January 18, 2025
Y S Bhandary

 

ಎಲ್ಲೂರು ದಿವಂಗತ ಅಣ್ಣು ಭಂಡಾರಿ ಮತ್ತು ದಿವಂಗತ ಅಕ್ಕು ಭಂಡಾರಿಯವರ ಪುತ್ರ , ಭಂಡಾರಿ ಸಮಾಜ ಸಂಘ ಬೆಂಗಳೂರು ವಲಯದ ಸ್ಥಾಪಕ ಅಧ್ಯಕ್ಷ , ಕಚ್ಚೂರು  ಶ್ರೀ ನಾಗೇಶ್ವರ ದೇವಸ್ಥಾನದ ಮಾಜೀ ಅಧ್ಯಕ್ಷ ಶ್ರೀ ಎಲ್ಲೂರು ಶಂಭು ಭಂಡಾರಿಯವರು ಅಕ್ಟೋಬರ್ 31 ರ ಬೆಳಗ್ಗಿನ ಜಾವ ಹೃದಯಾಘಾತದಿಂದ ನಿಧನ ಹೊಂದಿದರು.  ಅವರಿಗೆ ಸುಮಾರು 77 ವರ್ಷ ವಯಸಾಗಿತ್ತು.

 ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನದಲ್ಲಿ 1991 ರ ಬ್ರಹ್ಮಕಲಶೋತ್ಸವದ ಸಂದರ್ಭದಲ್ಲಿ ಬೆಂಗಳೂರಿನಲ್ಲಿರುವ ಸಮಾಜದ ಬಂಧುಗಳನ್ನು ಒಗ್ಗೂಡಿಸಿ ವುಡ್ ಲ್ಯಾಂಡ್ಸ್ ಹೋಟೆಲ್ ನಲ್ಲಿ ಪ್ರಥಮ ಸಭೆ ನಡೆಸುವ ಮೂಲಕ ಬೆಂಗಳೂರಿನಲ್ಲಿ ಸಮಾಜದ ಸಂಘ ಸ್ಥಾಪಿಸಲು ಮುನ್ನಡಿ ಇಟ್ಟಿರುವ ಶಂಭು ಭಂಡಾರಿಯವರು 1999 ರಲ್ಲಿ ಸ್ಥಾಪಕ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡು ಸಂಘವನ್ನು ಮುನ್ನಡೆಸಿದರು.

ಶ್ರೀ ಶಂಭು ಭಂಡಾರಿಯವರು  ಭಂಡಾರಿ ಸಮಾಜದ ಬಂಧುಗಳಿಗೆಲ್ಲಾ ವೈ.ಎಸ್ ಭಂಡಾರಿ ಎಂದೇ ಚಿರಪರಿಚಿತರು. ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನದ  ಜೀರ್ಣೋದ್ಧಾರ ಕಾರ್ಯ ಆರಂಭಗೊಂಡ ತೊಂಬತ್ತರ ದಶಕಾರಂಭದಲ್ಲಿ ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಉಪಾಧ್ಯಕ್ಷರಾಗಿ 1990 ರಿಂದ 1997 ರ ವರೆಗೆ ಸೇವೆ ಸಲ್ಲಿಸಿದ ಇವರು 1997 ರಿಂದ 2001 ರ ವರೆಗೆ ಅಧ್ಯಕ್ಷರಾಗಿ  ದೇವಸ್ಥಾನದ ಸರ್ವತೋಮುಖ ಬೆಳವಣಿಗೆಗೆ ತಮ್ಮ ಅಳಿಲು ಸೇವೆ ಸಲ್ಲಿಸಿರುವರು. ಬೆಂಗಳೂರಿನಲ್ಲಿ ಉದ್ಯಮಿಯಾಗಿದ್ದ ಇವರು ದೇವಸ್ಥಾನದ ಅವಶ್ಯಕತೆಗಳಿಗನುಗುಣವಾಗಿ ಸಾಕಷ್ಟು ಧನಸಹಾಯ ನೀಡುತ್ತಾ, ಭಂಡಾರಿ ಬಂಧುಗಳ ಕಷ್ಟ ಸುಖಗಳಿಗೆ ಸ್ಪಂದಿಸುತ್ತ ಜನಾನುರಾಗಿಯಾಗಿದ್ದರು. ಭಂಡಾರಿ ಕುಟುಂಬದ ಮಕ್ಕಳ ಶೈಕ್ಷಣಿಕ ಬೆಳವಣಿಗೆಗಳಿಗೆ ಸ್ಪಂದಿಸಲು 1993ರಿಂದ ಪ್ರತಿವರ್ಷ ರೂ. ಐದು ಸಾವಿರ ಮೊತ್ತವನ್ನು ವಿದ್ಯಾರ್ಥಿ ವೇತನವಾಗಿ ನೀಡುತ್ತಾ 1999 ರಲ್ಲಿ  ಸ್ವಇಚ್ಛೆಯಿಂದ ಕಚ್ಚೂರು ವಿದ್ಯಾನಿಧಿ  ಸ್ಥಾಪಿಸಿ  ರೂ. ಮೂರು ಲಕ್ಷ ಮೊತ್ತವನ್ನು  ದೇಣಿಗೆಯಾಗಿ ನೀಡಿದ್ದು ಅಲ್ಲದೆ ಕುತ್ಯಾರಿನ ಪರಶುರಾಮೇಶ್ವರ ಕ್ಷೇತ್ರದಲ್ಲಿ 2003ರಿಂದ 2006 ತನಕ ರೂ. ನಾಲ್ಕು ಲಕ್ಷ ಮೊತ್ತವನ್ನು ವಿದ್ಯಾರ್ಥಿ ವೇತನ ನೀಡಿ , ನಾಲ್ಕು ಸಾವಿರ ಮಹಿಳೆಯರಿಗೆ ಸೀರೆ ವಿತರಣೆ ಮಾಡಿ ಭೋಜನ ಬಡಿಸಿ ಅದರಲ್ಲಿಯೇ ಸಾರ್ಥಕತೆಯನ್ನು ಕಂಡುಕೊಂಡರು.

