ತು ವಿಟಮಿನ್ ಬಿ 12 ಅಂಶಗಳ ಪ್ರಮಾಣ ಹೆಚ್ಚಾಗಿದೆ. ನೀವು ಇದನ್ನು ಒಂದು ಆರೋಗ್ಯಕರವಾದ ಪಾನೀಯ ಎಂದು ತಿಳಿದುಕೊಳ್ಳಬಹುದು.
ಹೊಟ್ಟೆ ಹಸಿವು ನಿಯಂತ್ರಣ ಮಾಡುತ್ತದೆ
- ಯಾವಾಗ ನಮ್ಮ ದೇಹದಲ್ಲಿ ನಾವು ಸೇವಿಸಿದ ಆಹಾರ ಮಜ್ಜಿಗೆ ಸೇವನೆಯಿಂದ ಚೆನ್ನಾಗಿ ಜೀರ್ಣ ವಾಗುತ್ತದೆ, ಆಗ ನಮಗೆ ಅಜೀರ್ಣತೆ ಸಮಸ್ಯೆ ಇರುವುದಿಲ್ಲ.
- ಇದು ನಮ್ಮ ಹೊಟ್ಟೆಯ ಕಿರಿಕಿರಿ ಹೊಟ್ಟೆ ಉಬ್ಬರ ಇತ್ಯಾದಿಗಳನ್ನು ತಪ್ಪಿಸುತ್ತದೆ.ಹೊಟ್ಟೆಯ ಹಸಿ ವನ್ನು ದೂರ ಮಾಡಿ ಆರೋಗ್ಯಕರವಾಗಿ ನಮ್ಮನ್ನು ಸದಾ ರಕ್ಷಣೆ ಮಾಡುತ್ತದೆ.
ನಿರ್ಜಲೀಕರಣ ಸಮಸ್ಯೆಯನ್ನು ದೂರ ಮಾಡುತ್ತದೆ
ಮಜ್ಜಿಗೆ ಕುಡಿಯುವುದರಿಂದ ನಮ್ಮ ದೇಹಕ್ಕೆ ಹೆಚ್ಚಿನ ನೀರಿನ ಅಂಶ ಸಿಗುತ್ತದೆ. ಇದು ನಮ್ಮ ದೇಹದಲ್ಲಿ ನೀರಿನ ಸಮತೋಲನವನ್ನು ಕಾಪಾಡುವುದರ ಜೊತೆಗೆ ಕರುಳಿನ ಭಾಗದಲ್ಲಿ ನಾವು ಸೇವಿಸಿದ ಆಹಾರ ದಲ್ಲಿ ಇರುವಂತಹ ಪೌಷ್ಟಿಕ ಸತ್ವಗಳನ್ನು ಚೆನ್ನಾಗಿ ಹೀರಿ ಕೊಳ್ಳುವಂತೆ ಮಾಡುತ್ತದೆ. ಹುಳಿ ಇರುವ ಮಜ್ಜಿಗೆ ದೇಹಕ್ಕೆ ತುಂಬಾ ಒಳ್ಳೆಯದು ಎನ್ನುವುದು ಆರೋಗ್ಯ ತಜ್ಞರ ಮಾತು.
ಚಳಿಗಾಲದಲ್ಲಿ ಮಜ್ಜಿಗೆ?
- ಇದೊಂದು ಪ್ರಶ್ನೆ ಬಹುತೇಕ ಜನರಿಗೆ ಕಾಡುತ್ತದೆ. ಮಜ್ಜಿಗೆ ಶೀತ ಆಗಿರುವುದರಿಂದ ಇದನ್ನು ಚಳಿಗಾಲದ ಸಂದರ್ಭದಲ್ಲಿ ಸೇವನೆ ಮಾಡುವುದು ಆರೋಗ್ಯಕ್ಕೆ ಹಿತಕರವೇ ಎಂದು ಆಲೋಚನೆ ಮಾಡುತ್ತಾರೆ.
- ಆದರೆ ಆರೋಗ್ಯ ತಜ್ಞರು ಹೇಳುವ ಪ್ರಕಾರ ಮಜ್ಜಿಗೆಯನ್ನು ಬೆಳಗಿನ ತಿಂಡಿ ಅಥವಾ ಮಧ್ಯಾಹ್ನದ ಊಟದ ಸಂದರ್ಭದಲ್ಲಿ ಸೇವನೆ ಮಾಡುವುದರಿಂದ ನಮ್ಮ ದೇಹದ ಪಿಎಚ್ ಮಟ್ಟ ಉತ್ತಮವಾಗಿ ನಿರ್ವಹಣೆ ಯಾಗುತ್ತದೆ ಮತ್ತು ಚಳಿಗಾಲದಲ್ಲಿ ನಮ್ಮ ಜೀರ್ಣಶಕ್ತಿ ಹಾಗೂ ರೋಗ ನಿರೋಧಕ ಶಕ್ತಿ ಅಭಿವೃದ್ಧಿ ಯಾಗುತ್ತದೆ.