ಮದ್ರಾಸು ವಿಶ್ವವಿದ್ಯಾಲಯದಲ್ಲಿ ಬಿ.ಟೆಕ್ ಇಂಜಿನಿಯರ್ ಪದವಿ ಪಡೆದು ವಿದೇಶಗಳಲ್ಲಿ ಹಲವಾರು ವರ್ಷ ಇಂಜಿನಿಯರ್ ಉದ್ಯೋಗ ಮಾಡಿ, ಬೆಂಗಳೂರಲ್ಲಿ 32 ವರ್ಷ ಸ್ವಂತ ಉದ್ಯಮ ನಡೆಸಿ, ಜ್ಯೋತಿಷ್ ವಿಜ್ಞಾನದಲ್ಲಿ  ವಿದ್ವನ್ಮಣಿ ಪದವಿ ಪಡೆದು 2012 ರ ಶೈಕ್ಷಣಿಕ ವರ್ಷದಲ್ಲಿ ವಿದ್ವಾನ್ ಶ್ರೀ ಶಂಭುದಾಸ ಗುರೂಜಿ ನೇತೃತ್ವದಲ್ಲಿ  ಆರಂಭಿಸಿದ ಶಿಕ್ಷಣ ಸಂಸ್ಥೆ  ಸೂರ್ಯ ಚೈತನ್ಯ ಗ್ಲೋಬಲ್ ಅಕಾಡೆಮಿ ಸ್ಕೂಲ್. ಬೆಂಗಳೂರಿನಲ್ಲಿ ಮೆಟಾ ಫ್ಯೂಶನ್ ಎಂಬ ಸಂಸ್ಥೆಯನ್ನು ಸ್ಥಾಪಿಸಿ ಹಲವು ಜನರಿಗೆ ದಾರಿ ದೀಪವಾಗಿದ್ದರು. ಇವರ ಈ ಮಹತ್ವಾಕಾಂಕ್ಷೆಯ  ಯೋಜನೆಯಲ್ಲಿ  ಬೆನ್ನೆಲುಬಾಗಿ ನಿಂತವರು ಇವರ ಧರ್ಮಪತ್ನಿ ಶ್ರೀಮತಿ ಶಾರದ ಕುತ್ಯಾರು.

ದಿವಂಗತರು ಕಚ್ಚೂರುವಾಣಿಯ  ಸಂಪಾದಕರಾಗಿಯೂ ಸೇವೆ ಸಲ್ಲಿಸಿರುತ್ತಾರೆ. 

ದಿವಂಗತರು ಪತ್ನಿ ಶಾರದಾ, ಮೂವರು ಮಕ್ಕಳಾದ  ಸುಪ್ರೀತ್, ಸಂದೀಪ್  ಮತ್ತು ಡಾಕ್ಟರ್ ಸ್ಮಿತಾ ಹಾಗೂ ಅಪಾರ ಬಂಧುವರ್ಗವನ್ನು ಅಗಲಿದ್ದಾರೆ. ಅವರ ಅಗಲಿಕೆಯ ಶಕ್ತಿಯನ್ನು ಸಹಿಸುವ ಧೈರ್ಯವನ್ನು ಭಗವಂತ ಕುಟುಂಬಕ್ಕೆ ನೀಡಲಿ, ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ಭಂಡಾರಿ ವಾರ್ತೆ ಪ್ರಾರ್ಥಿಸುತ್ತದೆ .

ಭಂಡಾರಿ ವಾರ್ತೆ

Leave a Reply

Your email address will not be published. Required fields are marked *