ರಾತ್ರಿ ಸಮಯದಲ್ಲಿ ಮಜ್ಜಿಗೆ
ರಾತ್ರಿ ಸಮಯದಲ್ಲಿ ಮಜ್ಜಿಗೆ ಸೇವನೆ ಬೇಡ. ಮಧ್ಯಾಹ್ನ ಕುಡಿಯುವ ಮಜ್ಜಿಗೆಗೆ ಸ್ವಲ್ಪ ಹುರಿದ ಜೀರಿಗೆ ಪುಡಿಯನ್ನು ಮಿಶ್ರಣ ಮಾಡಿ ಸೇವಿಸಿದರೆ ಒಳ್ಳೆಯದು. ಪೌಷ್ಟಿಕಾಂಶ ಕಡಿಮೆ ಇರುವ ಮಕ್ಕಳು ಹಾಗೂ ದೊಡ್ಡವರು ಕೂಡ ಮಜ್ಜಿಗೆಯನ್ನು ಸೇವನೆ ಮಾಡಿ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.
ರೆಡಿ ಮಾಡುವ ವಿಧಾನ
- ಒಂದು ದೊಡ್ಡ ಪಾತ್ರೆಯಲ್ಲಿ ಮೊಸರು ಹಾಗೂ ನೀರು ಮಿಶ್ರಣ ಮಾಡಿ ಇಟ್ಟುಕೊಳ್ಳಿ.
- ಈಗ ಒಂದು ಸಣ್ಣ ಪ್ಯಾನ್ ತೆಗೆದುಕೊಂಡು ಅದರಲ್ಲಿ ಒಗ್ಗರಣೆಗೆ ರೆಡಿ ಮಾಡಿಕೊಳ್ಳಿ.
- ಸ್ವಲ್ಪ ಎಣ್ಣೆ ಹಾಕಿ ಅದಕ್ಕೆ ಸಾಸಿವೆ ಹಾಕಿ, ಸಾಸಿವೆ ಸಿಡಿದ ನಂತರದಲ್ಲಿ ಕರಿಬೇವಿನ ಸೊಪ್ಪು, ಹಸಿಮೆಣಸಿನಕಾಯಿ, ಶುಂಠಿ ಮತ್ತು ಇಂಗು ಸೇರಿಸಿ.
- 30 ಸೆಕೆಂಡ್ ಹಾಗೆ ಇದ್ದು, ಮಸಾಲೆಯ ಸುವಾಸನೆ ಬರುವಾಗ ಅದನ್ನು ಮಜ್ಜಿಗೆಗೆ ಮಿಕ್ಸ್ ಮಾಡಿ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಕುಡಿಯಿರಿ.
ಮಜ್ಜಿಗೆಯನ್ನು ಈ ರೀತಿ ತಯಾರು ಮಾಡಿ ಕುಡಿಯಿರಿ
- ಬೇಕಾಗಿರುವ ಸಾಮಗ್ರಿಗಳು
- ಒಂದುವರೆ ಕಪ್ ಮೊಸರು
- ಮೂರು ಕಪ್ ನೀರು
- ಒಂದು ಟೀ ಚಮಚ ಸಾಸಿವೆ
- ಕರಿಬೇವಿನ ಸೊಪ್ಪು ಎರಡು ಗರಿ
- ಎರಡರಿಂದ ಮೂರು ಸಣ್ಣದಾಗಿ ಹೆಚ್ಚಿದ ಹಸಿ ಮೆಣಸಿನಕಾಯಿ
- ಒಂದು ಟೀ ಚಮಚ ಶುಂಠಿ ತುರಿ
- ರುಚಿಗೆ ತಕ್ಕಷ್ಟು ಉಪ್ಪು ಮತ್ತು
- ಸ್ವಲ್ಪ ಇಂಗು
ಸಂಗ್ರಹ : ಎಸ್.ಬಿ ನೆಲ್ಯಾಡಿ
ಮೂಲ: ವಿ ಕೆ